ನೋವೆಲ್ ಕೋವಿಡ್-19 ರಾಜ್ಯ ಸರಕಾರದ ಉಡಾಫೆ ನೀತಿಗಳು

Prasthutha|

-ಪೇರೂರು ಜಾರು

ಬೆಡ್‌ ಗಳ ಕೊರತೆ, ಇದ್ದಲ್ಲೂ ಬಡವರಿಗೆ ಸಿಗದ ಬೆಡ್ ಗಳು, ಆಮ್ಲಜನಕದ ಕೊರತೆ, ರೆಮ್ ಡೆಸಿವಿರ್ ಕೊರತೆ, ಲಸಿಕೆ ಕೊರತೆ, ಆಮ್ಲಜನಕದ ಕೊರತೆ ಒಟ್ಟಾರೆ ರಾಜ್ಯದ ಬಿಜೆಪಿ ಸರಕಾರದ ಇಚ್ಛಾಶಕ್ತಿ ಕೊರತೆಯ ಕಾರಣ ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ  ಬಾರಿಸಿದೆ.

- Advertisement -

ಚಾಮರಾಜನಗರದಲಿ ನಡೆದ 23 ಜನರ ಸಾವನ್ನು ಹೇಗೆ ಆಯುಷ್ಯ ಮುಗಿದ ಸಾವು ಎಂದು ಹೇಳುವುದು? ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಲಿಂಡರ್ ಬಾರದಿರುವುದರಿಂದ ಈ ಸಾವು ಸರಣಿ ನಡೆದಿದೆ. ಅಧಿಕಾರಶಾಹಿ ವೈಫಲ್ಯ ಎಂದು ಸರಕಾರ ನುಣುಚಿಕೊಳ್ಳಬಹುದು. ಸರಕಾರದ ವೈಫಲ್ಯದಿಂದ ಆದ ಕೊಲೆಗಳು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆದ ಸಾವುಗಳು. ಅದನ್ನು ರಾಜ್ಯದ 16,011 ಹಿಂದಿನ ಸಾವಿನ ಸಂಖ್ಯೆಗೆ ಸೇರಿಸಿದರೆ ಅಂಕಿ 17 ಸಾವಿರದತ ಸಾಗುತ್ತದೆ? ಇದನ್ನು ತಿಳಿಸಲು ಸರಕಾರದ ಜಾಲತಾಣ ಇದೆ. ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರಕಾರದ ವೈಫಲ್ಯ  ಕಣ್ಣಿಗೆ ರಾಚುವಂತೆ ಇರುವಾಗ ಸಹಾಯ ವಾಣಿಯ ಸಾಂಪ್ರದಾಯಿಕ  ಸಾಂತ್ವನದಿಂದ ಸಮಸ್ಯೆ ಪರಿಹಾರ ಆಗುತ್ತದೆಯೇ?

ಕರ್ನಾಟಕಕ್ಕಿಂತ ಶೇಕಡಾ 30ರಷ್ಟು ಹೆಚ್ಚು ಕೊರೋನಾ ಸೋಂಕಿತರು ಕೇರಳದಲ್ಲಿ ಪತ್ತೆ ಆಗಿದ್ದಾರೆ. ಆದರೆ ಅಲ್ಲಿ ಕೊರೋನಾದಿಂದ ಆದ ಸಾವಿನ  ಸಂಖ್ಯೆಯು ಕರ್ನಾಟಕದಲ್ಲಿ ಆದ ಸಾವಿನ ಸಂಖ್ಯೆಯ 20 ಶೇಕಡಾದಷ್ಟು ಮಾತ್ರ ಇದೆ ಎಂದರೆ ಕೇರಳದಲ್ಲಿ ಹೇಗೆ ಕೊರೋನಾ ನಿರ್ವಹಣೆ ಯಶಸ್ವಿಯಾಗಿದೆ ಎಂಬುದು ಸ್ಪಷ್ಟ. ಇಷ್ಟಕ್ಕೂ ರಾಜ್ಯಕ್ಕೆ ಹಿಂದಿರುಗಿದ ಕೊಲ್ಲಿ ದೇಶಗಳು, ಮುಂಬಯಿ ಮೊದಲಾದೆಡೆಯ ಜನರ ಪ್ರಮಾಣ ಕೂಡ ಕೇರಳದಲ್ಲಿಯೇ ಅಧಿಕ. ಹಾಗಿದ್ದರೂ  ಕರ್ನಾಟಕ ಮುಗ್ಗರಿಸಿದ್ದು ಏಕೆ?

