ಭಾರೀ ಅಪಾಯದಲ್ಲಿರುವ ಪ್ರಜಾಪ್ರಭುತ್ವ

0
104

ಪ್ರಜಾಪ್ರಭುತ್ವವೇ ಇಲ್ಲದಿದ್ದರೆ ಈ ದೇಶದ ಕತೆ ಹೇಗಿರಬಹುದು ಎನ್ನುವುದನ್ನು ಕಲ್ಪಿಸಿದಾಗ ಮಹಾ ಭಾರತದ ಕಥೆ ನೆನಪಾಗುತ್ತದೆ. ಇಂದು ಭಾರತದಲ್ಲಿ ಯಾವುದು ಸರಿಯಾದ ಸ್ಥಿತಿಯಲ್ಲಿದೆ ಎಂದು ಹೇಳಲು ಏನೂ ಉಳಿದಿಲ್ಲ. ನೆಲಕಚ್ಚಿದ ಆರ್ಥಿಕತೆ, ವ್ಯಾಪಕವಾದ ಹಿಂಸೆ, ಹತ್ಯೆ, ಅವ್ಯಾಹತ ಮಾನವ ಹಕ್ಕುಗಳ ಉಲ್ಲಂಘನೆ, ಸಂವಿಧಾನದ ಕಡೆಗಣನೆ, ಸರಕಾರವನ್ನು ಟೀಕಿಸುವವರ ಮೇಲೆ ದೌರ್ಜನ್ಯ, ಸರಕಾರಿ ಸ್ವಾಯತ್ತ ಸಂಸ್ಥೆಗಳ ಮೇಲೆ ದಬ್ಬಾಳಿಕೆ, ವಾಕ್ ಸ್ವಾತಂತ್ರ ಹರಣ, ಅಘೋಷಿತ ತುರ್ತುಪರಿಸ್ಥಿತಿಗಳಿಂದ ಜನ ರೋಸಿ ಹೋಗಿದ್ದಾರೆ ಹಾಗೂ ಹತಾಶರಾಗಿದ್ದಾರೆ.

