ಪವಿತ್ರ ಗೋವು : ಭಾರತೀಯ ರಾಜಕಾರಣದ ಚದುರಂಗ

0
25

♦ಡಾ.ರಾಮ್ ಪುನಿಯಾನಿ

ಹಿಂದೂ ರಾಷ್ಟ್ರೀಯವಾದಿ ಬಿಜೆಪಿ ಮತ್ತು ಅದರ ಸಹ ಯಾತ್ರಿಕರ ಹಿಂದೂ ರಾಷ್ಟ್ರ ಸ್ಥಾಪನೆಯ ಅಜೆಂಡಾದಲ್ಲಿ ದನಕ್ಕೆ ಮಹತ್ವದ ಸ್ಥಾನವಿದೆ. ಗುಂಪು ಹತ್ಯೆಯು ಇದರ ಏಕಮಾತ್ರ ಪರಿಣಾಮವಲ್ಲ. ಸಿನಿಮಾ ಮತ್ತು ಇತರ ಕ್ಷೇತ್ರಗಳ 49 ಮಂದಿ ದಿಗ್ಗಜರ ಪತ್ರವು, ಗುಂಪು ಹತ್ಯೆಯ ಭೀಕರ ವಿದ್ಯಮಾನಗಳ ಬಹುತೇಕ ಬಲಿಪಶುಗಳು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದಲಿತರಾಗಿದ್ದಾರೆ ಎಂಬುದು ಸ್ಪಷ್ಟಪಡಿಸುತ್ತದೆ. ಇದರ ಇತರ ಹಲವು ಆಯಾಮಗಳೂ ಇವೆ.

ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರದ ಮಂತ್ರಿ ಶ್ರೀಕಾಂತ್ ಶರ್ಮಾ, ಬಿಡಾಡಿ ಜಾನುವಾರುಗಳನ್ನು ಪೋಷಿಸುವವರಿಗೆ ಸರಕಾರವು ಪ್ರತಿದಿನವೂ ಪ್ರತಿ ದನಕ್ಕೆ 30 ರೂಪಾಯಿಗಳನ್ನು ನೀಡಲಿದೆ ಎಂದು ಘೋಷಿಸಿದ್ದಾರೆ. ಈ ಯೋಜನೆಗಾಗಿ ಸರಕಾರವು ತನ್ನ ಬಜೆಟ್‌ನಲ್ಲಿ 110 ಕೋಟಿ ರೂಪಾಯಿ ಕಲ್ಪಿಸಿದೆ. ಬಿಡಾಡಿ ಜಾನುವಾರುಗಳು ವಿಶೇಷವಾಗಿ ದನಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಮತ್ತು ಅವು ಹೊಲಗಳಿಗೆ ನುಗ್ಗಿ ಬೆಳೆಗಳಿಗೆ ತುಂಬಾ ನಷ್ಟ ಉಂಟು ಮಾಡುತ್ತಿವೆ. ಮೊದಲೇ ಬಿಕ್ಕಟ್ಟಿಗೆ ಒಳಗಾಗಿರುವ  ಕೃಷಿ ಅರ್ಥವ್ಯವಸ್ಥೆಗೆ ಇದೊಂದು ಹೊಸ ಸಂಕಷ್ಟವಾಗಿದೆ. ಈ ಬಿಡಾಡಿ ಜಾನುವಾರುಗಳು ಬೀದಿಗಳಲ್ಲಿ ಮತ್ತು ರಾಜಮಾರ್ಗಗಳಲ್ಲಿ ಮನಸೋಇಚ್ಛೆ ತಿರುಗುವ ಕಾರಣದಿಂದಾಗಿ ರಸ್ತೆ ಅಪಘಾತಗಳಲ್ಲೂ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಯೋಗಿ ಸರಕಾರಕ್ಕೆ ಈ ಕ್ರಮಕೈಗೊಳ್ಳಬೇಕಾಗಿ ಬಂತು.

