ಬಾಬರಿ ಮಸ್ಜಿದ್: ಪುನರ್‌ನಿರ್ಮಾಣವೇ ನ್ಯಾಯ

0
103

♦ ಪಿಎನ್‌ಬಿ

ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಈ ವಿಚಾರದ ಕುರಿತ ಚರ್ಚೆಗಳು ಮತ್ತೇ ಗರಿಗೆದರಿವೆ. ನ್ಯಾಯದ ವಿಳಂಬವು ನ್ಯಾಯದ ನಿರಾಕರಣೆಯಾಗಿದೆ ಎಂದು ಹೇಳಲಾಗುತ್ತದೆ. ಒಂದೆಡೆ, ಐತಿಹಾಸಿಕ ಸ್ಮಾರಕವಾಗಿ ಗುರುತಿಸಿಕೊಳ್ಳುತ್ತಿದ್ದ ಬಾಬರಿ ಮಸ್ಜಿದ್ ಅನ್ನು ಸಂವಿಧಾನಕ್ಕೆ ಸವಾಲೊಡ್ಡಿ ಧರೆಗುರುಳಿಸಲಾಯಿತು. ಈ ಧ್ವಂಸದ ಗುರುತರವಾದ ಆರೋಪ ಹೊತ್ತಿರುವ ಸಂಘಪರಿವಾರ ಮತ್ತು ಬಿಜೆಪಿಯ ಯಾವನೇ ವ್ಯಕ್ತಿಗೆ ಈ ವರೆಗೂ ಶಿಕ್ಷೆಯಾಗಿಲ್ಲ. ಮತ್ತೊಂದೆಡೆ, ಯಥಾ ಸ್ಥಾನದಲ್ಲಿ ಬಾಬರಿ ಮಸ್ಜಿದ್ ಅನ್ನು ಪುನರ್‌ನಿರ್ಮಿಸಲಾಗುವುದು ಎಂಬ ಅಂದಿನ ಸರಕಾರದ ವಾಗ್ದಾನವನ್ನೂ ಈಡೇರಿಸಲಾಗಿಲ್ಲ. ಈ ನಿಟ್ಟಿನಲ್ಲಿ ಬಾಬರಿ ಮಸ್ಜಿದ್ ಧ್ವಂಸವಾಗಿ ಸುದೀರ್ಘ 26 ವರ್ಷಗಳು ಕಳೆದರೂ ಪ್ರಕರಣ ಇತ್ಯರ್ಥವಾಗದೇ ಇರುವುದು ನ್ಯಾಯ ನಿರಾಕರಣೆಗೆ ಸಮವೆಂದೇ ಹೇಳಬಹುದಾಗಿದೆ. ಹಲವು ಏಳುಬೀಳುಗಳೊಂದಿಗೆ, ವಿಳಂಬವಾದರೂ ಇದೀಗ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿರುವುದು ಮಾತ್ರವಲ್ಲ, ಪ್ರಕರಣವನ್ನು ತುರ್ತಾಗಿ ಇತ್ಯರ್ಥಪಡಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಆಯೋಧ್ಯೆಯ ವಿವಾದಿತ 2.77 ಜಮೀನನ್ನು ಮೂರು ವಿಭಾಗಗಳಾಗಿ ವಿಂಗಡಿಸುವ 2010ರ ಸೆಪ್ಟಂಬರ್‌ನ ಅಲಹಾಬಾದ್ ಹೈಕೋರ್ಟ್‌ನ ತೀರ್ಪಿಗೆ ಪ್ರಗತಿಪರ, ಬುದ್ಧಿಜೀವಿ ವರ್ಗದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೇ ವೇಳೆ ಅಲಹಾಬಾದ್ ಹೈಕೋರ್ಟ್ ಪೀಠವು ನೀಡಿದ ನ್ಯಾಯ ನಿರಾಕರಿಸುವ ತೀರ್ಪು ಈ ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ಪುನರಾವರ್ತನೆಯಾಗುವುದಿಲ್ಲ ಎಂಬ ಆಶಾವಾದವು ಪ್ರಜಾಪ್ರಭುತ್ವ ಪ್ರೇಮಿಗಳದ್ದಾಗಿದೆ.

