ಭಯದ ನೆರಳಲಿ ಭುವಿಯ ಸ್ವರ್ಗ

0
40

♦ಎ.ಎಂ.ಝೈದ್

ಅಭಿವೃದ್ಧಿಯ ಘೋಷಣೆಯೊಂದಿಗೆ 2014ರಲ್ಲಿ ಅಧಿಕಾರಕ್ಕೇರಿದ ನರೇಂದ್ರ ಮೋದಿಯವರು ದಯನೀಯ ಆಡಳಿತ ವೈಫಲ್ಯ ಎದುರಿಸಿದಾಗ  ಪುಲ್ವಾಮ ದಾಳಿ ಅವರಿಗೆ ಪುನರ್ಜನ್ಮವನ್ನು ನೀಡಿತ್ತು. ನೋಟ್ ಬ್ಯಾನ್, ಜಿಎಸ್‌ಟಿ, ಕಾರ್ಪೋರೇಟ್ ಪರವಾದ ಆರ್ಥಿಕ ನೀತಿಗಳಿಂದಾಗಿ ಸಣ್ಣ ಉದ್ಯಮಗಳು, ಜನಸಾಮಾನ್ಯರು ಕಂಗೆಟ್ಟು ಹೋದಾಗ ಆಡಳಿತಾವಧಿಯ ಕೊನೆಯ ಹಂತದಲ್ಲಿ ಮೋದಿ ಅಲೆ ಬಹಳಷ್ಟು ಮಂಕಾಗಿತ್ತು. ಆದರೆ ಕಾಶ್ಮೀರದ ಪುಲ್ವಾಮ ದಾಳಿಯಲ್ಲಿ ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡ ಬಳಿಕ ನಡೆದ ಬಹುಚರ್ಚಿತ ಸರ್ಜಿಕಲ್ ಸ್ಟ್ರೈಕ್ ಮೋದಿಯವರನ್ನು ಮತ್ತೊಮ್ಮೆ ಅವತಾರ ಪುರುಷನಂತೆ ಬಿಂಬಿಸಿತು. ಆದರೆ ಪುಲ್ವಾಮ ದಾಳಿಯು ಇನ್ನೂ ನಿಗೂಢವಾಗಿಯೇ ಉಳಿದಿದೆ. ಭಾವನಾತ್ಮಕವಾಗಿ ಪ್ರಚುರಪಡಿಸಲಾದ ಹುಸಿ ರಾಷ್ಟ್ರೀಯವಾದವು ಮೋದಿ ಸರಕಾರದ ಆಡಳಿತಾವಧಿಯಲ್ಲಿ ನಡೆದ ಆಡಳಿತ ವೈಫಲ್ಯವನ್ನು ಮರೆಮಾಚಿಬಿಟ್ಟಿತು ಮತ್ತು ಅವು ಜನಮಾನಸದಿಂದ ಮರೆಯಾಗಿಬಿಟ್ಟವು. ಇದು ಮೋದಿ ಆಡಳಿತದ ಎರಡನೇ ಅವಧಿ. ಎಚ್‌ಎಎಲ್, ಬಿಎಸ್‌ಎನ್‌ಎಲ್, ಓಎನ್‌ಜಿಸಿ, ಏರ್ ಇಂಡಿಯಾದಂತಹ ಸಾರ್ವಜನಿಕ ವಲಯದ ಉದ್ದಮೆಗಳು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬ್ಯಾಕಿಂಗ್ ಕ್ಷೇತ್ರವು ನಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದೆ. ವಿಮಾನ ನಿಲ್ದಾಣಗಳು ಮತ್ತು ರೈಲ್ವೇ ಖಾಸಗೀಕರಣದ ಪ್ರಕ್ರಿಯೆಯಲ್ಲಿವೆ. ಜನರ ಕೊಳ್ಳುವ ಸಾಮರ್ಥ್ಯವು ತೀವ್ರವಾಗಿ ಕ್ಷೀಣಿಸಿದೆ. ದೇಶದ ಆಟೋಮೊಬೈಲ್ ಕ್ಷೇತ್ರವು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಧ್ಯಮ ವರ್ಗದ ಉದ್ಯಮಿಗಳು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ. ಕೆಫೆ ಕಾಫಿ ಡೇ ಮಾಲಕ ಸಿದ್ದಾರ್ಥ್‌ರವರ ಆತ್ಮಹತ್ಯೆ ಪ್ರಕರಣವು ಉದ್ಯಮ ವಲಯ ಬಿಕ್ಕಟ್ಟನ್ನು ಜಗಜ್ಜಾಹೀರುಪಡಿಸಿದೆ. ಬಿಜೆಪಿಯ ಮಾಜಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಶಾ,  