ಮೊದಲ ಅಲೆಯ ಕಾಲದಲ್ಲಿ ನಾರಾಯಣ ಗೌಡ ಎಂಬ ಮಂತ್ರಿ ತಾನೇ ಮುಂಬಯಿಂದ ಕೊರೋನಾ ಬಾಧಿತರನ್ನು ಕದ್ದುಮುಚ್ಚಿ ಕರೆಸಿಕೊಂಡುದು, ಅದರ ಬೆನ್ನಿಗೆ ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡಿದ್ದು ವರದಿಯಾಯಿತು. ಕ್ರಮ? ಎಲ್ಲ ಜಿಲ್ಲೆಗಳಲ್ಲಿಯೂ ಇಂತಹ ಹೊಣೆಗೇಡಿ ಬಿಜೆಪಿ ನಾಯಕರು, ಇತರ ಬಾಲಬಡುಕರು ಕಂಡು ಬಂದಿದ್ದಾರೆ.

ಕರಾವಳಿಯಲ್ಲಿ ಊರಿಗೆ ಮುಂಚೆ ದೊಣ್ಣೆನಾಯಕರು ಕೇರಳದವರಿಗೆ ತಲಪಾಡಿಯಿಂದ ಮಂಗಳೂರಿನತ್ತ ಬರಲು ಬಿಡುವುದಿಲ್ಲ ಎಂದರು. ಏನಾಯಿತು? ಮಂಗಳೂರಿಗರು ಕೇರಳಕ್ಕೆ ಹೋಗಲಾಗದೇನೋ ಎಂಬ ಸ್ಥಿತಿ  ಬಂತು. ಸಾಂಕ್ರಾಮಿಕ ಕಾಯಿಲೆ ಹತೋಟಿಯಲ್ಲಿ ಸಾಮೂಹಿಕ ಪ್ರಯತ್ನ ಅಗತ್ಯ. ಆದರೆ ಕೊರೋನಾ ವ್ಯಾಪಾರ ಮಾಡಿಬಿಟ್ಟರು ಎಂದು ರಾಜ್ಯ, ಕೇಂದ್ರ ಎರಡನ್ನೂ ಹಲವರು ದೂರಿದ್ದಾರೆ.

ಸುಪ್ರೀಂ ಕೋರ್ಟ್ ಕೂಡ ಈ ಸಂಬಂಧ ಕೇಂದ್ರ ಸರಕಾರವನ್ನು ಎಚ್ಚರಿಸಿತು. ಇತ್ತೀಚೆಗೆ ವೈ.ವಿ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಲಸಿಕೆ ಬೆಲೆ ನ್ಯಾಯಯುತ ಆಗಿರುವಂತೆ ನೋಡಿಕೊಳ್ಳಲು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಲಾಭದಾಯಕ ವ್ಯಾಪಾರದಂತೆ ಲಸಿಕೆ ಮತ್ತು ಆಮ್ಲಜನಕದ ಸಿಲಿಂಡರ್ ವ್ಯವಸ್ಥೆ ಇದ್ದು ಜನಸೇವೆಗೆ ಬೆನ್ನು ಹಾಕಿರುವ ಬಿಜೆಪಿ ಸರಕಾರ ಸೇವೆ ಮಾಡುವುದುಂಟೆ? ಯಾವಾಗ ಸೇವಾ ಕ್ಷೇತ್ರವನ್ನು ವ್ಯಾಪಾರ ಕ್ಷೇತ್ರ ಮಾಡುವರೋ ಅಲ್ಲಿ ಜನಪರ ನಿರ್ವಹಣೆ ಲೋಪವಾಗುತ್ತದೆ. ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರಕಾರದ ವಿಫಲತೆಯ ಹೊಳವು ಇರುವುದು ಇಲ್ಲಿ.

ಕೇಂದ್ರ ಸರಕಾರವು ಕೊರೋನಾವನ್ನು ಒಂದು ವಿಪತ್ತು ಎಂದು ಕೊನೆಗೂ ಹೇಳಿತಾದರೂ ವಿಪತ್ತು  ನಿರ್ವಹಣಾ ಪಡೆ ನಿಧಿಯನ್ನು ಹೇಗೆ ಬಳಸುತ್ತದೆ ಎಂದು ತಿಳಿಸಿಲ್ಲ. ಈ ಬಗೆಗೂ ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಮೇಲೆ ಕಳೆದ ತಿಂಗಳು ವಿವರ ಕೇಳಿತ್ತು. ಅದಕ್ಕೆ ಸಮರ್ಪಕ ಉತ್ತರ ಸಿಗಲಿಲ್ಲ.

