ಬಿಹಾರ | ಆರ್ ಟಿಐ ಕಾರ್ಯಕರ್ತ ಟಾರ್ಗೆಟ್ | ಅಪ್ರಾಪ್ತ ವಯಸ್ಕ ಮಗ 5 ತಿಂಗಳಿನಿಂದ ಜೈಲಿನಲ್ಲಿ

Prasthutha|

ಪಾಟ್ನ : ಬಿಹಾರದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಆರ್ ಟಿಐ ಕಾರ್ಯಕರ್ತರೊಬ್ಬರ ಅಪ್ರಾಪ್ತ ವಯಸ್ಕ ಮಗನನ್ನು ಐದು ತಿಂಗಳ ಹಿಂದೆ ವಯಸ್ಕನೆಂದು ತೋರಿಸಿ ಪೊಲೀಸರು ಬಂಧಿಸಿದ್ದರು. ಅಕ್ರಮ ಶಸ್ತ್ರಾಸ್ತ್ರಗಳ ಪ್ರಕರಣದಲ್ಲಿ ಸಿಲುಕಿಸಿ ಆತ ಹಾಗೂ ಇತರ ಇಬ್ಬರನ್ನು ಬಂಧಿಸಲಾಗಿತ್ತು. ಈಗ ಆತನ ಬಿಡುಗಡೆಗಾಗಿ ಆ ಆರ್ ಟಿ ಐ ಕಾರ್ಯಕರ್ತ ದಿನ ನಿತ್ಯ ಅಲೆಯುವಂತಾಗಿದೆ.

ಫೆ.29ರಂದು ತನ್ನ ಹತ್ತನೇ ತರಗತಿ ಪರೀಕ್ಷೆ ಬರೆದು ಮಗ ಬೈಕೊಂದರಲ್ಲಿ ಇತರ ಇಬ್ಬರೊಂದಿಗೆ ಮನೆಗೆ ಬರುತ್ತಿದ್ದಾಗ, ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ  ಇಬ್ಬರಲ್ಲಿ ಪಿಸ್ತೂಲ್ ಮತ್ತು ಸಜೀವ ಕ್ಯಾಟ್ರಿಜ್ ಪತ್ತೆಯಾಗಿತ್ತು. ಹೀಗಾಗಿ ಮೂವರನ್ನೂ ಬಂಧಿಸಿ, ಬಕ್ಸಾರ್ ಜೈಲಿಗೆ ಕಳುಹಿಸಲಾಗಿತ್ತು. ಇತರ ಇಬ್ಬರೂ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಆದರೆ ತಮ್ಮ ಮಗ ಮಾತ್ರ ಇನ್ನೂ ಜೈಲಿನಲ್ಲಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಹೇಳುತ್ತಾರೆ.

- Advertisement -

ಮಗನ ಹತ್ತನೇ ತರಗತಿ ಫಲಿತಾಂಶ ಬಂದಿದ್ದು, ತನ್ನ ಬಂಧನಕ್ಕೂ ಮೊದಲೇ ಬರೆದ ಐದು ಪರೀಕ್ಷೆಗಳಲ್ಲಿ (ಇನ್ನು ಒಂದು ಪರೀಕ್ಷೆ ಮಾತ್ರ ಬರೆಯಬೇಕಿತ್ತು) ಆತನಿಗೆ ಶೇ.83 ಅಂಕ ಬಂದಿದೆ. ಶಾಲಾ ದಾಖಲಾತಿಗಳಲ್ಲಿ ಬಾಲಕನ ಜನ್ಮ ದಿನಾಂಕ 2006 ಏಪ್ರಿಲ್ ಎಂದಿದೆ. ಆದರೆ, ಪೊಲೀಸರು ಆತನನ್ನು ವಯಸ್ಕನೆಂದು ತೋರಿಸಿ ಬಂಧಿಸಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಆಪಾದಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ತಾವು ಹೋರಾಟ ಮಾಡುತ್ತಿರುವುದರಿಂದ, ತನ್ನನ್ನು ಈ ಹಿಂದೆ ಪ್ರಕರಣವೊಂದರಲ್ಲಿ ಸಿಲುಕಿಸಲು ನೋಡಲಾಗಿತ್ತು. ಆದರೆ, ಅದು ಯಶಸ್ವಿಯಾಗಿಲ್ಲ. ಹೀಗಾಗಿ ಈಗ ನನ್ನ ಮಗನನ್ನು ಗುರಿಯಾಗಿಸಲಾಗಿದೆ ಎಂದು ಅವರು ಹೇಳುತ್ತಾರೆ. ಬಿಜೆಪಿ ಬೆಂಬಲಿತ ಬಿಹಾರ ಸರಕಾರದ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ನಡೆದಿರುವ ಅಕ್ರಮಗಳನ್ನು ಬಯಲಿಗೆಳೆಯಲು ಅವರು ಕಳೆದ ಐದು ವರ್ಷಗಳಿಂದ ಆರ್ ಟಿಐ ಅರ್ಜಿಗಳನ್ನು ಸಲ್ಲಿಸಿಕೊಂಡು ಬಂದಿದ್ದರು. ಅವರು ಬಯಲಿಗೆಳೆದ ಕೆಲವು ಅಕ್ರಮಗಳು ಈಗ ಸ್ಥಳೀಯ ಮಟ್ಟದಲ್ಲಿ ವಿಚಾರಣೆಯ ಹಂತಕ್ಕೂ ತಲುಪಿವೆ. ಹೀಗಾಗಿ ಅವರನ್ನು ಗುರಿ ಮಾಡಲಾಗುತ್ತಿದೆ ಎನ್ನಲಾಗಿದೆ. ಸತತ ಲಾಕ್ ಡೌನ್ ನಿಂದಾಗಿ ಬಿಡುಗಡೆ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುತ್ತಿದೆ. ಇದೀಗ, ಈ ಕುರಿತು ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಗೆ ಬಿಹಾರ ಡಿಜಿಪಿ ಆದೇಶಿಸಿದ್ದಾರೆ.

- Advertisement -