ಪ್ರಶ್ನಿಸುವುದನ್ನು ಕಲಿಯಿರಿ

0
116

♦ ಮುಬಶ್ಶಿರ್

ಇಸ್ಲಾಮ್ ಪ್ರಶ್ನಿಸುವುದನ್ನು ಪ್ರೋತ್ಸಾಹಿಸುತ್ತದೆ. ಅನರ್ಹರಿಗೆ ಪೂಜೆ ಸಲ್ಲಿಸುವುದು, ಅವರನ್ನು  ಹೊಗಳುವುದು ಇಸ್ಲಾಮ್ ವಿರೋಧಿಸುತ್ತದೆ. ತೊಳೆದರೆ ನಮ್ಮ ದೇಹ ಸ್ವಚ್ಛವಾಗುವಂತೆ, ಆದರ್ಶಗಳ ಸಂಘರ್ಷ ಒಂದು ಸಮುದಾಯವನ್ನು ಸ್ವಚ್ಛಗೊಳಿಸುತ್ತದೆ. ಪ್ರಶ್ನಾತೀತ ವ್ಯಕ್ತಿ ಎಂದು ಯಾರನ್ನಾದರೂ ಪರಿಗಣಿಸಿದರೆ ಅದು ಆತನ ಪ್ರಭಾವವನ್ನು ಸಾರಿ ಹೇಳುತ್ತದೆ. ಅದರ ಜತೆಗೆ  ಅದು ಸಮುದಾಯವೊಂದರ ದೌರ್ಬಲ್ಯವನ್ನೂ  ಪ್ರತಿಬಿಂಬಿಸುತ್ತದೆ.

ತಪ್ಪುಗಳನ್ನು ತಿದ್ದಲು ಹಣ, ಅಂತಸ್ತು ಅಥವಾ ಪಾಂಡಿತ್ಯ ತಡೆಯಾಗಬಾರದು.  ಪ್ರತಿರೋಧದ ಧ್ವನಿಯು ನಿರ್ಲಕ್ಷಿಸಲ್ಪಟ್ಟ ವಿಚಾರದ ಪುನರ್ಜನ್ಮಕ್ಕೆ ಕಾರಣವಾಗುತ್ತದೆ.  ಪ್ರವಾದಿ ಇಬ್ರಾಹೀಂ (ಅ)ರ ಜೀವನ ಇದಕ್ಕೆ ಉತ್ತಮ ಉದಾಹರಣೆ. ತಾನು ಕಂಡ ತಪ್ಪನ್ನು ಪ್ರಶ್ನಿಸಿ ಅದನ್ನು ತಿದ್ದಲು ಮುಂದಾದಾಗ ಅವರ ಬದುಕು ಸಂಘರ್ಷಭರಿತವಾಯಿತು. ಅವರ ಈ ದೃಢ ನಿಲುವಿನ ಫಲವು ಅವರನ್ನು ಸಂಸ್ಕೃತಿಗಳ ಜನಕ, ಅಲ್ಲಾಹನ ಸ್ನೇಹಿತ,  ಸಮುದಾಯಕ್ಕೆ ಸಮಾನವಾದ ವ್ಯಕ್ತಿ ಎಂಬಿತ್ಯಾದಿ ಪ್ರಶಂಸೆಗಳಿಗೆ ಕಾರಣವಾಯಿತು. ತಾನು ಪ್ರಶ್ನಿಸುವುದು ಯಾರನ್ನೆಂದು ಅವರು ಪರಿಗಣಿಸಲಿಲ್ಲ. ಮನೆ ಮತ್ತು ದೇಶದಿಂದ ಅವರಿಗೆ  ಬಹಿಷ್ಕಾರ ಎದುರಾದರೂ ಅವರು ಅಧೀರರಾಗಲಿಲ್ಲ. ಅದು ಅವರ ಕಾರ್ಯವ್ಯಾಪ್ತಿಯನ್ನು ವಿಶಾಲಗೊಳಿಸಿತು. ಬಹಿಷ್ಕಾರಕ್ಕೊಳಗಾದ ಅವರು ನೂತನ  ಸಂಸ್ಕೃತಿಯ ಸ್ಥಾಪಕರಾದರು.

