ಭಾರತದಲ್ಲಿ ಶೀಘ್ರದಲ್ಲೇ ಜಿಯೊದಿಂದ 5ಜಿ ಸೇವೆ?
Prasthutha: October 21, 2020

ಮುಂಬೈ : ಅತ್ಯಂತ ವೇಗದ 5ಜಿ ನೆಟ್ ವರ್ಕ್ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಕೇಶ್ ಅಂಬಾನಿ ಮಾಲಕತ್ವದ ಜಿಯೊ ಫ್ಲಾಟ್ ಫಾರಮ್ಸ್ ಲಿಮಿಟೆಡ್, ಕ್ವಾಲಕಾಮ್ ಕಂಪೆನಿ ಜೊತೆ ಕಾರ್ಯ ನಿರ್ವಹಿಸುತ್ತಿದೆ.
ಭಾರತದಲ್ಲಿ ಸ್ವದೇಶಿ ನಿರ್ಮಿತ 5ಜಿ ನೆಟ್ ವರ್ಕ್ ಸೌಲಭ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತ್ವರಿತಗತಿಯ ಪ್ರಯತ್ನ ಸಾಗಿದೆ ಎಂದು ಸಂಸ್ಥೆಗಳು ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಭಾರತದಲ್ಲಿ 5ಜಿ ಸೇವೆ ಇನ್ನೂ ಹರಾಜು ಆಗಿಲ್ಲ. ಆದರೆ, ಜಗತ್ತಿನ ಎರಡನೇ ಅತಿದೊಡ್ಡ ಮೊಬೈಲ್ ಬಳಕೆದಾರರ ಮಾರುಕಟ್ಟೆಯಾದ ಭಾರತದಲ್ಲಿ ಈ ಸೇವೆ ಜಾರಿಗೊಳಿಸಲು ಜಿಯೋ ಸಿದ್ಧವಾಗುತ್ತಿದೆ.
ಸ್ವದೇಶಿ ಮಾರುಕಟ್ಟೆಯಲ್ಲಿ ಯಶಸ್ವಿಯಾದರೆ, ಈ ಸೇವೆಯನ್ನು ಇತರ ಕಂಪೆನಿಗಳಿಗೂ ಮಾರಾಟ ಮಾಡಲು ಅಂಬಾನಿ ಉದ್ದೇಶಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಉಚಿತ ಕರೆ, ಕಡಿಮೆ ಬೆಲೆಯ ಡಾಟಾದ ಕೊಡುಗೆಯೊಂದಿಗೆ ಭಾರತದಲ್ಲಿ ತನ್ನ ಸೇವೆ ಆರಂಭಿಸಿದ ಜಿಯೋ ಇಂದು, ದೇಶದಲ್ಲಿ ಸುಮಾರು 40 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದುವ ಮೂಲಕ ಅತಿದೊಡ್ಡ ಸಂಸ್ಥೆ ಎಂದೆನಿಸಿದೆ.
