ಪಠ್ಯಪುಸ್ತಕಗಳಲ್ಲಿ ಆರೆಸ್ಸೆಸ್

0
10

♦ ರಾಮ್ ಪುನಿಯಾನಿ

ರಾಷ್ಟ್ರ ಮತ್ತು ರಾಷ್ಟ್ರ ನಿರ್ಮಾಣದ ವಿರೋಧಾಭಾಸದ ಪರಿಕಲ್ಪನೆಗಳು

ರಾಷ್ಟ್ರೀಯತೆಯು ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಕಳೆದ ಕೆಲವು ವರ್ಷಗಳಿಂದ ಆಡಳಿತ ಸರಕಾರವನ್ನು ಟೀಕಿಸಿದ ಕಾರಣಕ್ಕಾಗಿ ವ್ಯಕ್ತಿಗಳನ್ನು ದೇಶವಿರೋಧಿಗಳಂತೆ ಬಿಂಬಿಸಿದ್ದನ್ನು ನಾವು ಕಂಡಿದ್ದೇವೆ. ದಿಲ್ಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯವು ದೇಶವಿರೋಧಿಗಳನ್ನು ಸೃಷ್ಟಿಸುವ ನೆಲೆ ಎಂದು ಹೇಳಿ ಅದನ್ನು ಗುರಿಪಡಿಸಿದ್ದಕ್ಕೂ ನಾವು ಸಾಕ್ಷಿಯಾಗಿದ್ದೇವೆ. ಅದೇ ವೇಳೆ, ಹಿಂದೂ ರಾಷ್ಟ್ರೀಯತೆಗೆ ಸೇರಿದವರು ಸ್ವತಃ ತಮ್ಮನ್ನು ರಾಷ್ಟ್ರೀಯವಾದಿಗಳೆಂದು ಪ್ರಸ್ತುತಪಡಿಸುತ್ತಿದ್ದಾರೆ. ಬಹಳಷ್ಟು ಕುಶಲತೆಯಿಂದ ಅವರು ಉಪಸರ್ಗ ಹಿಂದುವನ್ನು ರಾಷ್ಟ್ರ ಪದದಿಂದ ಮರೆಮಾಚಿದ್ದಾರೆ. ಈ ಉಪಸರ್ಗವು, ಭಾರತ ರಾಷ್ಟ್ರವಾಗಿ ಮೂಡಿಬಂದ ಪ್ರಕ್ರಿಯೆಯಲ್ಲಿ ಅವರ ಪಾತ್ರ ಇರಲಿಲ್ಲ ಎಂಬುದಾಗಿ ತಿಳಿಸುತ್ತದೆ. ಭಾರತ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯು ಹಲವು ಸ್ತರಗಳಿಂದ ಕೂಡಿದ ಪ್ರಕ್ರಿಯೆಯಾಗಿತ್ತು. ಅದರಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳ ವಿರೋಧ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳ ಸ್ಥಾಪನೆಯ ಪ್ರಯತ್ನಗಳು ಒಳಗೊಂಡಿದ್ದವು.

