ಪುಲ್ವಾಮಾದ ನಂತರ ಪ್ರದೇಶದಲ್ಲಿ ಶಾಂತಿ ನೆಲೆಸಿತೇ?

0
212

-ಡಾ.ರಾಮ್ ಪುನಿಯಾನಿ

ಭಾರತೀಯ ವಾಯುಸೇನೆಯ ಮಿಗ್ ಫೈಟರ್ ಜೆಟ್ ಪಾಕಿಸ್ತಾನದ ಭೂಮಿಯ ಮೇಲಿರುವ ಭಯೋತ್ಪಾದನಾ ಶಿಬಿರಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಾಶಪಡಿಸಿವೆ ಮತ್ತು ದೊಡ್ಡ ಸಂಖ್ಯೆಯ ಉಗ್ರಗಾಮಿಗಳನ್ನು ಕೊಂದು ಹಾಕಿದೆ(ಫೆಬ್ರವರಿ 26, 2019) ಎಂಬ ಸುದ್ದಿ ಇದೆ. ಈ ದಾಳಿಯನ್ನು 44 ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮದಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ ನಡೆಸಲಾಯಿತು. ಪುಲ್ವಾಮಾದಲ್ಲಿ ಸ್ಫೋಟಕಗಳು ಬಹುಶಃ ಆರ್ಡಿಎಕ್ಸ್ ತುಂಬಿದ್ದ ಕಾರೊಂದು 2400 ಯೋಧರನ್ನು ಸಾಗಿಸುತ್ತಿದ್ದ ಸಿಆರ್ಪಿಎಫ್ನ ರಕ್ಷಣಾ ದಳದ ಟ್ರಕ್ಗಳ ಮಧ್ಯೆ ನುಗ್ಗಿ ದಾಳಿ ನಡೆಸಿತ್ತು. ಈ ಹೀನ ಭಯೋತ್ಪಾದನಾ ಕತ್ಯದ ಬಳಿಕ ಪ್ರಧಾನಿ ಮೋದಿ, ಸೂಕ್ತ ಕಾರ್ಯಾಚರಣೆ ನಡೆಸಲು ಸೇನೆಗೆ ಅವಕಾಶ ನೀಡಲಾಗಿದೆ ಎಂದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಬಿಜೆಪಿಯ ಅನೇಕ ನಾಯಕರು ದೇಶದಲ್ಲಿರುವುದು ಮೋದಿ ಸರಕಾರ, ಕಾಂಗ್ರೆಸ್ನದ್ದಲ್ಲ. ಆದುದರಿಂದ ಸೂಕ್ತ ಕ್ರಮಗೊಳ್ಳಲಾಗುವುದು ಎಂದು ಹೇಳಿದರು. ಈ ಮೂಲಕ, ಮೋದಿ ಆಡಳಿತಕ್ಕೇರಿದ ಬಳಿಕದಿಂದಲೇ ರಾಷ್ಟ್ರೀಯ ಭದ್ರತೆಯ ಕುರಿತು ಆಲೋಚಿಸಲಾಗುತ್ತಿದೆ ಮತ್ತು ಅದಕ್ಕಿಂತ ಮೊದಲಿನ ದುರ್ಬಲ ಕಾಂಗ್ರೆಸ್ ಸರಕಾರವು ಕೈಕಟ್ಟಿ ಕುಳಿತಿತ್ತು ಎಂದು ಭಾವಿಸುವಂತಹ ವಾತಾವರಣವನ್ನು ಸಷ್ಟಿಸಲಾಗಿದೆ.

