ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ | ಕಾರ್ಕಳದ ಯುವಕನ ಬಂಧನ

ಮಂಗಳೂರು : ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಹಾಕುವುದಾಗಿ ಹುಸಿ ಬಾಂಬ್ ಕರೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವಿಮಾನ ನಿಲ್ದಾಣದ ಈ ಹಿಂದೆ ನಿರ್ದೇಶಕರಾಗಿದ್ದ ವಾಸುದೇವ ರಾವ್ ಅವರ ಮೊಬೈಲ್ ಗೆ ಬುಧವಾರ ಮಧ್ಯಾಹ್ನ ಕರೆಹ್ನ ಮಾಡಿದ್ದ ವ್ಯಕ್ತಿ, ನಿಲ್ದಾಣಕ್ಕೆ ಬಾಂಬ್ ಹಾಕುವುದಾಗಿ ಬೆದರಿಸಿದ್ದ. ಬಂಧಿತ ವ್ಯಕ್ತಿಯನ್ನು ಕಾರ್ಕಳ ಮೂಲದ ತುಂಡುಗುಡ್ಡೆ ವಸಂತ (33) ಎಂದು ಗುರುತಿಸಲಾಗಿದೆ.

ಫೋನ್ ಕರೆ ಸ್ವೀಕರಿಸಿದ್ದ ವಾಸುದೇವ ರಾವ್ ಅವರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಹಾಗೂ ಸಿಐಎಸ್ ಎಸ್ ಎಫ್ ಸಿಬ್ಬಂದಿ ವಿಮಾನ ನಿಲ್ದಾಣದ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ನಂತರ ಇದೊಂದು ಹುಸಿ ಬಾಂಬ್ ಕರೆ ಎಂಬುದು ದೃಢಪಟ್ಟಿತು. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

ನಂಬರ್ ಹಾಗೂ ನೆಟ್ವರ್ಕ್ ಆಧಾರದಲ್ಲಿ ಕಾರ್ಕಳ ಮೂಲದ ವಸಂತನನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ. ಕಳೆದ ವರ್ಷ ಆದಿತ್ಯರಾವ್ ಎಂಬಾತ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ತಂದಿಟ್ಟು ದೊಡ್ಡ ಆತಂಕ ಸೃಷ್ಟಿಸಿದ್ದ. ಬಳಿಕ ಆತನನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಲಾಗಿತ್ತು.

- Advertisement -