ಇತ್ತೀಚಿಗೆ ಸಂತ್ ತುಕ್‌ಡೋಜಿ ಮಹಾರಾಜ್ ನಾಗಪುರ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಬಿಎ ಪಠ್ಯಪುಸ್ತಕದಲ್ಲಿ ಬದಲಾವಣೆ ತರಲಾಗಿದೆ. ದ್ವಿತೀಯ ವರ್ಷದ ಪಠ್ಯಪುಸ್ತಕದಲ್ಲಿ ‘ಭಾರತದಲ್ಲಿ ಕೋಮುವಾದದ ಉದಯ’ ಶೀರ್ಷಿಕೆಯ ಅಧ್ಯಾಯದ ಸ್ಥಾನದಲ್ಲಿ ‘ಆರೆಸ್ಸೆಸ್‌ನ ಇತಿಹಾಸ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅದರ ಪಾತ್ರ’ ಶೀರ್ಷಿಕೆಯ ಅಧ್ಯಾಯವನ್ನು ಸೇರಿಸಲಾಗಿದೆ. ವಿಶ್ವವಿದ್ಯಾನಿಲಯದ ವಕ್ತಾರರು ಹೇಳುವಂತೆ, ‘‘ರಾಷ್ಟ್ರೀಯತೆ… ಅದು ಕೂಡ ಭಾರತೀಯ ಇತಿಹಾಸದ ಭಾಗವಾಗಿದೆ ಮತ್ತು ಆರೆಸ್ಸೆಸ್‌ನ ಇತಿಹಾಸ ರಾಷ್ಟ್ರೀಯತೆಯ ಭಾಗವಾಗಿದೆ. ಆದ್ದರಿಂದ ಆರೆಸ್ಸೆಸ್‌ನ ಪರಿಚಯವನ್ನು ಈ ವಿಭಾಗದಲ್ಲಿ ಸೇರಿಸಲಾಗಿದೆ.’’ ಮತ್ತೊಂದೆಡೆ, ಇದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್‌ನ ವಕ್ತಾರ ಸಚಿನ್ ಸಾವಂತ್, ‘‘ಆರೆಸ್ಸೆಸ್ ಮತ್ತು ರಾಷ್ಟ್ರ ನಿರ್ಮಾಣದ ಕುರಿತ ಉಲ್ಲೇಖವನ್ನು ನಾಗಪುರ ವಿಶ್ವವಿದ್ಯಾನಿಲಯವು ಕಂಡುಕೊಂಡಿರುವುದು ಎಲ್ಲಿಂದ?’’ ಆರೆಸ್ಸೆಸ್ ಎಂಬುದು ಬ್ರಿಟಿಷರಿಗೆ ಸಹಕಾರ ನೀಡಿದ, ಸ್ವಾತಂತ್ರ ಸಂಗ್ರಾಮವನ್ನು ವಿರೋಧಿಸಿದ, ಅಮಂಗಳಕರವೆಂದು ಕರೆದು 52 ವರ್ಷಗಳ ವರೆಗೆ ತ್ರಿವರ್ಣ ಧ್ವಜವನ್ನು ಹಾರಿಸದ, ಸಂವಿಧಾನದ ಬದಲಿಗೆ ಮನುಸ್ಮತಿಯನ್ನು ಬಯಸುವ, ದ್ವೇಷವನ್ನು ಹರಡುವ ಒಂದು ಅತ್ಯಂತ ವಿಭಜನಕಾರಿ ಸಂಘಟನೆಯಾಗಿದೆೞೞ ಎಂದು ಹೇಳಿದ್ದಾರೆ.

