ಪ್ರಶಾಂತ್ ಭೂಷಣ್ ಗೆ ನ್ಯಾಯಾಂಗ ನಿಂದನೆಗಾಗಿ ಶಿಕ್ಷಿಸದಿರಲು ಇರುವ 10 ಕಾರಣಗಳು

Prasthutha|

ನವದೆಹಲಿ : ದೇಶದ ನ್ಯಾಯಾಂಗ ವ್ಯವಸ್ಥೆಯ ಇತ್ತೀಚಿನ ವರ್ಷಗಳ ಅನುಮಾನಾಸ್ಪದ ನಡೆಗಳ ಬಗ್ಗೆ ಸಿಡಿದೆದ್ದಿರುವ ಹಿರಿಯ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ರನ್ನು ಅವರ ವಿವಾದಾತ್ಮಕ ಟ್ವೀಟ್ ಗಳಿಗಾಗಿ ದೋಷಿ ಎನ್ನಲಾಗದು ಮತ್ತು ಶಿಕ್ಷಿಸಲಾಗದು ಎಂದು ಮಾಜಿ ಕೇಂದ್ರ ಮಾಹಿತಿ ಆಯುಕ್ತ ಡಾ. ಎಂ. ಶ್ರೀಧರ್ ಆಚಾರ್ಯಲು ಅಭಿಪ್ರಾಯ ಪಟ್ಟಿದ್ದಾರೆ. ಭೂಷಣ್ ಅವರನ್ನು ಶಿಕ್ಷಿಸದಿರಲು ಇರುವ 10 ಕಾರಣಗಳನ್ನು ಅವರು ನೀಡಿದ್ದಾರೆ.  

  1. ಜೂ. 27ರ ಭೂಷಣ್ ಅವರ ಟ್ವೀಟ್ : ‘’ಯಾವುದೇ ಸಾಂಪ್ರದಾಯಿಕ ತುರ್ತು ಪರಿಸ್ಥಿತಿ ಘೋಷಿಸದೆಯೇ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ನಾಶಪಡಿಸಲಾಯಿತು ಎಂಬುದನ್ನು ಭವಿಷ್ಯದಲ್ಲಿ ಇತಿಹಾಸಕಾರರು ಕಳೆದ ಆರು ವರ್ಷಗಳ ಬಗ್ಗೆ ಗಮನ ಹರಿಸಲಿದ್ದಾರೆ. ಅದರಲ್ಲೂ ಮುಖ್ಯವಾಗಿ, ಈ ವಿನಾಶದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕಳೆದ ನಾಲ್ವರು ಸಿಜೆಐಗಳ ಪಾತ್ರದ ಬಗ್ಗೆ ಅವರು ಬೆಳಕು ಚೆಲ್ಲಲಿದ್ದಾರೆ’’   

ಸರಕಾರದಿಂದಾದ ಪ್ರಜಾಪ್ರಭುತ್ವ ನಾಶದ ಆರೋಪಗಳು ನ್ಯಾಯಾಂಗದ ವಿರುದ್ಧವಲ್ಲ. ಪ್ರಜಾಪ್ರಭುತ್ವದ ನಾಶದಲ್ಲಿ ಸುಪ್ರೀಂ ಕೋರ್ಟ್ ನ ಹಾಗೂ ಕಳೆದ ನಾಲ್ವರು ಸಿಜೆಐಗಳ ಪಾತ್ರದ ಬಗ್ಗೆ ಇತಿಹಾಸದಲ್ಲಿ ಗುರುತಿಸಲ್ಪಡುವ ಕುರಿತ ಹೇಳಿಕೆಯಿದೆ. ಆದರೆ, ಇದು ನೇರವಾದ ಆರೋಪವಲ್ಲ. ಭೂಷಣ್ ಪರೋಕ್ಷವಾಗಿ ಆಪಾದಿಸಿದ್ದಾರೆ. ಯಾವುದೇ ಸಿಜೆಐ ವಿರುದ್ಧ ನೇರವಾಗಿ, ನಿರ್ದಿಷ್ಟ ಆರೋಪ ಅವರು ಮಾಡಿಲ್ಲ.