ಡಿಸೆಂಬರ್ 6, 1992ರಂದು ಈ ದೇಶದಲ್ಲಿ ನಡೆದ ಬಾಬರಿ ಮಸ್ಜಿದ್ ಧ್ವಂಸದ ಘಟನೆಯು ಪ್ರಜಾಪ್ರಭುತ್ವ ಪ್ರೇಮಿಗಳನ್ನು ಕರಾಳತೆಗೆ ದೂಡಿತು. ರಾಜಕೀಯ ಲಾಭಕ್ಕಾಗಿ ಸಂಘಪರಿವಾರದ ಮಂದಿ ಅಂದು ನಡೆಸಿದ ದುಷ್ಕೃತ್ಯವು ಜನರ ಮನಸ್ಸಿನಲ್ಲಿ ಎಂದೂ ಮಾಸದ ಘಟನೆಯಾಗಿ ಮುಂದುವರಿಯುತ್ತಿದೆ. ಈ ದೇಶದ ಜಾತ್ಯತೀತತೆಯ ಸಂಕೇತವಾಗಿದ್ದ ಬಾಬರಿ ಮಸೀದಿಯನ್ನು ಸಂಘಪರಿವಾರದ ಕಾರ್ಯಕರ್ತರು ಪೂರ್ವಯೋಜಿತವಾಗಿ ಧ್ವಂಸಗೊಳಿಸಿದರು. ಧ್ವಂಸದ ಮೊದಲು ಹಾಗೂ ನಂತರ ನಡೆದ ಗಲಭೆ, ಹಿಂಸೆಯ ಗಾಯವು ಜನರ ಮನಸ್ಸಿನಿಂದ ಇನ್ನೂ ಆರಿ ಹೋಗಿಲ್ಲ. ಜಾತ್ಯತೀತ ರಾಷ್ಟ್ರವಾಗಿ ಗುರುತಿಸಿಕೊಳ್ಳುತ್ತಿರುವ ಈ ಭಾರತ ದೇಶಕ್ಕೆ ಬಾಬರಿ ಮಸೀದಿ ಧ್ವಂಸವು ತೀವ್ರತರದ ಘಾಸಿಯನ್ನುಂಟು ಮಾಡಿತು. ಅಲ್ಲದೇ, ದೇಶದ ಜಾತ್ಯತೀತ ಪರಿಕಲ್ಪನೆಗೆ ಇದು ಭಾರೀ ನಷ್ಟವನ್ನುಂಟು ಮಾಡಿದ ಘಟನೆಯಾಗಿ ಇತಿಹಾಸದಲ್ಲಿ ದಾಖಲಾಗಿದೆ. ಶತಮಾನಗಳಿಂದ ಸೌಹಾರ್ದದೊಂದಿಗೆ ಬಾಳುತ್ತಿದ್ದ ಹಿಂದೂ-ಮುಸ್ಲಿಮರು, ಬ್ರಿಟಿಷರ ವಿರುದ್ಧದ 1857ರ ಸ್ವಾತಂತ್ರ ಸಂಗ್ರಾಮವನ್ನು ಒಂದಾಗಿ ಎದುರಿಸಿದ್ದರು. ಈ ಐಕ್ಯವು ಬ್ರಿಟಿಷ್ ಆಡಳಿತಕ್ಕೆ ದೊಡ್ಡ ಕಗ್ಗಂಟಾಗಿತ್ತು. ಮುಂದೆ ಬ್ರಿಟಿಷರು ತಮ್ಮ ಒಡೆದಾಳುವ ನೀತಿಯ ಭಾಗವಾಗಿ ಆಯೋಧ್ಯೆಯನ್ನು ವಿವಾದದ ಕೇಂದ್ರವನ್ನಾಗಿ ಮಾಡಿದರು ಎಂಬುದು ಇತಿಹಾಸ. 1980ರ ದಶಕದ ಕೊನೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಮಂಡಲ್ ಆಯೋಗ ವರದಿಯಿಂದ ಮೇಲ್ಜಾತಿ ಮತ್ತು ಕೆಳಜಾತಿಯ ನಡುವೆ ಉಂಟಾದ ಅಂತರವನ್ನು ಸರಿಪಡಿಸುವುದಕ್ಕಾಗಿ ಹಿಂದುತ್ವವಾದಿ ಶಕ್ತಿಗಳು ಸೋಮನಾಥ್-ರಥಯಾತ್ರೆಯನ್ನು ಹಮ್ಮಿಕೊಂಡವು. ಮಂಡಲ್ ಆಯೋಗದ ವರದಿಗೆ ಸಂಬಂಧಿಸಿದ ವಿವಾದದ ಮುಂದೆ ರಾಮಜನ್ಮಭೂಮಿಯನ್ನು ತರುವುದರಲ್ಲಿ ಈ ಯಾತ್ರೆಯು ಯಶಸ್ವಿಯಾಯಿತು. ಮುಂದೆ ಬಾಬರಿ ಮಸ್ಜಿದ್-ರಾಮಜನ್ಮ ಭೂಮಿಯನ್ನು ತನ್ನ ರಾಜಕೀಯ ಅಧಿಕಾರಕ್ಕೇರುವ ಮೆಟ್ಟಿಲನ್ನಾಗಿ ಬಳಸಿಕೊಂಡ ಬಿಜೆಪಿ ಇದೀಗ ಅಧಿಕಾರದ ಕೇಂದ್ರ ಸ್ಥಾನಕ್ಕೆ ಬಂದು ತಲುಪಿದೆ. ಕೋಮು ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿರುವ ಸಂಘಪರಿವಾರವು ಮುಸ್ಲಿಮರ ಮತ್ತಷ್ಟು ಆರಾಧನಾ ಕೇಂದ್ರಗಳನ್ನು ವಿವಾದಾಸ್ಪದವನ್ನಾಗಿ ಮಾಡುತ್ತಿರುವುದನ್ನು ಕೂಡ ಕಾಣುತ್ತಿದ್ದೇವೆ.

ಅಂದಿನ ಆಡಳಿತ ಸರಕಾರ, ನ್ಯಾಯಪಾಲಕರು ಮನಪೂರ್ವಕ ನೀಡಿದ ಸಹಕಾರದಿಂದ ಫ್ಯಾಶಿಸ್ಟರಿಗೆ ಈ ವಿಧ್ವಂಸಕ ಕೃತ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಸಾಧ್ಯವಾಗಿತ್ತು. ಬಾಬರಿ ಮಸ್ಜಿದ್‌ಗೆ ಯಾವುದೆ ರೀತಿಯ ಅಪಾಯ ಉಂಟಾಗದಂತೆ ರಕ್ಷಣೆ ನೀಡುತ್ತೇವೆಂದು ಉತ್ತರ  ಪ್ರದೇಶದ ಸರಕಾರ ಸುಪ್ರೀಂ ಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಈ ದ್ರೋಹದಲ್ಲಿ ಬಿಜೆಪಿ ಸೇರಿದಂತೆ ದೇಶದ ಜಾತ್ಯತೀತ ಎಂದು ಕರೆಯಲ್ಪಡುವ ಪಕ್ಷಗಳೂ ಸಮಾನ ಭಾಗಿಗಳಾಗಿವೆ. ಬಾಬರಿ ಮಸ್ಜಿದ್‌ನ ಬೀಗ ಒಡೆದು ಪೂಜೆಗೆ ಅವಕಾಶ ಕಲ್ಪಿಸಿದ್ದು ರಾಜೀವ್ ಗಾಂಧಿಯವರ ಆಡಳಿತಾವಧಿಯಲ್ಲಾಗಿದ್ದರೆ, ಮಸ್ಜಿದ್ ಧ್ವಂಸಗೊಂಡದ್ದು ಕಾಂಗ್ರೆಸ್ ಸರಕಾರದ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಆಡಳಿತದಲ್ಲಾಗಿತ್ತು. ಧ್ವಂಸದಲ್ಲಿ ಪಿ.