ಭಾರತವು ಒಂದು ರಾಷ್ಟ್ರವಾಗಿ ಹೇಗೆ ಮೂಡಿ ಬಂತು ಎಂಬುದರ ಕುರಿತು ತಿಳಿದುಕೊಳ್ಳಬೇಕಾಗಿದೆ. 18ನೇ  ಶತಮಾನದಲ್ಲಿ ರಾಜರು ಮತ್ತು ನವಾಬರ ಸ್ಥಾನದಲ್ಲಿ ದೇಶದಲ್ಲಿ ಬ್ರಿಟಿಷರ ಆಡಳಿತ ಸ್ಥಾಪನೆಯಾಗಿತ್ತು. ವಸಾಹತುಶಾಹಿ ಆಡಳಿತಾವಧಿಯಲ್ಲಿ ಹಲವು ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳು ನಡೆದವು. ದೇಶದಲ್ಲಿ ರೈಲುಗಳು ಪ್ರಾರಂಭವಾದವು. ಅಂಚೆ ಮತ್ತು ಅಂಚೆತಂತಿಗೆ ಚಾಲನೆ ದೊರಕಿತು ಮತ್ತು ಶಾಲೆ ಮತ್ತು ವಿಶ್ವಾವಿದ್ಯಾನಿಲಯಗಳ ಮೂಲಕ ಆಧುನಿಕ ಶಿಕ್ಷಣ ಪ್ರಾರಂಭ ಕಂಡಿತು. ಮುಕ್ತ ಮಾಧ್ಯಮ ಮತ್ತು ಆಧುನಿಕ ನ್ಯಾಯಾಂಗ ವ್ಯವಸ್ಥೆಗಳ ಪರಿಚಯವಾಯಿತು. ಈ ಬದಲಾವಣೆಗಳು ಸಾಮಾಜಿಕ ಸಂಬಂಧಗಳನ್ನೂ ಪ್ರಭಾವಿತಗೊಳಿಸಿದವು. ಬಲಿಷ್ಠ ಜಾತಿವ್ಯವಸ್ಥೆಯು ಚದುರಲು ಶುರುವಾಯಿತು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನು ತೆರೆಯುವ ಮೂಲಕ ಸಾವಿತ್ರಿ ಬಾಯಿ ಫುಲೆ  ಅವರಂತಹ ವ್ಯಕ್ತಿಗಳು ಮಹಿಳೆಯರನ್ನು ಪುರುಷರ ಅಧೀನಕ್ಕೊಳಪಡಿಸುವ ಪರಿಕಲ್ಪನೆಗೆ ಸವಾಲೆಸೆದರು. ಸಮಾಜದಲ್ಲಿ ಹೊಸ ಕೈಗಾರಿಕೋದ್ಯಮಿಗಳ, ಆಧುನಿಕ ಉದ್ಯಮಿಗಳ ಮತ್ತು ವಿದ್ಯಾವಂತರ ವರ್ಗಗಳು ಉದಯಿಸಿದವು. ಈ ಪ್ರಕ್ರಿಯೆಗಳ ರಾಜಕೀಯ ಅಭಿವ್ಯಕ್ತಿಯು ಹಲವು ವಿಧಗಳಲ್ಲಿ ಪ್ರತಿಫಲನ ಕಂಡವು.

ಈ ರಾಜಕೀಯ ವಿದ್ಯಮಾನಗಳ ಅತಿದೊಡ್ಡ ಪರಿಣಾಮದಿಂದಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪನೆಯಾಗಿತ್ತು. ಜಾತಿ ತಾರತಮ್ಯದ ವಿರುದ್ಧ ಜ್ಯೋತಿ ಬಾ ಫುಲೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಧ್ವನಿ ಎತ್ತಿದರು. ನಾರಾಯಣ್ ಮಘಾಜೀ ಲೋಖಂಡೆ ಮತ್ತು ಸಿಂಗಾರ್‌ವೆಲುರವರ ನೇತೃತ್ವದ ಒಕ್ಕೂಟಗಳು ಕಾರ್ಮಿಕರ ಧ್ವನಿಯನ್ನು ಅಭಿವ್ಯಕ್ತಗೊಳಿಸಿದವು. ಭಗತ್ ಸಿಂಗ್‌ರಂತಹ ಕ್ರಾಂತಿಕಾರಿಗಳು ಸಮಾಜವಾದದ ಸ್ಥಾಪನೆಯ ತಮ್ಮ ಕನಸನ್ನು ಸಾಕಾರಗೊಳಿಸಲು ವಸಾಹತುಶಾಹಿ ಆಡಳಿತದ ವಿರುದ್ಧ ನಿಂತರು. ರಾಷ್ಟ್ರ ನಿರ್ಮಾಣದ ಈ ಪ್ರಕ್ರಿಯೆಯು ಎರಡು ಬದಿಗಳನ್ನು ಹೊಂದಿದ್ದವು. ಒಂದು; ಕಾರ್ಮಿಕರು, ಮಹಿಳೆಯರು, ವಿದ್ಯಾವಂತ ವರ್ಗ, ಸರಕಾರಿ ಉದ್ಯೋಗಿಗಳು ಮತ್ತು ಕೈಗಾರಿಕೋದ್ಯಮಗಳ ಮಹಾತ್ವಾಕಾಂಕ್ಷೆಗಳನ್ನು ವ್ಯಕ್ತಪಡಿಸುವುದಾಗಿತ್ತು. ಮತ್ತೊಂದು; ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಸಂಘರ್ಷವಾಗಿತ್ತು. ಮೊದಲನೇ ಪ್ರಕ್ರಿಯೆ ಸಾಮಾಜಿಕವಾಗಿತ್ತು. ಮತ್ತೊಂದು ರಾಜಕೀಯವಾಗಿತ್ತು.