- Advertisement -

ಇದರಲ್ಲಿ ಭ್ರಷ್ಟಾಚಾರದ ಆರೋಪವಿಲ್ಲ. ಇದು ತೀರಾ ಪ್ರತಿಕೂಲ ಮತ್ತು ಟೀಕಾತ್ಮಕ ಹೇಳಿಕೆ. ಸುಪ್ರೀಂ ಕೋರ್ಟ್ ನ ಪ್ರಮುಖ ಪಾತ್ರದ ಬಗ್ಗೆ ಇತಿಹಾಸ ಗುರುತಿಸುತ್ತದೆ ಎಂದು ಭೂಷಣ್ ಹೇಳಿಲ್ಲ. ಕಳೆದ ಆರು ವರ್ಷಗಳಲ್ಲಿ ನೀಡಲಾದ ತೀರ್ಪುಗಳಲ್ಲಿ, ನಾಲ್ಕು ಅಥವಾ ಐದು ತೀರ್ಪುಗಳು, ಪ್ರಜಾಸತ್ತಾತ್ಮಕ ಸಂಸ್ಥೆಗಳ ವಿರುದ್ಧ ಇದ್ದವು ಎಂಬ ಹೇಳಿಕೆಯನ್ನೂ ಅನುಚಿತವೆಂದು ಪರಿಗಣಿಸಲಾಗದು.

2. ಜೂ.29ರ ಎರಡನೇ ಟ್ವೀಟ್ ನಲ್ಲಿ ಭೂಷಣ್ ಸಿಜೆಐ ಬೊಬ್ಡೆ ವಿರುದ್ಧ ಟೀಕೆ ಮಾಡಿದ್ದರು. ಸಿಜೆಐ ಬೊಬ್ಡೆ ಅವರು ಹಾರ್ಲಿ ಡೇವಿಡ್ಸನ್ ಸೂಪರ್ ಬೈಕ್ ನಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸದೆ ಕುಳಿತಿದ್ದ ಫೋಟೊಗೆ ಸಂಬಂಧಿಸಿದ ಟ್ವೀಟ್ ಅದಾಗಿತ್ತು. ಸಿಜೆಐ ಅವರು ಕುಳಿತಿದ್ದ ದುಬಾರಿ ಬೈಕ್ ಬಿಜೆಪಿ ನಾಯಕರೊಬ್ಬರಿಗೆ ಸೇರಿದ್ದುದಾಗಿತ್ತು ಎಂದು ಅವರು ಆಪಾದಿಸಿದ್ದರು. ಲಾಕ್ ಡೌನ್ ಆಗಿರುವುದರಿಂದ ನಾಗರಿಕರಿಗೆ ನ್ಯಾಯವನ್ನು ಪಡೆಯುವ ಮೂಲಭೂತ ಹಕ್ಕನ್ನು  ‘ನಿರಾಕರಿಸುವ’ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ ಇದೆ ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿದ್ದರು. ಲಾಕ್ ಡೌನ್ ಇರುವುದರಿಂದ ನಾಗರಿಕರಿಗೆ ನ್ಯಾಯ ಪಡೆಯಲು ಅವಕಾಶವೇ ಇಲ್ಲ ಎಂಬರ್ಥದಲ್ಲಿ ಅವರು ಆಪಾದಿಸಿಲ್ಲ.