ವಿ.ನರಸಿಂಹರಾವ್ ಅವರ ವಹಿಸಿದ ಪರೋಕ್ಷ ಪಾತ್ರವನ್ನು ಸ್ವಪಕ್ಷೀಯ ಸಲ್ಮಾನ್ ಖುರ್ಷಿದ್ ಮತ್ತು ಅಂಕಣಕಾರ ಕುಲದೀಪ್ ನಯ್ಯರ್ ತಮ್ಮ ಪುಸ್ತಕಗಳಲ್ಲಿ ಬರೆದುಕೊಂಡಿದ್ದಾರೆ. ಈಚೆಗೆ ನಡೆದ ಚುನಾವಣೆಗಳ ಸಂದರ್ಭಗಳಲ್ಲೂ ತಥಾಕಥಿತ ಜಾತ್ಯತೀತ ಪಕ್ಷಗಳು ಬಾಬರಿ ಮಸ್ಜಿದ್‌ಗೆ ನ್ಯಾಯ ನಿರಾಕರಿಸುವ ನಿಲುವನ್ನೇ ತೋರ್ಪಡಿಸಿದವು.

ಒಂದೆಡೆ ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದ್ದರೆ, ಮತ್ತೊಂದೆಡೆ ನ್ಯಾಯಾಂಗದ ಮೇಲೆ ಒತ್ತಡ ಹೇರುವ ಮತ್ತು ಬೆದರಿಕೆಯೊಡ್ಡುವ ಪ್ರಕರಣಗಳೂ ಕಂಡು ಬರುತ್ತಿವೆ. ಉತ್ತರ ಪ್ರದೇಶದ ಸಚಿವರೊಬ್ಬರು ‘‘ವಿವಾದಿತ ಬಾಬರಿ ಮಸೀದಿ ಜಮೀನಿನಲ್ಲಿ ರಾಮಮಂದಿರ ನಿರ್ಮಿಸುವುದು ಶತಸ್ಸಿದ್ಧ. ಯಾಕೆಂದರೆ ಸುಪ್ರೀಂ ಕೋರ್ಟ್ ನಮ್ಮ ಕೈಯಲ್ಲಿದೆ’’ ಎಂದು ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ. ಬಾಬರಿ ಮಸೀದಿ ವಿವಾದ ಪ್ರಕರಣದ ಮುಖ್ಯ ಕಕ್ಷಿದಾರ ಇಕ್ಬಾಲ್ ಅನ್ಸಾರಿ ಅವರ ಮೇಲೆ ಹಲ್ಲೆ ನಡೆದಿದೆ. ಪ್ರಕರಣವನ್ನು ಹಿಂದೆಗೆದುಕೊಳ್ಳದೇ ಇದ್ದರೆ ಹತ್ಯೆಗೈಯ್ಯುವುದಾಗಿ ಅವರಿಗೆ ಬೆದರಿಕೆ ಒಡ್ಡಲಾಗಿದೆ. ಇದೀಗ, ಕಕ್ಷಿದಾರರ ಪರವಾಗಿ ವಕಾಲತು ನಡೆಸುತ್ತಿರುವ ನ್ಯಾಯವಾದಿ ರಾಜೀವ್ ಧವನ್ ಅವರನ್ನು ಬೆದರಿಸಲಾಗಿದೆ. ಬೆದರಿಕೆ ಕರೆ ಬಂದಿರುವುದನ್ನು