ಈ ಸಾಮಾಜಿಕ-ರಾಜಕೀಯ ಬದಲಾವಣೆಗಳ ವಿರುದ್ಧ ರಾಜರು, ಜಮೀನ್ದಾರರು ಮತ್ತು ಅವರ ಸಹ ಅನುಯಾಯಿಗಳ ಕುಸಿಯುತ್ತಿರುವ ವರ್ಗಗಳು ತಮ್ಮ ಸಂಘಟನೆಗಳನ್ನು ಕಟ್ಟಲು ಪ್ರಾರಂಭಿಸಿದರು. ಈ ಸಂಘಟನೆಗಳು ಎರಡು ಅಂಶಗಳನ್ನು ಹೊಂದಿದ್ದವು. ಒಂದೆಡೆ, ಇವು ಜಾತಿ ಮತ್ತು ಲಿಂಗ ತಾರತಮ್ಯಕ್ಕೆ ಸಂಬಂಧಿಸಿದ ಸಾಮಾಜಿಕ ಬದಲಾವಣೆಯ ವಿರೋಧಿಯಾಗಿದ್ದವು. ಮತ್ತೊಂದೆಡೆ, ಧರ್ಮದ ಹೆಸರಿನಲ್ಲಿ ರಾಷ್ಟ್ರೀಯತೆಯ ಸಮರ್ಥಕರಾಗಿದ್ದರು. ಅವರು ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ರಾಷ್ಟ್ರೀಯ ಆಂದೋಲನದ ವಿರೋಧಿಗಳಾಗಿದ್ದರು. ಈ ಕುಸಿಯುತ್ತಿರುವ ವರ್ಗಗಳು ಧರ್ಮವನ್ನು ತಮ್ಮ ರಾಷ್ಟ್ರೀಯತೆಯ ಉಪಸರ್ಗವನ್ನಾಗಿಸಿಕೊಂಡಿದ್ದರು. ಆದರೆ ಅವರ ಮೂಲ ಉದ್ದೇಶ ರಾಜಕೀಯವಾಗಿತ್ತು.

ಊಳಿಗಮಾನ್ಯ ಪದ್ಧತಿಯ ರೀತಿಯಲ್ಲಿ ಜನ್ಮಾಧಾರಿತ ಶ್ರೇಣಿ ವ್ಯವಸ್ಥೆಯ ಮೌಲ್ಯಗಳನ್ನು ಸಂರಕ್ಷಿಸಿಡುವುದು ಅವರ ರಾಜಕೀಯ ಅಜೆಂಡಾವಾಗಿತ್ತು.