ಇದು ಬೇಡವಾಗಿತ್ತು ಎಂದು ಕೆಲವರು ಭಾವಿಸುತ್ತಾರಾದರೂ, ಇದೊಂದು ಅಸಮಂಜಸ ಹೇಳಿಕೆಯಾಗಬಹುದಿತ್ತು. ಆದರೆ, ಇಲ್ಲಿ ಮಾನನಷ್ಟವಾಗುವುದಿಲ್ಲ ಅಥವಾ ದ್ವೇಷ ಹರಡುವುದಿಲ್ಲವಾದುದರಿಂದ ಇದನ್ನು ಕ್ರಿಮಿನಲ್ ನಿಂದನೆ ಎಂದು ಪರಿಗಣಿಸಬೇಕಾಗಿರಲಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಸುಮಾರು 879 ವಿಚಾರಣೆಗಳನ್ನು ಮತ್ತು 12,748 ಅರ್ಜಿಗಳನ್ನು ಪರಿಶೀಲಿಸಿದ್ದುದಾಗಿ, ಭೂಷಣ್ ದೋಷಿ ಎಂದು ಪರಿಗಣಿಸಲಾದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಲಾಕ್ ಡೌನ್ ಅವಧಿಯಲ್ಲಿ ಇನ್ನೂ ಸಾವಿರಾರು ಮೂಲಭೂತ ಹಕ್ಕು ಪ್ರಕರಣಗಳ ಅರ್ಜಿಗಳು ಇನ್ನೂ ವಿಚಾರಣೆಗೆ ಬಾಕಿಯಿರುವುದರಿಂದ, ಭೂಷಣ್ ರ ಟ್ವೀಟ್ ತಪ್ಪಾಗುವುದಿಲ್ಲ. ಇದರಲ್ಲಿ ನ್ಯಾಯಾಂಗದ ಘನತೆ ಕುಗ್ಗಿಸುವುದಾಗಲೀ, ನಿಂದನೆಯಾಗಲಿ ಇಲ್ಲ.

ಕೆಳಗಿನ ಕಾನೂನುಬದ್ಧ ಕಾರಣಗಳಿಂದಾಗಿ ಪ್ರಶಾಂತ್ ಭೂಷಣ್ ರನ್ನು ದೋಷಿ ಎನ್ನಲಾಗುವುದಿಲ್ಲ ಮತ್ತು ಶಿಕ್ಷಿಸಲಾಗುವುದಿಲ್ಲ :

3. ಸುಧಾರಣೆ ಮತ್ತು ವಿಚಾರಣೆಯ ಮನಸ್ಥಿತಿ ಬೆಳೆಸಿಕೊಳ್ಳುವ ಕರ್ತವ್ಯ : ನಾಗರಿಕರ ವಿಚಾರಣೆಯ ಮನಸ್ಥಿತಿಯನ್ನು ಸಾಂವಿಧಾನಿಕ ಸಂಸ್ಥೆಗಳು, ಮುಖ್ಯವಾಗಿ ನ್ಯಾಯಾಂಗ ರಕ್ಷಿಸಬೇಕು. ಯಾಕೆಂದರೆ, ಸಂವಿಧಾನದ ಪರಿಚ್ಛೇದ 51ಎ(ಎಚ್)ರ ಪ್ರಕಾರ, ಪ್ರತಿಯೊಬ್ಬ ನಾಗರಿಕನು ವೈಜ್ಞಾನಿಕ ಚಿಂತನೆ, ಮಾನವೀಯತೆ ಮತ್ತು ತನಿಖೆ ಹಾಗೂ ಸುಧಾರಣೆಯ ಮನಸ್ಥಿತಿಯನ್ನು ಅಭಿವೃದ್ಧಿ ಪಡಿಸುವ ಕರ್ತವ್ಯವನ್ನು ಹೊಂದಿದ್ದಾನೆ. ಪ್ರತಿಯೊಂದು ಟೀಕಾತ್ಮಕ ವಿಮರ್ಶೆಗಳನ್ನು ದೋಷಿಯಾಗಿಸಿ, ಶಿಕ್ಷೆಗೆ ಗುರಿಪಡಿಸಿದರೆ, ನಾಗರಿಕರು ಈ ಕರ್ತವ್ಯವನ್ನು ನಿಭಾಯಿಸುವುದು ಹೇಗೆ?

