ಭಯಪಡದೆ ಘನತೆಯಿಂದ ಜೀವಿಸಿ

0
57

ಅನೀಸ್ ಅಹ್ಮದ್, ಬೆಂಗಳೂರು

ರಾಷ್ಟ್ರೀಯ ಕಾರ್ಯದರ್ಶಿ,

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಸ್ವಾತಂತ್ರಾ ನಂತರ ಎಂದೂ ಕಾಣದ ಗಂಭೀರ ಸವಾಲನ್ನು ನಮ್ಮ ದೇಶ ಇಂದು ಎದುರಿಸುತ್ತಿದೆ. ಅತಿಸಣ್ಣ ಅಲ್ಪಸಂಖ್ಯಾತರ ರಾಕ್ಷಸೀಯ ಆದರ್ಶವಾದ ಎಂದು ಪರಿಗಣಿಸಲಾಗುತ್ತಿದ್ದ ಹಿಂದುತ್ವ ಮತಾಂಧತೆ ಇಂದು ಕೇಂದ್ರ ಸ್ಥಾನವನ್ನು ಆವರಿಸಿಕೊಂಡು ಪ್ರಬಲ ಆದರ್ಶವಾದವಾಗಿದೆ. ಈ ಆದರ್ಶವಾದದ ಮೂಲಕ ತರಬೇತು ಪಡೆದ ಜನರು ಇಂದು ಅಧಿಕಾರ ಸ್ಥಾನವನ್ನು ಆಕ್ರಮಿಸುತ್ತಿದ್ದಾರೆ. ಹಿಂದುತ್ವ ಆದರ್ಶದ ಪ್ರಾಬಲ್ಯವನ್ನು ರಾಜಕೀಯ ಚಿತ್ರಣ ಮತ್ತು 2014 ಮತ್ತು 2019ರ ಚುನಾವಣೆಗಳಲ್ಲಿ ಬಿಜೆಪಿಯ ಅಭಿಯಾನವನ್ನು ಹೋಲಿಸಿದಾಗ ಅರ್ಥವಾಗುತ್ತದೆ. 2014ರಲ್ಲಿ, ಬಿಜೆಪಿ ದೇಶದಲ್ಲಿ ಭ್ರಷ್ಟಾಚಾರವಿರೋಧಿ ವಾತಾವರಣವನ್ನು ಸೃಷ್ಟಿಸಿತ್ತು ಮತ್ತು ಅಚ್ಛೇ ದಿನ್ ಭರವಸೆಯ ಮೂಲಕ ಮಧ್ಯಮವರ್ಗದ ಮತದಾರರನ್ನು ಸೆಳೆಯಿತು. ಬಿಜೆಪಿ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಲಿಲ್ಲ. ಅದರ ಬದಲಿಗೆ ಅತೀದೊಡ್ಡ ರಕ್ಷಣಾ ಹಗರಣದಲ್ಲಿ ಪ್ರಧಾನ ಮಂತ್ರಿಯ ಹೆಸರು ಕೇಳಿಬಂತು. ಮೋದಿ 1.0 ಸರಕಾರದ ನಿರ್ವಹಣೆ ಅತ್ಯಂತ ಕಳಪೆಯಾಗಿತ್ತು. ನೋಟು ಅಮಾನ್ಯ ಮತ್ತು ಜಿಎಸ್‌ಟಿಯಂತಹ ಪ್ರಮಾದಗಳಿಂದ ಆರ್ಥಿಕತೆ ಅಧಃಪತನದತ್ತ ಸಾಗಿತು, ನಿರುದ್ಯೋಗ ದರ ಹಿಂದಿನ ದಾಖಲೆಗಳನ್ನು ಮುರಿಯಿತು, ರೈತರ ಸಂಕಷ್ಟ ಕಾಡ್ಗಿಚ್ಚಿನಂತೆ ಹರಡಿತು ಮತ್ತು ದೇಶ ನೇರವಾಗಿ ಸರಕಾರ ಮತ್ತು ಅದರ ಕೈಗೊಂಬೆಗಳಂತಿದ್ದ ಸಂಸ್ಥೆಗಳಿಂದ ಎಲ್ಲ ರೀತಿಯ ನಾಗರಿಕ ಹಕ್ಕುಗಳ ಉಲ್ಲಂಘನೆಗೆ ಸಾಕ್ಷಿಯಾಯಿತು.

ಸಾರ್ವತ್ರಿಕ ಚುನಾವಣೆ ಹಿಂದಿನ ಎಲ್ಲ ಚುನಾವಣೆಗಳಿಗಿಂತ ಭಿನ್ನವಾಗಿತ್ತು. ತನ್ನ ಭರವಸೆಗಳನ್ನು ಈಡೇರಿಸಲು ವಿಫಲವಾದ ಆಡಳಿತವಿರೋಧಿ ಸರಕಾರ ನಮ್ಮ ಮುಂದಿತ್ತು. ಆದರೆ ಮೋದಿ ಸರಕಾರದ ನಿರ್ವಹಣೆಗೆ ವಿರುದ್ಧವಾಗಿ 2019ರ ಚುನಾವಣೆಯಲ್ಲಿ ಬಿಜೆಪಿ 2014ರಲ್ಲಿ ಗಳಿಸಿದ ಸ್ಥಾನಗಳಿಗಿಂತಲೂ ಹೆಚ್ಚಿನ ಸ್ಥಾನಗಳು ಮತ್ತು ಹೆಚ್ಚು ಮತಗಳಿಕೆಯಿಂದ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿತು. ಬಿಜೆಪಿ ಸರಕಾರದ ಸಾಧನೆಯೆಂದರೆ, ಐದು ವರ್ಷಗಳಲ್ಲಿ ಅದು ತನ್ನ ಸಿದ್ಧಾಂತಕ್ಕೆ ತಕ್ಕುದಾದ ರಾಷ್ಟ್ರೀಯ ಕಲ್ಪನೆಯನ್ನು ಮೂಡಿಸಬಲ್ಲಂತಹ ವಾತಾವರಣವನ್ನು ಸೃಷ್ಟಿಸಿದ್ದು. 2014ರಲ್ಲಿ ಮಾಡಿದಂತೆ ಬಿಜೆಪಿ ಭ್ರಷ್ಟಾಚಾರ ಮತ್ತು ಉತ್ತಮ ಆಡಳಿತದ ಮರೆಯಲ್ಲಿ ಅಡಗಲು ಯತ್ನಿಸಲಿಲ್ಲ. 2019ರ ಚುನಾವಣೆಯಲ್ಲಿ ಬಿಜೆಪಿ ಹಿಂದುತ್ವ ಸಿದ್ಧಾಂತ, ಹಿಂದು ಪ್ರಾಬಲ್ಯವಾದ ಮತ್ತು ಬಲಪ್ರಯೋಗದ ರಾಷ್ಟ್ರೀಯವಾದವನ್ನು ಬಹಿರಂಗವಾಗಿ ಪ್ರದರ್ಶಿಸಿತು. ದೇಶದ ಸಶಸ್ತ್ರ ಪಡೆಗಳನ್ನೂ ಬಿಜೆಪಿಯ ಅಭಿಯಾನದ ಸರಕಾಗಿ ಬಳಸಲಾಯಿತು. ಬಿಜೆಪಿಯ ಇನ್ನೊಂದು ಸಫಲತೆಯೆಂರೆ ಅದಕ್ಕೆ ವಿರೋಧ ಪಕ್ಷಗಳಿಗೂ ವಿಷಯ ಸಿದ್ಧಪಡಿಸಲು ಸಾಧ್ಯವಾಗಿತ್ತು. ವಿರೊಧ ಪಕ್ಷಗಳು ಮುಖ್ಯವಾಗಿ ಕಾಂಗ್ರೆಸ್ ಮೃದು ಹಿಂದುತ್ವದ ಮೂಲಕ ಬಿಜೆಪಿಯನ್ನು ಅನುಕರಣೆ ಮಾಡಲು ಪ್ರಯತ್ನಿಸಿತು. ತಮಗೆ ಹಿಂದು ವಿರೋಧಿ ಮತ್ತು ದೇಶವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗುವ ಭಯವನ್ನು ವಿರೋಧ ಪಕ್ಷಗಳು ಹೊಂದಿದ್ದ ಕಾರಣ 2019ರ ಚುನಾವಣೆಯಲ್ಲಿ ಬಿಜೆಪಿಗೆ ಸೈದ್ಧಾಂತಿಕ ಮಟ್ಟದಲ್ಲಿ ಯಾವುದೇ ಗಮನಾರ್ಹ ಸವಾಲು ಎದುರಾಗಲಿಲ್ಲ.