ಇಸ್ಲಾಮ್ ಸಾಗಿ ಬಂದ ಮಾರ್ಗ ಮತ್ತು ಅದು ಹೇಗೆ ಮುಂದುವರಿಯಬೇಕು ಎಂದು ಚರ್ಚಿಸಬೇಕಾದ ಅವಶ್ಯಕತೆ ಇಂದು ಇದೆ. ಏಕೆಂದರೆ, ಅಲ್ಲಾಹನು ತಿಳಿಸಿದ  ಮಾರ್ಗದಲ್ಲಿ ಇಸ್ಲಾಮ್ ಈಗ ಸಾಗುತ್ತಿದೆಯೇ ಎಂದು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಅಲ್ಲಾಹನ ಧರ್ಮವಾದ  ದೀನುಲ್ ಹಖ್ ಈಗ ಕಾಣುತ್ತಿರುವಂತೆ ಕೇವಲ ವೇಷಭೂಷಣಗಳಿಗೆ ಮಾತ್ರ ಸೀಮಿತವೇ?

ಇಸ್ಲಾಮಿನ ಆರಂಭ ಕಾಲದಲ್ಲೆ  ಕೆಲವರಲ್ಲಿ ಧರ್ಮನಿಷ್ಠೆಯ ಬಗ್ಗೆ ತಪ್ಪು ಚಿಂತನೆಗಳಿದ್ದವು. ಜೀವನ ವೈರಾಗ್ಯ, ಅತಿ ವಿನಯತೆ, ಅತಿ ಎನಿಸುವಷ್ಟು ಆರಾಧನೆ, ವಿಶೇಷ ಉಡುಪು ಹೀಗೆ   ಭಕ್ತಿಯ ಬಹಿರಂಗ ಪ್ರದರ್ಶನಗಳನ್ನು  ಜನರು ಸ್ವೀಕರಿಸಿದ್ದರು. ಪ್ರವಾದಿವರ್ಯರು(ಸ) ಮತ್ತು ಇಸ್ಲಾಮೀ ಅರಿವನ್ನು ಹೊಂದಿದ ಅವರ ಅನುಯಾಯಿಗಳು ಇಂತಹ ತಪ್ಪು ತಿಳುವಳಿಕೆಗಳನ್ನು ತಕ್ಷಣ ತಿದ್ದುತ್ತಿದ್ದರು.

ಪ್ರವಾದಿವರ್ಯರ(ಸ) ಜೀವನ ಶೈಲಿಯನ್ನು ಹತ್ತಿರದಿಂದ ತಿಳಿಯುವ ಉದ್ದೇಶದಿಂದ  ಮೂರು ಮಂದಿ ಪ್ರವಾದಿ(ಸ) ಮನೆಗೆ ಆಗಮಿಸಿದ್ದರು. ಆ ವೇಳೆ ಮನೆಯಲ್ಲಿ ಪ್ರವಾದಿವರ್ಯರು(ಸ) ಮನೆಯಲ್ಲಿರಲಿಲ್ಲ. ಅವರು ಮನೆಯವರಿಂದ ಪ್ರವಾದಿ(ಸ) ಜೀವನದ ಮಾಹಿತಿ ಪಡೆಯುತ್ತಾರೆ. ಆ ಬಳಿಕ ಅವರು ತಮ್ಮ ಮುಂದಿನ ಜೀವನದ ಕುರಿತಂತೆ ಒಂದು ನಿರ್ಧಾರವನ್ನು ತಾಳುತ್ತಾರೆ. ಒಂದನೇ ವ್ಯಕ್ತಿ: ನಾನು ಇನ್ನು ಮುಂದೆ ರಾತ್ರಿಯಿಡೀ ನಮಾಝ್‌ನಲ್ಲೆ ಕಳೆಯುವೆನು, ನಿದ್ರಿಸಲಾರೆ ಎಂದು ನಿರ್ಧಾರ ಕೈಗೊಳ್ಳುತ್ತಾನೆ. ಎರಡನೇ ವ್ಯಕ್ತಿ:  ಇನ್ನು ಮುಂದೆ ಹಗಲು ಸಂಪೂರ್ಣ ಉಪವಾಸದಲ್ಲಿ ಕಳೆಯುತ್ತೇನೆ, ಆಹಾರ ಸೇವಿಸಲಾರೆ ಎಂಬ ನಿರ್ಧಾರ ತಾಳುತ್ತಾನೆ. ಮೂರನೇ ವ್ಯಕ್ತಿ:  ಇನ್ನು ಮುಂದೆ ಸ್ತ್ರೀಯರ ಬಳಿ ಸುಳಿಯಲಾರೆ, ಮದುವೆಯಾಗಲಾರೆ ಎಂಬ ನಿರ್ಧಾರ ತಾಳುತ್ತಾರೆ.