ಬಿಜೆಪಿ ಬೆಂಬಲಿಗರಾಗಿದ್ದ ಮೋಹನ್ ದಾಸ್ ಪೈ, ರಾಹುಲ್ ಬಜಾಜ್‌ರಂತಹ ಉದ್ಯಮಿಗಳು ಆರ್ಥಿಕ ಮುಗ್ಗಟ್ಟು ಹಾಗೂ ಅದು ಉದ್ಯಮಗಳ ಮೇಲೆ ಬೀರಿರುವ ಪ್ರಭಾವದ ಕುರಿತು ಇದೀಗ ಮುಕ್ತವಾಗಿ ಮಾತನಾಡಲಾರಂಭಿಸಿದ್ದಾರೆ. ಬಹುಶಃ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಬತ್ತಳಿಕೆಯಲ್ಲಿದ್ದ ಅಸ್ತ್ರ ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಪರಿಚ್ಛೇದ 370ನ್ನು ರದ್ದುಪಡಿಸುವುದು. ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ, ಕಾಶ್ಮೀರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಭಾರೀ ಸಂಖ್ಯೆಯಲ್ಲಿ ಸೇನಾಪಡೆಗಳನ್ನು ನಿಯೋಜಿಸಿ ಪರಿಚ್ಛೇದ 370ನ್ನು ರದ್ದುಪಡಿಸಿರುವ ಕೇಂದ್ರ ಸರಕಾರದ ನಡೆಯೇ ವಿವಾದಾಸ್ಪದ.

ಅಂದಹಾಗೆ ಅನುಚ್ಛೇದ 370ನ್ನು ಕಾಶ್ಮೀರವು ಭಾರತದ ವಿಲೀನದ ಸಂದರ್ಭ ನಡೆದ ಒಪ್ಪಂದವಾಗಿತ್ತು. ಇದರ ಪ್ರಕಾರ ಕಾಶ್ಮೀರದ ರಕ್ಷಣೆ, ಸಾರಿಗೆ, ಹಣಕಾಸು ಮತ್ತು ವಿದೇಶಾಂಗ ವಿಚಾರಗಳನ್ನು ಹೊರತುಪಡಿಸಿ ಇತರ ಎಲ್ಲಾ ವಿಚಾರಗಳಲ್ಲೂ ರಾಜ್ಯಕ್ಕೆ ಪೂರ್ಣ ಸ್ವಾಯತ್ತತೆ ನೀಡಬೇಕಾಗಿತ್ತು. ಪರಿಚ್ಛೇದ 35ಎ, ಕಾಶ್ಮೀರದಲ್ಲಿ ಕಾಶ್ಮೀರಿಯೇತರರಿಗೆ ಸಂಪತ್ತು ಖರೀದಿಗೆ ಸಂಬಂಧಿಸಿದ್ದಾಗಿದೆ. ಕೆಲವು ವಿಶಿಷ್ಠ ಸನ್ನಿವೇಶದಲ್ಲಿ ಕಾಶ್ಮೀರವು ಭಾಗವಾದ ಕಾರಣ ಈ ಎರಡೂ ಪರಿಚ್ಛೇದಗಳು ಸಂವಿಧಾನದ ಭಾಗವಾಗಿಬಿಟ್ಟಿತ್ತು. ಕಾಶ್ಮೀರದ ಮೇಲೆ ಬುಡಕಟ್ಟುಗಳ ವೇಷದಲ್ಲಿ ಪಾಕಿಸ್ತಾನಿ ಸೈನಿಕರು ದಾಳಿ ನಡೆಸಿದ ಬಳಿಕ ಅಲ್ಲಿನ ಆಡಳಿತಾಧಿಕಾರಿ ರಾಜಾ ಹರಿಸಿಂಗ್ ಭಾರತದೊಂದಿಗೆ ನೆರವು ಕೋರಿದ್ದರು. ಇದಕ್ಕೂ ಮೊದಲು ಹರಿಸಿಂಗ್ ಕಾಶ್ಮೀರವನ್ನು ಒಂದು ಸ್ವತಂತ್ರ ರಾಷ್ಟ್ರವನ್ನಾಗಿಡುವುದರ ಪರವಾಗಿದ್ದರು. ದಾಳಿಯ ನಂತರ ಭಾರತದೊಂದಿಗೆ ಆದ ಮಾತುಕತೆಯ ಪರಿಣಾಮ ವಿಲೀನ ಒಪ್ಪಂದವಾಯಿತು. ಕಾಶ್ಮೀರದ ಭಾರತದೊಂದಿಗಿನ ಅಂತಿಮ ವಿಲೀನವು, ಜನಮತ ಸಂಗ್ರಹ ಮೂಲಕ ಅಲ್ಲಿನ ಜನರ ಅಭಿಪ್ರಾಯ ಪಡೆದು ನಡೆಯಬೇಕಾಗಿತ್ತು. ಆದರೆ ಈ ಜನಮತ ಸಂಗ್ರಹ ಎಂದೂ ನಡೆಯಲಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಕಾಶ್ಮೀರದ ಮೇರುವ್ಯಕ್ತಿ ಶೇಖ್ ಅಬ್ದುಲ್ಲಾ ಭಾರತದೊಂದಿಗೆ ಕಾಶ್ಮೀರದ ವಿಲೀನದ ಮಹತ್ವದ ಪಾತ್ರವನ್ನು ವಹಿಸಿದ್ದರು. ಅವರು ಕಾಶ್ಮೀರದ ಪ್ರಧಾನಿಯಾದರು. ಗಾಂಧೀಜಿಯವರ ಹತ್ಯೆ ಮತ್ತು ಹಿಂದೂ ಮಹಾಸಭಾದ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಕಾಶ್ಮೀರವನ್ನು ಭಾರತದೊಂದಿಗೆ ಶೀಘ್ರ ವಿಲೀನದ ಒತ್ತಾಯಕ್ಕೆ ಸಂಬಂಧಿಸಿದ ಭಾರತದಲ್ಲಿ ಕೋಮುವಾದದ ಉದಯಿಸುವಿಕೆಯ ಸಂಕೇತವು ಶೇಖ್ ಅಬ್ದುಲ್ಲಾರನ್ನು ಕಳವಳಕ್ಕೊಳಪಡಿಸಿತು. ಪಾಕಿಸ್ತಾನ, ಅಮೆರಿಕಾ ಮತ್ತು ಚೀನಾ ಅವರೊಂದಿಗೆ ಮಾತುಕತೆಯ ಉಪಕ್ರಮವನ್ನು ಕೈಗೊಂಡವು ಮತ್ತು ಆ ವಿಚಾರದ ಕುರಿತಂತೆ ಅವರ ಪ್ರತಿಕ್ರಿಯೆಯ ಕಾರಣದಿಂದಾಗಿ ಅವರು 17 ವರ್ಷಗಳ ಕಾಲ ಜೈಲಿನಲ್ಲಿ ಬಂಧಿಯಾಗಬೇಕಾಯಿತು. ಇಲ್ಲಿಂದಲೇ ಕಾಶ್ಮೀರದ ಜನರು ಭಾರತದೊಂದಿಗೆ ಪ್ರತ್ಯೇಕತೆಯ ವಾದವನ್ನು ಪ್ರಾರಂಭಿಸಿದರು ಮತ್ತು ಇದೇ ಪ್ರತ್ಯೇಕತೆಯು ಕಾಶ್ಮೀರದ ಸಮಸ್ಯೆಯ ಮೂಲವಾಯಿತು.

ಕಾಶ್ಮೀರ ಹಲವು ಜಾತಿ-ಜನಾಂಗ, ಬಹುಧರ್ಮಗಳನ್ನು ಒಳಗೊಂಡಿರುವ ಒಂದು ಬಹುಸಂಸ್ಕೃತಿಯ ನಾಡಾಗಿದೆ. ಕಣಿವೆಯಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದರೆ, ಜಮ್ಮುವಿನಲ್ಲಿ ಹಿಂದುಗಳು ಬಹುಸಂಖ್ಯಾತರಾಗಿದ್ದಾರೆ. ಇದಕ್ಕೆ ಹೊರತಾಗಿ ರಾಜ್ಯದಲ್ಲಿ ಬೌದ್ಧರು ಮತ್ತು ಆದಿವಾಸಿಗಳ ಜನಸಂಖ್ಯೆಯೂ ಗಣನೀಯವಾಗಿದೆ. ಕಾಶ್ಮೀರದಲ್ಲಿ ಯಾವುದೇ ಕಾನೂನು ಜಾರಿಗೊಳಿಸುವುದಿದ್ದರೆ ಮೊದಲು ಅಲ್ಲಿ ಜನಮತ ಸಂಗ್ರಹ ನಡೆಯುವುದು ಅತೀ ಅಗತ್ಯವಾಗಿರುತ್ತದೆ. ಆದರೆ ಸಂವಿಧಾನದ ಪರಿಚ್ಛೇದ 370 ಮತ್ತು 35ಎಯನ್ನು ರದ್ದುಗೊಳಿಸುವ ಅಜೆಂಡಾವನ್ನು ಮೊದಲೇ ಹೊಂದಿದ್ದ ಬಿಜೆಪಿ ಏಕಪಕ್ಷೀಯವಾದ ನಿರ್ಧಾರವನ್ನು ತಳೆಯಿತು. 370ರ ವಿಧಿ ರದ್ದುಗೊಳಿಸಿರುವುದು ದೇಶದ ಬಹುಭಾಷೆ, ಬಹು ಸಂಸ್ಕೃತಿ ಮತ್ತು ಬಹು ಸಂಸ್ಕೃತಿಯನ್ನು ನಾಶಮಾಡುವ ಹುನ್ನಾರವಾಗಿದೆ ಎಂಬ ಮಾತುಗಳು ಪ್ರತಿಭಟನಕಾರರಿಂದ ವ್ಯಕ್ತವಾಗುತ್ತಿದೆ.

