ಬದ್ರ್‌ನಿಂದ ಮರಳುವ ಮೊದಲೇ…

0
151

-ಎ.ಸಯೀದ್

ಆಳವಾದ ಗಾಯಗಳು, ನಷ್ಟಗಳನ್ನು ಹೇರಿಕೊಂಡು ಕುರೈಷರು ಸೋತು ಓಡಿ ಹೋಗಿದ್ದಾರೆ. ಮುಸ್ಲಿಮರು ಅಂದು ರಾತ್ರಿ ನಿದ್ರಿಸಲಿಲ್ಲ. ವೈರಿಗಳ ಮತದೇಹವನ್ನು ದಫನ ಮಾಡಿ ಅವರು ತೊರೆದುಹೋದ ವಸ್ತುಗಳನ್ನು ಶೇಖರಿಸಿ ಆ ರಾತ್ರಿ ಬದ್ರ್‌ನಲ್ಲೇ ಕಳೆದರು.

ಅನುಯಾಯಿಗಳ ಗದ್ದಲಗಳ ಮಧ್ಯೆ ಪ್ರವಾದಿ(ಸ) ಆಲೋಚಿಸುತ್ತಿದ್ದರು. ಗತಕಾಲದ ಘಟನೆಗಳು ಅವರ ಮನದಲ್ಲಿ ಮಿಂಚಿ ಮರೆಯಾದವು. ಅನಾಥನಾಗಿದ್ದ ತನಗೆ ಏಕಾಂತದಲ್ಲಿ ಆಸರೆಯಾದ ಮಕ್ಕಾ ನಗರಿ; ಮಕ್ಕಾದ ಪ್ರತಿಯೊಬ್ಬರ ಕಣ್ಮಣಿಯಾಗಿ ಜೀವಿಸಿದ ಆ ಒಳ್ಳೆಯ ದಿನಗಳು. ಅವರು ನಂಬಿಗಸ್ಥನಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಮತ್ತೇಕೆ ಅವರು ಸತ್ಯದಿಂದ ವಿಮುಖರಾದರು?’’ ಇಹ-ಪರದಲ್ಲಿ ಒಳಿತನ್ನು ಮಾತ್ರ ವಾಗ್ದಾನ ಮಾಡಿದ ಧರ್ಮವನ್ನು ಅವರು ತಳ್ಳಿಹಾಕಿದರು. ಜವಾಬು ದೊರಕದ ಪ್ರಶ್ನೆಗಳು. ಪ್ರವಾದಿಯ ವಿರುದ್ಧ ವೈರತ್ವ ತೋರಿದರೆ ಅದರ ಅಂತಿಮ ಫಲ ಏನೆಂದು ಅಲ್ಲಾಹನು ಅವರಿಗೆ ಮುನ್ನೆಚ್ಚರಿಕೆಯನ್ನು ನೀಡಿದ್ದನಲ್ಲವೆ?

ಅವರು ನಿಮ್ಮನ್ನು ಇಲ್ಲಿಂದ ಹೊರದಬ್ಬಲಿಕ್ಕಾಗಿ, ಈ ನಾಡಿನಲ್ಲಿ ನಿಮ್ಮನ್ನು ಅಸ್ಥಿರಗೊಳಿಸಲು ಶ್ರಮಿಸುತ್ತಿದ್ದಾರೆ. ಒಂದು ವೇಳೆ ಹಾಗೆ ಆಗಿಬಿಟ್ಟರೆ, ನಿಮ್ಮ ಬಳಿಕ ಅವರೇನೂ ಹೆಚ್ಚುಕಾಲ ಉಳಿಯಲಾರರು. ನಾವು ನಿಮಗಿಂತ ಮುಂಚೆ ಕಳಿಸಿದ ನಮ್ಮ ದೂತರ ವಿಷಯದಲ್ಲಿ ನಾವು ಪಾಲಿಸಿದ ನಿಯಮ (ನೆನಪಿರಲಿ). ನೀವು ನಮ್ಮ ನಿಮಯದಲ್ಲಿ ಯಾವುದೇ ಬದಲಾವಣೆಯನ್ನು ಕಾಣಲಾರಿರಿ.(17:76-77)