ಮೋದಿ 2.0 ಸರಕಾರ ಅಧಿಕಾರಕ್ಕೇರಿದ ಕೇವಲ ಮೂರು ತಿಂಗಳಲ್ಲಿ ದೇಶದಲ್ಲಿ ಹೆಚ್ಚಿನ ವೇಗದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿರುವುದನ್ನು ನಾವು ಕಾಣಬಹುದು. ತನ್ನ ಮೊದಲ ಭಾಷಣದಲ್ಲಿ, ಬಿಜೆಪಿ ಸಬ್ಕಾ ವಿಶ್ವಾಸ್ (ಎಲ್ಲರ ನಂಬಿಕೆ ಗಳಿಸುವುದು)ಗೆ ಬದ್ಧವಾಗಿದೆ ಎನ್ನುವುದನ್ನು ಜಗತ್ತಿಗೆ ನಂಬಿಸಲು ಪ್ರಧಾನಿ ಪ್ರಯತ್ನಿಸಿದ್ದರು. ಆದರೆ ಸಹಿಷ್ಣುತೆಯ ಈ ಹೇಳಿಕೆಗಳು ಬಿಜೆಪಿಯ ಸಿದ್ಧಾಂತದಂತೆ ಬರೀ ಹೋಳು ಎನ್ನುವುದು ಕೆಲವೇ ದಿನಗಳಲ್ಲಿ ಸಾಬೀತಾಗಿತ್ತು. 2019ರಲ್ಲಿ ಈಗಾಗಲೇ ದ್ವೇಷಾಪರಾಧದ 23 ಪ್ರಕರಣಗಳು ದಾಖಲಾಗಿವೆ. ಹಿಂದುತ್ವದ ಮತಾಂಧ ಗುಂಪುಗಳು ಬಿಜೆಪಿಯ ಗೆಲುವಿನಿಂದ ಭದ್ರತೆಯ ಭಾವವನ್ನು ಪಡೆದುಕೊಂಡು ಮತ್ತಷ್ಟು ಪ್ರೇರೇಪಿತಗೊಂಡವು. ಬಹುತೇಕ ಸಂದರ್ಭಗಳಲ್ಲಿ ಬಿಜೆಪಿ ಸ್ಥಳೀಯ ನಾಯಕರು, ಶಾಸಕರು ಮತ್ತು ಸಂಸದರು ಬಂಧಿತ ಅಪರಾಧಿಗಳ ನೆರವಿಗೆ ಧಾವಿಸುತ್ತಾರೆ. ಗುಂಪಿನಿಂದ ಥಳಿಸಿ ಹತ್ಯೆಯಂತಹ ಪ್ರಕರಣಗಳಲ್ಲಿ ಪೊಲೀಸರ ಪಾತ್ರವೂ ಬಯಲಾಗಿದ್ದು, ಇಂತಹ ಘಟನೆಗಳು ತಮ್ಮ ಕಣ್ಣಮುಂದೆ ನಡೆದರೂ ಅದನ್ನು ತಡೆಯಲು ಪೊಲೀಸರು ವಿಫಲವಾಗಿದ್ದಾರೆ. ಪೆಹ್ಲೂ ಖಾನ್ ಹತ್ಯೆ ಪ್ರಕರಣದ ಆರೋಪಿಗಳ ಖುಲಾಸೆ, ಪೊಲೀಸರು ಯಾವ ರೀತಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಮತ್ತು ನ್ಯಾಯಾಲಯವೂ ಪೆಹ್ಲೂ ಖಾನ್ ಕೊಲೆಗಾರರಿಗೆ ಶಿಕ್ಷೆ ವಿಧಿಸಲಾಗದಷ್ಟು ಪ್ರಕರಣವನ್ನು ದುರ್ಬಲಗೊಳಿಸಿದ್ದಾರೆ ಎನ್ನುವುದನ್ನು ಬಹಿರಂಗಪಡಿಸುತ್ತದೆ. ಪ್ರಕರಣವನ್ನು ಕೈಬಿಡುವಂತೆ ಸಂತ್ರಸ್ತರ ಕುಟುಂಬದ ಮೇಲೆ ಪೊಲೀಸರು ಮತ್ತು ಬಿಜೆಪಿ ಶಾಸಕರು, ಸಂಸದರು ಒತ್ತಡ ಹೇರಿರುವ ಅನೇಕ ಉದಾಹರಣೆಗಳು ಇವೆ. ಆರೆಸ್ಸೆಸ್‌ನ ಹಿಂದುರಾಷ್ಟ್ರದ ಪರಿಕ್ಪನೆಯ ಪ್ರಕಾರ ಅದರ ಅನುಯಾಯಿಗಳು ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುವ ಬಗ್ಗೆ ಅನೇಕ ಬಾರಿ ಉಲ್ಲೇಖ ಮಾಡಿದ್ದಾರೆ. ಸ್ವಾತಂತ್ರ್ಯದ ಬಳಿಕ ಭಾರತ  ಎಲ್ಲರಿಗೂ ಸಮಾನ ನಾಗರಿಕ ಹಕ್ಕುಗಳನ್ನು ನೀಡುವ ಸಂವಿಧಾನ ಹೊಂದಿರುವ ಜಾತ್ಯತೀತ ದೇಶವಾದ ವಾಸ್ತವವನ್ನು ಒಪ್ಪಿಕೊಳ್ಳಲು ಹಿಂದುತ್ವ ಮತಾಂಧರು ಸಿದ್ಧರಿರಲಿಲ್ಲ. ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ಯಾವ ರೀತಿ ಸಂಘಪರಿವಾರ ಅಲ್ಪಸಂಖ್ಯಾತರು ಮುಖ್ಯವಾಗಿ ಮುಸ್ಲಿಮರಿಗೆ ತಮ್ಮ ಮೂಲಭೂತ ಹಕ್ಕಾದ ಪೌರತ್ವವನ್ನು ನೀಡಲು ನಿರಾಕರಿಸುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಅಸ್ಸಾನಲ್ಲಿ ಎನ್‌ಆರ್‌ಸಿ ಸರ್ವೋಚ್ಚ ನ್ಯಾಯಾಲಯದ ನಿಗಾದಲ್ಲಿ ನಡೆದರೂ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳಿದ್ದು ಅವುಗಳನ್ನು ಈ ದೇಶದ ಕಾನೂನುಬದ್ಧ ನಾಗರಿಕರಾಗಿರುವ ಜನರನ್ನು ಮುಖ್ಯವಾಗಿ ಮುಸ್ಲಿಮರನ್ನು ಶೋಷಿಸಲು ಬಳಸಲಾಯಿತು. ನೋಂದಣಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿದ್ದ ಜನರ ವಿರುದ್ಧ ಅಪರಿಚಿತ ವ್ಯಕ್ತಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರು ಹೆಚ್ಚುವರಿ ಪರಿಶೀಲನೆಗೊಳಗಾಗುವಂತಾಯಿತು. ಅಂತಿಮ ಪಟ್ಟಿಯಲ್ಲಿ 19 ಲಕ್ಷ ಮಂದಿಯನ್ನು ಹೊರಗಿಡಲಾಗಿದ್ದು, ಅದರರ್ಥ 19 ಲಕ್ಷಕ್ಕೂ ಅಧಿಕ ಜನರು ಇನ್ನು ಮುಂದೆ ಭಾರತದ ನಾಗರಿಕರಾಗಿ ಉಳಿದಿಲ್ಲ. ಕತೆ ಇಲ್ಲಿಗೆ ಮುಗಿಯುವುದಿಲ್ಲ.