ಮೆಹಬೂಬ ಮುಫ್ತಿ ಪ್ರತ್ಯೇಕವಾದಿಗಳ ಪರವಾಗಿದ್ದಾರೆ ಎಂಬ ವಿಚಾರ ತಿಳಿದಿದ್ದರೂ ಬಿಜೆಪಿ ಅವರೊಂದಿಗೆ ಕೈಜೋಡಿಸಿ ಕಾಶ್ಮೀರದಲ್ಲಿ ಅಧಿಕಾರ ನಡೆಸಿತು. ರಾಜ್ಯದಲ್ಲಿ ಪಿಡಿಪಿ-ಬಿಜೆಪಿ ಸರಕಾರ ರಚನೆಯಾದ ಬಳಿಕವೂ ಕಾಶ್ಮೀರಿಗಳೊಂದಿಗೆ ಯಾವುದೇ ಮಾತುಕತೆ ನಡೆಯಲಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಕಣಿವೆಯಲ್ಲಿ ಸಂಘರ್ಷ ಅಧಿಕವಾಗಿದೆ. ಪೆಲೆಟ್ ಗನ್‌ನಿಂದ ಗಾಯಗೊಂಡವರ ಸಂಖ್ಯೆ ಹೆಚ್ಚಿದೆ. ಕಾಶ್ಮೀರಿಗಳಲ್ಲಿ ವ್ಯಾಪಕವಾಗಿರುವ ಪ್ರತ್ಯೇಕತೆಯ ಭಾವನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಗಂಭೀರ ಪರಿಣಾಮದ ಅರಿವಿದ್ದರೂ ಅಲ್ಲಿನ ಯುವಕ-ಯುವತಿಯರು ಬೀದಿಗಿಳಿದು ಪೆಲೆಟ್‌ಗನ್‌ಗೆ ಎದುರಾಗಿ ಕಲ್ಲನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಆಕ್ರೋಶ ಮತ್ತು ಪ್ರತ್ಯೇಕಕತೆಯ ಭಾವನೆಯನ್ನು ಬಂದೂಕಿನ ನಳಿಗೆಗಳಿಂದ ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದರೂ ಆಡಳಿತ ವ್ಯವಸ್ಥೆ ಮಾತುಕತೆಗೆ ಮುಂದಾಗದೆ ಬಲ ಪ್ರದರ್ಶನಕ್ಕೆ ಆದ್ಯತೆಯನ್ನು ನೀಡುತ್ತಾ ಬಂದಿದೆ. ಕಾಶ್ಮೀರಿ ಪಂಡಿತರ ಸಮಸ್ಯೆಯ ಕುರಿತು ಮಾತನಾಡುವ ಬಿಜೆಪಿ ಸರಕಾರವು ಈ ವೇಳೆ ಅವರ ಕುರಿತಂತೆ ಕಾಳಜಿ ವಹಿಸಿದ್ದು ಕೂಡ ನಗಣ್ಯವಾಗಿದೆ. ಇದೀಗ ಪ್ರಚಂಡ ಬಹುಮತ ಪಡೆದಿರುವ ಬಿಜೆಪಿಗೆ ಮಾತುಕತೆಯ ಕಾಶ್ಮೀರಿಗಳ ಮನಸನ್ನು ಗೆಲ್ಲುವ ಅವಕಾಶವಿದ್ದರೂ ಅದು ಈ ಅವಕಾಶವನ್ನು ಕೈಚೆಲ್ಲಿತು. ಮಾನವ ಹಕ್ಕುಗಳ ರಕ್ಷಣೆಯೊಂದಿಗೆ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಕಾಶ್ಮೀರದಲ್ಲಿ ಹೊಸ ಕಾನೂನು ಜಾರಿಗೊಳಿಸಿದ್ದರೆ ಅದು ಯಾವುದೇ ಬಿಕ್ಕಟ್ಟು ಮತ್ತು ಸಂಘರ್ಷಕ್ಕೆ ಆಸ್ಪದ ನೀಡುತ್ತಿರಲಿಲ್ಲ. ಕಾಶ್ಮೀರದ ಕುರಿತಂತೆ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದ ಮಾತು ಇಲ್ಲಿ ಉಲ್ಲೇಖಾರ್ಹ. ಕಾಶ್ಮೀರದ ವಿಚಾರವನ್ನು ಪರಿಹರಿಸಲು ಕಾಶ್ಮೀರಿಯತೆ, ಪ್ರಜಾಪ್ರಭುತ್ವ ಮತ್ತು ಮಾನವೀಯತೆಯನ್ನು ಬಳಸಿಕೊಳ್ಳಬೇಕೆಂದು ಅವರು ಹೇಳಿದ್ದರು. ಇಂದಿನ ಪರಿಸ್ಥಿತಿಗೂ ಇದು ಸೂಕ್ತ ಪರಿಹಾರವಾಗಿದೆ.

370ನೇ ವಿಧಿ ರದ್ದಾಗುವುದರೊಂದಿಗೆ ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲೂ ಭೂಮಿ ಖರೀದಿಸಬಹುದೆಂದು ಕೆಲ ಮಂದಿ ಸಂಭ್ರಮಿಸುತ್ತಿದ್ದಾರೆ. ಆತಂಕಕಾರಿಯೆಂದರೆ, ಮಹಾರಾಷ್ಟ್ರ, ಗುಜರಾತ್‌ನಿಂದ ಯುಪಿ, ಬಿಹಾರದ ಜನರನ್ನು ಹೊಡೆದು ಓಡಿಸುವ ಮತ್ತು ಥಳಿತಕ್ಕೊಳಗಾಗಿ ಓಡಿಹೋಗುವ ಮಂದಿಯೂ ಕಾಶ್ಮೀರದ ಕುರಿತ ಮೋದಿ ಸರಕಾರದ ನಿರ್ಧಾರಕ್ಕೆ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ತಮ್ಮದೇ ನಾಡಿನಲ್ಲಿ ಒಂದಿಂಚೂ ಭೂಮಿ ಖರೀದಿಸದ ಮಂದಿಯೂ ಇದೀಗ ಕಣಿವೆಯಲ್ಲಿ ಭೂಮಿ ಖರೀದಿಸುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ರಾಜಸ್ತಾನ, ಬಿಹಾರ, ಮಧ್ಯಪ್ರದೇಶ, ಛತ್ತೀಸ್‌ಗಢ್, ಜಾರ್ಖಂಡ್, ಹರ್ಯಾಣ ಮೊದಲಾದ ಪ್ರದೇಶಗಳಲ್ಲಿ ಜನರು, 370ನೇ ವಿಧಿಯಿಂದಾಗಿ ಕಾಶ್ಮೀರದಲ್ಲಿ ಕೈಗಾರಿಕೋದ್ಯಮಗಳನ್ನು ಅಳವಡಿಸಲಾಗುತ್ತಿರಲಿಲ್ಲ. ಇದರಿಂದಾಗಿ ಅಲ್ಲಿನ ಜನರಿಗೆ ಉದ್ಯೋಗಾವಕಾಶಗಳು ದೊರಕುತ್ತಿರಲಿಲ್ಲ ಎಂದು ವಾದಿಸುತ್ತಿದ್ದಾರೆ. ದೇಶಾದ್ಯಂತ ಭಾರೀ ಉದ್ಯೋಗ ಬಿಕ್ಕಟ್ಟು ಸೃಷ್ಟಿಯಾಗಿರುವ ಈ ವೇಳೆಯಲ್ಲಿ, 370ನೇ ವಿಧಿಯಿಲ್ಲದೆ ತಮ್ಮ ರಾಜ್ಯಗಳಲ್ಲಿ ಎಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂಬುದನ್ನು ಸ್ವತಃ ಅವರೇ ಸ್ಪಷ್ಟಪಡಿಸಬೇಕಾಗಿದೆ.