ಹಾಗಾದರೆ ವಾಸ್ತವವೇನು? ಭಯೋತ್ಪಾದನಾ ದಾಳಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರಕಿಲ್ಲ. ಮೋದಿ ನಮ್ಮ ಗಡಿಯ ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಅನಿಸುತ್ತಿದೆ. ದೊಡ್ಡ ಪ್ರಮಾಣದಲ್ಲಿ ಆರ್ಡಿಎಕ್ಸ್ ತುಂಬಿದ್ದ ಕಾರೊಂದು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಂತಹ ಅತಿಸುರಕ್ಷಿತ ಪ್ರದೇಶಕ್ಕೆ ನುಸುಳಿದ್ದಾದರೂ ಹೇಗೆ? ಆ ಭದ್ರತಾ ಲೋಪಕ್ಕೆ ಹೊಣೆಗಾರರು ಯಾರು? ಈ ಸಂದರ್ಭದಲ್ಲಿ ಮುಂಬೈ ಮೇಲೆ 26/11, 2008ರ ದಾಳಿಯನ್ನು ನೆನಪಿಸಿಕೊಳ್ಳಬಹುದಾಗಿದೆ. ಶಸ್ತ್ರಸಜ್ಜಿತರಾಗಿ ಬಂದಿದ್ದ 10 ಭಯೋತ್ಪಾದಕರು ನಾವೆಯಲ್ಲಿ ಸಂಚರಿಸಿ ಮುಂಬೈ ತೀರಕ್ಕೆ ತಲುಪಿದ್ದರು ಮತ್ತು ನಂತರ ಅವರು ನಗರದಲ್ಲಿ ವ್ಯಾಪಕ ಹಾನಿ ನಡೆಸಿದ್ದರು. ಈ ಘಟನೆಯ ಬಳಿಕ ಕೇಂದ್ರ ಗಹ ಸಚಿವ ಶಿವರಾಜ್ ಪಾಟೀಲ್ ಮತ್ತು ಮಹಾರಾಷ್ಟ್ರದ ಗಹ ಸಚಿವ ಆರ್.ಆರ್.ಪಾಟೀಲ್ ಇಬ್ಬರೂ ರಾಜೀನಾಮೆ ನೀಡಬೇಕಾಯಿತು.

ಯಾವುದೇ ತಪ್ಪಿನ ಸುಧಾರಣೆಯಲ್ಲಿ ಲೋಪ ಏಕೆ ಮತ್ತು ಹೇಗೆ ಸಂಭವಿಸಿತು ಎಂಬುದನ್ನು ಪತ್ತೆಹಚ್ಚುವುದು ಮೊದಲ ಹೆಜ್ಜೆಯಾಗಿರುತ್ತದೆ. ಪುಲ್ವಾಮಾ ಪ್ರಕರಣದಲ್ಲಾದ ಗಂಭೀರ ಭದ್ರತಾ ಲೋಪದ ಹೊಣೆಗಾರರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಾಗುತ್ತಿಲ್ಲ. ಬಹಳ ಸಮಯದ ವರೆಗೆ ನರೇಂದ್ರ ಮೋದಿಯವರಿಗೆ ಘಟನೆಯ ಬಗ್ಗೆ ಮಾಹಿತಿಯೇ ಇರಲಿಲ್ಲ ಮತ್ತು ಅವರು ಜಿಮ್ ಕಾರ್ಬೆಟ್ ರೆಸಾರ್ಟ್ನಲ್ಲಿ ವಿಡಿಯೋ ಚಿತ್ರೀಕರಣದಲ್ಲಿ ಮಗ್ನರಾಗಿದ್ದರು ಎಂಬುದನ್ನು ನಾವು ಅರಿತಾಗ ದೇಶದ ಭದ್ರತೆಯ ವಿಚಾರವು ಮತ್ತಷ್ಟು ಬಹಿರಂಗವಾಯಿತು.
ಈ ಭಯೋತ್ಪಾದನಾ ದಾಳಿಯ ನಂತರ ನಡೆದಿದ್ದು ಆಘಾತಕಾರಿ ಬೆಳವಣಿಗೆಯಾಗಿತ್ತು. ಡೆಹ್ರಾಡೂನ್, ಲೂಧಿಯಾನಾ, ಔರಂಗಾಬಾದ್ ಮತ್ತು ದೇಶದ ಇತರ ಹಲವು ನಗರಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳ ಮೇಲೆ ದಾಳಿ ನಡೆಸಲಾಯಿತು. ಬಹುತೇಕ ದಾಳಿಕೋರರು ಹಿಂದು ಬಲಪಂಥೀಯ ಗುಂಪಿಗೆ ಸೇರಿದವರಾಗಿದ್ದರು. ಕೆಲವೆಡೆ ಸಿಖ್ಖ್ ಸಂಘಟನೆಗಳು ಕಾಶ್ಮೀರಿಗಳ ರಕ್ಷಣೆಗೆ ಮುಂದಾದರು. ಅದೇ ವೇಳೆ ಕಾಶ್ಮೀರಿಗಳಿಗೆ ರಕ್ಷಣೆ ನೀಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ನಂತರ ಕಾಶ್ಮೀರಿಗರ ಮೇಲೆ ದಾಳಿ ನಡೆಸಬಾರದೆಂದು ತುಂಬಾ ಹೊತ್ತಿನ ಬಳಿಕ ಮೋದಿ ಹೇಳಿದರಾದರೂ, ಅ ವೇಳೆಗೆ ಬಹಳಷ್ಟು ಹಾನಿ ಸಂಭವಿಸಿತ್ತು. ಇದಕ್ಕೂ ಮೊದಲು ಊನಾದಲ್ಲಿ ದಲಿತರ ಮೇಲೆ ನಡೆದ ದಾಳಿ ಮತ್ತು ದನದ ಹೆಸರಿನಲ್ಲಿ ಮುಸ್ಲಿಮರ ಗುಂಪು ಹತ್ಯೆಯ ಪ್ರಕರಣಗಳಲ್ಲಿಯು ಕೂಡ ಮೋದಿ ತನ್ನ ಬಾಯಿ ತೆರೆಯಲು ವಿಳಂಬಿಸಿದ್ದರು.

ಉಗ್ರ ರಾಷ್ಟ್ರೀಯತೆ ಮತ್ತು ದ್ವೇಷ ಹರಡುತ್ತಿದ್ದ ನಮ್ಮ ಕೆಲವು ಟಿವಿ ಚಾನೆಗಳು ಈ ಘಟನೆಯ ನಂತರ ಕಾಶ್ಮೀರಿಗಳು ಮತ್ತು ಮುಸ್ಲಿಮ್ ವಿರೋಧಿ ವಾತಾವರಣ ಸಷ್ಟಿಸಲು ಪ್ರಾರಂಭಿಸಿದವು. ಮಾಧ್ಯಮದ ಒಂದು ವರ್ಗ, ನ್ಯೂಸ್ ಚಾನೆಲ್ಗಳು ಮತ್ತು ಕೆಲವು ಸಂಘಟನೆಗಳು ಯಾವ ರೀತಿಯ ವಾತಾವರಣ ಸಷ್ಟಿಸಿದರೆಂದರೆ, ಆ ಕಾರಣದಿಂದಾಗಿ ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳನ್ನು ಗುರಿಪಡಿಸಲಾಯಿತು. ಮೇಘಾಲಯದ ರಾಜ್ಯಪಾಲರಂತೂ ತಥಾಗತ್ ರಾಯ್ ಎಲ್ಲಾ ಕಾಶ್ಮೀರಿಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು. ಇದು ನಮ್ಮ ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾಗಿದೆ ಮತ್ತು ಈ ಹೇಳಿಕೆಯನ್ನು ಹಿಂಪಡೆಯುವಂತೆ ಅವರ ಮೇಲೆ ಒತ್ತಡ ಹೇರಬೇಕಾಗಿದೆ. ಬೆಂಗಳೂರಿನಲ್ಲಿರುವ ಕರಾಚಿ ಬೇಕರಿಯ ಫ್ರಾಂಚೈಸಿಯ ಮೇಲೆ ನಡೆದ ದಾಳಿಯು, ಈ ಘಟನೆಯ ಅತ್ಯಂತ ಅಚ್ಚರಿದಾಯಕ ಆಯಾಮವಾಗಿದೆ. ವಿಭಜನೆಯ ನಂತರ ಭಾರತದ ಹೈದರಾಬಾದ್ಗೆ ವಲಸೆ ಬಂದು ನೆಲೆಸಿದ್ದ ಖೇಮ್ಚಂದ್ ರಮ್ನಾನೈ ಈ ಸರಪಣಿಯನ್ನು ಸ್ಥಾಪಿಸಿದ್ದರು. ಪ್ರಸಕ್ತ ಸರಕಾರವು ಪ್ರಬಲ ಹೇಳಿಕೆಗಳನ್ನು ನೀಡುತ್ತಿದೆ, ಆದರೆ ಭಯೋತ್ಪಾದನೆಯನ್ನು ಎದುರಿಸುವಲ್ಲಿ ಅದರ ದಾಖಲೆಯು ತೀರಾ ಕಳಪೆಯಾಗಿದೆ.