ಸ್ವಲ್ಪ ಹೊತ್ತಿನ ಬಳಿಕ ಆಗಮಿಸಿದ ಪ್ರವಾದಿ(ಸ) ಅವರ ಈ ನಿರ್ಧಾರವನ್ನು ತಿಳಿಯುತ್ತಾರೆ. ತಕ್ಷಣ ಆ ಮೂವರನ್ನೂ ಕರೆದು ವಿಚಾರಿಸಿದ ಪ್ರವಾದಿ(ಸ) ಹೀಗೆ ಹೇಳುತ್ತಾರೆ:  ನೀವು ಈ ರೀತಿ ನಿರ್ಧರಿಸಿರುವುದಾಗಿ ನನಗೆ ತಿಳಿಯಿತು. ನಿಮಗೆ ಗೊತ್ತೇ, ನಿಮಗಿಂತ ಹೆಚ್ಚು ದೇವ ಭಯ ಮತ್ತು ಭಕ್ತಿಯಿರುವವನು ನಾನು. ನಾನು ಕೆಲ  ದಿನ ಉಪವಾಸ ಆಚರಿಸುವೆನು ಮತ್ತು  ಇನ್ನು ಕೆಲ ದಿನ ಉಪವಾಸ ತೊರೆಯುವೆನು. ರಾತ್ರಿ  ನಮಾಝ್ ನಿರ್ವಹಿಸುವೆನು ಮತ್ತು  ನಿದ್ರಿಸುವೆನು. ನಾನು ವಿವಾಹವಾಗಿರುವೆನು. ಆದುದರಿಂದ ನನ್ನ ಜೀವನ ಶೈಲಿಯನ್ನು ಯಾರು ನಿರಾಕರಿಸುವನೋ ಅವನು ನಮ್ಮವನಲ್ಲ.

ಇದರಿಂದ ನಮಗೆ ತಿಳಿಯುವುದೇನೆಂದರೆ, ಭಕ್ತಿಯ ಹೆಸರಿನಲ್ಲಿ ಮೇರೆ ಮೀರಿದರೆ ಅದಕ್ಕೂ ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲ.

ಇಸ್ಲಾಮಿನ ಸಹಜ ರೀತಿಯಿಂದ ಸಮುದಾಯವು ಹಿಂದೆ ಸರಿದು ಭಕ್ತಿಯ ಮಾರ್ಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಆದ್ದರಿಂದಲೇ ಪ್ರವಾದಿ(ಸ) ಮತ್ತು ಅನುಯಾಯಿಗಳು ಈ ಬಗ್ಗೆ ಕಠಿಣ ನಿಲುವನ್ನು ಕೈಗೊಂಡಿದ್ದರು.

ಇತ್ತೀಚೆಗೆ ಆಧ್ಯಾತ್ಮಿಕತೆಗೆ ಅತಿ ಪ್ರಾಮುಖ್ಯತೆ ನೀಡುವುದನ್ನು ಕಾಣಬಹುದು. ಇತರ ಧರ್ಮಗಳ ಪ್ರಭಾವವೂ ಇದಕ್ಕೆ ಕಾರಣವಿರಹುದು. ಮುಸ್ಲಿಮ್ ಪ್ರದೇಶಗಳಲ್ಲಿ ವಸಾಹತುಶಾಹಿ ಪ್ರಭುತ್ವ ಮೇಲುಗೈ ಸಾಧಿಸಿದಾಗ ಮುಸ್ಲಿಮರು ತಮ್ಮ ಧರ್ಮವನ್ನು ಕೆಲ ಆರಾಧನೆ ಮತ್ತು ಆಚರಣೆಗಳಿಗೆ ಸೀಮಿತಗೊಳಿಸಿದರು. ಆಗ ಇಸ್ಲಾಮ್ ವ್ಯಕ್ತಿ ಜೀವನಕ್ಕೆ ಸೀಮಿತಗೊಂಡಿತು ಮತ್ತು  ಕೇವಲ ಬೋಧನೆಯ  ಧರ್ಮವಾಗಿ ಬದಲಾಯಿತು. ವೇಷ ಭೂಷಣ ಮತ್ತು ಅತಿ ವಿನಯ ಧರ್ಮನಿಷ್ಠೆಯ ಬಾಹ್ಯ ರೂಪವೆಂದು  ಬಿಂಬಿಸಲಾಯಿತು. ಇಸ್ಲಾಂ ಬೋಧಿಸಿದ ಧರ್ಮನಿಷ್ಠೆ ಮತ್ತು ಅದರ ಇಂದಿನ ರೂಪದಲ್ಲಿ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು.