ಕಳೆದ ಸಾರ್ವತ್ರಿಕ ಚುನಾವಣೆ(2019)ರಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿದ್ದ ಒಂದು ಅಂಶವನ್ನು ಬಹುಶಃ ನಾವು ಗಮನಿಸದಿರಬಹುದು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ, 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ‘ರಾಷ್ಟ್ರೀಯ ಕಾಮಧೇನು ಆಯೋಗ’ ರಚಿಸಲಾಗುವುದು ಎಂದು ಭರವಸೆ ನೀಡಿತ್ತು. ಈ ಆಯೋಗವು, ಕಲಿಕೆಗೆ ಮತ್ತು ದನದ ಸದ್ಗುಣಗಳ ಕುರಿತು ಜನರಲ್ಲಿ ಜಾಗೃತಿಯನ್ನು ಹೆಚ್ಚಿಸಲು ವಿಶ್ವವಿದ್ಯಾಲಯಗಳಲ್ಲಿ ‘ಕಾಮಧೇನು ಪೀಠ’ಗಳನ್ನು ಸ್ಥಾಪಿಸುವ ಕುರಿತು ಯೋಜನೆ ರೂಪಿಸಲಿದೆ. ಆಯೋಗವು ಗೋಶಾಲೆಯ ಸುತ್ತಮುತ್ತ ವಸತಿ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸಲಿದೆ ಮತ್ತು ಗೋವು ಉತ್ಪನ್ನಗಳ ಮೆಡಿಕಲ್ ಅಂಗಡಿಗಳನ್ನು ತೆರೆಯುವ ಯೋಜನೆ ಹೊಂದಿದೆ ಎಂದು ಅದು ಹೇಳಿತ್ತು. ಒಂದು ವೇಳೆ ಗ್ರಾಮೀಣ ಅರ್ಥವ್ಯವಸ್ಥೆಯನ್ನು ಬಲಪಡಿಸಲು ಮತ್ತು ಜಾನುವಾರುಗಳನ್ನು ವೈಜ್ಞಾನಿಕವಾಗಿ ಬಳಸುವುದಾದರೆ ಇದನ್ನು ಸ್ವಾಗತಿಸಬೇಕಾಗಿದೆ. ಆದರೆ ಕೇವಲ ಗೌರವಕ್ಕಾಗಿ ದನವನ್ನು ಆಯ್ಕೆ ಮಾಡುವುದಾದರೆ ಇದೊಂದು ಶುದ್ಧ ರಾಜಕೀಯ ತಂತ್ರವಾಗಿದೆ.

ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗೂಂಡಾಗಿರಿಯ ಪರಿಣಾಮವಾಗಿ, ಜಾನುವಾರು ವ್ಯಾಪಾರಿಗಳು ಮತ್ತು ಅವುಗಳ ಸಾಗಾಟ ನಡೆಸುವವರಿಂದ ಬಲವಂತವಾಗಿ ವಸೂಲಿಯ ದಂಧೆ ಮಾಡುವಂತಹ ಹಲವು ಗುಂಪುಗಳು ದೇಶದಲ್ಲಿ ಸಕ್ರಿಯವಾಗಿವೆ. ತನಿಖಾ ಪತ್ರಕರ್ತ ನಿರಂಜನ್ ತಕ್ಲೆಯವರು ರಫೀಕ್ ಕುರೈಷಿ ಎಂಬ ಹೆಸರಿನೊಂದಿಗೆ ಜಾನುವಾರು ವ್ಯಾಪಾರಿಗಳ ವೇಷ ತೊಟ್ಟು ಹಲವು ಸಾಗಾಟ ಕಂಪೆನಿಗಳನ್ನು ಸಂಪರ್ಕಿಸಿದರು. ಈ ವೇಳೆ ಅವರು ದನಗಳನ್ನು ಸಾಗಿಸುವುದಕ್ಕೆ ಪ್ರತಿ ಟ್ರಕ್‌ಗೆ  15,000 ರೂಪಾಯಿ ಇದ್ದರೆ, ಅದೇ ವೇಳೆ ಎಮ್ಮೆ ಸಾಗಾಟಕ್ಕೆ ಕೇವಲ 6500 ರೂಪಾಯಿ ಚಾಲ್ತಿ ದರವಿತ್ತು ಎಂಬುದನ್ನು ಕಂಡುಕೊಂಡರು. ತಕ್ಲೆಯವರ ಪ್ರಕಾರ, ಬಲಾತ್ಕಾರದ ವಸೂಲಿಯು ಚರ್ಮದ ವ್ಯಪಾರದೊಂದಿಗೆ ಸಂಬಂಧ ಹೊಂದಿದೆ. ಯಾಕೆಂದರೆ, ಜಾನುವಾರುಗಳನ್ನು ವಧಿಸಿದ ಬಳಿಕ ಚರ್ಮದ ಮೇಲೆ ಮಧ್ಯವರ್ತಿಯ ಹಕ್ಕಿರುತ್ತದೆ. ಬಲಾತ್ಕಾರದ ವಸೂಲಿಯ ದಂಧೆಯನ್ನು ಸುಗಮಗೊಳಿಸಲು ಗೋರಕ್ಷಕರ ಗುಂಪು ನಡುನಡುವೆ ಹಿಂಸಾಚಾರವನ್ನೂ ನಡೆಸುತ್ತದೆ.