4. ಅಭಿವ್ಯಕ್ತಿ ಸ್ವಾತಂತ್ರ್ಯ : ಶಾಸಕಾಂಗ ಮತ್ತು ಕಾರ್ಯಾಂಗಗಳ ಒತ್ತಡದಿಂದ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲ್ಪಟ್ಟರೆ, ಸುಪ್ರೀಂ ಕೋರ್ಟ್ ಅಂತಹ ನಾಗರಿಕರ ಸಹಾಯಕ್ಕೆ ಬರುತ್ತದೆ. ಅಂತಹುದರಲ್ಲಿ, ನ್ಯಾಯಾಂಗದ ಟೀಕಾಕಾರರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿಯೂ ಕೋರ್ಟ್ ಇದೇ ರೀತಿ ಬೆಂಬಲಿಸಬೇಕಿದೆ.

5. ನ್ಯಾಯೋಚಿತ ಟೀಕೆ ನಿಂದನೆಯಾಗುವುದಿಲ್ಲ : ನ್ಯಾಯಾಂಗ ನಿಂದನೆ ಕಾಯ್ದೆ 1971ರ ಕಲಂ 5ರ ಪ್ರಕಾರ, ನ್ಯಾಯಾಂಗದ ನ್ಯಾಯೋಚಿತ ಟೀಕೆ ನಿಂದನೆಯಾಗುವುದಿಲ್ಲ. ವಿಚಾರಣೆ ನಡೆಸಿ, ಅಂತಿಮವಾಗಿ ನಿರ್ಧಾರಿತವಾದ ಯಾವುದೇ ಪ್ರಕರಣದ ಅಂಶಗಳ ಆಧಾರದಲ್ಲಿ ನ್ಯಾಯೋಚಿತ ಟೀಕೆ ಪ್ರಕಟಿಸಿದರೆ, ವ್ಯಕ್ತಿಯನ್ನು ನ್ಯಾಯಾಂಗ ನಿಂದನೆಯ ಆಪಾದನೆಯಲ್ಲಿ ದೋಷಿ ಎಂದು ಪರಿಗಣಿಸಲಾಗದು. ಈ ಕಲಂ ಸಂವಿಧಾನದ ಪರಿಚ್ಛೇದ 19(1)(ಎ)ಯೊಂದಿಗೆ ಸಂಬಂಧಿತವಾಗಿದೆ. ಯಾವುದಾದರೂ ಸಂಶಯವಿದ್ದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಸಂವಿಧಾನದ ಪೀಠಿಕೆಯನ್ನು ಓದಬಹುದು.

6. ಪ್ರಕರಣದ ಅಂಶಗಳ ಕುರಿತ ಹೇಳಿಕೆ : ಮಾನನಷ್ಟ ಅಪರಾಧ ಕುರಿತ ಐಪಿಸಿ ಕಲಂ 499ರ ಐದನೇ ಅಪವಾದ ಹೀಗೆ ಹೇಳುತ್ತದೆ : ಪ್ರಕರಣದ ಅಂಶಗಳನ್ನು ಕೋರ್ಟ್ ನಲ್ಲಿ ಸಾಕ್ಷಿದಾರರು ಮತ್ತು ಸಂಬಂಧಪಟ್ಟ ಇತರರನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಕೋರ್ಟ್ ನಿಂದ ನಿರ್ಧರಿಸಲಾದ ಪ್ರಕರಣದ ಅಂಶಗಳ ಕುರಿತು ಯಾವುದೇ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಲ್ಲಿ, ಅದು ನಿಂದನೆಯಾಗುವುದಿಲ್ಲ. ಯಾವುದಾದರೂ ಟೀಕೆ, ತೀರ್ಪಿನ ಅಂಶಗಳಿಗೆ ಪ್ರತಿಕೂಲವಾದರೂ, ಅದನ್ನು ಕ್ರಿಮಿನಲ್ ನಿಂದನೆ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಯಾವ ಹೇಳಿಕೆ ಕ್ರಿಮಿನಲ್ ನಿಂದನೆಯಾಗುತ್ತದೆ ಎಂದು ನಿರ್ಧರಿಸುವುದು ಅತ್ಯಂತ ಕಷ್ಟದಾಯಕವಾದುದು.