ಆದ್ , ಸಮೂದ್ ಮತ್ತು ಸೋದೋಂ ಗ್ರಾಮವಾಸಿಗಳ ಇತಿಹಾಸದ ತುಣುಕುಗಳು ಅರಬಿಗಳಿಗೆ ತುಂಬು ಪರಿಚಿತ. ದೇವ ಧಿಕ್ಕಾರದ ಕಾರಣದಿಂದ ನಾಶಗೊಂಡ ಆ ನಾಡಿನ ಜನರ ಇತಿಹಾಸವನ್ನು ಅಲ್ಲಾಹನು ಕುರೈಷಿಗಳಿಗೆ ನೆನಪಿಸುತ್ತಾನೆ.

ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದು ಅವರಿಗೆ ಕಾಣುವಂತಾಗಲು ಅವರೇನು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಅವರಂತು ಇವರಿಗಿಂತ ತುಂಬಾ ಶಕ್ತಿಶಾಲಿಗಳಾಗಿದ್ದರು. ಆದರೆ ಅಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅಲ್ಲಾಹನನ್ನು ಮಣಿಸಬಲ್ಲ ಯಾವ ವಸ್ತುವೂ ಇಲ್ಲ. ಖಂಡಿತವಾಗಿಯೂ ಅವನು ಎಲ್ಲವನ್ನೂ ಬಲ್ಲ ಸರ್ವಶಕ್ತನಾಗಿದ್ದಾನೆ. (ಕುರ್‌ಆನ್: 35: 44)

ಅವರು ಎಲ್ಲಾ ಮುನ್ನೆಚ್ಚರಿಕೆಗಳನ್ನೂ ಗೇಲಿ ಮಾಡಿ ತಳ್ಳಿಹಾಕಿದರು. ಧಿಕ್ಕಾರದ ಧ್ವನಿಯಿಂದ ಅಲ್ಲಾಹನಿಗೆ ಅವರು ಜವಾಬು ನೀಡಿದರು:

ಅವರು (ವ್ಯಂಗ್ಯವಾಗಿ) ಹೇಳಿದರು: ನಮ್ಮಡೆಯಾ, ನಮಗೆ ನಮ್ಮ ಪಾಲನ್ನು ವಿಚಾರಣೆಯ ದಿನಕ್ಕಿಂತ ಮೊದಲೇ ತುರ್ತಾಗಿ ಕೊಟ್ಟುಬಿಡು. (ಕುರ್‌ಆನ್: 38:16)

ಯೋಚನೆಯಿಂದ ಹೊರಬಂದ ಪ್ರವಾದಿ(ಸ) ಅಲ್ಲಿಂದ ಎದ್ದು ನಡೆದರು. ಕುರೈಷಿಗಳ ಮತದೇಹಗಳನ್ನು ದಫನ ಮಾಡಿದ ಬಾವಿಯ ಕಡೆಗೆ ತೆರಳಿ ಅದರೊಳಗಿರುವ ಪ್ರತಿಯೊಬ್ಬರ ಹೆಸರುಗಳನ್ನೆತ್ತಿ ಕೂಗಿ ಕರೆದರು. ಆ ಮಧ್ಯರಾತ್ರಿಯಲ್ಲಿ ಅವರ ಧ್ವನಿಯು ಅಂತರಿಕ್ಷದಲ್ಲಿ ಮೊಳಗಿತು:

‘‘ಓ ಮರಣ ಹೊಂದಿದವರೇ, ಎಲೈ, ಉತ್ಬಾಬಿನ್ ರಬೀಅ, ಶೈಬ ಬಿನ್ ರಬೀಅ, ಉಮಯ್ಯತ್‌ಬಿನ್ ಖಲಫ್, ಅಬೂಜಹಲ್ ಬಿನ್ ಹಿಶಾಂ…’’

‘‘ಅಲ್ಲಾಹನನ್ನೂ ಅವನ ದೂತನನ್ನು ಅನುಸರಿಸಿದ್ದರೆ ತುಂಬಾ ಉತ್ತಮವಾಗಿತ್ತೆಂದು ನಿಮಗೆ ತಿಳಿಯಿತಲ್ಲವೆ? ನಿಮ್ಮ ಒಡೆಯನು ನಿಮ್ಮೆಂದಿಗೆ ಮಾಡಿದ ವಾಗ್ದಾನವು ಇದೀಗ ಸತ್ಯವೆಂದು ಗೋಚರಿಸಿದೆ.

