ಬೆಳ್ತಂಗಡಿಯ ಮಾದರಿ ಗಣಿತ ಶಿಕ್ಷಕ ಯಾಕೂಬ್ ಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ

Prasthutha|

ಬೆಳ್ತಂಗಡಿ : ಕೇಂದ್ರ ಶಿಕ್ಷಣ ಸಚಿವಾಲಯವು ಶಿಕ್ಷಕರಿಗೆ ನೀಡುವ ರಾಷ್ಟ್ರೀಯ ಶಿಕ್ಷಕ ಪುರಸ್ಕಾರಕ್ಕೆ ಬೆಳ್ತಂಗಡಿಯ ನಡ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಯಾಕೂಬ್ ಎಸ್. ಆಯ್ಕೆಯಾಗಿದ್ದಾರೆ. ಶಿಕ್ಷಕ ಯಾಕೂಬ್ ಸೇರಿದಂತೆ ರಾಜ್ಯದ ಮೂವರು ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫ್ಜಲ್ ಪುರ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥ್, ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದ ಮುಖ್ಯಶಿಕ್ಷಕ ಚೆಮ್ಮಲ್ಲಾರ್ ಷಣ್ಮುಗಂ ರಾಷ್ಟ್ರೀಯ ಶಿಕ್ಷಕ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಇತರ ಇಬ್ಬರು ಶಿಕ್ಷಕರು. ದೇಶಾದ್ಯಂತ ಒಟ್ಟು 47 ಮಂದಿ ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಯಾಕೂಬ್ ಬೆಳ್ತಂಗಡಿಯ ಕೊಯ್ಯೂರು ಉನ್ನಲು ನಿವಾಸಿಗಳಾದ ಇಸುಬು ಬ್ಯಾರಿ ಮತ್ತು ಅಲಿಮ್ಮಮ್ಮ ದಂಪತಿಯ ಪುತ್ರ. ಯಾಕೂಬ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಶಾಲೆಯಲ್ಲಿ ಪೂರೈಸಿದರು. ಮಂಗಳೂರಿನ ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ನಂತರ 1996ರಲ್ಲಿ ನಡ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಅವರು ತಮ್ಮ ವೃತ್ತಿ ಜೀವನ ಆರಂಭಿಸಿದರು. 2007-12ರ ವರೆಗೆ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರಯಾಕೂಬ್ ಅವರು ಸರಳ ಗಣಿತ ಬೋಧನೆಯ ವಿಷಯದಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ. ಸರಳ ಗಣಿತಕ್ಕೆ ಸಂಬಂಧಿಸಿ ಅವರು ಮಾಡಿರುವ 300ಕ್ಕೂ ಹೆಚ್ಚು ವೀಡಿಯೊಗಳು ಯೂಟ್ಯೂಬ್ ನಲ್ಲಿ ಲಭ್ಯವಿದೆ.
ಶಿಕ್ಷಕರಾಗಿ ಸೇವೆ ಆರಂಭಿಸಿದ ಬಳಿಕ ಯಾಕೂಬ್ ಅವರನ್ನು ತಮ್ಮ ವೃತ್ತಿಯನ್ನು ಅಪಾರವಾಗಿ ಪ್ರೀತಿಸಿದರು. ತಾವು ಶಿಕ್ಷಕರಾಗಿರುವ ಶಾಲೆಯ ವಿದ್ಯಾರ್ಥಿಗಳಿಗೆ ಗಣಿತವನ್ನು ಸುಲಭವಾಗಿ ಕಲಿಸುವ ನಿಟ್ಟಿನಲ್ಲಿ ಸ್ಥಳೀಯರ ನೆರವಿನಿಂದ ಗಣಿತ ಪ್ರಯೋಗಾಲಯ ಪ್ರಾರಂಭಿಸಿ, ಶಿಕ್ಷಣ ಇಲಾಖೆಯ ಗಮನ ಸೆಳೆದಿದ್ದರು. ಅವರ ಈ ಸಾಧನೆ ರಾಜ್ಯಾದ್ಯಂತ ಗಮನ ಸೆಳೆದು, ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ಲಭಿಸಿದೆ.

- Advertisement -