ಫಾತಿಮಾ ಲತೀಫ್ ಆತ್ಮಹತ್ಯೆ ಪ್ರಕರಣ: ನ್ಯಾಯಕ್ಕಾಗಿ ಆಗ್ರಹಿಸಿದ ತಮಿಳುನಾಡು  ಮುಸ್ಲಿಮ್ ವಿಮೆನ್ ಒಕ್ಕೂಟ

0
22

ಚೆನ್ನೈ: ಮದ್ರಾಸ್‌ನ ಐಐಟಿ ವಿದ್ಯಾರ್ಥಿನಿ ಫಾತಿಮಾ ಲತೀಫ್ ಆತ್ಮಹತ್ಯೆಗೆ ಕಾರಣವಾದ ಪರಿಸ್ಥಿತಿಯನ್ನು ತಮಿಳುನಾಡು ಮುಸ್ಲಿಮ್ ಮಹಿಳಾ ಒಕ್ಕೂಟ ಇತ್ತೀಚೆಗೆ ಖಂಡಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದೆ.

ನವೆಂಬರ್ 9ರಂದು ಫಾತಿಮಾರ ಮೃತದೇಹ ಆತ್ಮಹತ್ಯೆಗೈದಿರುವ ಸ್ಥಿತಿಯಲ್ಲಿ ಹಾಸ್ಟೆಲ್ ಕೋಣೆಯಲ್ಲಿ ಪತ್ತೆಯಾಗಿತ್ತು. ಜೊತೆಗೆ ಇರಿಸಲಾಗಿದ್ದ ಡೆತ್ ನೋಟ್‌ನಲ್ಲಿ ಮೂವರು ಅಧ್ಯಾಪಕರ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೆ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲ ಎಂದು ಹೆತ್ತವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟ ಅಧ್ಯಾಪಕರನ್ನು ತಕ್ಷಣ ಬಂಧಿಸಲು ಮತ್ತು ಅಮಾನತುಗೊಳಿಸಲು ಹಾಗೂ ತಮಿಳುನಾಡಿನ ಶಿಕ್ಷಣ ಸಂಸ್ಥೆಗಳಲ್ಲಿ ಅಸ್ತಿತ್ವದಲ್ಲಿರುವ ತಾರತಮ್ಯದ ರೂಢಿಯನ್ನು ಕೊನೆಗೊಳಿಸಬೇಕೆಂದು ಒಕ್ಕೂಟವು ಆಗ್ರಹಿಸಿದೆ.

ಫಾತಿಮಾ ಲತೀಫ್‌ರವರ ಆತ್ಮಹತ್ಯೆಯನ್ನು ಐಐಟಿ ಮದ್ರಾಸ್‌ನಲ್ಲಿ ನಡೆದ ‘‘ಸಾಂಸ್ಥಿಕ ಕೊಲೆ’’ಯ ಮತ್ತೊಂದು ಉದಾಹರಣೆಯಾಗಿದೆ ಎಂದು ಒಕ್ಕೂಟದ ಸಂಚಾಲಕಿ ಹಾಗೂ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರೂ ಆಗಿರುವ ಫಾತಿಮಾ ಮುಝಪ್ಫರ್ ಹೇಳಿದ್ದಾರೆ.

‘‘ಐಐಟಿ ಮದ್ರಾಸ್ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳ ಜೀವನವನ್ನು ನರಕವನ್ನಾಗಿ ಮಾಡುತ್ತಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಕ್ಯಾಂಪಸ್‌ನಲ್ಲಿ ನಡೆದ ಆರನೇ ಆತ್ಮಹತ್ಯೆ ಪ್ರಕರಣವಾಗಿದೆ. ಕಳೆದ 10 ವರ್ಷಗಳಲ್ಲಿ, ಈ ಸಂಸ್ಥೆಯಲ್ಲಿ 14 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ದೇಶದ ಎಲ್ಲಾ ಐಐಟಿಗಳಲ್ಲಿ ಅತಿ ಹೆಚ್ಚು’’ ಎಂದು ಅವರು ಹೇಳಿದ್ದಾರೆ.

 

 

LEAVE A REPLY

Please enter your comment!
Please enter your name here