ವೈರಿಗಳೊಂದಿಗೆ ಹೋರಾಡಲು ಮುಸ್ಲಿಮರಿಗೆ ಅನುಮತಿಯನ್ನು ನೀಡಿದ ವೇಳೆಯೂ, ಅದರ ಆದೇಶ ಬಂದ ವೇಳೆಯಲ್ಲೂ ಅಲ್ಲಾಹನ ನೆರವಿನ ವಾಗ್ದಾನವಿತ್ತು. ಹಿಂಸೆಯನ್ನು ಸಹಿಸಿ ಹಕ್ಕುಗಳು ನಿರಾಕರಿಸಲ್ಪಟ್ಟು ಊರಿನಿಂದ ಹೊರದಬ್ಬಲ್ಪಟ್ಟ ಅಪಮಾನ ಭಾರ ಮತ್ತು ನಿಂದನೆಯನ್ನು ನೀಗಿಸುವ ಖಾತರಿಯನ್ನು ಅಲ್ಲಾಹನು ನೀಡಿದನು. ಮೊದಲ ದಾಳಿಯಲ್ಲೇ ಆ ನೆರವು ಮುಸ್ಲಿಮರಿಗೆ ಲಭಿಸಿತು.

ನೀವು ಅವರ (ಶತ್ರು ಪಡೆಗಳ) ವಿರುದ್ಧ ಹೋರಾಡಿರಿ. ಅಲ್ಲಾಹನು ನಿಮ್ಮ ಕೈಗಳಿಂದ ಅವರನ್ನು ಶಿಕ್ಷಿಸುವನು ಮತ್ತು ಅವರನ್ನು ಅಪಮಾನಿಸುವನು. ಹಾಗೆಯೇ ಅವನು ಅವರ ವಿರುದ್ಧ ನಿಮಗೆ ನೆರವಾಗುವನು ಮತ್ತು ವಿಶ್ವಾಸಿಗಳ ಮನಸ್ಸುಗಳನ್ನು ತಣಿಸಿಬಿಡುವನು. ಅವನು ಅವರ ಮನಸ್ಸುಗಳಲ್ಲಿರುವ ಕ್ರೋಧವನ್ನು ನಿವಾರಿಸುವನು. ಇನ್ನು, ಅಲ್ಲಾಹನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹನು ಅರಿವುಳ್ಳವನೂ ಯುಕ್ತಿವಂತನೂ ಆಗಿರುತ್ತಾನೆ. (ಕುರ್‌ಆನ್: 9: 14-15)