7. ಮಧ್ಯಪ್ರವೇಶಿಕೆ : ನ್ಯಾಯಾಂಗ ನಿಂದನೆ ಕಾಯ್ದೆಯ ಕಲಂ 13ರಲ್ಲಿ ಮತ್ತೊಂದು ನ್ಯಾಯೋಚಿತ ನಿಯಮವಿದೆ. ಅದರ ಪ್ರಕಾರ, ಕೆಲವೊಂದು ಹೇಳಿಕೆಗಳಿಗೆ ಅಗತ್ಯವಾಗಿ, ಮಧ್ಯಪ್ರವೇಶಿಕೆಯಿಲ್ಲದಿದ್ದರೆ, ಅದಕ್ಕಾಗಿ ಶಿಕ್ಷೆ ವಿಧಿಸಲಾಗುವುದಿಲ್ಲ.

ಕಲಂ 13(ಎ) ಪ್ರಕಾರ, ನ್ಯಾಯದಾನದ ಪ್ರಕ್ರಿಯೆ ಮುಗಿದ ಬಳಿಕ ಅಗತ್ಯವಾದ ಮಧ್ಯಪ್ರವೇಶಿಕೆಯಿದೆ ಅಥವಾ ಮಧ್ಯಪ್ರವೇಶಿಕೆಯಾಗುವ ಸಾಧ್ಯತೆಯಿದೆ ಎಂದು ಬಲವಾಗಿ ಅನಿಸದಿದ್ದಲ್ಲಿ, ಈ ಕಾಯ್ದೆಯಡಿ ನ್ಯಾಯಾಂಗ ನಿಂದನೆಗೆ ಕೋರ್ಟ್ ಶಿಕ್ಷೆ ವಿಧಿಸುವಂತಿಲ್ಲ.

8. ಹೇಳಿಕೆಯ ಸತ್ಯ : ನ್ಯಾಯಾಂಗ ನಿಂದನೆ ಕಾಯ್ದೆಗೆ 2006ರಲ್ಲಿ ನಡೆಸಲಾದ ತಿದ್ದುಪಡಿಯ  13(ಬಿ) ಪ್ರಕಾರ, ನ್ಯಾಯಾಂಗ ನಿಂದನೆಗೆ ಕೋರ್ಟ್ ಯಾವುದೇ ಪ್ರಕ್ರಿಯೆಗೆ ಅನುಮತಿ ನೀಡಬಹುದು. ಸಾರ್ವಜನಿಕ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ತೃಪ್ತಿಯಾದರೆ, ಪ್ರತಿವಾದ ನಂಬಲರ್ಹವಾದರೆ, ಇದನ್ನು ಜಾರಿಗೊಳಿಸಬಹುದು. ಯಾವುದೇ ಮಾಧ್ಯಮದಿಂದ ಸತ್ಯವನ್ನು ಪ್ರಸಾರ ಮಾಡಿದುದರಿಂದ ತಮ್ಮ ಘನತೆಗೆ  ಧಕ್ಕೆಯಾಯಿತೆಂದು ನ್ಯಾಯಮೂರ್ತಿಗಳು ಭಾವಿಸಿದರೆ, ಅದು ನ್ಯಾಯಾಂಗ ನಿಂದನೆ ಎಂದು ಶಿಕ್ಷಿಸಲಾಗುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಸತ್ಯವನ್ನು ಬಹಿರಂಗ ಪಡಿಸುವವರಿಗೆ ಸಾರ್ವಜನಿಕ ಹಿತಾಸಕ್ತಿ ಎಂಬುದು ಪ್ರಮುಖ ರಕ್ಷಣಾ ಅಂಶವಾಗುತ್ತದೆ. ಅದು ನ್ಯಾಯಾಧೀಶರುಗಳಿಗೆ ಮುಜುಗರವನ್ನುಂಟು ಮಾಡುತ್ತಿದ್ದರೂ, ಪರವಾಗಿಲ್ಲ.

