February 25, 2021
ಬ್ಯಾಂಕ್ ವಂಚನೆ ಪ್ರಕರಣ | ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ಕೋರ್ಟ್ ಆದೇಶ

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ನ ನ್ಯಾಯಾಲಯ ಆದೇಶ ನೀಡಿದೆ.
“ನೀರವ್ ಮೋದಿ ಎದುರಿಸುತ್ತಿರುವ ಆರೋಪಗಳಿಗೆ ಸಾಕ್ಷ್ಯಗಳಿವೆ, ಅವರನ್ನು ಭಾರತಕ್ಕೆ ಕಳುಹಿಸಿದರೆ ಅವರಿಗೆ ನ್ಯಾಯದಾನದ ನಿರಾಕರಣೆಯಾಗುವುದಿಲ್ಲ” ಎಂದು ಬ್ರಿಟನ್ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ನೀರವ್ ಮೋದಿ ಮುಂಬೈನ ಆರ್ಥರ್ ಜೈಲಿನ ‘ಬ್ಯಾರಕ್ 12’ನಲ್ಲಿರುವುದಕ್ಕೆ ಸಮರ್ಥರಾಗಿದ್ದಾರೆ, ಅವರು ಅಲ್ಲಿಯೇ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆಯಬಹುದು” ಎಂದು ಬ್ರಿಟನ್ ಕೋರ್ಟ್ ನ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಜಿ ಆದೇಶಿಸಿದ್ದಾರೆ.
ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದೆದುರು, ಸೌತ್ ವೆಸ್ಟ್ ಲಂಡನ್ ನಲ್ಲಿರುವ ವಾಂಡ್ಸ್ ವರ್ತ್ ಜೈಲಿನಿಂದ ನೀರವ್ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಕೋರ್ಟ್ ಆದೇಶವನ್ನು ಬ್ರಿಟನ್ ನ ಗೃಹ ಕಾರ್ಯದರ್ಶಿಗೆ ಕಳಿಸಲಾಗುವುದು. ನಂತರ ನೀರವ್ ಮೋದಿಗೆ ಹೈಕೋರ್ಟ್ ಮೊರೆ ಹೋಗುವ ಅವಕಾಶವೂ ಇರಲಿದೆ.