ಮುಸ್ಲಿಮರ ಹೊರತಾಗಿ ನೆರೆಯ ರಾಷ್ಟ್ರಗಳ ಇತರ ವಲಸಿಗರಿಗೆ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿ ಮಾಡಲು ಬಿಜೆಪಿ ಸರಕಾರ ಸಿದ್ಧತೆ ನಡೆಸುತ್ತಿದೆ. ಈ ಮಸೂದೆಯ ಮೂಲಕ ಎನ್‌ಆರ್‌ಸಿಯಲ್ಲಿ ಕೇವಲ ಮುಸ್ಲಿಮರನ್ನು ಹೊರಗಿಡಲಾಗುವುದು ಮತ್ತು ಇತರ ಎಲ್ಲರಿಗೂ ಪೌರತ್ವ ನೀಡಲಾಗುವುದು. ಮೊದಲು ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಎನ್‌ಆರ್‌ಸಿಗೆ ಆಗ್ರಹಿಸುತ್ತಿದ್ದ ಬಿಜೆಪಿ ಇದೀಗ ಇಡೀ ದೇಶದಲ್ಲಿ ಅದನ್ನು ಜಾರಿ ಮಾಡಲು ಬಯಸಿದೆ. ಮತಾಂಧ ಪಡೆಗಳ ಧೋರಣೆ ಸ್ಪಷ್ಟವಾಗಿದ್ದು, ಮುಸ್ಲಿಮರಿಗೆ ನಾಗರಿಕತ್ವದ ಮೂಲಭೂತ ಹಕ್ಕುಗಳನ್ನು ತಿರಸ್ಕರಿಸಿ ಅವರನ್ನು ರೊಂಹಿಂಗ್ಯಾಗಳಂತೆ ದೇಶರಹಿತ ಜನರನ್ನಾಗಿ ಪರಿವರ್ತಿಸುವುದು.