9. ಕ್ಷಮೆ : ಕಲಂ 12ರ ಪ್ರಕಾರ, ನ್ಯಾಯಾಂಗ ನಿಂದನೆಗೆ ಗರಿಷ್ಠ 6 ತಿಂಗಳು ಸಾಧಾರಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಅಥವಾ ರೂ. 2000 ವರೆಗೆ ದಂಡ ವಿಧಿಸಬಹುದು ಅಥವಾ ಅವೆರಡನ್ನೂ ವಿಧಿಸಬಹುದು. ಅಲ್ಲದೆ, ಕೋರ್ಟ್ ಗೆ ಸಮಾಧಾನಕರವೆನಿಸುವ ರೀತಿಯ ಕ್ಷಮಾಪಣೆ ಮಾಡಿದಲ್ಲಿ, ಆರೋಪಿಯ ದೋಷಿತನವನ್ನು ಕೈಬಿಡಬಹುದು.

ಆರೋಪಿಯು ಕ್ಷಮಾಪಣೆ ಮಾಡಿದಾಗ, ಅದು ಷರತ್ತುಬದ್ಧವಾಗಿದೆ ಎಂಬ ಆಧಾರದಲ್ಲಿ ಅದನ್ನು ಸುಲಭವಾಗಿ ನಿರಾಕರಿಸುವಂತಿಲ್ಲ. ನಂಬಿಕೆಗೆ ಅರ್ಹವಾದ ಕ್ಷಮಾಪಣೆ ಆರೋಪಿ ಮಾಡಿದ್ದಲ್ಲಿ, ಕ್ಷಮಾಪಣೆಯನ್ನು ನಿರಾಕರಿಸುವಂತಿಲ್ಲ. ಇವು ಕೋರ್ಟ್ ಗೆ ಇರುವ ಶಿಕ್ಷಿಸುವ ಅಥವಾ ಸಮದೂಗಿಸುವ ಅಧಿಕಾರ. ಇದನ್ನು ನಿರಂಕುಶವಾಗಿ ಜಾರಿಗೊಳಿಸುವಂತಿಲ್ಲ. ಅದು ಭಾರತದ ಸಂವಿಧಾನಕ್ಕೆ ವಿರುದ್ಧವಾಗುತ್ತದೆ.

10 ಪಿಎನ್ ದುದಾ ವರ್ಸಸ್ ಪಿ. ಶಿವಶಂಕರ್ 1987ರ ಪ್ರಕರಣದ ತೀರ್ಪಿನಲ್ಲಿ, ಶಿವಶಂಕರ್ ರ ಹೇಳಿಕೆ ನ್ಯಾಯಾಂಗ ನಿಂದನೆ ಅನಿಸಲಿಲ್ಲ. ಸುಪ್ರೀಂ ಕೋರ್ಟ್ ಶ್ರೀಮಂತರ ಪರವಾಗಿದೆ ಮತ್ತು ಬಡವರ ವಿರುದ್ಧವಾಗಿದೆ ಎಂಬ ಶಿವಶಂಕರ್ ಹೇಳಿಕೆಯನ್ನು ತಪ್ಪು ಎನ್ನಲಾಗಲಿಲ್ಲ. ಇದು ಸುಪ್ರೀಂ ಕೋರ್ಟ್ ಘೋಷಿಸಿದ ನೆಲದ ಕಾನೂನಾಗಿ ಉಳಿದಿದೆ. ಶಿವಶಂಕರ್ ಪ್ರಕರಣದಂತೆ ತಮ್ಮದೂ ನ್ಯಾಯಾಂಗ ನಿಂದನೆಯಾಗುವುದಿಲ್ಲ ಎಂಬ ಭಾವನೆಯಿಂದ ಪ್ರಶಾಂತ್ ಭೂಷಣ್ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಭೂಷಣ್ ಅವರು ಸಂವಿಧಾನದ ಪರಿಚ್ಛೇದ 20(1)ರನ್ವಯ ರಕ್ಷಿಸಲ್ಪಟ್ಟಿದ್ದಾರೆ. ಅದು ವಾಸ್ತವಿಕ ಕಾನೂನಿನಿಂದ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ.

- Advertisement -