ಬಿಜೆಪಿ ಭದ್ರಕೋಟೆ ಸುಳ್ಯದಲ್ಲಿ ಸಂಘಪರಿವಾರದ ನಡುವೆ ಒಡಕು । ಪಕ್ಷ ಎರಡು ಹೋಳು

Prasthutha|

ಬಿಜೆಪಿಯ ಭದ್ರಕೋಟೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ಎರಡು ಬಣ ಸೃಷ್ಟಿಯಾಗಿದ್ದು ಹಲವು ಸಮಯಗಳಿಂದ ನಡೆಯುತ್ತಿದ್ದ ಶೀತಲ ಸಮರ ಈಗ ಸ್ಪೋಟಗೊಂಡಿದೆ. ಈ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ನಾಲ್ಕು ಮಂದಿಯನ್ನು ಉಚ್ಛಾಟಿಸಲಾಗಿದೆ.

- Advertisement -

ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ಈಗ ಜಿ.ಪಂ ಸದಸ್ಯರಾಗಿರುವ ಎಸ್.ಎನ್ ಮನ್ಮಥ, ಬಜರಂಗದಳ, ವಿಶ್ವ ಹಿಂದೂ ಪರಿಷತ್ ನ ಪ್ರಬಾವೀ ನಾಯಕನಾಗಿ ಸದ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಶೈಲೇಶ್ ಅಂಬೆಕಲ್ಲು, ಆರೆಸ್ಸೆಸ್ ನಾಯಕರ ಆಪ್ತನಾಗಿದ್ದ ನೆಲ್ಲೂರು ಕೆಮ್ರಾಜಿ ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಮತ್ತು ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಕಳೆದ ಪಂಚಾಯತ್ ಚುನಾವಣೆಯಲ್ಲಿ ಹಲವಾರು ಕಡೆ ಬಿಜೆಪಿಯ ಒಳಗಿನವರೇ ಪ್ರತ್ಯೇಕವಾಗಿ ಸ್ವಾಭಿಮಾನಿ ಬಳಗ ಎಂಬ ಹೆಸರಿನಲ್ಲಿ ಸ್ಪರ್ಧಿಸಿದ್ದರು. ಈ ಬಣವು ನಾಲ್ಕು ಪಂಚಾಯತ್ ಗಳಲ್ಲಿ ಆಡಳಿತ ವಹಿಸುವಷ್ಟರ ಮಟ್ಟಿಗೆ ಬೆಳೆದಿದೆ. ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ಶೈಲೇಶ್ ಅಂಬೆಕಲ್ಲು ಮತ್ತು ಅವರ ಬೆಂಬಲಿಗರು, ಐವರ್ನಾಡಿನಲ್ಲಿ ಎಸ್ ಎನ್ ಮನ್ಮಥ ಸ್ವಾಭಿಮಾನಿ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಬಿಜೆಪಿ ಮತ್ತು ಸ್ವಾಭಿಮಾನಿ ಬಳಗ ಈ ಎರಡೂ ಕಡೆಯಿಂದಲೂ ತಾವೇ ನೈಜ ಬಿಜೆಪಿ, ನೈಜ ಸಂಘಪರಿವಾರ ಎನ್ನುವಷ್ಟರ ಮಟ್ಟಿಗೆ ದ್ವೇಷ ಬೆಳೆದಿತ್ತು. ಈ ಬೆಳವಣಿಗೆಯು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿತ್ತು.

ಈ ಬೆಳವಣಿಗೆಯು ಬಿಜೆಪಿ ನಾಯಕರನ್ನು ಉಚ್ಛಾಟನೆ ಮಾಡಲು ಕಾರಣವಾಗಿದೆ.  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಸದಾನಂದ ಗೌಡ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸ್ ಅಂಗಾರ ಇವರೆಲ್ಲರ ತವರೂರಾದ ಸುಳ್ಯ ವಿದಾನಸಭಾ ಕ್ಷೇತ್ರ ಸೊಸೈಟಿ, ಪಂಚಾಯತ್ ಸ್ಥಾನಗಳಿಂದ ತೊಡಗಿ ಶಾಸಕ, ಜಿಪಂ, ತಾಲೂಕು ಪಂಚಾಯತ್ ಹೀಗೆ ಎಲ್ಲದರಲ್ಲೂ ಬಿಜೆಪಿಗೇ ಅಧಿಕಾರ. ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುವ ಸುಳ್ಯ ವಿದಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದಲ್ಲೇ ಈಗ ಒಡಕುಂಟಾಗಿದ್ದು ಭವಿಷ್ಯದಲ್ಲಿ ಬಿಜೆಪಿಗೆ ಮುಳ್ಳಾಗುವ ಸಾಧ್ಯತೆ ಇದೆ.   

- Advertisement -