ಪ್ರಭುತ್ವ ಒಲ್ಲದ ಅಸಹಮತಿ

0
59

ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಮಾತನಾಡುವುದು, ದೇಶದಲ್ಲಿನ ಅರಾಜಕತೆಯ ಕುರಿತು ಆತಂಕ ವ್ಯಕ್ತಪಡಿಸಿ ಅದನ್ನು ಪ್ರಭುತ್ವದ ಗಮನಕ್ಕೆ ತರುವುದು, ನಾಗರಿಕರ ಹಕ್ಕಿನ ಕುರಿತು ಧ್ವನಿ ಎತ್ತುವುದು ಮೊದಲಾದ ಜನಪರ-ಜೀವಪರ ಸಂವೇದನೆಗಳಿಗೆ ಧ್ವನಿಯಾಗುವುದು ಪ್ರಸಕ್ತ ಬಿಜೆಪಿ ಸರಕಾರಕ್ಕೆ ಸಹ್ಯವಲ್ಲ. ಇದರ ಭಾಗವಾಗಿಯೇ, ಪ್ರಧಾನಿಗೆ ಪತ್ರ ಬರೆದ ಕಾರಣಕ್ಕಾಗಿ ದೇಶದ 49 ಮಂದಿ ಗಣ್ಯ ನಾಗರಿಕರ ಮೇಲೆ ದೇಶದ್ರೋಹದ ಕಾನೂನು ಮತ್ತು ಇತರ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಇದರಲ್ಲಿ ರಾಮಚಂದ್ರ ಗುಹಾ, ಶ್ಯಾಮ್ ಬೆನೆಗಲ್, ಅಡೂರ್ ಗೋಪಾಲಕೃಷ್ಣನ್, ಅಪರ್ಣಾ ಸೇನ್ ಮೊದಲಾದ ಗಣ್ಯವ್ಯಕ್ತಿಗಳು ಸೇರಿದಂತೆ ಚಲನಚಿತ್ರ ತಾರೆಯರು, ಲೇಖಕರು, ಇತಿಹಾಸಕಾರರು ಒಳಗೊಂಡಿದ್ದಾರೆ ಎಂಬುದು ಗಮನಾರ್ಹ.

ದೇಶದಲ್ಲಿ ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳು, ಗುಂಪುಹತ್ಯೆ ಘಟನೆಗಳ ಹೆಚ್ಚಳ ಮತ್ತು ಜೈಶ್ರೀರಾಮ್ ಘೋಷಣೆಯನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಮ್ ಸಮುದಾಯವನ್ನು ಭಯಭೀತಗೊಳಿಸುವುದ ವಿಚಾರದ ಕುರಿತ ಕಳವಳ ವ್ಯಕ್ತಪಡಿಸುತ್ತಾ ಪ್ರಧಾನಿಯ ಗಮನ ಸೆಳೆಯಲು ಪತ್ರವನ್ನು ಬರೆಯಲಾಗಿತ್ತು. ಈ ಪತ್ರವು ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಘಟನೆಗಳು ಮತ್ತು ಅಧಿಕೃತ ಅಂಕಿಅಂಶಗಳ ಆಧಾರದಲ್ಲಿ ರಚಿಸಲಾಗಿತ್ತು ಎಂಬುದನ್ನು ಗಮನಿಸಬೇಕಾಗಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ಪ್ರಕಾರ, ಕಳೆದ ವರ್ಷಗಳಿಗೆ ಹೋಲಿಸಿದರೆ 2016ರಲ್ಲಿ ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳ ಹೆಚ್ಚಳ ವೇಗವನ್ನು ಕಂಡಿದೆ ಮತ್ತು ಆರೋಪಿಗಳು ಶಿಕ್ಷೆಗೊಳಗಾಗಿರುವ ಪ್ರಮಾಣ ಕಡಿಮೆಯಾಗಿದೆ. ಸಿಟಿಝನ್ಸ್ ರಿಲೀಜಿಯನ್ಸ್ ಆ್ಯಂಡ್ ಹೇಟ್ ಕ್ರೈಂ ವಾಟ್‌ನ ಅಂಕಿಅಂಶಗಳ ಪ್ರಕಾರ, ಕಳೆದ 9 ವರ್ಷಗಳಲ್ಲಿ ಗುಂಪುಹತ್ಯೆಯ ಘಟನೆಗಳಲ್ಲಿ ಶೇ.90ರಷ್ಟು ಘಟನೆಗಳು 2014ರ ನಂತರ ನಡೆದಿವೆ. ಈ ಘಟನೆಗಳ ಬಲಿಪಶುಗಳಲ್ಲಿ ಮುಸ್ಲಿಮರ ಪ್ರಮಾಣ ಶೇ.62 ಮತ್ತು ಕ್ರೈಸ್ತರ ಪ್ರಮಾಣ ಶೇ.12 ಆಗಿತ್ತು. ಮುಸ್ಲಿಮರು ದೇಶದ ಜನಸಂಖ್ಯೆಯ ಶೇ.14.23ರಷ್ಟಿದ್ದಾರೆ ಮತ್ತು ಕ್ರೈಸ್ತರು ಶೇ.2.30ರಷ್ಟಿದ್ದಾರೆ. ಜೈ ಶ್ರೀರಾಮ್ ಘೋಷಣೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಗಣ್ಯ ವ್ಯಕ್ತಿಗಳು, ಈ ಮೊದಲು ಜೈ ರಾಮ್, ಜೈ ಸಿಯಾರಾಮ್ ಮತ್ತು ರಾಮ್ ರಾಮ್ ಮೊದಲಾದವುಗಳನ್ನು ಶುಭಾಶಯ ವಿನಿಮಯಕ್ಕೆ ಬಳಸಲಾಗುತ್ತಿತ್ತು. ಆದರೆ ಇದೀಗ ಜೈ ಶ್ರೀ ರಾಮ್ ಅನ್ನು ಜನರನ್ನು ಅವಮಾನಪಡಿಸಲು ಬಳಸಲಾಗುತ್ತಿದೆ. ಲೋಕಸಭೆಯಲ್ಲಿ ಮುಸ್ಲಿಮ್ ಸಂಸದರು ಮತ್ತು ಟಿಎಂಸಿ ಸಂಸದರ ಪ್ರಮಾಣ ವಚನದ ಸಂದರ್ಭದಲ್ಲಿ ಬಿಜೆಪಿ ಸಂಸದರು ಇದೇ ಘೋಷಣೆ ಕೂಗಿ ಅಡ್ಡಿಪಡಿಸಿದ್ದರು.