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಒಂದೆಡೆ ಗೋರಕ್ಷಣೆಯ ಹೆಸರಿನಲ್ಲಿ ಗುಂಪುಹತ್ಯೆಯ ಘಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಭಾರತವು ಜಗತ್ತಿನಲ್ಲಿ ದನದ ಮಾಂಸದ ಅತಿದೊಡ್ಡ ರಫ್ತುದಾರ ಆಗುವ ಹಾದಿಯಲ್ಲಿದೆ. ಸಾಮಾನ್ಯವಾಗಿ ಮುಸ್ಲಿಮರನ್ನು ಮಾಂಸ ವ್ಯಾಪಾರದ ಲಾಭ ಗಳಿಸುವವರೆಂದು ನಂಬಲಾಗುತ್ತದೆ. ಆದರೆ ಅದು ಸರಿಯಲ್ಲ. ಮಾಂಸದ ವ್ಯಾಪಾರದ ಮೂಲಕ ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿರುವ ಜನರು ಬಹುತೇಕ ಹಿಂದೂ/ಜೈನರಾಗಿದ್ದಾರೆ ಎಂಬುದು ಸತ್ಯ ಸಂಗತಿ. ದನದ ಮಾಂಸ ರಫ್ತು ಮಾಡುವ ಅತಿದೊಡ್ಡ ಕಂಪೆನಿಗಳಲ್ಲಿ ಅಲ್ ಕಬೀರ್, ಅರೇಬಿಯನ್ ಎಕ್ಸ್‌ಪೋರ್ಟ್, ಎಂಕೆಆರ್ ಫ್ರೋಝನ್ ಫುಡ್ ಮತ್ತು ಅಲ್ ನೂರ್ ಸೇರಿವೆ. ಇವುಗಳ ಹೆಸರಿನಿಂದ ನೋಡುವುದಾದರೆ, ಈ ಕಂಪೆನಿಗಳ ಮಾಲಕರು ಮುಸ್ಲಿಮರಾಗಿದ್ದಾರೆ ಎಂದು ಅನಿಸುತ್ತದೆ. ಆದರೆ ವಾಸ್ತವವೆಂದರೆ, ಇವುಗಳಲ್ಲಿ ಬಹುತೇಕ ಕಂಪೆನಿಗಳು ಹಿಂದುಗಳು ಮತ್ತು ಜೈನರದ್ದಾಗಿವೆ.