ಅಧಿಕೃತ ಮೂಲಗಳಿಂದ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಭಯೋತ್ಪಾದನಾ ಘಟನೆಗಳು, ಭಯೋತ್ಪಾದನಾ ಸಂಘಟನೆಗಳೊಂದಿಗೆ ಸೇರುವ ಭಾರತೀಯರು ಮತ್ತು ಇಂತಹ ಘಟನೆಗಳಲ್ಲಿ ಹತರಾಗುವ ಭದ್ರತಾ ಸಿಬ್ಬಂದಿಗಳ ಸಂಖ್ಯೆಯು ಯುಪಿಎ ಆಡಳಿತಾವಧಿಗೆ ಹೋಲಿಸಿದರೆ, ಹಲವು ಪಟ್ಟು ಹೆಚ್ಚಾಗಿದೆ.ಇಂಡಿಯಾಸ್ಪೆಂಡ್ ಅನಾಲಿಸೀಸ್(ಲಾಭರಹಿತ ಅಂಕಿಅಂಶಗಳ ಪೋರ್ಟಲ್) ಸರಕಾರಿ ಅಂಕಿಅಂಶಗಳನ್ನು ಉಲ್ಲೇಖಿಸಿ ಈ ಮಾಹಿತಿಯನ್ನು ನೀಡಿದೆ. 2015ರಿಂದ 2017ರ ಮಧ್ಯೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾನೆಗೆ ಸಂಬಂಧಿಸಿದ 800 ಘಟನೆಗಳು ನಡೆದಿವೆ. ಈ ಸಂಖ್ಯೆಯು 2015ರಲ್ಲಿ 208ರಿಂದ 2017ರಲ್ಲಿ 342ಕ್ಕೇರಿತು. ಈ ಮೂರು ವರ್ಷಗಳಲ್ಲಿ ಈ ಘಟನೆಗಳಲ್ಲಿ 744 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ 471 ಮಂದಿ ಉಗ್ರಗಾಮಿಗಳು, 201 ಭದ್ರತಾ ಸಿಬ್ಬಂದಿಗಳು ಮತ್ತು 72 ನಾಗರಿಕರಾಗಿದ್ದರು. ಮೋದಿ ಸರಕಾರದ ಸಂವೇದಿಯಲ್ಲದ ನೀತಿಗಳು ಮತ್ತು ಮಾತುಕತೆಗೆ ಬದಲಾಗಿ ಪೆಲ್ಲೆಟ್ ಗನ್ಗಳನ್ನು ಬಳಸಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ. ಪುಲ್ವಮಾದ ನಂತರ ಸರಕಾರವು ಈ ಪ್ರದೇಶದಲ್ಲಿ ಮತ್ತಷ್ಟು ಸೇನಾ ಪಡೆಯನ್ನು ನಿಯೋಜಿಸಿದೆ. ಪ್ರತ್ಯೇಕತಾವಾದಿ ನಾಯಕರ ಭದ್ರತೆಯನ್ನು ಹಿಂಪಡೆದಿದೆ ಮತ್ತು ಒಂದು ವೇಳೆ ಬಂದೂಕು ಎತ್ತಿದರೆ ಅವರು ಗಂಭೀರ ಪರಿಣಾಮವನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನು ಯುವಕರಿಗೆ ನೀಡಿದೆ. ಸಿಆರ್ಪಿಎಫ್ನ ಬಸ್ಸಿಗೆ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ನುಗ್ಗಿಸಿ ದಾಳಿ ನಡೆಸಿದ ಆದಿಲ್ ಅಹ್ಮದ್ ದಾರ್ ಸೇನಾ ಸಿಬ್ಬಂದಿಗಳಿಂದ ಥಳಿತಕ್ಕೊಳಗಾಗಿದ್ದ. ಆ ನಂತರ ಆತ ಈ ಹಾದಿಯಲ್ಲಿ ಸಾಗಿದ ಮತ್ತು ಜೈಶ್ ಎ ಮುಹಮ್ಮದ್ನ ಜಾಲದಲ್ಲಿ ಸಿಲುಕಿದ ಎಂಬುದು ಇಲ್ಲಿ ಗಮನಾರ್ಹವಾಗಿದೆ.

