ಬಿಹಾರದಲ್ಲಿ ಎರಡೂವರೆ ತಿಂಗಳಲ್ಲಿ 39 ಗುಂಪುಹತ್ಯೆ!

0
46

ಪಾಟ್ನಾ: ಪೊಲೀಸ್ ಪ್ರಧಾನ ಕಚೇರಿಯು ನೀಡಿದ ಮಾಹಿತಿಯ ಪ್ರಕಾರ, ಬಿಹಾರದಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ 39 ಗುಂಪುಹತ್ಯೆ ಪ್ರಕರಣಗಳು ದಾಖಲಾಗಿದೆ. ಪ್ರಕರಣದಲ್ಲಿ 14 ಮಂದಿ ಹತ್ಯೆಗೈಯ್ಯಲ್ಪಟ್ಟಿದ್ದು, 45 ಮಂದಿ ಗಾಯಗೊಂಡಿದ್ದಾರೆ.

ಇಂತಹ ಘಟನೆಗಳ ಬಗ್ಗೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಹಾರ ಪೊಲೀಸ್ ಪ್ರಧಾನ ಕಚೇರಿ ಜಾಗೃತಿ ಅಭಿಯಾನ ನಡೆಸುತ್ತಿದೆ. ಮಕ್ಕಳ ಅಪಹರಣ ಪ್ರಕರಣದ ಯಾವುದೇ ಘಟನೆಗಳು ನಡೆದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೆ ವದಂತಿಗಳನ್ನು ಮುಂದಿಟ್ಟುಕೊಂಡು ಜನರು ಗುಂಪುಹತ್ಯೆಯನ್ನು ನಡೆಸುತ್ತಿದ್ದಾರೆ ಎಂದು ಪೊಲೀಸ್ ಪ್ರಧಾನ ಕಚೇರಿ ಮಾಹಿತಿ ನೀಡಿದೆ.

ಮಕ್ಕಳ ಅಪಹರಣದ ಬಗ್ಗೆ ವದಂತಿಗಳು ಹೆಚ್ಚಾಗಿದ್ದು, ಪೋಷಕರು ಭಯಭೀತರಾಗಿದ್ದಾರೆ. ಮುಝಫ್ಫರ್‌ಪುರದ ಮುಡಿಪುರದ ಚಿತ್ರಗುಪ್ತ ನಗರದಲ್ಲಿ ಇತ್ತೀಚೆಗೆ ಮಕ್ಕಳ ಅಪಹರಣಕಾರರು ಎಂಬ ಅನುಮಾನದ ಮೇಲೆ ಜನಸಮೂಹವು ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಅವರನ್ನು ಜನಸಮೂಹದಿಂದ ರಕ್ಷಿಸುವ ಹೊತ್ತಿಗೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು.

ಸಮಸ್ತಿಪುರ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಮಕ್ಕಳ ಅಪಹರಣಕಾರಳು ಎಂಬ ಅನುಮಾನದ ಮೇಲೆ ಮಾನಸಿಕ ಅಸ್ವಸ್ಥೆ ಮಹಿಳೆಯ ಮೇಲೆ ಗುಂಪುಹಲ್ಲೆ ನಡೆದಿತ್ತು. ಉದ್ರಿಕ್ತ ಜನಸಮೂಹದಿಂದ ಆಕೆಯನ್ನು ಕೆಲವರು ರಕ್ಷಿಸಿದ್ದಾರೆ. ಪಾಟ್ನಾ ಮತ್ತು ಇತರ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗಿದೆ.

ಸೆಪ್ಟೆಂಬರ್ 9ರಂದು ಪಶ್ಚಿಮ ಚಂಪಾರಣ್ ಜಿಲ್ಲೆಯ ಸೀತಾಮರ್ಹಿ ನಿವಾಸಿ ಶತ್ರುಘ್ನಾ ಸಿನ್ಹಾ ಎಂಬ ವ್ಯಕ್ತಿಯನ್ನು ಥಳಿಸಿ ಹತ್ಯೆಗೈಯ್ಯಲಾಗಿದೆ. ಸೆಪ್ಟೆಂಬರ್ 8ರಂದು ಮಕ್ಕಳ ಅಪಹರಣಕಾರ ಎಂಬ ಅನುಮಾನದ ಮೇಲೆ 22 ವರ್ಷದ ಯುವಕನನ್ನು ಥಳಿಸಿ ಹತ್ಯೆಗೈಯ್ಯಲಾಗಿತ್ತು.  348 ಗುರುತಿಸಲಾಗಿರುವ ಆರೋಪಿಗಳ ವಿರುದ್ಧ ಮತ್ತು 4,000 ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here