ಒಂದೆಡೆ ಮುಸ್ಲಿಮ್ ಲೀಗ್, ಇನ್ನೊಂದೆಡೆ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಕ್ರಮವಾಗಿ ಮುಸ್ಲಿಮ್ ಮತ್ತು ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕರಾಗಿದ್ದರು. ಹಿಂದೂ ಮಹಾನುಭಾವು ಹಿಂದೂಗಳ ಸಂಘಟನೆ ಎಂಬುದು ಅದರ ಹೆಸರಿನಿಂದಲ್ಲೇ ಸ್ಪಷ್ಟವಾಗಿತ್ತು. ಅದೇ ವೇಳೆ ಆರೆಸ್ಸೆಸ್‌ನ ರಾಷ್ಟ್ರೀಯತೆಯಲ್ಲಿ ಧರ್ಮವು ಪ್ರಮುಖ ಅಂಗವಾಗಿತ್ತು. ಸಾವರ್ಕರ್ ತೇಪೆ ಹಚ್ಚುವ ಮೂಲಕ ಜಾತಿ ವ್ಯವಸ್ಥೆಯನ್ನು ವಿರೋಧಿಸಿದರು. ಒಟ್ಟಿನಲ್ಲಿ ಈ ಎಲ್ಲಾ ಸಂಘಟನೆಗಳು ಲಿಂಗ ಮತ್ತು ಜಾತಿ ತಾರತಮ್ಯವನ್ನು ಕೊನೆಗೊಳಿಸುವಂತಹ ಇಂತಹ ಸಾಮಾಜಿಕ ಬದಲಾವಣೆಗಳ ವಿರೋಧಿಗಳಾಗಿದ್ದವು. ಒಂದು ಸಂಘಟನೆಯಾಗಿ ಅವರೆಂದೂ ಬ್ರಿಟಿಷ್ ವಿರೋಧಿ ಆಂದೋಲನದ ಭಾಗವಾಗಿರಲಿಲ್ಲ. ಅಂಡಮಾನ್ ಜೈಲಿಗೆ ಹೋಗುವುದಕ್ಕೆ ಮೊದಲು ಸಾರ್ವಕರ್ ವೈಯಕ್ತಿಕವಾಗಿ ಬ್ರಿಟಿಷರ ವಿರೋಧಿಯಾಗಿದ್ದರು. ಆದರೆ ಜೈಲಿನಿಂದ ಬಿಡುಗಡೆಗೊಂಡ ನಂತರ ಆತ ಸಂಪೂರ್ಣ ಬದಲಾದರು. ಅದೇ ರೀತಿ ಆರೆಸ್ಸೆಸ್ ಸಂಸ್ಥಾಪಕ ಡಾ.ಹೆಡಗೇವಾರ್ 1930ರಲ್ಲಿ ನಡೆದ ನಾಗರಿಕ ಅಸಹಕಾರ ಚಳವಳಿಯಲ್ಲಿ ವೈಯಕ್ತಿಕವಾಗಿ ಭಾಗವಹಿಸಿದ್ದರು. ಆದರೆ ಅವರ ಉದ್ದೇಶ, ಜೈಲು ಸೇರಿ ಅವರಂತಹ ಚಿಂತನೆ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವುದಾಗಿತ್ತು. ಆರೆಸ್ಸೆಸ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ, ಬ್ರಿಟಿಷರ ಶಾಂತಿ ಭಂಗ ಉಂಟು ಮಾಡಬಾರದೆಂದು ಗೋಳ್ವಾಳ್ಕರ್‌ರವರು ನಿರ್ದೇಶನ ನೀಡಿದ್ದರು.

ಭಾರತ ಬಿಟ್ಟು ತೊಲಗಿ ಆಂದೋಲನದ ವೇಳೆ ಸಂಘದ ದ್ವಿತೀಯ ಸರಸಂಘ ಚಾಲಕ ಎಂ.ಎಸ್.ಗೋಳ್ವಾಳ್ಕರ್,  ‘‘1942ರಲ್ಲಿ ಹಲವು ಜನರು ಈ ಆಂದೋಲನದಲ್ಲಿ ಭಾಗವಹಿಸಲು ಬಯಸಿದ್ದರು. ಆದರೆ ಪ್ರತ್ಯಕ್ಷವಾಗಿ ಏನೂ ಮಾಡುವುದಿಲ್ಲ ಎಂಬುದು ಆರೆಸ್ಸೆಸ್‌ನ ತೀರ್ಮಾನವಾಗಿತ್ತು. ಆ ವೇಳೆಯಲ್ಲೂ ಆರೆಸ್ಸೆಸ್‌ನ ಕಾರ್ಯಚಟುವಟಿಕೆಗಳು ಎಂದಿನಂತೆ ನಡೆಯುತ್ತಿತ್ತು’’ ಎಂದು ಬರೆದಿದ್ದರು. ಭಾರತ ಬಿಟ್ಟು ತೊಲಗಿ ಆಂದೋಲನದಿಂದ ಅಂತರ ಕಾಪಾಡುವ ತನ್ನ ನಿರ್ಧಾರವನ್ನು ಸಮರ್ಥಿಸುತ್ತಾ ಅವರು, ‘‘ನಾವು ನಮ್ಮ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಮಾಡುವ ಮೂಲಕ ದೇಶವನ್ನು ಸ್ವಾತಂತ್ರಗೊಳಿಸುವ ಶಪಥವನ್ನು ಮಾಡಿದ್ದೇವೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈ ಶಪಥದಲ್ಲಿ ಬ್ರಿಟಿಷರನ್ನು ದೇಶದಿಂದ ಓಡಿಸುವ ಯಾವುದೇ ಚರ್ಚೆಯಿಲ್ಲ.’’ (ಶ್ರೀ ಗುರೂಜಿ ಸಮಗ್ರ ದರ್ಶನ, ಸಂಪುಟ:4, ಪುಟ:40)

