ಬಾಬ್ರಿ ಧ್ವಂಸ ಪ್ರಕರಣ: ಎಲ್ಲಾ 32 ಆರೋಪಿಗಳು ಖುಲಾಸೆ!

Prasthutha|

➤ ಸಾಕ್ಷ್ಯಾಧಾರ ಕೊರತೆಯಿದೆ ಎಂದ ನ್ಯಾಯಾಲಯ

➤ಧ್ವಂಸ ಪೂರ್ವ ನಿಯೋಜಿತ  ಕೃತ್ಯವಲ್ಲ

- Advertisement -

ಲಕ್ನೊ: 28 ವರ್ಷಗಳ ದೀರ್ಘ ವಿಚಾರಣೆಯ ಬಳಿಕ 1992ರ ಬಾಬ್ರಿ ಧ್ವಂಸ ಪ್ರಕರಣದ ತೀರ್ಪು ಹೊರಬಿದ್ದಿದೆ. ಲಕ್ನೊ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪನ್ನು ಎಲ್ಲಾ 32 ಆರೋಪಿಗಳು  ನಿರ್ದೋಷಿ ಎಂಬುದಾಗಿ ತೀರ್ಪು ನೀಡಿದೆ.

ಸಾಕ್ಷ್ಯಾಧಾರ ಕೊರತೆಯ ಕಾರಣದಿಂದ ಆರೋಪಿಗಳು ನಿರ್ದೋಷಿಗಳೆಂದು ನ್ಯಾಯಾಲಯ ಹೇಳಿದೆ. ಧ್ವಂಸ ಪೂರ್ವ ನಿಯೋಜಿತ  ಕೃತ್ಯವಲ್ಲ ಎಂದು ನ್ಯಾಯಲಯ ಹೇಳಿತು.

2000 ಪುಟಗಳ ತೀರ್ಪನ್ನು ಸಿಬಿಐ ನ್ಯಾಯಾಲಯ ಪ್ರಕಟಿಸಿತು. ನ್ಯಾಯಮೂರ್ತಿ ಎಸ್.ಕೆ.ಯಾದವ್ ಬಾಬ್ರಿ ಧ್ವಂಸ ತೀರ್ಪನ್ನು ಓದಿದರು.

32 ಆರೋಪಿಗಳಲ್ಲಿ 26 ಮಂದಿ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ, ಮಹಂತ್ ನೃತ್ಯ ಗೋಪಾಲ್ ದಾಸ್ ಹಾಗೂ ಸತೀಶ್ ಪ್ರಧಾನ್  ವೀಡಿಯೊ ಕಾನ್ ಫರೆನ್ಸ್ ಮೂಲಕ ಕೋರ್ಟ್ ಮುಂದೆ ಹಾಜರಾದರು.

ಅಶೋಕ್ ಸಿಂಘಾಲ್ ಮತ್ತು ಇತರ ಸಂಘಪರಿವಾರ ನಾಯಕರು ಒಳಗಿದ್ದ ರಾಮಲಲ್ಲಾನ ಮೂರ್ತಿಯನ್ನು ರಕ್ಷಿಸಲು ಬಯಸಿದ್ದರು ಎಂದು ನ್ಯಾಯಾಲಯ ಹೇಳಿದೆ.

ಸಮಾಜ ವಿರೋಧಿ ಶಕ್ತಿಗಳು ಕಟ್ಟಡವನ್ನು ಧ್ವಂಸಗೊಳಿಸಿತು. ಆರೋಪಿ ನಾಯಕರು ಅವರನ್ನು ತಡೆಯಲು ಪ್ರಯತ್ನಿಸಿದರು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ತಿಳಿಸಿದರು.

“ವೀಡಿಯೊ ಸಾಕ್ಷ್ಯಗಳ ನೆಗಟೀವ್ ಅನ್ನು ತನಿಖಾ ತಂಡವು ಹಾಜರುಪಡಿಸಿಲ್ಲ. ನ್ಯಾಯಾಲಯದ ಮುಂದೆ ಸಿ.ಬಿ.ಐ ಹಾಜರುಪಡಿಸಿದ ಯಾವುದೇ ಆಡಿಯೊ ಮತ್ತು ವೀಡಿಯೊ ಸಾಕ್ಷ್ಯಗಳಿಂದ ಸಂಚು ನಡೆದಿರುವುದು ಸಾಬೀತಾಗುವುದಿಲ್ಲ. ಭಾಷಣಗಳ ಆಡಿಯೊ ಸ್ಪಷ್ಟವಾಗಿರಲಿಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಸ್ಥಳೀಯ ಬೇಹುಗಾರಿಕಾ ವರದಿಯು ಡಿ.6ರಂದು ನಡೆಯಬಹುದಾದ ಘಟನೆಗಳ ಕುರಿತು ಮೊದಲೇ ಎಚ್ಚರಿಕೆಯಿಂದಿರುವಂತೆ ಹೇಳಿತ್ತು. ಆದರೆ ಅದನ್ನು ಪರಿಗಣಿಸಲಾಗಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.

- Advertisement -