ಧವನ್ ನ್ಯಾಯಾಧೀಶರ ಗಮನಕ್ಕೂ ತಂದಿದ್ದಾರೆ. ಮಾತ್ರವಲ್ಲ, ನ್ಯಾಯಾಲಯದ ಆವರಣದಲ್ಲೇ ನ್ಯಾಯವಾದಿಯ ಸಹಾಯಕನ ಮೇಲೆ ಹಲ್ಲೆ ನಡೆಸಲಾಗಿದೆ. ಕಾನೂನುಬದ್ಧವಾಗಿ ತಮ್ಮ ಪರವಾಗಿ ತೀರ್ಪು ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ವಾಸ್ತವವೇ ಸಂಘಪರಿವಾರದ ದುಷ್ಕರ್ಮಿಗಳಿಗೆ ಇಂಥದ್ದೊಂದು ಹತಾಶ ಪ್ರಯತ್ನಕ್ಕೆ ಪ್ರೇರೇಪಿಸುವಂತೆ ಮಾಡಿದೆ. ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಹೇಳಿಕೆಗಳನ್ನು ಈ ಹಿಂದೆ ಆರೆಸ್ಸೆಸ್ ಮುಖಂಡರು ಕೂಡ ನೀಡಿದ್ದರು ಎಂಬುದು ಉಲ್ಲೇಖನೀಯ.

2010ರ ಅಲಹಾಬಾದ್ ಹೈಕೋರ್ಟ್‌ಗೆ ತೀರ್ಪಿಗೆ ಸಂಬಂಧಿಸಿದ ಇತಿಹಾಸ ತಜ್ಞೆ ರೋಮಿಲಾ ಥಾಪರ್‌ರವರ ಪ್ರತಿಕ್ರಿಯೆಯನ್ನು ಇಲ್ಲಿ ಸಂದರ್ಭೋಚಿತವಾಗಿ ಉಲ್ಲೇಖಿಸಬಹುದಾಗಿದೆ. ‘‘ತನ್ನನ್ನು ಒಂದು ಸಮುದಾಯ ಎಂದು ಬಣ್ಣಿಸಿಕೊಳ್ಳುವ ಗುಂಪೊಂದರಿಂದ ಆರಾಧಿಸಲ್ಪಡುವ ದಿವ್ಯ ಅಥವಾ ಅರೆ ದಿವ್ಯ ಪುರುಷನ ಜನ್ಮಸ್ಥಾನವೆಂದು ಘೋಷಿಸುವ ಮೂಲಕ ತೀರ್ಪು ನ್ಯಾಯಾಂಗ ವ್ಯವಸ್ಥೆಯಲ್ಲಿ ವಿವಾದವನ್ನು ಸೃಷ್ಟಿ ಮಾಡಿದೆ. ಎಲ್ಲೆಲ್ಲಾ ಸೂಕ್ತ ಜಾಗಗಳು ದೊರೆಯುವುದೋ ಅಂತಹ ಜಾಗಗಳಲ್ಲಿ ಈ ರೀತಿಯ ವಿವಾದಗಳನ್ನು ಹುಟ್ಟು ಹಾಕಿಸಬಲ್ಲ ಜನ್ಮಸ್ಥಾನಗಳು ಹಲವಾರು ಇವೆ. ಮುಂದೆ ಇಂತಹ ಹಲವು ಜನ್ಮಸ್ಥಾನಗಳು ಕಂಡ ಬರಲಿದ್ದು, ಹೋಲಿಕೆಯ ವಸ್ತುಗಳು ಕಂಡುಬರಬಹುದು. ಮತ್ತು ಅನವಶ್ಯಕ ವಿವಾದಗಳು ಸೃಷ್ಟಿಯಾಗಬಹುದು. ಐತಿಹಾಸಿಕ ಸ್ಮಾರಕದ ಉದ್ದೇಶಪೂರ್ವಕ ಧ್ವಂಸವು