ಭಯಬೇಡ, ಜಾಗೃತಿ ಇರಲಿ ಎನ್ನುತ್ತಲೇ ಭಯದ ವಾತಾವರಣ ಸೃಷ್ಟಿ | ಸುನಿಲ್ ಕುಮಾರ್ ಬಜಾಲ್

Prasthutha|

ಮಂಗಳೂರು : ಭಯಬೇಡ, ಜಾಗೃತಿ ಇರಲಿ ಎಂದು ಅಬ್ಬರಿಸುವ ಕೇಂದ್ರ ಸರಕಾರವು ವಾಸ್ತವದಲ್ಲಿ ಮಾಧ್ಯಮಗಳ ಮೂಲಕ ಭಯದ ವಾತಾವರಣವನ್ನು ಸೃಷ್ಟಿಸಿ, ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ. ಸಿಪಿಐಎಂ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ವಾರಾಚರಣೆ ಕಾರ್ಯಕ್ರಮದ ಭಾಗವಾಗಿ ಉರ್ವಾಸ್ಟೋರ್ ನಲ್ಲಿ ಜರುಗಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

- Advertisement -

ಕೊರೋನ ಸಂಕಷ್ಟದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು, ದೇಶದ ಅಮೂಲ್ಯ ಸಂಪತ್ತಾದ ವಿಮಾನ ನಿಲ್ದಾಣ, ರೈಲ್ವೆ, ಬಿಎಸ್ ಎನ್ ಎಲ್, ಬ್ಯಾಂಕ್, ವಿಮೆ, ಕಲ್ಲಿದ್ದಲು ಮುಂತಾದುವುಗಳನ್ನು ಮಾರಾಟ ಮಾಡಲು ಕುತಂತ್ರ ಹೆಣೆಯಲಾಗಿದೆ ಎಂದು ಅವರು ಆಪಾದಿಸಿದರು.

ಕೊರೋನಾ ನಿಗ್ರಹಿಸುವಲ್ಲಿ ವಿಫಲವಾದ ಕೇಂದ್ರ ಸರಕಾರ, ಜನರ ಗಮನ ಬೇರೆಡೆಗೆ ಸೆಳೆಯಲು ಚೀನಾದ ವಿರುದ್ಧ ಯುದ್ಧ ಉನ್ಮಾದ ಸೃಷ್ಟಿಸಿತು. ರಫೇಲ್ ಹಗರಣದಲ್ಲಿ ಕೋಟ್ಯಂತರ ರೂ. ಹಣ ಭ್ರಷ್ಟಾಚಾರ ಎಸಗಿದ್ದರೂ, ಯುದ್ಧ ಸಾಮಗ್ರಿಗಳನ್ನು ತರುವಲ್ಲಿ ವಿಜಯೋತ್ಸವ ಆಚರಿಸಲಾಯಿತು. ಒಟ್ಟಿನಲ್ಲಿ ಜನರ ಬದುಕಿಗೆ ತಿಲಾಂಜಲಿಯನ್ನಿಟ್ಟು, ಕೊರೋನ ಹತ್ತಿಕ್ಕುವಲ್ಲಿ ನರೇಂದ್ರ ಮೋದಿ ಮಹಾನ್ ಸಾಧನೆ ಮಾಡಿದ್ದಾರೆ ಎಂಬಂತೆ ಮಾಧ್ಯಮಗಳಲ್ಲಿ ಹಸಿಹಸಿ ಸುಳ್ಳುಗಳನ್ನು ಹರಿಯಬಿಡಲಾಯಿತು ಎಂದು ಪಕ್ಷದ ಮತ್ತೋರ್ವ ನಾಯಕ ಮನೋಜ್ ಕುಲಾಲ್ ಹೇಳಿದರು.

- Advertisement -

ಪ್ರತಿಭಟನೆಯಲ್ಲಿ ಸಿಪಿಎಂ ಸ್ಥಳೀಯ ನಾಯಕರಾದ ಕಿಶೋರ್, ರಾಜೇಶ್ ಕುಲಾಲ್, ರಘುವೀರ್, ಡಿವೈಎಫ್ ಐ ನಾಯಕ ಪ್ರಶಾಂತ್ ಎಂ.ಬಿ., ನಾಗೇಂದ್ರ, ಸನತ್, ಸುಕೇಶ್, ಇಕ್ಬಾಲ್, ಸಿಐಟಿಯು ನಾಯಕ ಶ್ಯಾಮುವೆಲ್ ಟೈಟಸ್, ದಿನೇಶ್ ಶ್ರೀಯಾನ್, ಮಹಿಳಾ ನಾಯಕಿ ಹರಿಣಾಕ್ಷಿ ಮುಂತಾದವರು ಉಪಸ್ಥಿತರಿದ್ದರು.

Join Whatsapp