ದನ/ಬೀಫ್‌ನ ವಿಚಾರವು ವಾಸ್ತವದಲ್ಲಿ ಸಮಾಜವನ್ನು ಧ್ರುವೀಕರಿಸುವ ಒಂದು ಮಾಧ್ಯಮವಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಒಂದೇ ಒಂದು ದೊಡ್ಡ ಕೋಮುಗಲಭೆ ನಡೆಯಲಿಲ್ಲ ಎಂದು ಸಮರ್ಥಿಸಲಾಗುತ್ತದೆ. ಇದು ಸರಿಯಾಗಿರಬಹುದು. ಆದರೆ ಇದೇ ವೇಳೆ ಕಡಿಮೆ ತೀವ್ರತೆಯ ಹಿಂಸಾಚಾರ ಮತ್ತು ದನದ ವಿಚಾರದಲ್ಲಿ ಗುಂಪುಹತ್ಯೆಗಳು ಮುಂತಾದವುಗಳ ಮೂಲಕ ಹೆಚ್ಚಿನ ಪ್ರಭಾವದೊಂದಿಗೆ ಸಮಾಜವನ್ನು ಕೋಮು ಆಧಾರದಲ್ಲಿ ಧ್ರುವೀಕರಿಸಲಾಗುತ್ತಿದೆ ಎಂಬುದು ಕೂಡ ನೈಜ ಸಂಗತಿ. ವೈದಿಕ ಕಾಲದಲ್ಲಿ ಯಜ್ಞಗಳಲ್ಲಿ ದನವನ್ನು ಬಲಿಯರ್ಪಿಸಲಾಗುತ್ತಿತ್ತು ಮತ್ತು ದನದ ಮಾಂಸ ಸೇವನೆ ಸಾಮಾನ್ಯವಾಗಿತ್ತು ಎಂಬ ವಿಚಾರವನ್ನು ನಾವು ಅರಿತಿದ್ದೇವೆ. ಡಾ. ಅಂಬೇಡ್ಕರ್ (ಹೂ ವೇರ್ ದಿ ಶೂದ್ರಾಸ್) ಮತ್ತು ಡಾ.ಡಿ.ಎನ್.ಝಾ (ಮಿಥ್ ಆಫ್ ಹೋಲಿ ಕೌ)ರವರು ತಮ್ಮ ವಿದ್ವತ್‌ಪೂರ್ಣ ಬರಹಗಳ ಮೂಲಕ ನಮ್ಮ ಗಮನವನ್ನು ನೈಜ ವಿಚಾರದತ್ತ ಸೆಳೆಯುತ್ತಾರೆ. ಸ್ವಾಮಿ ವಿವೇಕಾನಂದ ಅವರು ಕೂಡ ಇದನ್ನೇ ಹೇಳುತ್ತಾರೆ. ಅವರ ಪ್ರಕಾರ, ವೈದಿಕ ಕಾಲದಲ್ಲಿ ಗೋಮಾಂಸ ಸೇವನೆ ನಡೆಸಲಾಗುತ್ತಿತ್ತು ಮತ್ತು ವೈದಿಕ ಆಚರಣೆಗಳಲ್ಲಿ ದನವನ್ನು ಬಲಿಯರ್ಪಿಸಲಾಗುತ್ತಿತ್ತು. ಅಮೆರಿಕಾದಲ್ಲಿ ನಡೆದ ದೊಡ್ಡ ಸಭೆಯೊಂದನ್ನು ಸಂಬೋಧಿಸುತ್ತಾ ಅವರು; ‘‘ನಾನು ಹೇಳುವುದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಪ್ರಾಚೀನ ಕರ್ಮಾಚರಣೆಗಳ ಪ್ರಕಾರ, ದನದ ಮಾಂಸ ಸೇವಿಸದವ ಉತ್ತಮ ಹಿಂದೂ ಅಲ್ಲ ಎಂದು ನಂಬಲಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಆತ ಹೋರಿಯನ್ನು ಬಲಿ ನೀಡಿ ಅದನ್ನು ತಿನ್ನಬೇಕಾಗಿತ್ತು.’’ (ದಿ ಕಂಪ್ಲೀಟ್ ವರ್ಕ್ಸ್ ಆಫ್ ಸ್ವಾಮಿ ವಿವೇಕಾನಂದ, ಸಂಪುಟ 3, ಪುಟ 536, ಅದ್ವೈತ್ ಆಶ್ರಮ, ಕೊಲ್ಕತ್ತ್ತಾ, 1997)