ಐದು ಟ್ರಿಲಿಯನ್ ಡಾಲರ್ (350 ಲಕ್ಷ ಕೋಟಿ ರೂಪಾಯಿ) ಬಜೆಟ್‌ನ ಗುರಿಯಾಗಿಸಿ ಭರವಸೆ-ಆಶ್ವಾಸನೆಗಳ ಮಹಾಪೂರ ಹರಿಸಿದ ಮೋದಿಯ ಬಿಜೆಪಿ ಸರಕಾರ ದೇಶದ ಖಜಾನೆಯನ್ನೇ ಕೊಳ್ಳೆ ಹೊಡೆದಿದೆ. ಸರಕಾರ ನಡೆಸಲು ಅದರ ಬಳಿ ದುಡ್ಡೇ ಇಲ್ಲ. ಜಿಎಸ್‌ಟಿಯನ್ನು ಹೇರಿ ಜನತೆಯ ಹಣವನ್ನು ಹೀರುವೆವೆಂಬ ಯೋಜನೆ ಇಡೀ ದೇಶದ ವ್ಯಾಪಾರ, ವಹಿವಾಟಿಗೆ ಇನ್ನಿಲ್ಲದ ಸಂಕಷ್ಟವನ್ನು ಒಡ್ಡಿದೆ. ನೋಟ್ ಬ್ಯಾನ್ ನೀಡಿದ ಮರ್ಮಾಘಾತದಿಂದ ತತ್ತರಿಸಿದ ದೇಶದ ಜನತೆ ಇನ್ನೂ ಚೇತರಿಸಿಲ್ಲ. ಯುದ್ಧ, ಬರಗಾಲದಂತಹ ಸಂಕಷ್ಟಗಳನ್ನೆದುರಿಸಲೆಂದು ರಿಸರ್ವ್ ಬ್ಯಾಂಕ್‌ನಲ್ಲಿಟ್ಟ ಮೀಸಲು ಹಣವನ್ನೇ ಮೋದಿ ಸರಕಾರ ಎತ್ತಿಬಿಟ್ಟಿದೆ. ಬ್ಯಾಂಕ್‌ಗಳು ದಿವಾಳಿಯಾಗುತ್ತಿರುವುದನ್ನು ತಪ್ಪಿಸಲಿಕ್ಕಾಗಿ 16 ಬ್ಯಾಂಕ್‌ಗಳನ್ನು ಕೆಲ ಬ್ಯಾಂಕ್‌ಗಳ ಜೊತೆಗೆ ವಿಲೀನ ಮಾಡಿಸಿದೆ. ಬಿಎಸ್‌ಎನ್ನೆಲ್, ಎಚ್‌ಎಎಲ್, ಇಂಡಿಯನ್ ಏರ್‌ಲೈನ್ಸ್ ಮುಂಂತಾದ ಪ್ರತಿಷ್ಠಿತ ಸರಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳ ಸಿಬ್ಬಂದಿಗಳಿಗೆ ಹಲವು ತಿಂಗಳುಗಳಿಂದ ವೇತನ ನೀಡಲಾಗಿಲ್ಲ. ಆಟೋಮೊಬೈಲ್, ಟೆಕ್ಸ್‌ಟೈಲ್ಸ್, ರಿಯಲ್ ಎಸ್ಟೇಟ್, ಗ್ರಾಹಕ ಉತ್ಪನ್ನ ಮುಂತಾದ ಕ್ಷೇತ್ರಗಳು ಭಾರೀ ನಷ್ಟ ಹಾಗೂ ವ್ಯಾಪಾರ ಕಡಿತವನ್ನು ಎದುರಿಸುತ್ತಿವೆ. ನೆರೆಯ ಪಾಕ್, ಬಾಂಗ್ಲಾ, ನೇಪಾಳ ಮತ್ತು ಶ್ರೀಲಂಕಾಗಿಂತ ಭಾರತದ ಜಿಡಿಪಿ ಕುಸಿಯುತ್ತಾ ಐತಿಹಾಸಿಕ ಕೆಳಮಟ್ಟಕ್ಕೆ ಇಳಿದಿದೆ. ಮುಂದಿನ ವರ್ಷ ಭಾರತದ ಆರ್ಥಿಕತೆ ಇನ್ನಷ್ಟು ಸಂಕಷ್ಟಗಳಿಗೆ ತುತ್ತಾಗಲಿದೆ ಎಂಬ ಲೆಕ್ಕಾಚಾರವನ್ನು ಆರ್ಥಿಕ ತಜ್ಞರು ನೀಡುತ್ತಿದ್ದಾರೆ.