ಮೋದಿ ಮತ್ತು ಹೊಸದಾಗಿ ಭಡ್ತಿ ಪಡೆದಿರುವ ರಾಜಕುಮಾರ ಅಮಿತ್ ಶಾ ನೇತೃತ್ವದ ಸರಕಾರ ವಿವಿಧ ನೀತಿಗಳ ಮೂಲಕ ಆರೆಸ್ಸೆಸ್‌ನ ಸಿದ್ಧಾಂತವನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚಿನ ಆತ್ಮವಿಶ್ವಾಸ ಪ್ರದರ್ಶಿಸಿದೆ. ನೂತನ ಸರಕಾರದ ಮೊದಲ ಸಂಸತ್ ಅಧಿವೇಶನ ಅಲ್ಪಸಂಖ್ಯಾತರನ್ನು ನೇರವಾಗಿ ಗುರಿಯಾಗಿಸಿ ವಿವಾದಾತ್ಮಕ ಮಸೂದೆಗಳ ಪರಿಚಯಕ್ಕೆ ಸಾಕ್ಷಿಯಾಯಿತು. ಎನ್‌ಐಎಗೆ ಹೆಚ್ಚಿನ ಅಧಿಕಾರವನ್ನು ನೀಡಲು ಎನ್‌ಐಎ ತಿದ್ದುಪಡಿ ಮಸೂದೆಯನ್ನು ಜಾರಿ ಮಾಡಲಾಯಿತು. ಲವ್ ಜಿಹಾದ್ ಮತ್ತು ಐಸಿಸ್ ನೇಮಕಾತಿ ಮುಂತಾದ ತಿರುಚಲ್ಪಟ್ಟ ಸುಳ್ಳುಗಳ ಹಿಂದೆ ಬೀಳುವ ಮೂಲಕ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸುವ ಸಂಸ್ಥೆಯೆಂದೇ ಎನ್‌ಐಎ ಹೆಸರು ಪಡೆಯಿತು. ಎನ್‌ಐಎ ಪ್ರಚಾರಪಡಿಸಿದ ಈ ಕಟ್ಟುಕತೆಗಳನ್ನು ಅನೇಕ ಬಾರಿ ಬಹಿರಂಗಪಡಿಸಲಾಯಿತು ಮತ್ತು ಮುಸ್ಲಿಮರನ್ನು ಶೋಷಿಸುವ ಎನ್‌ಐಎಯ ನಿಜವಾದ ಉದ್ದೇಶವೂ ಹಲವು ಬಾರಿ ಬಯಲಾಗಿತ್ತು. ಕೇಂದ್ರ ಸರಕಾರ ಎನ್‌ಐಎಯನ್ನು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಲು ಮತ್ತು ಮುಸ್ಲಿಂ ಯುವಕರಿಗೆ ಚಿತ್ರಹಿಂಸೆ ನೀಡುವ ಮೂಲಕ ಮುಸ್ಲಿಮ್ ಸಮುದಾಯದ ಒಳಗೆ ಭಯದ ವಾತಾವರಣ ಸೃಷ್ಟಿಸಲು ಕೈಗೊಂಬೆಯಾಗಿ ಬಳಸಿದೆ. ಇನ್ನೊಂದೆಡೆ, ಇದೇ ಎನ್‌ಐಎ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಹಿಂದುತ್ವದ ಇತರ ಉಗ್ರರ ಬಗ್ಗೆ ಮೃದು ಧೋರಣೆ ತಳೆದಿದೆ. ಕೇಂದ್ರ ಸರಕಾರದಡಿ ಈ ಸಂಸ್ಥೆಯ ಇಬ್ಬಗೆ ನೀತಿ ದೇಶದ ಮೇಲೆ ಗಂಭೀರ ಅಪಾಯ ಒಡ್ಡುತ್ತದೆ. ಈ ಪಕ್ಷಪಾತಿ ಸಂಸ್ಥೆಗೆ ಇನ್ನಷ್ಟು ಅಧಿಕಾರವನ್ನು ನೀಡುವುದರಿಂದ ಮುಸ್ಲಿಮರನ್ನು ರಾಕ್ಷಸರಂತೆ ಬಿಂಬಿಸುವ ಮತ್ತು ಹಿಂಸಿಸುವ ಬಿಜೆಪಿಯ ಸಿದ್ಧಾಂತಕ್ಕೆ ಮತ್ತಷ್ಟು ವೇಗ ನೀಡಿದಂತಾಗುತ್ತದೆ. ಅದೇ ರೀತಿ, ತನ್ನ ಸಿದ್ಧಾಂತಕ್ಕೆ ಅಪಾಯವೊಡ್ಡುತ್ತಾರೆ ಎಂದು ಬಿಜೆಪಿಗೆ ಅನಿಸುವ ವ್ಯಕ್ತಿಯನ್ನು ಭದ್ರತಾ ಸಂಸ್ಥೆಗಳು ಗುರಿಯಾಗಿಸಲೆಂದೇ ಭಯಾನಕ ಯುಎಪಿಎ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಓರ್ವ ವ್ಯಕ್ತಿ ಅಥವಾ ಸಂಘಟನೆಯ ವಿರುದ್ಧ ಕಾರ್ಯಾಚರಣೆ ನಡೆಸಲು ರಾಜ್ಯ ಸರಕಾರದ ನಿಯಮಗಳನ್ನು ಉಲ್ಲಂಘಿಸಲು ತನಿಖಾ ಸಂಸ್ಥೆಗಳಿಗೆ ನೂತನ ತಿದ್ದುಪಡಿ ಅವಕಾಶ ನೀಡುತ್ತದೆ. ನ್ಯಾಯಾಲಯ ಅಪರಾಧಿ ಎಂದು ಘೋಷಿಸುವುದಕ್ಕೂ ಮೊದಲು ಯಾವುದೇ ವ್ಯಕ್ತಿಯನ್ನು ಉಗ್ರನೆಂದು ಘೋಷಿಸಲು ಮತ್ತು ಅವರ ಆಸ್ತಿಯನ್ನು ಜಪ್ತಿ ಮಾಡಲು ಯುಎಪಿಎ ತಿದ್ದುಪಡಿ ಸರಕಾರಕ್ಕೆ ಅವಕಾಶ ನೀಡುತ್ತದೆ. ಯುಎಪಿಎ ಕಾಯ್ದೆ ಇಲ್ಲಿಯ ತನಕ ಜಾರಿಗೆ ತರಲಾದ ಅತ್ಯಂತ ಭಯಾನಕ ಕಾನೂನುಗಳಲ್ಲಿ ಒಂದಾಗಿದ್ದು ಇದಕ್ಕೆ ಮಾಡಲಾಗಿರುವ ತಿದ್ದುಪಡಿ ಇದನ್ನು ಮತ್ತಷ್ಟು ಅಪಾಯಕಾರಿಯಾಗಿಸಿದೆ. ಈ ತಿದ್ದುಪಡಿಯ ಉದ್ದೇಶವೇ ಭಿನ್ನ ಧ್ವನಿಗಳನ್ನು ಮೌನವಾಗಿಸುವುದಾಗಿದೆ ಯಾಕೆಂದರೆ, ಕೇವಲ ಯುಎಪಿಎ ಹೇರುವುದರಿಂದ ವ್ಯಕ್ತಿಗಳು ಸಂಸ್ಥೆಯ ಜಾಲದಲ್ಲಿ ಸಿಲುಕುತ್ತಾರೆ. ಆದರೆ ತಮ್ಮ ಮುಗ್ಧತೆಯನ್ನು ಸಾಬೀತುಪಡಿಸಲು ಶಕ್ತರಾಗಿರುತ್ತಾರೆ. ಕಾಂಗ್ರೆಸ್ ಸರಕಾರ ಯುಎಪಿಎ ಪರಿಚಯಿಸಿದಾಗ ನಾಗರಿಕ ಸಮಾಜ ಮುಖ್ಯವಾಗಿ ಮುಸ್ಲಿಮ್ ಸಮುದಾಯ ಮತ್ತು ನಾಯಕರಿಂದ ಅತ್ಯಂತ ಕಡಿಮೆ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಯುಎಪಿಎಗೆ ಮಾಡಲಾಗಿರುವ ನೂತನ ತಿದ್ದುಪಡಿಯಿಂದ ಪಾಠವನ್ನು ಕಲಿಯಬೇಕಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಸಂಘಟನೆಗಳ ಸದಸ್ಯರ ವಿರುದ್ಧ ಈ ಕಾನೂನನ್ನು ಬಳಸಿದ ಸಂದರ್ಭದಲ್ಲಿ ಅವರು ವಹಿಸಿದ್ದ ಮೌನವೇ ಬಹುದೊಡ್ಡ ತಪ್ಪಾಗಿದೆ.