ಪ್ರಸಕ್ತ ಪ್ರಚಲಿತದಲ್ಲಿರುವ ಹಿಂದೂ ರಾಷ್ಟ್ರೀಯವಾದವು ಆರೆಸ್ಸೆಸ್ ವಿಚಾರಧಾರೆಯಿಂದ ಪ್ರೇರಿತವಾಗಿದೆ. ಹಿಂದೂ ರಾಷ್ಟ್ರೀಯವಾದದ ಮತ್ತೊಂದು ತೊರೆಯು ಸಾವರ್ಕರ್‌ಗೆ ಸೇರಿದ ಹಿಂದೂ ಮಹಾಸಭಾದ್ದಾಗಿದೆ. ಆತ ಸಂಘಪರಿವಾರದ ಮಹಾನ್ ಪ್ರೇರಣಾ ಪುರುಷರಾಗಿದ್ದಾರೆ. ಆದರೆ ದನದ ಕುರಿತಂತೆ ಅವರ ನಿಲುವು ವಿಭಿನ್ನವಾಗಿತ್ತು. ಅವರು ಹೇಳುವಂತೆ; ದನವು ಹೋರಿಗಳ ಮಾತೆಯಾಗಿದೆ, ಮನುಷ್ಯರದ್ದಲ್ಲ. ದನ ಒಂದು ಉಪಯುಕ್ತ ಜಾನುವಾರು ಎಂದೂ ಅವರು ನಂಬುತ್ತಿದ್ದರು ಮತ್ತು ಅದರೊಂದಿಗೆ ವ್ಯವಹರಿಸುವಾಗ ಈ ವಾಸ್ತವವನ್ನು ಗಮನದಲ್ಲಿರಿಸಬೇಕಾಗಿದೆ. ವಿಜ್ಞಾನಪರ ಪ್ರಬಂಧ(ವಿಗ್ಯಾನ್ ನಿಷ್ಠಾ ನಿಬಂಧ್)ದಲ್ಲಿ ಅವರು ಹೀಗೆ ಬರೆಯುತ್ತಾರೆ; ಮನುಷ್ಯರಿಗೆ ಉಪಯುಕ್ತ ಪ್ರಾಣಿಯಾಗಿರುವ ಕಾರಣ ದನಗಳ ರಕ್ಷಣೆ ಮಾಡಬೇಕು ಹೊರತು, ಅವು ದೈವಿಕ ಎಂಬ ಕಾರಣಕ್ಕಲ್ಲ. ಆರೆಸ್ಸೆಸ್ ಮತ್ತು ಹಿಂದೂ ಮಹಾ ಸಭಾದ ಹಿಂದೂ ರಾಷ್ಟ್ರೀಯವಾದದ ಎರಡು ತೊರೆಗಳ ನಡುವೆ ಆರೆಸ್ಸೆಸ್‌ನ ತೊರೆಯು ಈ ದಿನಗಳಲ್ಲಿ ದೇಶದಲ್ಲಿ ವ್ಯಾಪಿಸಿದ್ದು, ಅದು ಸಮಾಜವನ್ನು ವಿಭಜಿಸಲು ದನವನ್ನು ಅಸ್ಮಿತೆಯ ವಿಷಯವನ್ನಾಗಿ ಬಳಸುತ್ತಿದೆ.