ರಾಜ್ಯದ ಡಿಸಾಸ್ಟರ್ ಮಿಟಿಗೇಶನ್ ಫಂಡ್ ಇಲ್ಲವೇ ವಿಪತ್ತು ತಗ್ಗಿಸುವ ನಿಧಿ 200 ಕೋಟಿ ಇದೆ. ಅದನ್ನು ಪ್ರತಿ ಜಿಲ್ಲೆಗೆ ತಲಾ 33,000 ರೂಪಾಯಿಯಂತೆ ಹಂಚಲಾಗಿದೆ ಎಂದು ರಾಜ್ಯ ಸರಕಾರ ಕಳೆದ ವಾರ ಹೇಳಿತು. ಅದು ಸಾಕೆ? ಪ್ರಧಾನಿ ಮೋದಿಯವರಂತೂ ಮೊದಲ ಅಲೆ ಅವಧಿಯಲ್ಲಿ ನಿಧಿ ಸಂಗ್ರಹ ಮಾಡಿ ಅದರ ವಿವರ ಯಾರೂ ಕೇಳುವಂತಿಲ್ಲ ಎಂದು ಬಿಟ್ಟರು. ಕೇಂದ್ರ ಮತ್ತು ರಾಜ್ಯಗಳಲ್ಲಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಇಲ್ಲವೇ ವಿಪತ್ತು ನಿರ್ವಹಣೆ ಪಡೆ ಮತ್ತು  ನಿಧಿ ಇರುತ್ತದೆ. ಕೊರೋನಾ ಒಂದು ವಿಪತ್ತು ಆದರೆ ಅದನ್ನು ಏಕೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ?

ರಾಜ್ಯದ ಸ್ಟೇಟ್ ಡಿಸಾಸ್ಟರ್ ರೆಸ್ಪಾನ್ಸ್ ಫಂಡ್ ಒಂದು ಇದೆ. ಅದರಲ್ಲಿ ಒಂದು ದುಗ್ಗಾಣಿ ಕೂಡ ಇಲ್ಲವಂತೆ. ಹಾಗಿದ್ದ ಮೇಲೆ ಅದಕ್ಕೆ ಸಿಬ್ಬಂದಿ, ಕುರ್ಚಿ, ಟೇಬಲ್, ಕಪಾಟುಗಳೆಲ್ಲ ಏಕೆ? 2005ರ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ ಹೇಗೆ ಜಾರಿಗೊಳಿಸಿದ್ದೀರಿ, ಮಾಹಿತಿ ಕೊಡಿ ಎಂದು ಕಳೆದ ವಾರ ಹೈಕೋರ್ಟ್ ಕರ್ನಾಟಕ ಸರಕಾರವನ್ನು ಕೇಳಿದೆ. ಕೊರೋನಾಗಿಂತ ಮೊದಲು ಉತ್ತರ ಕರ್ನಾಟಕವನ್ನು ಕಾಡಿದ ಮಳೆ ಪ್ರವಾಹ ಪೀಡಿತರಿಗೆ  ಪರಿಹಾರ ನೀಡಲು ಅದರಲ್ಲಿ  ಹಣವಿರಲಿಲ್ಲ. ಇನ್ನು ಕೊರೋನಾ ಪರಿಹಾರಕ್ಕೆ ಅದರಿಂದ ಹೇಗೆ ಹಣ ತರಲ ಸಾಧ್ಯ? ಆಗ ಹೆಲಿಕಾಪ್ಟರ್ ಸಮೀಕ್ಷೆ ಎಂಬ ಟೂರ್ ಮಾಡಿದ್ದ ಪ್ರಧಾನಿ ಮೋದಿ ಪರಿಹಾರ ಕೊಟ್ಟಂತೆ ಮಾಡಿದ್ದರು. ರಾಜ್ಯ ಬಿಜೆಪಿ ನಾಯಕರು ಪ್ರಸಾದ, ಹಸಾದ ಎಂದರೇ ಹೊರತ ಸೂಕ್ತ ಪರಿಹಾರ ಪಡೆಯುವಲ್ಲಿ ಸಫಲವಾಗಲಿಲ್ಲ. ರಾಜ್ಯದ  ಸಂಸದರಂತೂ ದೆಹಲಿಯಲ್ಲಿ ಬಾಯಿ ಬಿಡಲಿಲ್ಲ.

