ಫೀಸ್ ಹೆಸರಲ್ಲಿ ಖಾಸಗಿ ಶಾಲೆಗಳು ಪೋಷಕರ ರಕ್ತಹೀರುತ್ತಿದ್ದರೂ ಸರ್ಕಾರ ಮೌನ: ಎಸ್.ಡಿ.ಪಿ.ಐ ಟೀಕೆ

Prasthutha: November 17, 2020

ಬೆಂಗಳೂರು: ಕೊರೋನಾ ಬಿಕ್ಕಟ್ಟಿನಿಂದ ಪೋಷಕರು ತೀವ್ರ ಸಂಕಷ್ಟದಲ್ಲಿರುವ ಹೊರತಾಗಿಯೂ ಖಾಸಗಿ ಶಾಲೆಗಳು ಶುಲ್ಕದ ಹೆಸರಿನಲ್ಲಿ ಪೋಷಕರ ರಕ್ತ ಹೀರುತ್ತಿದ್ದರೂ ಸರಕಾರ ಈ ಕುರಿತು ಮೌನವಹಿಸಿರುವುದನ್ನೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಟೀಕಿಸಿದೆ.

“ಕೊರೊನಾ ಸೋಂಕು-ಸಾವು  ದಿನನಿತ್ಯ ಹೆಚ್ಚುತ್ತಿದೆ. ಸಮಾಜದ ಆರೋಗ್ಯದ ಸ್ವಾಸ್ಥ್ಯ ಆತಂಕದಲ್ಲಿದೆ. ಶಾಲೆಗಳನ್ನು ಪ್ರಾರಂಭ ಮಾಡಬೇಕೆ; ಬೇಡವೇ ಎಂಬ ಸಂದಿಗ್ಧತೆಯಲ್ಲಿ ಸರ್ಕಾರವಿದೆ. ಈ ನಡುವೆ ಖಾಸಗಿ ಶಾಲೆಗಳು ಆನ್‍ಲೈನ್ ಶಿಕ್ಷಣ ನೆಪದಲ್ಲಿ ಪಾಲಕರನ್ನು ಶೋಷಿಸುವ ಕೆಲಸಕ್ಕೆ ಮುಂದಾಗಿವೆ. ರಾಜ್ಯದಲ್ಲಿರುವ ಬಹುತೇಕ ಶಿಕ್ಷಣ ಸಂಸ್ಥೆಗಳು ಈಗಾಗಲೇ ವಸೂಲಾತಿಗೆ ಇಳಿದಿವೆ. ಎಲ್ಲಾ ಪೋಷಕರಿಗೂ ವಾಟ್ಸಾಪ್, ಇ-ಮೇಲ್‍ಗಳ ಮೂಲಕ ಶುಲ್ಕ ವಿವರಗಳನ್ನು ರವಾನಿಸಿ ಆನ್‍ಲೈನ್‍ನಲ್ಲಿ ತರಗತಿಗಳು ಆರಂಭವಾಗಿವೆಶುಲ್ಕ ಪಾವತಿಸಿ ಆನ್‍ಲೈನ್ ಶಿಕ್ಷಣ ಪಡೆಯಿರಿ ಎಂಬ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಈಗಾಗಲೇ ಕೊರೊನಾ ಹೊಡೆತದಿಂದ ಇಡೀ ಸಮಾಜದ ಆರ್ಥಿಕ ವ್ಯವಸ್ಥೆ ಇನ್ನಿಲ್ಲದಂತೆ ಹದಗೆಟ್ಟಿದ್ದು, ಬಹುತೇಕ ಪೋಷಕರು ಶಾಲೆಗಳಿಗೆ ಶುಲ್ಕ, ಡೊನೇಷನ್‍ಗಳನ್ನು ಮಾಮೂಲಿನಂತೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚು ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರ ಖಾಸಗಿಯವರಿಗೆ ಕಟ್ಟಪ್ಪಣೆ ಮಾಡಿದೆ. ಆದರೆ, ಖಾಸಗಿಯವರು ಈ ಯಾವ ನಿಯಮವನ್ನು ಕಿವಿ ಮೇಲೆ ಹಾಕಿಕೊಳ್ಳದೆ ಶುಲ್ಕ ವಸೂಲಿಯೇ ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ದಿನಕ್ಕೊಂದು ನಿಯಮವನ್ನು ಮಾಡಿಕೊಂಡು ಪೋಷಕರಿಂದ ಸುಲಿಗೆಗೆ ಇಳಿದಿದ್ದಾರೆ” ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಟೀಕಿಸಿದ್ದಾರೆ.

“ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ಮೊಬೈಲ್‍ಗಳಿಗೆ ಸಂದೇಶಗಳು ರವಾನೆಯಾಗುತ್ತಿವೆ. ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಆದೇಶ ನೀಡಿಲ್ಲ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಆನ್‍ಲೈನ್ ನೆಪದಲ್ಲಿ ನಮ್ಮ ಬಳಿ ಹಣ ಪೀಕುವ ಕೆಲಸ ಮಾಡುತ್ತಿದ್ದಾರೆ  ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳವರು ಈಗಾಗಲೇ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶುಲ್ಕಗಳ ವಿವರ ರವಾನಿಸಿದ್ದು, ನಿಗದಿತ ಸಮಯವನ್ನು ಹೇರಿದೆ. ಅದರೊಳಗೆ ಶುಲ್ಕ ಪಾವತಿಸದಿದ್ದರೆ ದಂಡವನ್ನೂ ವಿಧಿಸುವುದಾಗಿ ಎಚ್ಚರಿಕೆ ಕೂಡ ನೀಡಿವೆ.ಆದರೆ, ಜನಸಾಮಾನ್ಯರು ಕೊರೊನಾದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆ ಬಹುತೇಕ ಮಧ್ಯಮ ವರ್ಗ ಹಾಗೂ ಬಡಜನರು ಅಕ್ಷರಶಃ ಆರ್ಥಿಕವಾಗಿ ಜರ್ಝರಿತರಾಗಿದ್ದಾರೆ. ಅನೇಕರು ಕೆಲಸ ಕಳೆದುಕೊಂಡು ಮನೆಯಲ್ಲೇ ಉಳಿಯುವಂತಾಗಿದೆ. ಬದುಕಿನ ಬಂಡಿ ಎಳೆಯುವುದೇ ಈ ವಿಷಮ ಪರಿಸ್ಥಿತಿಯಲ್ಲಿ ಅವರಿಗೆ ಕಠಿಣ ಸವಾಲೆನಿಸಿದೆ. ಪರಿಸ್ಥಿತಿ ಹೀಗಿರುವಾಗ ಖಾಸಗಿ ಶಾಲೆಗಳು ಮಧ್ಯಮ ಹಾಗೂ ಬಡ ಮಕ್ಕಳ ಪೋಷಕರ ಸ್ಥಿತಿಗೆ ಒಂದಿನಿತು ಕರುಣೆಯ ದೃಷ್ಟಿ ಬೀರುವ ಬದಲಿಗೆ ಅವರನ್ನು ಡೊನೇಷನ್ ನೆಪದಲ್ಲಿ ಮತ್ತಷ್ಟು ಹಿಂಡಿ ಹಿಪ್ಪೆ ಮಾಡುವ ಕೆಲಸಕ್ಕೆ ಕೈ ಹಾಕಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ” ಎಂದು ಅವರು ಟೀಕಿಸಿದ್ದಾರೆ.

“ಇಲ್ಲಿಯವರೆಗೆ ಖಾಸಗಿ ಶಾಲೆಗಳು ಕಟ್ಟಡ ಅಭಿವೃದ್ಧಿ ಶುಲ್ಕ, ಟ್ಯೂಷನ್, ಕ್ರೀಡೆ, ಸಾಂಸ್ಕತಿಕ ಚಟುವಟಿಕೆ, ಸಮವಸ್ತ್ರ, ಪುಸ್ತಕ ಎಂದೆಲ್ಲಾ ಶುಲ್ಕ ವಿಧಿಸುತ್ತಿದ್ದವು. ಇದೀಗ ಕೆಲ ಶಾಲೆಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆನ್‍ಲೈನ್ ತರಗತಿ ಶುಲ್ಕ, ಮಾಸ್ಕ್ ಶುಲ್ಕ, ಸ್ಯಾನಿಟೈಸರ್ ಎಂದು ಇನ್ನಷ್ಟು ಸುಲಿಗೆಗೆ ನಿಂತಿವೆ. ಖಾಸಗಿ ಶಾಲೆಗಳು ಆನ್‍ಲೈನ್ ತರಗತಿಗಳನ್ನೇನೋ ಆರಂಭಿಸಿವೆ. ಆದರೆ ಈ ತರಗತಿಗಳಲ್ಲಿ ಪಾಲ್ಗೊಳ್ಳಲು ಲ್ಯಾಪ್‍ಟ್ಯಾಪ್, ಸ್ಮಾರ್ಟ್ ಪೋನ್ ಬೇಕು. ಇವುಗಳ ಬೆಲೆಯೂ ಕಡಿಮೆಯೇನಲ್ಲ. ಮೊದಲೇ ಆರ್ಥಿಕ ಜರ್ಜರಿತಕ್ಕೆ ಒಳಗಾಗಿರುವ ಪೋಷಕರು ಹೆಚ್ಚುವರಿಯಾಗಿ ಲ್ಯಾಪ್‍ಟಾಪ್, ಸ್ಮಾರ್ಟ್‍ಪೋನ್ ಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವುದು ದುರಂತ” ಎಂದು ಅವರು ಹೇಳಿದ್ದಾರೆ.

