ಪ್ರಶಾಂತ್ ಭೂಷಣ್ ಕೇಸ್ | ಸುಪ್ರೀಂ ಕೋರ್ಟ್ ಗೆ 1500ಕ್ಕೂ ಅಧಿಕ ನ್ಯಾಯವಾದಿಗಳ ಮನವಿ

Prasthutha|

ನವದೆಹಲಿ : ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ದೇಶಾದ್ಯಂತದ ಸುಮಾರು 1,500ಕ್ಕೂ ಅಧಿಕ ನ್ಯಾಯವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನ್ಯಾಯದ ತಪ್ಪು ವಿಲೇವಾರಿಯನ್ನು ತಪ್ಪಿಸುವ ಸಲುವಾಗಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನ್ಯಾಯಾಂಗ ನಿಂದನೆಯ ಭೀತಿಯಲ್ಲಿ ಮೌನಗೊಳಿಸುವುದು ಸ್ವಾತಂತ್ರ್ಯವನ್ನು ನಿರ್ಲಕ್ಷಿಸಿದಂತೆ ಎಂದು ನ್ಯಾಯವಾದಿಗಳ ಗುಂಪು ಪ್ರತಿಪಾದಿಸಿದೆ. ಹಲವಾರು ಹಿರಿಯ ನ್ಯಾಯವಾದಿಗಳ ಸಹಿತ 1500ಕ್ಕೂ ಹೆಚ್ಚು ನ್ಯಾಯವಾದಿಗಳು ಹೇಳಿಕೆಯೊಂದರಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.

- Advertisement -

ಶ್ರೀರಾಮ್ ಪಾಂಚು, ಅರವಿಂದ ದಾತಾರ್, ಶ್ಯಾಮ್ ದಿವಾನ್, ಮೇನಕಾ ಗುರುಸ್ವಾಮಿ, ರಾಜು ರಾಮಚಂದ್ರನ್, ಬಿಸ್ವಜೀತ್ ಭಟ್ಟಾಚಾರ್ಯ, ನವರೋಜ್ ಸೀರ್ವಾಯಿ, ಜನಕ್ ದ್ವಾರಕಾದಾಸ್, ಇಕ್ಬಾಲ್ ಚಗ್ಲಾ, ಡೇರಿಯಸ್ ಖಂಬಟ, ವೃಂದಾ ಗ್ರೋವರ್, ಮಿಹಿರ್ ದೇಸಾಯಿ, ಕಾಮಿನಿ ಜೈಸ್ವಾಲ್, ಕರುಣಾ ನುಂಡಿ ಮುಂತಾದ ಹಲವು ಪ್ರಮುಖರು ಹೇಳಿಕೆಗೆ ಸಹಿ ಮಾಡಿದ್ದಾರೆ.

ಈ ತೀರ್ಪು ಸಾರ್ವಜನಿಕರ ದೃಷ್ಟಿಯಲ್ಲಿ ಕೋರ್ಟಿನ ಅಧಿಕಾರವನ್ನು ಮರುಸ್ಥಾಪಿಸಿದಂತಿಲ್ಲ. ಬದಲಿಗೆ, ಇದು ನ್ಯಾಯವಾದಿಗಳು ಹೊರಗೆ ಮಾತನಾಡುವುದಕ್ಕೆ ಹಿಂಜರಿಯುವಂತೆ ಮಾಡುವಂತಿದೆ. ಆರಂಭದಿಂದಲೂ ನ್ಯಾಯಾಂಗದ ಸ್ವತಂತ್ರತೆಯ ಪರವಾಗಿ ನಿಂತಿದ್ದು ನ್ಯಾಯವಾದಿಗಳು. ಅವರನ್ನೇ ಮೌನವಾಗಿಸಿದರೆ, ಪ್ರಬಲ ಕೋರ್ಟ್ ಮುನ್ನಡೆಯಲು ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ಅಭಿಪ್ರಾಯಪಡಲಾಗಿದೆ.

ಕೊರೋನ ಸಂಕಷ್ಟ ಮುಗಿದ ಬಳಿಕ ಈ ಪ್ರಕರಣದ ಬಗ್ಗೆ ಉನ್ನತ ಪೀಠದ ಮುಂದೆ ಮುಕ್ತ ವಿಚಾರಣೆ ನಡೆಯಲಿ.
ಲಾಕ್ ಡೌನ್ ಸಂದರ್ಭ ಪ್ರಶಾಂತ್ ಭೂಷಣ್ ಪೋಸ್ಟ್ ಮಾಡಿರುವ ಎರಡು ಟ್ವೀಟ್ ಗಳ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಘೋಷಣೆ ಆ.20ಕ್ಕೆ ನಿಗದಿಪಡಿಸಲಾಗಿದೆ. ಸಿಜೆಐಯೊಬ್ಬರು ಬಿಜೆಪಿ ನಾಯಕರೊಬ್ಬರ ದುಬಾರಿ ಬೈಕ್ ನಲ್ಲಿ ಸವಾರಿ ಮಾಡಿದ್ದ ಬಗ್ಗೆ ಟ್ವೀಟ್ ಮಾಡಿದ್ದ ಭೂಷಣ್, ಇತ್ತೀಚೆಗಿನ ಕೆಲವು ಸಿಜೆಐಗಳ ಕುರಿತು ಆಕ್ಷೇಪಕಾರಿ ಟ್ವೀಟ್ ಪೋಸ್ಟ್ ಮಾಡಿದ್ದರು.

- Advertisement -