ಮತಾಂಧ ಸರಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಕಾನೂನುಗಳನ್ನು ಯಾವ ರೀತಿ ಬಳಸುತ್ತಿದೆ ಎನ್ನುವುದಕ್ಕೆ ತ್ರಿವಳಿ ತಲಾಖ್ ಮಸೂದೆ ಮತ್ತೊಂದು ಉದಾಹರಣೆ. ಈ ಮಸೂದೆ, ಮುಸ್ಲಿಮ್ ಮಹಿಳೆಯರನ್ನು ರಕ್ಷಿಸುವಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಪ್ರಧಾನಿ ಮತ್ತು ಅವರ ಪಕ್ಷ ಹೇಳಿಕೊಂಡಿದ್ದರೂ ಕೇವಲ ಮುಸ್ಲಿಮ್ ಕುಟುಂಬಗಳನ್ನು ಒಡೆಯಲು ಇಂತಹ ತಲೆಬುಡವಿಲ್ಲದ ಕಾನೂನನ್ನು ಜಾರಿಗೊಳಿಸಲಾಗಿದೆ ಎನ್ನುವುದು ಸ್ಪಷ್ಟ. ಸಂಸತ್‌ನಲ್ಲಿ ನಡೆದ ಚರ್ಚೆಯಲ್ಲಿ ಎತ್ತಲಾದ ಯಾವುದೇ ತಾರ್ಕಿಕ ಪ್ರಶ್ನೆಗಳಿಗೆ ಉತ್ತರಿಸಲು ಈ ಮಸೂದೆ ವಿಫಲವಾಗಿದೆ. ಮುಸ್ಲಿಮ್ ವೈಯಕ್ತಿಕ ಕಾನೂನನ್ನು ನಿರ್ಮೂಲನೆಗೊಳಿಸುವ ಆರೆಸ್ಸೆಸ್‌ನ ಕಾರ್ಯಸೂಚಿಯೇ ಈ ಮಸೂದೆಯ ಹಿಂದಿದ್ದ ಉದ್ದೇಶ. ಅತ್ಯಂತ ಸಾಹಸೀಯ ನಿರ್ಧಾರವೆಂದರೆ 370ನೇ ವಿಧಿಯ ರದ್ಧತಿ. ಬಿಜೆಪಿ ಮತ್ತು ಅದರ ಬಲಪಂಥೀಯ ಕೈಗೊಂಬೆಗಳು ಈ ನಿರ್ಧಾರವನ್ನು ವಿವಿಧ ರೀತಿಯಲ್ಲಿ ಪ್ರಶಂಸಿದರೂ, ಜಮ್ಮು ಮತ್ತು ಕಾಶ್ಮೀರ ಮುಸ್ಲಿಮ್ ಬಾಹುಳ್ಯದ ರಾಜ್ಯ ಎಂಬ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದೇ ಇದರ ಹಿಂದಿರುವ ಈ ವಾಸ್ತವ. ಕಾಶ್ಮೀರದಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾಬಲ್ಯವನ್ನು ಹೋಗಲಾಡಿಸಲು ಇರುವ ಏಕೈಕ ದಾರಿಯೆಂದರೆ, 370ನೇ ವಿಧಿಯ ನಿರ್ಮೂಲನೆ, ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದು ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಮುಸ್ಲಿಮ್ ಪ್ರಾತಿನಿಧ್ಯವನ್ನು ಕಡಿಮೆಗೊಳಿಸಲು ಮಿತಿಯನ್ನು ಹೇರುವುದು. ಕಾಶ್ಮೀರದ ಜನಸಂಖ್ಯಾರಚನೆಯನ್ನು ಬದಲಾಯಿಸುವುದು ಮತಾಂಧ ಶಕ್ತಿಗಳ ಕನಸಾಗಿದೆ ಮತ್ತು ಕಾಶ್ಮೀರಿ ಜಮೀನುಗಳನ್ನು ಕಾರ್ಪೊರೆಟ್‌ಗಳಿಗೆ ಮಾರಲು ರಕ್ಷಣೆ ಒದಗಿಸಲು ಸರಕಾರ ಸಶಸ್ತ್ರಪಡೆಗಳನ್ನು ಬಳಸಲಿದೆ. 370ನೇ ವಿಧಿ ರದ್ಧತಿಯಿಂದ ಅಂತಿಮವಾಗಿ ಕಾಶ್ಮೀರವನ್ನು ಭಾರತದೊಂದಿಗೆ ಏಕೀಕೃತಗೊಳಿಸಲಾಗಿದೆ ಎಂದು ಸರಕಾರ ಪ್ರಚಾರಪಡಿಸಿದ ಸಂಪೂರ್ಣ ಹೇಳಿಕೆ ಕೇವಲ ನಾಟಕವಾಗಿದೆ. ಯಾಕೆಂದರೆ ಸಂವಿಧಾನ ಈಗಾಗಲೇ ದೇಶದ ಇತರ ರಾಜ್ಯಗಳಲ್ಲೂ ಅದನ್ನು ಈಗಾಗಲೇ ಹೇರಿದೆ. ಇಷ್ಟೆಲ್ಲಾ ಮಸೂದೆಗಳನ್ನು ಜಾರಿ ಮಾಡಿದಾಗ ಅತ್ಯಂತ ಬೇಸರ ಮೂಡಿಸುವ ವಾಸ್ತವ ಎಂದರೆ ವಿರೋಧ ಪಕ್ಷಗಳ ಪಾತ್ರ. ತ್ರಿವಳಿ ತಲಾಖ್ ಮಸೂದೆಗೆ ಮತದಾನ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಎನ್‌ಸಿಪಿ, ಟಿಎಂಸಿ, ಸಿಪಿಐ, ಆರ್‌ಜೆಡಿ ಮತ್ತು ಡಿಎಂಕೆಯ ಒಟ್ಟು 21 ಸಂಸದರು ಗೈರಾಗುವ ಮೂಲಕ ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತವಿಲ್ಲದಿದ್ದರೂ ಬಿಜೆಪಿ ಮಸೂದೆ ಜಾರಿ ಮಾಡಲು ಸಾಧ್ಯವಾಗಿತ್ತು. ಎನ್‌ಐಎ ಮಸೂದೆಯ ಸಮಯದಲ್ಲಿ ಎಲ್ಲ ಪ್ರಮುಖ ವಿಪಕ್ಷಗಳು ಮಸೂದೆಗೆ ಮತದಾನದಿಂದ ದೂರವುಳಿದವು. ಕಾಂಗ್ರೆಸ್ ಯುಎಪಿಎ ತಿದ್ದುಪಡಿ ಪರ ಮತ ಚಲಾಯಿಸಿದ್ದರಿಂದ ಯಾವುದೇ ಆಘಾತವಾಗಲಿಲ್ಲ. ಯಾಕೆಂದರೆ, ಮೊದಲನೆಯದಾಗಿ ಕಾಂಗ್ರೆಸ್ ಸರಕಾರವೇ ಈ ರಾಕ್ಷಸೀಯ ಕಾನೂನನ್ನು ಪರಿಚಯಿಸಿತ್ತು ಮತ್ತು ಹೆಚ್ಚಿನ ತಿದ್ದುಪಡಿಗಳಿಂದ ಅದನ್ನು ಮತ್ತಷ್ಟು ಭಯಾನಕಗೊಳಿಸಿತ್ತು. 370ನೇ ವಿಧಿಯ ರದ್ಧತಿಗೆ ವಿರೋಧ ಪಕ್ಷಗಳ ಅನೇಕ ನಾಯಕರು ಬೆಂಬಲ ಸೂಚಿಸಿರುವುದು ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ನಿಜವಾದ ಯಶಸ್ಸಾಗಿದೆ. ಜಾತ್ಯತೀತ ಪಕ್ಷಗಳು ರಾಷ್ಟ್ರವಾದದ ಬಿಜೆಪಿಯ ರಾಷ್ಟ್ರೀಯ ವಿವರಣೆಯನ್ನು ಪಾಲಿಸುತ್ತಿರುವುದು ಇದು ತೋರಿಸುತ್ತದೆ. ಜಾತ್ಯತೀತ ಪಕ್ಷಗಳು ಕಳೆದುಹೋದ ಮತ್ತು ದಿಕ್ಕುಗುರಿಯಿರದಂತಾಗಿದೆ. ಹಾಗಾಗಿ, ವಿರೋಧ ಪಕ್ಷಗಳು ಬಿಜೆಪಿಯ ಸಿದ್ಧಾಂತಕ್ಕೆ ಶರಣಾಗಿರುವುದನ್ನು ನಾವು ಕಾಣಬಹುದು. ಇಡಿಯಂತಹ ಸರಕಾರಿ ಸಂಸ್ಥೆಗಳು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲು ಸರಕಾರದ ಸಮರ್ಥ ಅಸ್ತ್ರಗಳಾಗಿ ಬದಲಾಗಿವೆ. ತನಗೆ ರಾಜಕೀಯವಾಗಿ ಸವಾಲೊಡ್ಡುವ ನಾಯಕರನ್ನು ಗುರಿಯಾಗಿಸುವ ತನ್ನ ಉದ್ದೇಶವನ್ನು ಮರೆಮಾಚುವ ಬಗ್ಗೆಯೂ ಬಿಜೆಪಿ ಸರಕಾರ ತಲೆಕೆಡಿಸಿಕೊಂಡಂತಿಲ್ಲ. ಕಾಂಗ್ರೆಸ್‌ನ ಹಿರಿಯ ನಾಯಕರ ಬಂಧನ ವಿಪಕ್ಷಗಳ ಧ್ವನಿಯನ್ನು ಅಡಗಿಸಲು ತೆಗೆದುಕೊಂಡ ಮುಂದಿನ ಹೆಜ್ಜೆಯಾಗಿದ್ದು ಇದು ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಬಿಜೆಪಿ, ಜಾತ್ಯತೀತ ಮತ್ತು ಪ್ರಾದೇಶಿಕ ಪಕ್ಷಗಳ ಶಾಸಕರು ಮತ್ತು ಸಂಸದರನ್ನು ಖರೀದಿಸುವ ಹೊಸ ಮಾದರಿಯನ್ನು ಆರಂಭಿಸಿದೆ. ದುರದೃಷ್ಟಕವೆಂದರೆ, ಪ್ರಜಾಪ್ರಭುತ್ವಕ್ಕೆ ಮಾಡಲಾಗಿರುವ ಇಂತಹ ಅವಮಾನ ಭಾರತೀಯ ಮಾಧ್ಯಮಗಳಿಗೆ ಸಾಮಾನ್ಯವಾಗಿ ಕಾಣುತ್ತಿದ್ದು ವಿರೋಧ ಪಕ್ಷಗಳ ಶಾಸಕರನ್ನು ಖರೀದಿಸುವ ಬಿಜೆಪಿ ಮತ್ತು ಅದರ ನಾಯಕರ ನಾಚಿಕೆಗೇಡಿನ ಕೃತ್ಯವನ್ನು ಹೊಗಳುತ್ತಿವೆ. ಶಾಸಕರನ್ನು ಮತ್ತು ಸಂಸದರನ್ನು ಕದಿಯುವ ಈ ಹೊಸ ಮಾದರಿ ಬಿಜೆಪಿಗೆ ಕರ್ನಾಟಕ ಮತ್ತು ಈಶಾನ್ಯ ಭಾಗದಲ್ಲಿ ಲಾಭ ತಂದುಕೊಟ್ಟಿದ್ದು ಅದೀಗ ಪಶ್ಚಿಮ ಬಂಗಾಳದಲ್ಲೂ ಇದನ್ನೇ ಪುನರಾವರ್ತಿಸಲು ಯೋಚಿಸುತ್ತಿದೆ. ಇಲ್ಲಿ ಮೂಡುವ ಬಹುದೊಡ್ಡ ಪ್ರಶ್ನೆಯೆಂದರೆ ಈ ಶಾಸಕರು ಮತ್ತು ಸಂಸದರು ನಿಜವಾಗಿಯೂ ಜಾತ್ಯತೀತರಾಗಿದ್ದರೇ ಎನ್ನುವುದು. ಅನೇಕ ವರ್ಷಗಳಿಂದ ತಮ್ಮನ್ನು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಿದ್ದ ಇದೇ ನಾಯಕರು ಬರೇ ಬಿಜೆಪಿ ಸೇರ್ಪಡೆಗೊಂಡಿರುವುದು ಮಾತ್ರವಲ್ಲ ಹಿಂದುತ್ವ ಸಿದ್ಧಾಂತವನ್ನೂ ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದಾರೆ. ಎರಡನೆಯದಾಗಿ, ನಾವು ವಿರೋಧ ಪಕ್ಷಗಳ ಸಂಘಟನಾತ್ಮಕ ಮತ್ತು ರಾಜಕೀಯ ಮಟ್ಟದ ಪರಿಸ್ಥಿತಿಯನ್ನು ವಿಶ್ಲೇಷಿಸಿದಾಗಲೂ ಅವುಗಳು ಮುಂದಿನ ವರ್ಷಗಳಲ್ಲಿ ಬಿಜೆಪಿ ಸವಾಲೊಡ್ಡಲಿವೆ ಎನ್ನುವುದನ್ನು ಊಹಿಸುವುದೂ ಕಷ್ಟವಾಗುತ್ತದೆ.