ಪ್ರಭಾತದ ವೇಳೆ ಮುಸ್ಲಿಮರು ವಾಪಸಾಗುವ ಸಿದ್ಧತೆಯಲ್ಲಿದ್ದರು. ಪ್ರವಾದಿ(ಸ) ಯುದ್ಧ ಖೈದಿಗಳ ಮಧ್ಯೆ ನೋಟವನ್ನು ಹರಿಸುತ್ತಾರೆ. ಅತ್ಯಂತ ಹತ್ತಿರದ ಸಂಬಂಧಿಕರು ಅದರಲ್ಲಿದ್ದರು. ಪ್ರವಾದಿ(ಸ)ಯ ಚಿಕ್ಕಪ್ಪ ಅಬ್ಬಾಸುಬ್‌ನು ಅಬ್ದುಲ್ ಮುತ್ತಲಿಬ್, ಮಗಳ ಗಂಡ ಅಬುಲ್ ಆಸ್, ಅಬೂ ಸುಫ್ಯಾನರ ಪುತ್ರ ಅಮ್ರ್, ಕುರೈಶರ ವಾಚಾಳಿಯಾದ ಸುಹೈಲುಬ್‌ನು ಅಮ್ರ್, ಪ್ರವಾದಿ(ಸ)ಯವರನ್ನು ದೈಹಿಕವಾಗಿ ಹಿಂಸಿಸುವುದರಲ್ಲಿ ಮುಂದಿದ್ದ ಉಖ್ಬತುಬ್‌ನು ಅಬೀ ಮುಈದ್, ಇಸ್ಲಾಮ್ ಮತ್ತು ಪ್ರವಾದಿ(ಸ)ಯನ್ನು ತೀವ್ರವಾಗಿ ಗೇಲಿ ಮಾಡುತ್ತಿದ್ದ ನಳೀರ್‌ಬ್‌ನು ಹಾರಿಸ್ ಮುಂತಾದ ಪ್ರಮುಖರು. ವೌನವಾಗಿ ಅವರು ಪ್ರತಿಯೊಬ್ಬರ ಮುಖಗಳನ್ನೂ ನೋಡಿದರು. ಕೊನೆಗೆ ಅವರ ಕಣ್ಣುಗಳು ನಳೀರುಬ್‌ನು ಹಾರಿಸ್‌ನ ಮೇಲೆ ಬಿತ್ತು. ಆ ನೋಟವು ಎಲ್ಲ ಬಂಧಿಗಳನ್ನು ಭಯಭೀತರನ್ನಾಗಿಸಿತು. ನಳೀರ್ ತನ್ನ ಸಹಚರನೊಂದಿಗೆ ಹೇಳಿದನು: ‘‘ಖಂಡಿತವಾಗಿಯೂ ಇಂದು ನನ್ನ ಕತೆ ಮುಗಿದಂತೆಯೇ; ಮತ್ಯು ದಿಟ್ಟಿಸಿದಂತೆ ಮುಹಮ್ಮದ್(ಸ) ನನ್ನನ್ನು ನೋಡಿದರು.’’

ಮಕ್ಕಾದಲ್ಲಿ ಪ್ರವಾದಿ(ಸ)ಯ ವಿರುದ್ಧ ಸಂಚು ಹೂಡಿದ ಪ್ರಮುಖರಲ್ಲಿ ಓರ್ವನಾಗಿದ್ದ ನಳೀರ್‌ಬ್‌ನು ಹಾರಿಸ್. ಪ್ರವಾದಿ(ಸ) ಜನರೊಂದಿಗೆ ಮಾತನಾಡುವಾಗ ನಳೀರ್ ಅಲ್ಲಿಗೆ ತಲುಪಿ, ಈ ರೀತಿ ಕೂಗಿ ಹೇಳುತ್ತಿದ್ದನು:

‘‘ಕುರೈಷಿಗಳೇ ಇತ್ತ ಬನ್ನಿ, ನನಗೆ ಈತನಿಗಿಂತ ಉತ್ತಮ ರೀತಿಯಲ್ಲಿ ಮಾತನಾಡಲು ತಿಳಿದಿದೆ.’’ ಜನರ ಗಮನ ಸೆಳೆಯಲು ಪರ್ಷಿಯನ್ ರಾಜರ ಕತೆಗಳನ್ನು ಐತಿಹ್ಯಗಳನ್ನೂ ಆತ ಹೇಳಲು ಶುರು ಮಾಡುವನು.

‘‘ಮುಹಮ್ಮದ್ ಹೇಳುತ್ತಿರುವುದು ಕೇವಲ ಈ ರೀತಿಯ ಐತಿಹ್ಯಗಳಷ್ಟೆ’’ – ನಳೀರ್ ಬಿನ್ ಹಾರಿಸ್‌ನ ಮಾತಿನ ಶೈಲಿ ಅದಾಗಿತ್ತು.