ಭಾರತೀಯ ಸಶಸ್ತ್ರ ಪಡೆಗಳ ಪ್ರಸಕ್ತ ಕಾರ್ಯಾಚರಣೆಯು ಮತ್ತಷ್ಟು ಮುಂದುವರಿಯದಿರಲಿ ಎಂಬುದು ಮಾತ್ರವೇ ನಿರೀಕ್ಷೆಯಾಗಿದೆ. ದೇಶದಲ್ಲಿ ಭಾವನೆಗಳನ್ನು ಉತ್ತೇಜಿಸಿ, ಪಾಕಿಸ್ತಾನದ ಅತ್ಯಂತ ಒಲವಿನ ರಾಷ್ಟ್ರದ ಸ್ಥಾನಮಾನವನ್ನು ಹಿಂಪಡೆದು ಪಾಕಿಸ್ತಾನದೊಂದಿಗಿನ ವ್ಯಾಪಾರವನ್ನು ತಡೆಯಲಾಗಿದೆ. ಇದು ಎರಡೂ ದೇಶಗಳ ನಡುವಿನ ವ್ಯಾಪಾರಕ್ಕೆ ಹೊಡೆತ ನೀಡಿದೆ. ಈ ಪ್ರದೇಶವನ್ನು ಮತ್ತೆ ಮತ್ತೆ ಹಿಂಸಾಚಾರಕ್ಕೆ ತಳ್ಳುವುದೇ ಎಂಬುದರ ಕುರಿತು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಭಾರತ – ಪಾಕಿಸ್ತಾನ ಮತ್ತು ಕಾಶ್ಮೀರದ ಪ್ರಕರಣಗಳಲ್ಲಿ ಏನೇ ವಿವಾದಗಳಿದ್ದರೂ ಮಾತುಕತೆಯೊಂದೇ ಅದಕ್ಕೆ ಪರಿಹಾರವಾಗಿದೆ ಎಂಬುದು ಗಮನಿಸಬೇಕಾದ ವಿಚಾರವಾಗಿದೆ. ಸರ್ಜಿಕಲ್ ಸ್ಟ್ರೆೃಕ್ 2.0 ಎಂದು ಹೇಳಲಾಗುವ ಇತ್ತೀಚಿನ ದಾಳಿಯು ಎರಡೂ ದೇಶಗಳ ನಡುವಿನ ಯುದ್ಧದಲ್ಲಿ ಬದಲಿಸದಿರಲಿ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಒಂದು ವೇಳೆ ಪಾಕಿಸ್ತಾನಕ್ಕೆ ಸಮರ್ಪಕ ಸಾಕ್ಷಾಧಾರ ಒದಗಿಸಿದರೆ ಉಗ್ರಗಾಮಿಗಳ ವಿರುದ್ಧ ಸೂಕ್ತ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಅವರು ಮಾತುಕತೆಯ ಬಯಕೆಯನ್ನೂ ಪ್ರಕಟಿಸಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೂಡ, ಈ ಪ್ರದೇಶದಲ್ಲಿ ಶಾಂತಿ ನೆಲೆಸುವಂತಾಗಲು ಎರಡೂ ದೇಶಗಳ ನಡುವಿನ ಮಾತುಕತೆಗೆ ಮಧ್ಯಸ್ಥಿಕೆಯ ಪಾತ್ರವಹಿಸುವ ಪ್ರಸ್ತಾಪವನ್ನು ಮಾಡಿದ್ದಾರೆ. ಭಾರತಕ್ಕೆ ಇಂದು ಅಭಿವದ್ಧಿ, ಭ್ರಷ್ಟಾಚಾರ, ಉದ್ಯೋಗ ಮತ್ತು ಕಷಿ ಬಿಕ್ಕಟ್ಟಿನಂತಹ ವಿಚಾರಗಳ ಕುರಿತು ಗಮನಹರಿಸಬೇಕಾಗ ಅಗತ್ಯವಿದೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸಮದ್ಧಿಯನ್ನು ತರುವುದು, ಮಣ್ಣಿನ ಮೇಲಿನ ಬಂದೂಕು ಸಿಡಿಮದ್ದಿನ ದುರ್ಗಂಧವನ್ನು ಮತ್ತು ಅಲ್ಪಸಂಖ್ಯಾತರ ಮೇಲಿನ ದ್ವೇಷವನ್ನು ದೂರ ಮಾಡುವುದೇ ಈ ಸಮಸ್ಯೆಗಳಿಗೆ ಪರಿಹಾರವಾಗಲಿದೆ.

LEAVE A REPLY

Please enter your comment!
Please enter your name here