ಧಾರ್ಮಿಕತೆಯು, ನೀವು (ಆರಾಧನೆಗಾಗಿ) ನಿಮ್ಮ ಮುಖಗಳನ್ನು ಪೂರ್ವದೆಡೆಗೆ ತಿರುಗಿಸುವಿರೋ ಪಶ್ಚಿಮದೆಡೆಗೆ ತಿರುಗಿಸುವಿರೋ ಎಂಬುದರಲ್ಲಿಲ್ಲ. ನಿಜವಾಗಿ ಒಬ್ಬ ವ್ಯಕ್ತಿ ಅಲ್ಲಾಹನಲ್ಲಿ, ಪರಲೋಕದಲ್ಲಿ, ಮಲಗಳಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ನಂಬಿಕೆ ಇಟ್ಟು, ಅವನ ಪ್ರೀತಿಯನ್ನು ಸಂಪಾದಿಸಲಿಕ್ಕಾಗಿ ತನ್ನ ಸಂಪತ್ತನ್ನು ಬಂಧುಗಳು, ಅನಾಥರು, ಬಡವರು, ಪ್ರಯಾಣಿಕರು ಮತ್ತು ಯಾಚಕರಿಗಾಗಿ ಹಾಗೂ ದಾಸ್ಯದಲ್ಲಿರುವವರ ವಿಮೋಚನೆಗಾಗಿ ಖರ್ಚು ಮಾಡುತ್ತಾ, ನಮಾಝನ್ನು ಪಾಲಿಸುತ್ತಾ, ಝಕಾತ್ ಅನ್ನು ಪಾವತಿಸುತ್ತಾ ಇರುವುದು ಮತ್ತು ಕರಾರು ಮಾಡಿದ ಮೇಲೆ ತಮ್ಮ ಕರಾರಿನ ಪಾಲಕರಾಗಿರುವುದು ಹಾಗೂ ಸಂಕಷ್ಟದಲ್ಲೂ ಕಾಠಿಣ್ಯದಲ್ಲೂ ಹೋರಾಟದ ವೇಳೆಯೂ ಸಹನಶೀಲರಾಗಿರುವುದೇ ನಿಜವಾದ ಧಾರ್ಮಿಕತೆಯಾಗಿದೆ. ಅಂಥವರೇ ನಿಜವಾದ ಸತ್ಯವಂತರು ಮತ್ತು ಅಂಥವರೇ ನಿಜವಾದ ದೇವಭಕ್ತರು.(ಅಲ್ ಬಕರ-177)

ಒಳಿತು ಏನೆಂಬುದನ್ನು ಅಲ್ಲಾಹನು ಇಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾನೆ.  ವಿಶ್ವಾಸ ಸಂಬಂಧವಾದ ಮೂಲಭೂತ ವಿಷಯಗಳ ಪ್ರಸ್ತಾಪದ ಬಳಿಕ  ಆರ್ಥಿಕ ವ್ಯವಹಾರಗಳ ವಿವಿಧ ಭಾಗಗಳ ಬಗ್ಗೆ ವಿವರಿಸುತ್ತಾನೆ. ನಂತರ ನಮಾಝ್ ಮತ್ತು  ಆರ್ಥಿಕ ವಿಷಯಗಳು; ಆ ಬಳಿಕ  ಕರಾರು ಪಾಲನೆ,  ಕಠಿಣ ಸಾಮಾಜಿಕ ಸನ್ನಿವೇಶಗಳಲ್ಲಿ ಅಚಲತೆ, ಹೋರಾಟಗಳಲ್ಲಿ ದೃಢತೆಯ ಬಗ್ಗೆ ವಿವರಣೆ. ಇದು ಸತ್ಯವಂತರ ಮೂಲಭೂತ ಗುಣಗಳು. ತಖ್ವಾದ ಲಕ್ಷಣಗಳೂ ಇದೇ ಆಗಿದೆ. ಅಲ್ಲಾಹನ ನೈಜ ದಾಸನಾಗಿ ಜೀವಿಸುವುದು ಹೇಗೆಂದು ಕುರ್‌ಆನ್ ಹೀಗೆ ವಿವರಿಸುತ್ತದೆ:

ವಿಶ್ವಾಸಿಗಳೇ, ನೀವು ಸದಾ ಅಲ್ಲಾಹನಿಗಾಗಿ ನ್ಯಾಯದ ಪರ ಸಾಕ್ಷಿ ನಿಲ್ಲುವವರಾಗಿರಿ. ಒಂದು ಜನಾಂಗದ ಮೇಲಿನ ಹಗೆತನ ಕೂಡ, ನ್ಯಾಯ ಪಾಲಿಸದೆ ಇರಲು ನಿಮ್ಮನ್ನು ಪ್ರಚೋದಿಸಬಾರದು. ನೀವು ಸದಾ ನ್ಯಾಯವನ್ನೇ ಪಾಲಿಸಿರಿ. ಅದುವೇ ಧರ್ಮನಿಷ್ಠೆಗೆ ಹೆಚ್ಚು ನಿಕಟ ಧೋರಣೆಯಾಗಿದೆ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನಂತು, ನೀವು ಮಾಡುತ್ತಿರುವ ಎಲ್ಲವನ್ನೂ ಚೆನ್ನಾಗಿ ಅರಿತಿರುತ್ತಾನೆ. (ಮಾಇದ- 8)

ಸಮಾಜದಲ್ಲಿ ಧನಿಕ ಮತ್ತು ಬಡವನ ಮಧ್ಯೆ ಹೆಚ್ಚು ಅಂತರವುಂಟಾದರೆ ಅದು ವಿಶ್ವಾಸಿಯ ತಖ್ವಾದಲ್ಲಿ ತಳಮಳ ಉಂಟಾಗಬೇಕು. ಅದನ್ನು ಪ್ರಶ್ನಿಸಲು ಅವನು ಧೈರ್ಯ ತೋರಬೇಕು. ಕರಿಯ-ಬಿಳಿಯನೆಂಬ  ತಾರತಮ್ಯ, ಅಲ್ಪಸಂಖ್ಯಾತ-ಬಹುಸಂಖ್ಯಾತನೆಂಬ ತಾರತಮ್ಯ, ಸವರ್ಣ-ಅವರ್ಣನೆಂಬ ಭೇದಭಾವ ಮೊದಲಾದವುಗಳ ವಿರುದ್ಧ  ಹೋರಾಡಲು ತಖ್ವಾ ಹುರಿದುಂಬಿಸುತ್ತದೆ. ಇದು ಕೆಲ ಉದಾಹರಣೆಗಳಷ್ಟೇ. ಪ್ರಾಯೋಗಿಕ ಜೀವನದಲ್ಲಿ ತಖ್ವಾ ಎತ್ತಿ ಹಿಡಿಯಬೇಕಾದ ಹಲವಾರು ಉಲ್ಲೇಖಗಳು ಕುರ್‌ಆನಿನಲ್ಲಿವೆ. ಆದರೆ ಪ್ರಸಕ್ತ ಜಗತ್ತಿನಲ್ಲಿ ಇಸ್ಲಾಮೀ ಪಾಠಗಳ ರೂಪವೇ ಬದಲಾಗಿದೆ.

ನೀವು ನಿಮ್ಮ ಪಾವಿತ್ರದ ಕುರಿತು ಕೊಚ್ಚಿಕೊಳ್ಳಬೇಡಿ. ಧರ್ಮನಿಷ್ಠನು ಯಾರೆಂಬುದನ್ನು ಅವನು ಚೆನ್ನಾಗಿ ಬಲ್ಲನು. (ಅನ್ನಜ್ಮ್- 32)  ಎಂದು ಅಲ್ಲಾಹನು ತಿಳಿಸಿದ್ದಾನೆ.

LEAVE A REPLY

Please enter your comment!
Please enter your name here