ಖಂಡಿಸಲ್ಪಡುವುದರಿಂದ ಇತರವುಗಳನ್ನು ಧ್ವಂಸಗೊಳಿಸುವುದರಿಂದ ಜನರನ್ನು ತಡೆಯುವುದು ಹೇಗೆ? ಈ ದೇಶದಲ್ಲಿ ಕಾನೂನು ಕೇವಲ ಶ್ರದ್ಧೆ ಮತ್ತು ನಂಬಿಕೆಯನ್ನು ಮಾತ್ರವೇ ಆಧರಿಸದೆ ಸಾಕ್ಷಗಳನ್ನು ಆಧರಿಸುತ್ತದೆ ಎಂಬ ಆತ್ಮವಿಶ್ವಾಸವು ಹುಟ್ಟಿದಾಗ ಮಾತ್ರ ನಿಜವಾದ ಸಂಧಾನ ಸಾಧ್ಯ’’ ಎಂದು ರೋಮಿಲಾ ಥಾಪರ್ ಹೇಳಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಇದೀಗ ನಡೆಯುತ್ತಿರುವ ವಿಚಾರಣೆಯಲ್ಲಿ ರಾಮ ಜನ್ಮಭೂಮಿ ಪರ ವಕೀಲರು ಜನರ ನಂಬಿಕೆ, ಭಾವನೆಗಳ ಮೇಲೆ ವಾದ ಮಂಡಿಸುತ್ತಿದ್ದರೆ, ಬಾಬರಿ ಮಸ್ಜಿದ್ ಪರ ವಕೀಲರು ದಾಖಲೆಗಳ ಆಧಾರದಲ್ಲಿ ವಾದ ಮಂಡಿಸುತ್ತಿದ್ದಾರೆ. ನ್ಯಾಯಾಲಯವು ಜನರ ನಂಬಿಕೆಗೆ ಅನುಗುಣವಾಗಿ ತೀರ್ಪು ನೀಡದೆ ಸಾಕ್ಷಾಧಾರಗಳಿಗೆ ಹೆಚ್ಚು ಮಹತ್ವ ನೀಡಿದರೆ ನ್ಯಾಯಾಂಗದ ಘನತೆಯನ್ನು ಹೆಚ್ಚಿಸಬಹುದು ಮತ್ತು ಭವಿಷ್ಯತ್ಕಾಲದಲ್ಲಿ ಸಂಭವಿಸಬಹುದಾದ ಹಲವು ವಿವಾದಗಳಿಗೆ ಇತಿಶ್ರೀ ಹಾಡಬಹುದು. ಅಂದ ಹಾಗೆ, ಅಂತಿಮವಾಗಿ ಎಲ್ಲಾ ಆಯಾಮಗಳಲ್ಲೂ ಬಾಬರಿ ಮಸ್ಜಿದ್ ಕುರಿತ ಸಾಕ್ಷಾಧಾರಗಳನ್ನು ಹೊಂದಿರುವ ಆಯೋಧ್ಯೆಯ ವಿವಾದಿತ ಜಮೀನಿನಲ್ಲಿ ಮಸ್ಜಿದ್ ಪುನರ್‌ನಿರ್ಮಾಣವೇ ನ್ಯಾಯವಾಗಿದೆ. ಇದು ಪ್ರಜಾಪ್ರಭುತ್ವ ಪ್ರೇಮಿಗಳ ಒಕ್ಕೊರಳ ಆಗ್ರಹವೂ ಆಗಿದೆ. ಅದೇ ರೀತಿ ಸರ್ವೋಚ್ಛ ನ್ಯಾಯಾಲಯವು ವಾಸ್ತವ ಮತ್ತು ಸತ್ಯಾಂಶದ ಮೇಲೆ ತೀರ್ಪು ನೀಡಲಿದೆ ಎಂದು ಆಶಿಸೋಣ.

LEAVE A REPLY

Please enter your comment!
Please enter your name here