ಮೇಲೆ ಉಲ್ಲೇಖಿಸಿದ ಬೆಳವಣಿಗೆಗಳ ಬಗ್ಗೆ ಎಲ್ಲರಿಗೂ ತಿಳಿದಿದ್ದರೂ ಮತಾಂಧ ಗುಂಪುಗಳ ಈ ನಡೆಯ ಉದ್ದೇಶ ಮತ್ತು ಪರಿಣಾಮದ ಮೇಲೆ ಕಡಿಮೆ ಬೆಳಕು ಚೆಲ್ಲಲಾಗಿದೆ. ಮತಾಂಧ ಶಕ್ತಿಗಳು ಯಾವತ್ತೂ ಭಯದ ಗಣರಾಜ್ಯವನ್ನು ಸೃಷ್ಟಿಸಲು ಬಯಸಿದ್ದವು ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಂಸ್ಥೆ ಮತ್ತದರ ನೀತಿಗಳನ್ನು ಪ್ರಶ್ನಿಸಲು ಜನರು ಭಯಪಡುವಂತಹ ಚಿತ್ರಣವದು. ಹೆಚ್ಚುತ್ತಿರುವ ಗುಂಪಿನಿಂದ ಥಳಿಸಿ ಹತ್ಯೆ ಘಟನೆಗಳು ಮತ್ತು ಅಪರಾಧಿಗಳಿಗೆ ಸರಕಾರದಿಂದ ಸಿಗುತ್ತಿರುವ ಬೆಂಬಲ, ನಿಮ್ಮ ಹಕ್ಕುಗಳಿಗಾಗಿ ನೀವು ಮತಾಂಧ ಗುಂಪುಗಳ ಕರುಣೆಯಲ್ಲಿರಬೇಕಾಗುತ್ತದೆ ಎಂಬ ಸಂದೇಶವನ್ನು ಮುಸ್ಲಿಮರಿಗೆ ರವಾನಿಸುವ ಪ್ರಯತ್ನವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಗುಂಪು ಹತ್ಯೆಯ ಪ್ರಚಾರ, ಅಪರಾಧಿಗಳ ವೈಭವೀಕರಣ ಮತ್ತು ಅಂತಿಮವಾಗಿ ಪೊಲೀಸರು ಪ್ರಕರಣವನ್ನು ದುರ್ಬಲಗೊಳಿಸುವ ಮೂಲಕ ಒದಗಿಸುವ ಶಾಸನಾತ್ಮಕ ರಕ್ಷಣೆ ಇತ್ಯಾದಿಗಳು ಇದು ಭಾರತದ ಹೊಸ ಕ್ರಮವಾಗಿದೆ ಎನ್ನುವುದನ್ನು ಅಲ್ಪಸಂಖ್ಯಾತರು ಮತ್ತು ಇತರ ಸೀಮಿತಗೊಳಿಸಲ್ಪಟ್ಟ ಸಮದಾಯಗಳಿಗೆ ನೀಡಿದ ಸಂದೇಶವಾಗಿದೆ. ಸೀಮಿತಗೊಳಿಸಲ್ಪಟ್ಟ ಸಮುದಾಯಗಳು ಇನ್ನು ಭರವಸೆ ಉಳಿದಿಲ್ಲ ಎಂದು ನಂಬಲು ಆರಂಭಿಸಿದರೆ ಆಗ ಅದು ಈ ಮತಾಂಧ ರಚನೆಯ ಗೆಲುವಾಗುತ್ತದೆ. ಗುಂಪು ಥಳಿತ ಮತ್ತು ಇತರ ಹಿಂಸಾಚಾರಗಳ ಸಂತ್ರಸ್ತರು ಏಕಾಂಗಿಯಲ್ಲ ಮತ್ತು ನ್ಯಾಯಕ್ಕಾಗಿ ಹೋರಾಡುವುದು ಕೇವಲ ಸಂತ್ರಸ್ತರ ಮಾತ್ರವಲ್ಲ ಸ್ಥಳೀಯ ಸಮುದಾಯದ ಕರ್ತವ್ಯವಾಗಿದೆ ಎಂಬ ಮನವರಿಕೆ ಮೂಡಲು ಸದೃಢ ಬೆಂಬಲ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ತುರ್ತು ಅಗತ್ಯವಿದೆ. ಇಂತಹ ರಾಕ್ಷಸೀಯ ಕಾನೂನುಗಳನ್ನು ತಮ್ಮ ವಿರುದ್ಧ ಬಳಸಿದಾಗ ಸಂಘಟನೆಗಳು ಪರಸ್ಪರ ಬೆಂಬಲಕ್ಕೆ ನಿಲ್ಲುವಂತಹ ಸದೃಢ ನಿರ್ಧಾರದ ಅಗತ್ಯವಿದೆ. ಅಲ್ಪಸಂಖ್ಯಾತ ಸಮುದಾಯ ಮತ್ತು ಮಾನವ ಹಕ್ಕುಗಳ ರಕ್ಷಕರಿಂದ ನಡೆಯುವ ಚಳುವಳಿಗಳನ್ನು ಗುರಿಯಾಗಿಸಿ ಎನ್‌ಐಎ ಮತ್ತು ಯುಎಪಿಎಗೆ ತಿದ್ದುಪಡಿ ಮಾಡಲಾಗಿರುವುದು ಸ್ಪಷ್ಟ. ಈ ದಾಳಿಗಳನ್ನು ಎದುರಿಸಲು ಎಲ್ಲ ಶಾಸನಾತ್ಮಕ ಮತ್ತು ಪ್ರಜಾಸತಾತ್ಮಕ ಸಾಧನಗಳ ಮೂಲಕ ಸಮನ್ವಯ ಮತ್ತು ಬೆಂಬಲದ ದೃಢ ವ್ಯವಸ್ಥೆಯ ಅಗತ್ಯವಿದೆ. ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೆ ತರಲು ಕರೆ ಕೇಳಿಬರುತ್ತಿದ್ದರೆ ಅಲ್ಪಸಂಖ್ಯಾತರು, ಮುಖ್ಯವಾಗಿ ಮುಸ್ಲಿಮರಲ್ಲಿ ನಿರಾಶವಾದ ಮತ್ತು ಭಯ ಕಾಡುತ್ತಿರುವುದು ಕಾಣಬಹುದು. ಮಸ್ಲಿಮರಿಗೆ ವಿವಿಧ ಪೌರತ್ವ ದಾಖಲೆಗಳನ್ನು ಒದಗಿಸುವ ಕೇಂದ್ರಗಳನ್ನು ಆರಂಭಿಸಲು ಸಲಹೆ ನೀಡಲು ಈಗಾಗಲೇ ಕೆಲವು ಗುಂಪುಗಳು ಆರಂಭಿಸಿವೆ. ಇಂತಹ ಒಂದು ಕಾತರತೆ, ಮನೋಭೂಮಿಕೆ ಮತ್ತು ಚಿಂತೆ ಶರಣಾದ ಸಮುದಾಯದ ಸ್ಥಿತಿಯನ್ನು ಪ್ರತಿಫಲಿಸುತ್ತದೆ. ಎನ್‌ಆರ್‌ಸಿಯಂತಹ ಕ್ರಮಗಳನ್ನು ಉತ್ತಮ ಉದ್ದೇಶದಿಂದ ಜಾರಿಗೊಳಿಸಲಾಗುವುದಿಲ್ಲ ಬದಲಿಗೆ, ಆದಷ್ಟು ಮುಸ್ಲಿಮರನ್ನು ಪೌರತ್ವದಿಂದ ಹೊರಗಿಡುವ ರಾಜಕೀಯ ಇದರ ಹಿಂದಿದೆ. ಅಸ್ಸಾಂನ ಅನುಭವದಿಂದ ಪಾಠ ಕಲಿಯುವುದಾದರೆ ಮತ್ತು ಎನ್‌ಆರ್‌ಸಿ ಹಿಂದಿನ ರಾಜಕೀಯವನ್ನು ಪರಿಗಣಿಸಿದರೆ ಯಾವುದೇ ದಾಖಲೆಗಳಿದ್ದರೂ ಈ ಪ್ರಕ್ರಿಯೆ ನ್ಯಾಯಬದ್ಧವಾಗಿರುತ್ತದೆ ಎನ್ನುವುದಕ್ಕೆ ಯಾವುದೇ ಖಾತ್ರಿಯಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗದು. ಭಾರತದ ಮುಸ್ಲಿಮರು ಮತ್ತು ಇತರ ಥಳಿತಕ್ಕೊಳಪಟ್ಟ ಸಮುದಾಯಗಳು ಭಾರತದ ಇತಿಹಾಸದ ಅವಿಭಾಜ್ಯ ಅಂಗವಾಗಿದ್ದು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಯಾವ ಸಿದ್ಧಾಂತವೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಸರಕಾರ ದೇಶಾದ್ಯಂತ ಎನ್‌ಆರ್‌ಸಿ ಜಾರಿ ಮಾಡಲು ನಿರ್ಧರಿಸಿದರೆ ಅದು ಖಂಡಿತವಾಗಿಯೂ ಅಕ್ರಮ ಪ್ರಕ್ರಿಯೆಯಾಗುತ್ತದೆ ಮತ್ತು ಸಮುದಾಯದ ಮನೋಭೂಮಿಕೆ ಅದಕ್ಕೆ ಸವಾಲೊಡ್ಡಲು ಸಮರ್ಥವಾಗಿರಬೇಕೇ ಹೊರತು ದಾಖಲೆ ಕೇಂದ್ರಗಳನ್ನು ನಿರ್ಮಿಸುವ ಮೂಲಕ ಎನ್‌ಆರ್‌ಸಿ ಭಯವನ್ನು ಹರಡುವಂತಿರಬಾರದು. ಎನ್‌ಆರ್‌ಸಿಯಂತಹ ವಂಚನಾತ್ಮಕ ಯೋಜನೆಗಳನ್ನು ಮಣಿಸಲು ಮತ್ತು ತಿರಸ್ಕರಿಸಲು ಎಲ್ಲ ಪ್ರಜಾಸತಾತ್ಮಕ ಮತ್ತು ಶಾಸನಬದ್ಧ ಸಾಧನಗಳನ್ನು ಬಳಸಿಕೊಳ್ಳಬೇಕು. ಅಂತಿಮವಾಗಿ, ಮತಾಂಧ ಪಡೆಗಳು ಕೇವಲ ಒಂದು ಸಮುದಾಯಕ್ಕೆ ಅಪಾಯವೊಡ್ಡಿಲ್ಲ ಬದಲಿಗೆ, ಭಾರತದ ಕಲ್ಪನೆಯನ್ನು ಬದಲಾಯಿಸುವುದು ಅವುಗಳ ಉದ್ದೇಶವಾಗಿದೆ. ಅವರು ನಮ್ಮ ದೇಶದ ಶ್ರೀಮಂತ ವೈವಿಧ್ಯತೆಯನ್ನು ಮತ್ತು ಶತಮಾನದಷ್ಟು ಹಳೆಯ ಬಹುತ್ವ ಸಂಸ್ಕೃತಿಯನ್ನು ದ್ವೇಷಿಸುತ್ತಾರೆ. ತಮ್ಮ ಸಿದ್ಧಾಂತಕ್ಕೆ ಅಪಾಯ ಎಂದು ಭಾವಿಸುವ ಸಮಾಜದ ಪ್ರತಿಯೊಂದು ಸಮುದಾಯವನ್ನು ಈ ಮತಾಂಧ ಶಕ್ತಿಗಳು ಕಾಡಲಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಅದು ಮುಸ್ಲಿಮರೇ ಆಗಿರಲಿ, ಕ್ರೈಸ್ತರು, ಸಿಖ್ಕರು, ಇತರ ಅಲ್ಪಸಂಖ್ಯಾತರು, ದಲಿತರು, ಬುಡಕಟ್ಟು, ಪ್ರಗತಿಪರ ಎಡ ಅಥವಾ ಮಾನವಹಕ್ಕುಗಳ ರಕ್ಷಕರು, ಮತಾಂಧ ಪಡೆಗಳು ಎಲ್ಲರ ಹಿಂದೆಯೂ ಬೀಳಲಿದೆ. 2014ರ ನಂತರ ಮತಾಂಧ ಪಡೆಗಳು ಯಾವ ರೀತಿ ಅಲ್ಪಸಂಖ್ಯಾತ ಸಂಘಟನೆಗಳು, ಹೊಸ ಯುಗದ ದಲಿತ ನಾಯಕರು, ವಿದ್ಯಾರ್ಥಿ ನಾಯಕರು, ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಹೋರಾಟಗಾರರನ್ನು ಮತ್ತು ಇತ್ತೀಚೆಗೆ ಇತರ ರಾಜಕೀಯ ವಿರೊಧಿಗಳನ್ನು ಯಾವ ರೀತಿ ಗುರಿಯಾಗಿಸಿವೆ ಎನ್ನುವುದನ್ನು ನಾವು ಕಂಡಿದ್ದೇವೆ. ಈ ಬೆಳವಣಿಗೆ ಮತಾಂಧಪಡೆಗಳ ವಿರೋಧಿಗಳಿಗೆ ಕಣ್ಣು ತೆರೆಸುವಂತಿವೆ.