ನರೇಂದ್ರ ಮೋದಿ, ಅಮಿತ್ ಶಾ ಮತ್ತು ಇತರ ಬಿಜೆಪಿ ಮಂತ್ರಿಗಳ ಹಾಗೂ ನಾಯಕರ ದುರಹಂಕಾರ, ಸರ್ವಾಧಿಕಾರ ಮತ್ತು ಉಗ್ರ ಬಲಪಂಥೀಯ ಜನವಿರೋಧಿ ನೀತಿಯು ದೇಶದ ಜನತೆಯ ಸ್ವಾತಂತ್ರವನ್ನು ಸಂಪೂರ್ಣವಾಗಿ ಕಸಿದಿದೆ. ಸರಕಾರದ ದುಷ್ಟ ನೀತಿಗಳನ್ನು ಟೀಕಿಸಿದವರನ್ನೂ ದೇಶದ್ರೋಹಿಗಳೆಂದು ಕರೆಯವುದು, ಸುಳ್ಳು ಕೇಸುಗಳಲ್ಲಿ ಸಿಲುಕಿಸಿ ಜೈಲಿಗೆ ತಳ್ಳುವ ಕೆಲಸ ದೇಶಾದ್ಯಂತ ಸರಾಗವಾಗಿ ನಡೆಯುತ್ತಿದೆ. ಉಗ್ರ ರಾಷ್ಟ್ರೀಯತೆಯ ಮೂಲಕ ಮನುವಾದಿ ರಾಷ್ಟ್ರವನ್ನು ಕಟ್ಟುವ ಧಾವಂತದಲ್ಲಿ ಮುಸ್ಲಿಮ್, ದಲಿತ, ಪ್ರಗತಿಪರ ಹಾಗೂ ಕ್ರೈಸ್ತರ ಮೇಲೆ ದಾಳಿ, ಹತ್ಯೆಗಳಿಗೆ ಲೆಕ್ಕವೇ ಇಲ್ಲ. ಪಾರ್ಲಿಮೆಂಟ್‌ನಲ್ಲಿ ಮಂಡಿಸಲ್ಪಡುವ ಜನವಿರೋಧಿ, ಮುಸ್ಲಿಮ್ ವಿರೋಧಿ ಮಸೂದೆಗಳು ವಿರೋಧವಿಲ್ಲದೆ ಕಾನೂನುಗಳಾಗಿ ಹೊರಬರುತ್ತಿದ್ದು, ಇದೇ ಕಾನೂನುಗಳ ಮೂಲಕ ಮುಸ್ಲಿಮ್, ದಲಿತ ಮತ್ತು ಮಾನವ ಹಕ್ಕುಗಳ ಹೋರಾಟಗಾರರನ್ನು ಸದೆಬಡಿಯುವ ಹುನ್ನಾರ ಈಗ ಸ್ಪಷ್ಟವಾಗುತ್ತಿದೆ. ಕಾಶ್ಮೀರದ ಮೇಲಿನ 370 ವಿಧಿ ಹಾಗೂ 35ಎ ವಿಧಿಯನ್ನು ಯಾವುದೇ ಚರ್ಚೆ, ಸಮಾಲೋಚನೆ, ಜನಾಭಿಪ್ರಾಯ ಸಂಗ್ರಹ ಮಾಡದೇ ರದ್ದುಗೊಳಿಸಿದ ಕ್ರಮ ಸಂವಿಧಾನದ ತಿರಸ್ಕಾರವಾಗಿದೆ. ಕಾಶ್ಮೀರದಲ್ಲಿ ಹೇರಿರುವ ಅಮಾನವೀಯ ನಿರ್ಬಂಧಗಳು ಅಲ್ಲಿನ ಜನತೆಯ ಮೂಲಭೂತ ಹಕ್ಕುಗಳನ್ನೇ ಆಪೋಷನಗೈದಿವೆ.

ಅಂದು ಬ್ರಿಟಿಷರ ಕೈಯಿಂದ ಸ್ವಾತಂತ್ರಕ್ಕಾಗಿ ಒಗ್ಗಟ್ಟಿನ ಹೋರಾಟ ನಡೆಯಿತು. ಸಂಘಪರಿವಾರ ಬ್ರಿಟಿಷರ ಜತೆಗೆ ನಿಂತು ಬೆಂಬಲ ಕೊಟ್ಟಿತ್ತು. ಇಂದು ದೇಶವನ್ನು ಮತ್ತೊಮ್ಮೆ ಮನುವಾದಿ-ಫ್ಯಾಶಿಸ್ಟ್-ಉಗ್ರವಾದಿ ಸಂಘಪರಿವಾರ ಮತ್ತು ಬಿಜೆಪಿಯ ಕೈಯಿಂದ ಮುಕ್ತಿಗೊಳಿಸುವ ಸ್ವಾತಂತ್ರ ಹೋರಾಟವನ್ನು ಒಗ್ಗಟ್ಟಿನಿಂದ ನಡೆಸುವ ಕಾಲ ಸನ್ನಿಹಿತವಾಗಿದೆ. ಅಂದು ಬ್ರಿಟಿಷರ ಜೊತೆಗೆ ಬೆಂಬಲವಾಗಿ ನಿಂತು ದೇಶದ್ರೋಹಗೈದ ಸಂಘಿಗಳು ಇಂದು ‘ದೇಶದ್ರೋಹ’ವನ್ನು ಜನತೆಗೆ ಉಚಿತವಾಗಿ ಹಂಚುತ್ತಿದ್ದು, ತಾವೇ ನೈಜ ದೇಶಭಕ್ತರೆಂದು ಸಾಬೀತುಪಡಿಸಲು ಹಪಹಪಿಸುತ್ತಿದ್ದಾರೆ. ಒಟ್ಟಿನಲ್ಲಿ ದೇಶದ ಪ್ರಜಾಪ್ರಭುತ್ವ ಈಗ ಅತ್ಯಂತ ಅಪಾಯದಲ್ಲಿದೆ.

LEAVE A REPLY

Please enter your comment!
Please enter your name here