ಮೌಲಾನ ಆಝಾದ್ ಭವನಕ್ಕೆ ಕಲ್ಲೆಸೆದ ಕಿಡಿಗೇಡಿ ಕೃತ್ಯ | ಆರು ಮಂದಿಯ ಬಂಧನ

Prasthutha|

ಮಂಗಳೂರು: ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದ ನಡೆಸಲಾದ ನಗರದ ಮೌಲಾನಾ ಆಝಾದ್ ಅಲ್ಪಸಂಖ್ಯಾತರ ಭವನಕ್ಕೆ ಕಲ್ಲೆಸೆದು ಹಾನಿ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣಾ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ‌ ಬೀಸಿದ್ದರು.

ಆರೋಪಿಗಳ ಪೈಕಿ ಮೂವರು ಈ ಹಿಂದೆ ನಡೆದ ದುಷ್ಕೃತ್ಯಗಳಲ್ಲಿ ಭಾಗಿಯಾದವರಾಗಿದ್ದು, ಸಿಸಿಟಿವಿ ಮಾಹಿತಿ ಆಧರಿಸಿ ಈ ಮೂವರನ್ನು ವಿಚಾರಣೆಗೊಳಪಡಿಸಿದಾಗ ಇತರ ಮೂವರು ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ.

- Advertisement -

ನಗರದ ಗೂಡುಶೆಡ್ಡೆ ನಿವಾಸಿ ಧನರಾಜ್ ಶೆಟ್ಟಿ (21), ಎಮ್ಮೆಕೆರೆ ನಿವಾಸಿ ಸುಶಾಂತ್ (20), ಕಂದುಕ ನಿವಾಸಿ ಕಾರ್ತಿಕ್ ಶೆಟ್ಟಿ (26), ಹೊಯ್ಗೆ ಬಝಾರ್ ನಿವಾಸಿಗಳಾದ ಸಾಗರ್ ಬಂಗೇರ (20), ಮನೀಶ್ ಪುತ್ರನ್ (20) ಸೇರಿದಂತೆ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಬಾಲ ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿದೆ.

ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿ ಕೆಲವೊಂದು ಅಹಿತರ ಘಟನೆಗಳು ನಡೆಯುತ್ತಿರುವ ಮಧ್ಯೆಯೇ, ಮಂಗಳೂರಿನ ಪಾಂಡೇಶ್ವರದಲ್ಲಿರುವ ಮೌಲಾನ ಆಝಾದ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಭವನಕ್ಕೆ ಆ.13ರಂದು ರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಕಿಡಿಗೇಡಿಗಳ ಈ ಕೃತ್ಯದಿಂದ ಕಟ್ಟಡದ ಮೂರು ಕಿಟಕಿಯ ಗಾಜುಗಳಿಗೆ ಹಾನಿ ಉಂಟಾಗಿತ್ತು. ಕಟ್ಟಡದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಬಳಸಿಕೊಂಡು ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ.

- Advertisement -