ಪ್ರಶಾಂತ್ ಭೂಷಣ್ ಗೆ ‘ಸುಪ್ರೀಂ ದಂಡ’ | ಪ್ರಜಾಪ್ರಭುತ್ವದಲ್ಲಿ ವಿಮರ್ಶೆಗಳು ಅಪರಾಧವಾದಾಗ……..!

Prasthutha|

ಪ್ರಶಾಂತ್ ಭೂಷಣ್ ಗೆ ಒಂದು ರೂಪಾಯಿ ದಂಡ ವಿಧಿಸಿ, ಅವರ ಟ್ವೀಟ್ ನಿಜಕ್ಕೂ ನ್ಯಾಯಾಂಗ ನಿಂದನೆಯೇ ಎಂದು ಜನರು ಚರ್ಚಿಸಬೇಕಿದ್ದ ನೈಜ ವಿಚಾರಗಳಿಂದ ಜನರ ಗಮನ ಬೇರೆಡೆ ಸೆಳೆಯುವಲ್ಲಿ ಸುಪ್ರೀಂ ಕೋರ್ಟ್ ಯಶಸ್ವಿಯಾಗಿದೆ. ಒಂದೆಡೆ ನ್ಯಾಯಮೂರ್ತಿ ಕರ್ಣನ್ ಗೆ ಸಿಗದ ಎಲ್ಲಾ ‘ಸೌಲಭ್ಯ’ಗಳು ಪ್ರಶಾಂತ್ ಭೂಷಣ್ ಗೆ ಕೊಟ್ಟ ಸುಪ್ರೀಂ ಕೋರ್ಟ್, ಇನ್ನೊಂದೆಡೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ವಿಮರ್ಶೆಗಳನ್ನು ಅಪರಾಧವನ್ನಾಗಿಸಿದೆ. ಅಲ್ಮೇಡಾ ಗ್ಲಾಡ್ಸನ್ ಬರೆಯುತ್ತಾರೆ, ಮುಂದೆ ಓದಿ……

ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಚರ್ಚೆಯಾಗಬೇಕಾಗಿರುವುದು ‘ದಂಡ’ ಅಲ್ಲ ಬದಲಾಗಿ ಅವರನ್ನು ಅಪರಾಧಿ ಎಂದು ಘೋಷಿಸಿರುವುದು. ಸುಪ್ರೀಂ ಕೋರ್ಟ್ ಒಂದು ರುಪಾಯಿ ದಂಡ ಹಾಕಿ, ನಮ್ಮ ಗಮನ ಶಿಕ್ಷೆಯ ಪ್ರಮಾಣದ ಮೇಲೆ ಇರುವಂತೆ ನೋಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಆದರೆ ನನ್ನ ಪ್ರಕಾರ ಭೂಷಣ್ ಅವರನ್ನು ಅಪರಾಧಿಯೆಂದು ಘೋಷಿಸಿರುವುದು ಒಂದು ಎಚ್ಚರಿಕೆಯ ಗಂಟೆ. ಭೂಷಣ್ ಅವರು ಸುಪ್ರೀಂ ಕೋರ್ಟ್ ನ ವಕೀಲ ಆಗಿರುವ ಜೊತೆಗೆ ಅವರ ತಂದೆಯೂ ಬಹಳ ದೊಡ್ಡ ವ್ಯಕ್ತಿ, ದೇಶದ ಕಾನೂನು ಮಂತ್ರಿಯಾಗಿದ್ದವರು. ಹಾಗಾಗಿ ಅವರ ಅಂತಸ್ತು, ಜನಪ್ರಿಯತೆ ಹಾಗೂ ಬಹುಷ ಅವರ ಜಾತಿ ಇತ್ಯಾದಿಗಳನ್ನು ನೋಡಿಕೊಂಡು ಸುಪ್ರೀಂ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ‘ಒಂದು ರುಪಾಯಿಗೆ’ ಸೀಮಿತಗೊಳಿಸಿದೆ.

ಆದರೆ ಅವರ ಜಾಗದಲ್ಲಿ ಇನ್ಯಾರು ಸಾಮಾನ್ಯ ವ್ಯಕ್ತಿಯಿದ್ದಿದ್ದರೆ? ಈ ಮೂರ್ನಾಲ್ಕು ‘ತಾರೀಕು’ಗಳು, ವಿಷಾದ ವ್ಯಕ್ತಪಡಿಸಲು ಅವಕಾಶ, ಕನಿಷ್ಟ ದಂಡ, ಅದನ್ನು ಪಾವತಿಸಲೂ ಅವಕಾಶ…ಊಹುಂ! ಯಾವುದೂ ಆಗುತ್ತಿರಲಿಲ್ಲ. ಸಾಮಾನ್ಯರು ಬಿಡಿ ಜಾತಿ, ಅಂತಸ್ತು ಹಾಗೂ ಜನಪ್ರಿಯತೆಗಳ ಬಲವಿಲ್ಲದ ನ್ಯಾಯಮೂರ್ತಿ ಕರ್ಣನ್ ವಿಷಯದಲ್ಲೇ ನಾವು ಏನಾಗಿತ್ತು ಎಂದು ನೋಡಿದ್ದೇವೆ. ಹಾಗಾಗಿ ಒಂದು ರೂಪಾಯಿ ಶಿಕ್ಷೆ ಚರ್ಚೆಯ ವಿಷಯವಲ್ಲ. ಪ್ರಶಾಂತ್ ಭೂಷಣ್ ಸದ್ಯದ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ಎಂದು ಹೇಳುವ ಯಾವುದೇ ಉಲ್ಲಂಘನೆ ಮಾಡಿರಲಿಲ್ಲ. ಆದರೂ ಅವರನ್ನು ಅಪರಾಧಿಯನ್ನಾಗಿ ಮಾಡಿದೆ ಎಂದರೆ, ಸಾಮಾನ್ಯರಲ್ಲಿ ಸಾಮಾನ್ಯರಾದ ನಮ್ಮೆಲ್ಲರ ಮುಂದಿನ ದಿನಗಳ ಬಗ್ಗೆ ಒಮ್ಮೆ ಯೋಚಿಸೋಣ. ಈ ದೇಶದ ನ್ಯಾಯಾಂಗ ವ್ಯವಸ್ಥೆ ಜನಸಾಮಾನ್ಯರಿಗೆ ನೇರವಾದ ಸಂದೇಶವನ್ನು ಕೊಟ್ಟಿದೆ. ಅದೇನೆಂದರೆ ದೇಶದಲ್ಲಿ ಕಳೆದ ಕೆಲ ವರುಷಗಳಿಂದ ಉದ್ಭವವಾಗುತ್ತಿರುವ ದೇವರುಗಳಲ್ಲಿ ತಾವೂ ಇದ್ದೇವೆ, ಹಾಗಾಗಿ ದೇವರನ್ನು ಪ್ರಶ್ನಿಸುವುದು/ಟೀಕಿಸುವುದು ಸಲ್ಲ. ಒಂದೊಮ್ಮೆ ಈ ತುಂಡು-ದೇವರುಗಳನ್ನು ಪ್ರಶ್ನಿಸಿದರೆ/ಟೀಕಿಸಿದರೆ ನೀವು ಅಪರಾಧಿಗಳು. ಹಾಗಾಗಿ No questions and no criticism please!

- Advertisement -