ಸರ್ವೇ ಸಾಮಾನ್ಯವೆಂಬಂತೆ ನಡೆಯುತ್ತಿರುವ ಗುಂಪುಹತ್ಯೆಗಳಿಗೆ ಬಿಜೆಪಿ-ಆರೆಸ್ಸೆಸ್ ನಾಯಕರಿಂದ ಉತ್ತೇಜನ ದೊರಕುತ್ತಿದೆ. ಗುಂಪುಹತ್ಯೆಯ ಆರೋಪಿಗಳು ಮತ್ತು ಅಪರಾಧಿಗಳಿಗೆ ಬಿಜೆಪಿಯ ಕೇಂದ್ರ ಸಚಿವರು ಸಾರ್ವಜನಿಕವಾಗಿ ಅಭಿನಂದಿಸಿದ್ದರು. ದಾದ್ರಿಯ ಅಖ್ಲಾಕ್ ಹತ್ಯಾ ಆರೋಪಿಯ ಮೃತದೇಹಕ್ಕೆ ತ್ರಿವಣ ಧ್ವಜವನ್ನು ಹಾಸಲಾಗಿತ್ತು ಮತ್ತು ಅಪರಾಧಿಗಳಾಗಿದ್ದ ವ್ಯಕ್ತಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಾಗ ಅವರನ್ನು ಹೂಹಾರ ಹಾಕಿ ಸನ್ಮಾನಿಸಲಾಗಿತ್ತು.

ಸಂಘಪರಿವಾರದ ಶಕ್ತಿಗಳು ಗೋವು, ದನದ ಮಾಂಸ, ಇತಿಹಾಸದ ಕೇಸರೀಕರಣದ ಮೂಲಕ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಬಹುಸಂಖ್ಯಾತ ಹಿಂದುಗಳನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಮುಸ್ಲಿಮರ ವಿರುದ್ಧದ ಗುಂಪು ಹತ್ಯೆಯಂತಹ ಕ್ರೂರ ಘಟನೆಗಳು ತೀವ್ರಗತಿಯಲ್ಲಿ ನಡೆಯುತ್ತಿವೆ. ದೇಶವು ಅರಾಜಕತೆಯತ್ತ ಸಾಗುತ್ತಿರುವಾಗ ಅದರ ಬಗ್ಗೆ ಗಮನ ವಹಿಸುವಂತೆ ಆಡಳಿತ ಯತ್ರಾಂಗಕ್ಕೆ ಪತ್ರ ಬರೆಯುವುದು ದೇಶದ್ರೋಹವಾಗಿದೆ ಎಂಬ ವ್ಯಾಖ್ಯಾನವು ಪ್ರಸಕ್ತ ಸನ್ನಿವೇಶದಲ್ಲಿ ಕಂಡು ಬರುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರವನ್ನು ದಮನಿಸುವ ನಿಟ್ಟಿನಲ್ಲಿ ಕಾನೂನಿನ ಸಂಪೂರ್ಣ ದುರ್ಬಳಕೆಯಾಗಿರುತ್ತದೆ.

ಆಶಾದಾಯಕ ಬೆಳವಣಿಗೆಯಲ್ಲಿ ಪ್ರಜಾಪ್ರಭುತ್ವ ಪ್ರೇಮಿ ನಾಗರಿಕರು ದೇಶದ್ರೋಹದ ಕಾನೂನು ಹೇರಲಾದ ಗಣ್ಯ ವ್ಯಕ್ತಿಗಳ ಪರವಾಗಿ ನಿಂತಿದ್ದು ಮಾತ್ರವಲ್ಲ, ಆಡಳಿತ ವ್ಯವಸ್ಥೆಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಇದೀಗ ಗಣ್ಯ ನಾಗರಿಕರ ಮೇಲೆ ಹೇರಲಾಗಿರುವ ದೇಶದ್ರೋಹದ ಕಾನೂನನ್ನು ಹಿಂಪಡೆಯಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಪ್ರಶ್ನಿಸುವ ಹಕ್ಕನ್ನು ಪಡೆದಿದ್ದಾರೆ. ಇದನ್ನು ಸರಕಾರ ಮತ್ತು ಸಂವಿಧಾನ ವಿರೋಧಿಗಳು ಮೊದಲು ಅರ್ಥಮಾಡಿಕೊಳ್ಳಬೇಕು.

***

LEAVE A REPLY

Please enter your comment!
Please enter your name here