ಭಾರತದಲ್ಲಿ ಮುಸ್ಲಿಮರು ಮತಾಂಧ ಪಡೆಗಳ ಮುಖ್ಯ ಗುರಿಯಾಗಿದ್ದರೂ ಸಮುದಾಯದ ಸಂಘಟನೆಗಳು ಮತೀಯವಾದದ ವಿರುದ್ಧ ಹೋರಾಟದಲ್ಲಿ ಕೈಜೋಡಿಸುವಲ್ಲಿ ಹಿಂಜರಿಕೆ ತೋರಿಸುತ್ತಿರುವುದು ದುರದೃಷ್ಟಕರ. ಇಲ್ಲಿ ನಾವು ನಮ್ಮನ್ನೇ ಕೇಳಬೇಕಾದ ಪ್ರಶ್ನೆಯೆಂದರೆ ಇಂತಹ ಕಷ್ಟದ ಪರಿಸ್ಥಿತಿಯಲ್ಲು ನಾವು ಪರಸ್ಪರರನ್ನು ಕಡೆಗಣಿಸುವಷ್ಟು ಸಾಮರ್ಥ್ಯ ಹೊಂದಿದ್ದೇವೆಯೇ? ಪರಸ್ಪರರಿಗೆ ಬೆಂಬಲ ನೀಡದೆ ನಾವು ಮತಾಂಧರಿಗೆ ಸವಾಲೊಡ್ಡಲು ಸಾಧ್ಯವೇ? ಅಥವಾ ಕೇವಲ ಇತರ ವ್ಯಕ್ತಿಗಳು ಮತ್ತು ಸಂಘಟನೆಗಳು ಮಾತ್ರ ಮತಾಂಧ ಶಕ್ತಿಗಳ ಗುರಿಯಾಗಿವೆ, ನಾವಲ್ಲ ಎಂದು ನಾವು ಭಾವಿಸುತ್ತಿದ್ದೇವೆಯೇ? ಮತೀಯವಾದದ ವಿರುದ್ಧ ಸಂಘಟಿತ ಹೋರಾಟದಿಂದ ಮಾತ್ರ ನಮ್ಮ ಸಂವಿಧಾನಾತ್ಮಕ ಹಕ್ಕುಗಳು ಮತ್ತು ದೇಶದ ಬಹುತ್ವ ಸಂಸ್ಕೃತಿಯನ್ನು ರಕ್ಷಿಸಲು ಸಾಧ್ಯ. ಮತಾಂಧ ಶಕ್ತಿಗಳನ್ನು ಓಲೈಕೆ ಮೂಲಕ ಪಳಗಿಸಬಹುದು ಎನ್ನುವ ಕನಸು ಕಾಣುವಷ್ಟು ಮೂರ್ಖರು ನಾವಾಗಬಾರದು. ಮತ್ತೊಂದೆಡೆ, ಮತಾಂಧ ಶಕ್ತಿಗಳ ವಿರುದ್ಧ ಹೋರಾಡುವ ಶಕ್ತಿಗಳ ಜೊತೆ ಮೈತ್ರಿ ರಚಿಸಿದರೆ ಅದು ನಮ್ಮ ತಲೆಮಾರಿನಲ್ಲಿ ತೆಗೆದುಕೊಂಡ ಅತ್ಯಂತ ಜಾಣ ನಿರ್ಧಾರ ಎಂದು ಇತಿಹಾಸದಲ್ಲಿ ದಾಖಲಾಗಲಿದೆ.