ಆಚ್ಚರಿದಾಯಕ ಸಂಗತಿಯೆಂದರೆ, ವಿಶೇಷ ರಾಜ್ಯಕ್ಕೆ ಒತ್ತಾಯಿಸುತ್ತಿರುವ ಬಿಹಾರದ ಜನಪ್ರತಿನಿಧಿಗಳು ಜಮ್ಮು ಕಾಶ್ಮೀರದ ವಿಶೇಷ ರಾಜ್ಯದ ಸ್ಥಾನಮಾನವನ್ನು ಕಸಿದಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಪೂರ್ಣ ರಾಜ್ಯದ ಹೊರತಾಗಿ ದಿಲ್ಲಿಯ ಸಂಪೂರ್ಣ ಅಭಿವೃದ್ಧಿ ಸಾಧ್ಯವಿಲ್ಲ ಎಂದು ವಾದಿಸುತ್ತಾ ರಾಜ್ಯಕ್ಕೆ ಪೂರ್ಣ ಸ್ಥಾನಮಾನಕ್ಕೆ ಒತ್ತಾಯಿಸುತ್ತಿರುವ ಆಮ್ ಆದ್ಮಿ ಪಕ್ಷಯ ನೇತಾರನೂ ಕಾಶ್ಮೀರದ ಪೂರ್ಣ ದರ್ಜೆಯ ಸ್ಥಾನಮಾನ ರದ್ದತಿಯ ಕುರಿತು ಸಮರ್ಥನೆಯಲ್ಲಿ ತೊಡಗಿದ್ದಾರೆ. ವಿಶೇಷ ರಾಜ್ಯದ ಲಾಭ ಕೊಯ್ಯುತ್ತಿರುವ ಉತ್ತರಾಖಂಡ್‌ನ ಮುಖ್ಯಮಂತ್ರಿಯೂ 370ನೇ ವಿಧಿಯ ರದ್ದತಿಯಿಂದಾಗಿ ಜಮ್ಮು ಕಾಶ್ಮೀರದ ಅಭಿವೃದ್ಧಿ ವೃದ್ಧಿಸಲಿದೆ ಎಂದು ಹೇಳುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ರಾಜ್ಯದ ಕುರಿತು ಕೋಲಾಹಲ ಸೃಷ್ಟಿಸುವವರು ದೇಶದಲ್ಲಿ ವಿವಿಧ ರಾಜ್ಯಗಳು ಹೊಂದಿರುವ ವಿಶೇಷ ರಾಜ್ಯ ಸ್ಥಾನಮಾನದ ಬಗ್ಗೆಯೂ ಅರಿವು ಹೊಂದಿರಬೇಕು. ಜಮ್ಮು ಕಾಶ್ಮೀರ ಸೇರಿದಂತೆ ಈ ವರೆಗೆ ದೇಶದ 29 ರಾಜ್ಯಗಳ ಪೈಕಿ 11ಕ್ಕೆ ವಿಶೇಷ ರಾಜ್ಯದ ಸ್ಥಾನಮಾನವಿತ್ತು. ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಉತ್ತರಾಖಂಡ್, ಮಿರೆರಾಂ ಮತ್ತು ಅಸ್ಸಾಂ ವಿಶೇಷ ರಾಜ್ಯದ ಸ್ಥಾನಮಾನ ಹೊಂದಿವೆ. ಇದೀಗ ಜಮ್ಮು ಮತ್ತು ಕಾಶ್ಮೀರವನ್ನು ಇದರಿಂದ ಪ್ರತ್ಯೇಕಿಸಿದ ಕಾರಣ ಇದೀಗ ಅವುಗಳ ಸಂಖ್ಯೆ 10 ಆಗಿದೆ. ಇತರ 5 ರಾಜ್ಯಗಳೂ ವಿಶೇಷ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿವೆ ಎಂಬುದನ್ನು ನಾವು ತಿಳಿದಿರಬೇಕು. 