ಕುತೂಹಲಕಾರಿ ಸಂಗತಿಯೆಂದರೆ, ಒಂದೆಡೆ ಉತ್ತರ ಭಾರತದಲ್ಲಿ ಗೋವಿನ ಹೆಸರಿನಲ್ಲಿ ಬಿಜೆಪಿ ತೀವ್ರ ಅಶಾಂತಿಯನ್ನು ಸೃಷ್ಟಿಸುತ್ತಿದೆ. ಮತ್ತೊಂದೆಡೆ ಅದು ಕೇರಳ, ಗೋವಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈ ವಿಚಾರದಲ್ಲಿ ಮೌನವಹಿಸುತ್ತಾ ಸಾಗುತ್ತಿದೆ. ಸ್ವಾತಂತ್ರದ ಮುನ್ನಾ ದಿನ ಡಾ.ರಾಜೇಂದ್ರ ಪ್ರಸಾದ್, ದೇಶದಲ್ಲಿ ಗೋಹತ್ಯೆ ನಿಷೇಧದ ಕಾನೂನು ರೂಪಿಸುವಂತೆ ಗಾಂಧೀಜಿಯನ್ನು ಒತ್ತಾಯಿಸಿದ್ದರು. ಇದಕ್ಕೆ ಸಂಬಂಧಿಸಿದ ಗಾಂಧೀಜಿಯವರ ಪ್ರತಿಕ್ರಿಯೆಯು ನಮ್ಮ ದೇಶದ ಬಹುತ್ವ ಸಮಾಜದ ಮಾರ್ಗದರ್ಶಿಯಾಗಬೇಕಾಗಿದೆ. ‘‘ಭಾರತದಲ್ಲಿ ಗೋಹತ್ಯೆ ನಿಷೇಧಿಸುವ ಕಾನೂನು ರೂಪಿಸಲು ಸಾಧ್ಯವಿಲ್ಲ. ಹಿಂದುಗಳಿಗೆ ಗೋವಧೆಯು ನಿಷೇಧ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ನಾನು ಕೂಡ ಗೋಸೇವೆ ಮಾಡುವ ಶಪಥ ಕೈಗೊಂಡಿದ್ದೇನೆ. ಆದರೆ ನನ್ನ ಧರ್ಮವು ಇತರ ಎಲ್ಲಾ ಭಾರತೀಯರ ಧರ್ಮ ಆಗುವುದು ಹೇಗೆ? ಇದರ ಅರ್ಥ ಹಿಂದೂ ಅಲ್ಲದ ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುವುದಾಗಿದೆ… ಭಾರತ ಒಕ್ಕೂಟದಲ್ಲಿ ಕೇವಲ ಹಿಂದುಗಳಿರುವುದೇ ಅಲ್ಲ. ಮುಸ್ಲಿಮ್, ಪಾರ್ಸಿ, ಕ್ರಿಶ್ಚಿಯನ್ ಮತ್ತು ಇತರ ಧಾರ್ಮಿಕ ಗುಂಪುಗಳೂ ಇಲ್ಲಿವೆ. ಭಾರತವು ಇನ್ನು ಹಿಂದುಗಳ ನಾಡು ಎಂದು ಹಿಂದೂಗಳು ಒಂದು ವೇಳೆ ಕಲ್ಪಿಸುವುದಾದರೆ ಅದು ತಪ್ಪು. ಭಾರತವು ಇಲ್ಲಿ ನೆಲೆಸಿರುವ ಎಲ್ಲರಿಗೂ ಸೇರಿದ್ದಾಗಿದೆ’’ ಎಂದು ಗಾಂಧೀಜಿ ಹೇಳಿದ್ದರು.

ಒಂದೆಡೆ ದೇಶವು ನಮ್ಮ ಸಾಮಾಜಿಕ ಜೀವನದ ಸೂಚ್ಯಂಕವನ್ನು ಹೆಚ್ಚಿಸುವ ಕಲ್ಯಾಣ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿದ್ದರೆ, ಅದೇ ವೇಳೆ ಬಿಜೆಪಿ ಆಡಳಿತವು ಅತೀ ಅಗತ್ಯವಾಗಿರುವ ಸಾಮಾಜಿಕ ಕಲ್ಯಾಣದ ಉದ್ದೇಶವನ್ನು ಪೂರೈಸದ ಹಸುವಿನ ಪೋಷಣೆ, ಪ್ರಚಾರ ಮತ್ತು ಹುಸಿ ಸಂಶೋಧನೆಗಳ ಮೇಲೆ ಬಜೆಟ್ ಹಂಚಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ.

 

LEAVE A REPLY

Please enter your comment!
Please enter your name here