“ಡಿಜಿಟಲ್ ಕಂಪನಿಗಳು ಇದನ್ನೇ ಬಂಡವಾಳವಾಗಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಆನ್‍ಲೈನ್ ಶಿಕ್ಷಣದ ಹಿಂದೆ ಡಿಜಿಟಲ್ ಪರಿಕರಗಳ ಮಾರ್ಕೆಟಿಂಗ್ ಪ್ರಭಾವವೂ ಇದೆ. ಬಹುತೇಕ ಖಾಸಗಿ ಶಾಲೆಗಳು ರಾಜಕಾರಣಿಗಳು ಹಾಗೂ ಪ್ರತಿಷ್ಠಿತರ ಟ್ರಸ್ಟ್ ಗಳ ವಾರಸುದಾರಿಕೆಯಲ್ಲಿಯೇ ಇವೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ, ಜನಸಾಮಾನ್ಯರಿಗೆ ಯಾವ ರೀತಿ ನೆರವಾಗುತ್ತದೆ. ಹೇಗೆ ಮಕ್ಕಳ ಭವಿಷ್ಯಕ್ಕೆ ಬೆಳಕಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ” ಎಂದು ಅಫ್ಸರ್ ಹೇಳಿದ್ದಾರೆ.

“ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿವರಗಳನ್ನು ನೋಡುವುದಾದರೆ; 19,596 ಖಾಸಗಿ ಶಾಲಾ ಮತ್ತು ಕಾಲೇಜುಗಳಿವೆ. 6800 ಅನುದಾನಿತ ಶಾಲೆಗಳಿದ್ದರೆ, 796 ಅನುದಾನಿತ ಕಾಲೇಜುಗಳಿವೆ. 1229 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, 5240 ಸರ್ಕಾರಿ ಪ್ರೌಢಶಾಲೆಗಳು, 44615 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು; ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅಜಗಜತರ ವ್ಯತ್ಯಾಸವಿದೆ. ಸರ್ಕಾರಿ ಶಾಲೆಗಳು ಅವ್ಯವಸ್ಥೆಯ ಆಗರವಾಗಿರುವ ಹಿನ್ನೆಲೆಯಲ್ಲಿ ಶ್ರೀಮಂತರು, ಮಧ್ಯಮ ವರ್ಗದ ಜನ ಖಾಸಗಿ ಶಾಲೆಗಳನ್ನೇ ಹೆಚ್ಚಾಗಿ ನಂಬಿದ್ದಾರೆ. ಉಳ್ಳವರು ಡೊನೇಷನ್, ಶುಲ್ಕ ಎಲ್ಲವನ್ನೂ ಅನಾಯಾಸವಾಗಿ ಕಟ್ಟುತ್ತಾರೆ. ಆದರೆ ಮಧ್ಯಮ ವರ್ಗದವರು ಶುಲ್ಕ ಪಾವತಿಗೆ ಹೆಣಗಾಡುವಾಗ ಈ ಹೆಚ್ಚುವರಿ ಶುಲ್ಕವನ್ನು ಅದರಲ್ಲೂ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಹೇಗೆ ತಾನೇ ಭರಿಸಲು ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ.

“ಈ ಸಂಕಷ್ಟದ ಅವಧಿಯಲ್ಲಿ ಪೋಷಕರು ಫೀಸು ಕಟ್ಟಲು ಹೆಣಗಾಡುತ್ತಿದ್ದು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಆದರೆ ವರ್ಗಾವಣೆ ಪತ್ರವನ್ನು ನೀಡದೇ ಸತಾಯಿಸುತ್ತಿರುವ ಶಿಕ್ಷಣ ಸಂಸ್ಥೆಗಳು ವರ್ಗಾವಣೆ ಪತ್ರಕ್ಕಾಗಿ ನಿರ್ದಿಷ್ಟ ಮೊತ್ತವನ್ನು ನಿಗದಿ ಪಡಿಸಿವೆ. ಆ ಮೊತ್ತವನ್ನು ಪಾವತಿಸಿದರೆ ಮಾತ್ರವೇ ವರ್ಗಾವಣೆ ಪತ್ರ ನೀಡಲಾಗುತ್ತದೆ. ತಪ್ಪಿದಲ್ಲಿ ಖಾಸಗಿಯವರು ಡೂನೇಷನ್ ಕೂಟ್ಟು ಅದೇ ಶಾಲೆಯಲ್ಲಿ ಓದಿಸಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಫೊಷಕರನ್ನು ಮನಬಂದಂತೆ ಸುಲಿಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಧಂದೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಚಿಂತಿಸುವರೇ” ಎಂದು ಅವರು ಪ್ರಶ್ನಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