1969ರಲ್ಲಿ ಮೊದಲ ಬಾರಿಗೆ ಐದನೇ ಹಣಕಾಸು ಆಯೋಗದ ಸಲಹೆಯ ಮೇರೆಗೆ 3 ರಾಜ್ಯಗಳಿಗೆ ವಿಶೇಷ ರಾಜ್ಯದ ಸ್ಥಾನಮಾನ ನೀಡಲಾಯಿತು. ಇತರ ರಾಜ್ಯಗಳ ಹೋಲಿಕೆಯಲ್ಲಿ ಭೌಗೋಳಿಕ, ಸಾಮಾಜಿಕ ಮತ್ತು ಆರ್ಥಿಕ ಸಂಪನ್ಮೂಲಗಳ ಕಾರಣದಿಂದಾಗಿ ಹಿಂದುಳಿದ ರಾಜ್ಯಗಳು ಇದರಲ್ಲಿ ಒಳಗೊಂಡಿದ್ದವು. ನ್ಯಾಷನಲ್ ಡೆವಲಪ್‌ಮೆಂಟ್ ಕೌನ್ಸಿಲ್, ಗುಡ್ಡಕಾಡು, ದುರ್ಗಮ ಕ್ಷೇತ್ರ, ಕಡಿಮೆ ಜನಸಂಖ್ಯೆ, ಆದಿವಾಸಿ ಪ್ರದೇಶ, ಅಂತಾರಾಷ್ಟ್ರೀಯ ಗಡಿ, ಪ್ರತಿ ವ್ಯಕ್ತಿಯ ಆದಾಯ ಮತ್ತು ಕಡಿಮೆ ರಾಜಸ್ವ ಹೊಂದಿರುವ ಆಧಾರದ ಮೇಲೆ ಈ ರಾಜ್ಯಗಳನ್ನು ಗುರುತಿಸಿತ್ತು.

370 ಮಾತ್ರವಲ್ಲ, 371 ವಿಧಿಯ ಕುರಿತು ನಾವು ತಿಳಿದುಕೊಳ್ಳಬೇಕಾಗಿದೆ. 371ಎ ಪ್ರಕಾರ ನಾಗಾಲ್ಯಾಂಡ್‌ನ ಸ್ಥಳೀಯ ನಾಗರಿಕರೇ ಅಲ್ಲಿ ಜಮೀನು ಖರೀದಿಸಬಹುದು. ಇಲ್ಲಿನ ಆದಿವಾಸಿಗಳ ಜಮೀನುಗಳನ್ನು ರಕ್ಷಿಸಲು ಈ ನಿಬಂಧನೆಯನ್ನು ರಚಿಸಲಾಗಿದೆ. ಮಿರೆರಮ್‌ನಲ್ಲೂ ಹೊರಗಿನ ಜನರು ಜಮೀನು ಖರೀದಿಸುವಂತಿಲ್ಲ. ಇಲ್ಲಿನ ಆದಿವಾಸಿಗಳೇ ಜಮೀನಿನ ಮಾಲಕರಾಗಬಹುದಷ್ಟೇ.  ಸಿಕ್ಕಿಂ ಅಂತಿಮವಾಗಿ 1975ರಲ್ಲಿ ಭಾರತದಲ್ಲಿ ಜೋಡಿಕೊಂಡಿತು. 371ಎಫ್ ವಿಧಿಯ ಪ್ರಕಾರ, ಇಲ್ಲಿನ ಜಮೀನಿನ ಮೇಲೆ ರಾಜ್ಯ ಸರಕಾರಕ್ಕೆ ಹಕ್ಕಿದೆ. ಹಿಮಾಚಲ ಪ್ರದೇಶದಲ್ಲೂ ಹೊರಗಿನವರಿಗೆ ಜಮೀನು ಖರೀದಿಸಲಾಗದು. ಉತ್ತರಾಖಂಡದಲ್ಲೂ ಇದೇ ಪರಿಸ್ಥಿತಿ ಇದೆ.