ಭಾರತದ ಸಂವಿಧಾನದಲ್ಲಿ ಅಭಿವ್ಯಕ್ತಿಯಾಗಿರುವಂತೆ ಭಾರತೀಯ ರಾಷ್ಟ್ರೀಯತೆಯು ಎಲ್ಲರನ್ನೊಳಗೊಂಡಿದೆ ಮತ್ತು ಬಹುತ್ವದಿಂದ ಕೂಡಿದೆ. ಆರೆಸ್ಸೆಸ್ ಪ್ರಾಚೀನವಾಗಿರುವ, ನಿರ್ದಿಷ್ಟವಾಗಿ ಮನುವಿನ ಕಾನೂನನ್ನು ಸ್ತುತಿಸುತ್ತದೆ. ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವ ಭಾರತೀಯ ರಾಷ್ಟ್ರೀಯತೆಯ ಮೂಲ ಸ್ಥಂಭಗಳಾಗಿವೆ. ಧಾರ್ಮಿಕ ರಾಷ್ಟ್ರೀಯತೆಯು ಇದನ್ನು ಭಾರತಕ್ಕೆ ಉಪಯುಕ್ತವಲ್ಲದ ಪಶ್ಚಿಮದ ಮೌಲ್ಯವೆಂದು ಪರಿಗಣಿಸುತ್ತದೆ.

ಪಠ್ಯಪುಸ್ತಕಗಳಲ್ಲಿ ಬದಲಾವಣೆ ತರುವ ಮೂಲಕ, ಆರೆಸ್ಸೆಸ್ ಕೂಡ ಭಾರತದ ರಾಷ್ಟ್ರ ನಿರ್ಮಾಣದಲ್ಲಿ ಪಾತ್ರವಹಿಸಿದೆ ಎಂಬುದಾಗಿ ವಿದ್ಯಾರ್ಥಿಗಳಿಗೆ ತೋರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆರೆಸ್ಸೆಸ್, ಬ್ರಿಟಿಷ್ ಆಡಳಿತದ ವಿರುದ್ಧವಾಗಲೀ ಅಥವಾ ಸಮಾನತೆಯ ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಲೀ ಹೋರಾಟ ನಡೆಸಲಿಲ್ಲ ಎಂಬುದು ವಾಸ್ತವವಾಗಿದೆ. ಪಠ್ಯಪುಸ್ತಕಗಳಲ್ಲಿ ಈ ರೀತಿಯ ಬದಲಾವಣೆಯ ಉದ್ದೇಶವೆಂದರೆ, ಆರೆಸ್ಸೆಸ್‌ಗೆ ರಾಷ್ಟ್ರ ನಿರ್ಮಾಣದೊಂದಿಗೆ ಯಾವತ್ತೂ ಯಾವುದೇ ಕೊಡುಕೊಳ್ಳುವಿಕೆ ಇರದ ಹೊರತಾಗಿಯೂ ಆರೆಸ್ಸೆಸ್ ಅನ್ನು ರಾಷ್ಟ್ರ ನಿರ್ಮಾಪಕನೆಂಬ ರೂಪದಲ್ಲಿ ಪ್ರಸ್ತುತಪಡಿಸುವುದಾಗಿದೆ.

LEAVE A REPLY

Please enter your comment!
Please enter your name here