ಇನ್ನೇನು ತನ್ನನ್ನು ವಧಿಸಿ ಬಿಡುತ್ತಾರೆಂದು ತಿಳಿದಾಗ ನಳೀರ್ ತನ್ನ ಸಂಬಂಧಿಯಾದ ಮಿಸ್‌ಅಬ್‌ಬ್‌ನು ಉಮೈರ(ರ)ರ ಸಹಾಯವನ್ನು ಯಾಚಿಸುತ್ತಾನೆ.

ಮಿಸ್‌ಅಬ್‌ರವರು ಸಹಾಯ ಮಾಡಲು ಮುಂದಾಗಲಿಲ್ಲ. ಅವರು ಹೇಳಿದರು: ‘‘ಅಲ್ಲಾಹನ ಗ್ರಂಥ ಮತ್ತು ಪ್ರವಾದಿಯ ಕುರಿತು ನೀನು ಹೇಳಿದ್ದೇನು? ಅವರ ಅನುಚರರನ್ನು ನೀನು ಅದೆಷ್ಟು ಕ್ರೂರವಾಗಿ ಹಿಂಸಿಸಿದೆ.’’

ನಳೀರ್: ‘‘ಕುರೈಷಿಗಳು ನಿನ್ನನ್ನು ಒಂದು ವೇಳೆ ಖೈದಿಯನ್ನಾಗಿಸುತ್ತಿದ್ದರೆ ನಾನು ಬದುಕಿರುವವರೆಗೆ ಅವರು ನಿನ್ನನ್ನು ವಧಿಸುತ್ತಿರಲಿಲ್ಲ.’’

ಮಿಸ್‌ಅಬ್: ‘‘ನಾನೆಂದೂ ನಿನ್ನನ್ನು ನಂಬಲಾರೆ, ಮತ್ತೆ ನಾನು ನಿನ್ನಂತಲ್ಲ. ನಮ್ಮ ಪರಸ್ಪರ ಸಕಲ ಸಂಬಂಧಗಳನ್ನು ಇಸ್ಲಾಮ್ ಕಿತ್ತೆಸೆದಿದೆ.’’

ಈ ಮಧ್ಯೆ ನಳೀರ್‌ನ ತಲೆಯನ್ನು ಕಡಿಯಲು ಪ್ರವಾದಿ(ಸ) ಆದೇಶಿಸಿದರು. ಅಲಿ(ರ) ಆ ಜವಾಬ್ದಾರಿಯನ್ನು ಪೂರ್ತಿಗೊಳಿಸಿದರು. ಖೈದಿಗಳಗುಂಪಿನಲ್ಲಿದ್ದ ಉಖ್‌ಬತುಬ್‌ನು ಅಬೀ ಮುಈದ್ ಮಕ್ಕಾದಲ್ಲಿ ಪ್ರವಾದಿ(ಸ)ಯವರ ಕೊರಳಿಗೆ ಹಗ್ಗವನ್ನು ಬಿಗಿದು ಕೊಲ್ಲಲು ಯತ್ನಿಸಿದ್ದನು. ಮದೀನಾಗೆ ಸಾಗುವ ದಾರಿ ಮಧ್ಯೆ ಆತನನ್ನೂ ವಧಿಸಲಾಯಿತು. ನಾವು ಸತ್ಯವನ್ನು ಮಿಥ್ಯದ ಮೇಲೆ ಅಪ್ಪಳಿಸಿದಾಗ ಅದು (ಸತ್ಯವು) ಅದನ್ನು (ಮಿಥ್ಯವನ್ನು) ಹೊಸಕಿ ಹಾಕುತ್ತದೆ ಮತ್ತು ಅದು (ಮಿಥ್ಯವು) ನುಚ್ಚು ನೂರಾಗಿ ಬಿಡುತ್ತದೆ. ನೀವು ರಚಿಸಿಕೊಂಡವುಗಳಿಂದಾಗಿ (ನಿಮ್ಮ ಮಿಥ್ಯ ನಂಬಿಕೆಗಳಿಂದಾಗಿ) ನಿಮಗೆ ವಿನಾಶ ಕಾದಿದೆ. (ಕುರ್‌ಆನ್: 21:18)

***

LEAVE A REPLY

Please enter your comment!
Please enter your name here