ಪರಸ್ಪರರ ಭಿನ್ನಾಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಒಪ್ಪಿಕೊಳ್ಳುವುದು ಈ ಹಾದಿಯಲ್ಲಿ ಮಾಡಬೇಕಾದ ಮೊದಲ ಹೆಜ್ಜೆ. ಏಕತೆಯು ಈ ಹಾದಿಯಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿರುವುದರಿಂದ ಇತರರು ತಮ್ಮ ಗುರುತನ್ನು ಕಳೆದುಕೊಳ್ಳುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಮತಾಂಧ ಶಕ್ತಿಗಳ ವಿರುದ್ಧ ಹೋರಾಡುವ ಎಲ್ಲ ವ್ಯಕ್ತಿಗಳು ಮತ್ತು ಸಂಘಟನೆಗಳು ಒಂದು ಜಂಟಿ ಸಂಯೋಜನೆಯಲ್ಲಿ ಕೈಜೊಡಿಸಲು ಒಟ್ಟು ತರುವ ಪ್ರಯತ್ನವೇ ಈ ಸಮ್ಮೇಳನವಾಗಿದೆ. ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವ ಮತ್ತು ನಮ್ಮ ಭಿನ್ನಾಭಿಪ್ರಾಯಗಳ ಬದಲಿಗೆ ಜಾತ್ಯತೀತೆಯ ಬದ್ಧತೆಗೆ ಆದ್ಯತೆ ನೀಡುವ ಮೂಲಕ ಪರಸ್ಪರರನ್ನು ಸಹಿಸುವ ಪ್ರಯತ್ನವೇ ಇದಾಗಿದೆ. ದುರಂತ ಎಷ್ಟು ದೊಡ್ಡದೇ ಆಗಿದ್ದರೂ ಅವಕಾಶವಂತೂ ಇದ್ದೇ ಇರುತ್ತದೆ. ಆದರೆ ಈ ಅವಕಾಶವನ್ನು ದೃಷ್ಟಿಕೋನ ಮತ್ತು ದೂರದರ್ಶಿತ್ವದ ಕೊರತೆಯಿಂದ ಕಳೆದುಕೊಳ್ಳುವುದು ಇತಿಹಾಸವೇ ಕ್ಷಮಿಸದಷ್ಟು ದೊಡ್ಡ ದುರಂತವಾಗಲಿದೆ.

ದೆಹಲಿಯಲ್ಲಿ ನಡೆದ ಸಮುದಾಯದ ನಾಯಕರ ಸಮ್ಮೇಳನದಲ್ಲಿ ಮಂಡಿಸಿದ ದಿಕ್ಸೂಚಿ ಭಾಷಣ

LEAVE A REPLY

Please enter your comment!
Please enter your name here