ಸಾಂಕ್ರಾಮಿಕ ರೋಗವನ್ನು ಸಾಮೂಹಿಕವಾಗಿ ಎದುರಿಸಬೇಕು. ವಿಶೇಷ ವಿಧಾನ ಸಭಾ ಅಧಿವೇಶನ ಕರೆಯಿರಿ, ಅಲ್ಲಿ ಚರ್ಚಿಸೋಣ ಎಂದು ಕಾಂಗ್ರೆಸ್ ಹಲವು ಬಾರಿ ಹೇಳಿದರೂ ಬಿಜೆಪಿ ಕೇಳಲಿಲ್ಲ. ನೆಪ ಮಾತ್ರಕ್ಕೆ ನಡೆದ ಅಧಿವೇಶನದಲ್ಲಿ ವಿವಾದಿತ ಕೃಷಿ ಮಸೂದೆ, ಕಾರ್ಮಿಕ ಕಾಯ್ದೆ, ಗೋ ರಕ್ಷಣಾ ಕಾನೂನು ಚರ್ಚೆ ಎಂದು ಗಲಾಟೆಯಲಿ ಎಲ್ಲವೂ ಕಳೆದುಹೋಗುವಂತೆ ನೋಡಿಕೊಂಡಿತು.

ಕೋವಿಡ್ ಬಂದ ಆರಂಭದಲ್ಲೇ 20 ರೂಪಾಯಿಯ ಮಾಸ್ಕ್  200 ರೂಪಾಯಿ ತರಿಸಿದ, ಕಿಟ್ ಖರೀದಿಯಲ್ಲಿ 500 ಕೋಟಿ  ಅಪರಾ ತಪರಾ ಆಪಾದನೆ ಎದುರಿಸಿದ ರಾಜ್ಯ ಸರಕಾರವು ಮುಂದೆಯೂ ಮುಕ್ತವಾಗಿ ಕೊರೋನಾ ತೊಡೆಯುವ ಪ್ರಾಮಾಣಿಕತೆ ತೋರಿಸಲಿಲ್ಲ.

ಎರಡನೇ ಅಲೆಯಲ್ಲಿ ಸಾವ ನೋವು ಅಧಿಕರಿಸಿದಾಗ ಉನ್ನತ ಅಧಿಕಾರಿಗಳ ಸಭೆ ಕರೆದ ರಾಜ್ಯ ಸಚಿವ ಸಂಪುಟವ 36 ಗಂಟೆಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದರು. ಇನ್ನೇನು ಅದಕ್ಕೆ 36 ಗಂಟೆ ಆಗಲು ದೂರ ಇಲ್ಲ.

ಮೊದಲ ಅಲೆಯ ವೇಳೆ ತಯಾರಿ ಇರಲಿಲ್ಲ. ಎರಡನೆಯ ಅಲೆಯ ವೇಳೆ ತಯಾರಿ ಇರಬೇಕಿತ್ತು. ಏನಿದೆ? ಜನರಿಗೆ ಉಚಿತ ಲಸಿಕೆ ಹೋಗಲಿ, ಲಸಿಕೆ ಸಿಗುವ ಖಚಿತತೆಯೂ ಇಲ್ಲ. ಬರೇ ಶೇ.9ರಷ್ಟು ಜನರು ಮಾತ್ರ ಲಸಿಕೆ ಪಡೆಯಲು ಸಾಧ್ಯವಾಗಿದೆ ಏಕೆ? ಮೆಡಿಕಲ್ ಆಮ್ಲಜನಕ ರಫ್ತು  ನಿಂತಿಲ್ಲ. ವಾತಾವರಣದ ಆಮ್ಲಜನಕ ಮಲಿನ ಮಾಡಿದ್ದೇವೆ. ಕಾಸಿಗೆ ಆಮ್ಲಜನಕ ಸಿಗುವುದೇ ಎಂದರೆ ಅದೂ ಇಲ್ಲ.

ಮಾಜಿ ಮುಖ್ಯಮಂತ್ರಿ ಸಿದ್ದರಾಮನ ಹುಂಡಿ ಸಿದ್ದರಾಮಯ್ಯನವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ ಎಂದುದರಲ್ಲಿ ಅತಿಶಯೋಕ್ತಿ ಇಲ್ಲ. ದುಡಿದ ಕೊರೋನಾ ಆರೋಗ್ಯ ಸೇವಕರಿಗೆ ಕೊಡಬೇಕಾದ್ದು, ಕೊಡತ್ತೇನೆಂದು ಹೇಳಿದ್ದು ಕೊಡದ ಈ ಸರಕಾರದಿಂದ ಕೊರೋನಾ ಹತೋಟಿ ಸಾಧ್ಯವೆ? ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಲಸಿಕೆ ಕೊಡಿ, ಬೆಡ್ ಕೊಡಿ, ಆಮ್ಲಜನಕ  ಕೊಡಿ ಎಂದರೆ ಕರ್ಫ್ಯೂ ಹಿಡಿ ಎಂದ ರಾಜ್ಯ ಬಿಜೆಪಿ ಸರಕಾರವು ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನಾದರೂ ಮೈಕೊಡವಿ ಮೇಲೇಳಲಿ.

- Advertisement -