ಕಾಶ್ಮೀರದಲ್ಲಿ ಇಂಟರ್‌ನೆಟ್, ದೂರವಾಣಿ ಮೊದಲಾದ ಸೇವೆಗಳ ಮೇಲೆ ನಿರ್ಬಂಧ ಹೇರಿ ಪ್ರಧಾನಿಯವರು ಕಾಶ್ಮೀರಿಗಳಿಗೆ ತನ್ನ ಮನ್ ಕಿ ಬಾತ್‌ನ ಸಂದೇಶವನ್ನು ನೀಡಿದ್ದಾರೆ! ಈ ಸನ್ನಿವೇಶದಲ್ಲಿ ಅವರ ಸಂದೇಶ ಎಷ್ಟರಮಟ್ಟಿಗೆ ಕಾಶ್ಮೀರಿಗರನ್ನು ತಲುಪಲಿದೆ ಎಂಬುದನ್ನು ಸ್ವತಃ ಅವರೇ ಸ್ಪಷ್ಟಪಡಿಸಬೇಕಾಗಿದೆ. ಕಾಶ್ಮೀರಿ ಜನರ ನೋವು-ಸಂಕಟಗಳಿಗೆ ದಶಕಗಳ ಇತಿಹಾಸವಿದೆ. ಸೇನಾಪಡೆಗಳ ದಮನಕಾರಿ ಕಾರ್ಯಾಚರಣೆಗಳು ಅವರ ನಾಗರಿಕ ಜೀವನವನ್ನು ನರಕಯಾತನೆಗೆ ದೂಡಿಬಿಟ್ಟಿದೆ.   ಈಶಾನ್ಯ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ)ಯ ವಿರುದ್ಧ ಮಹಿಳೆಯರು ಏಕೆ ಬೆತ್ತಲೆ ಪ್ರತಿಭಟನೆ ನಡೆಸಿದರು ಎಂಬುದನ್ನು ಅವಲೋಕಿಸಿದರೆ ಸಶಸ್ತ್ರ ಪಡೆಗಳ ಅಮಾನವೀಯ ದುಷ್ಕೃತ್ಯಗಳ ಕರಾಳ ಮುಖಗಳು ತೆರೆದುಕೊಳ್ಳುತ್ತವೆ. ಕಾಶ್ಮೀರದಲ್ಲಿ ಸಂಘರ್ಷಗಳೇನೇ ನಡೆಯುತ್ತಿದ್ದರೂ ಅದು ಪಾಕಿಸ್ತಾನ ಮತ್ತು ಭಾರತದ ಆಳುವ ವರ್ಗಗಳ ಇಚ್ಛಾಶಕ್ತಿಯ ಕೊರತೆಯಾಗಿದೆ. ಎರಡು ದೇಶಗಳ ಆಳುವ ವರ್ಗಗಳು ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದರೆ ಕಾಶ್ಮೀರ ಬಿಕ್ಕಟ್ಟಿಗೆ ಧನಾತ್ಮಕ ಫಲಿತಾಂಶ ದೊರಕಿರುತ್ತಿತ್ತು. ಭುವಿಯ ಸ್ವರ್ಗವೆಂದು ಬಣ್ಣಿಸಲಾಗುವ ಕಾಶ್ಮೀರದ ಪ್ರಸಕ್ತ ಪರಿಸ್ಥಿತಿಯ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯೂ ಕಳವಳ ವ್ಯಕ್ತಪಡಿಸಿದೆ.

ಕಾಶ್ಮೀರದ 370 ವಿಧಿಯ ರದ್ದತಿಯು ಕಾಶ್ಮೀರ ಬಿಕ್ಕಟ್ಟನ್ನು ಉಲ್ಬಣಗೊಳಿಸಿರುವುದು ಮಾತ್ರವಲ್ಲ, ದೇಶದ ಒಕ್ಕೂಟ ವ್ಯವಸ್ಥೆಗೂ ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ತನ್ನ ಪ್ರಭಾವವಿಲ್ಲದ ದಕ್ಷಿಣ ಭಾರತದ ಕೇರಳ ಮತ್ತು ತಮಿಳುನಾಡಿನಲ್ಲೂ ಏಕಾಏಕಿ ಸೇನೆ ನಿಯೋಜಿಸಿ, ಅವುಗಳ ರಾಜ್ಯದ ಸ್ಥಾನಮಾನ ರದ್ದುಪಡಿಸಿದರೂ ಅಚ್ಚರಿಪಡಬೇಕಾಗಿಲ್ಲ. ಕಾಶ್ಮೀರದಲ್ಲಿ ಬಲವಂತದ ಕಾನೂನು ಹೇರುವುದು ಸಮಸ್ಯೆಗೆ ಪರಿಹಾರವಾಗದು; ಕಾಶ್ಮೀರದ ಜನತೆಯನ್ನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ತಮ್ಮವರಾಗಿ ಸ್ವೀಕರಿಸಿದರೆ ಮಾತ್ರವೇ ಕಾಶ್ಮೀರವೆಂಬ ಜಟಿಲ ಮತ್ತು ಸಂಕೀರ್ಣ ಸಮಸ್ಯೆಯನ್ನು ಸರಳವಾಗಿ ಬಗೆಹರಿಸಬಹುದು. ಆದಾಗ್ಯೂ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಅನ್ನುವುದರಲ್ಲಿ ಯಾರಿಗೂ ಸಂದೇಹವಿಲ್ಲ.

LEAVE A REPLY

Please enter your comment!
Please enter your name here