ನೋವಾಗಿದೆ… ಆದರೆ ಕ್ಷಮೆ ಯಾಚಿಸಲಾರೆ | ನಾಗರಿಕನ ಕರ್ತವ್ಯ ನಿಭಾಯಿಸಿದೆ | ಪ್ರಶಾಂತ್ ಭೂಷಣ್

ನವದೆಹಲಿ : ಸುಪ್ರೀಂ ಕೋರ್ಟ್ ನೊಂದಿಗೆ ತಿಕ್ಕಾಟಕ್ಕಿಳಿದಿರುವ ಖ್ಯಾತ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತ ತಮ್ಮ ವಿವಾದಾತ್ಮಕ ಟ್ವೀಟ್ ಗಳಿಗೆ ಕ್ಷಮೆ ಯಾಚಿಸಲಾರೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ಆಘಾತವಾಗಿದೆ ಮತ್ತು ನೋವಾಗಿದೆ ಎಂದೂ ಇದೇ ವೇಳೆ ಅವರು ತಿಳಿಸಿದ್ದಾರೆ.

“ನಾನು ಕ್ಷಮೆ ಯಾಚಿಸಲಾರೆ. ನಾನು ದೊಡ್ಡತನಕ್ಕಾಗಿಯೂ ಮನವಿ ಮಾಡಲಾರೆ. ಕೋರ್ಟ್ ನೀಡುವ ಯಾವುದೇ ಶಿಕ್ಷೆಗೆ ನಾನು ಸಂತೋಷದಿಂದ ಬಾಗುತ್ತೇನೆ’’ ಎಂದು ಭೂಷಣ್ ಮಹಾತ್ಮ ಗಾಂಧೀಜಿಯವರನ್ನು ಉಲ್ಲೇಖಿಸುತ್ತಾ ಹೇಳಿದ್ದಾರೆ.

- Advertisement -

ಒಬ್ಬ ಉತ್ತಮ ನಾಗರಿಕನ ಕರ್ತವ್ಯವೆಂಬ ನಂಬಿಕೆಯೊಂದಿಗೆ ಟ್ವೀಟ್ ಗಳನ್ನು ಮಾಡಿದ್ದುದಾಗಿ ಅವರು ಹೇಳಿದ್ದಾರೆ. “ಈ ಸಂದರ್ಭದಲ್ಲಿ ನಾನು ಮಾತನಾಡದಿರುತ್ತಿದ್ದರೆ, ನಾನು ನನ್ನ ಕರ್ತವ್ಯಗಳಲ್ಲಿ ವಿಫಲವಾಗುತ್ತಿದ್ದೆ. ಕೋರ್ಟ್ ವಿಧಿಸುವ ಯಾವುದೇ ದಂಡವನ್ನು ನಾನು ಸಲ್ಲಿಸುತ್ತೇನೆ. ಕ್ಷಮೆ ಯಾಚಿಸಲು ನಾನು ನಿರಾಕರಿಸುತ್ತೇನೆ’’ ಎಂದು ಭೂಷಣ್ ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಸುಪ್ರೀಂ ಕೋರ್ಟ್ ಹಾಗೂ ಸಿಜೆಐ ವಿರುದ್ಧ ಭೂಷಣ್ ಮಾಡಿದ್ದ ಎರಡು ಟ್ವೀಟ್ ಗಳು ವಿವಾದಕ್ಕೆ ಕಾರಣವಾಗಿವೆ. ಬಿಜೆಪಿ ನಾಯಕರೊಬ್ಬರಿಗೆ ಸೇರಿದ ದುಬಾರಿ ಮೋಟಾರ್ ಬೈಕ್ ನಲ್ಲಿ ಸಿಜೆಐ ಸವಾರಿ ಮಾಡಿದ್ದ ಬಗ್ಗೆ ಟ್ವೀಟ್ ಮಾಡಿದ್ದ ಭೂಷಣ್, ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ಪಾರದರ್ಶಕತೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಈ ಸಂಬಂಧ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಿಸದ ಭೂಷಣ್ ಅವರ ವಿರುದ್ಧ ಸುಪ್ರೀಂ ಕೋರ್ಟ್ ಆ.14ರಂದು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದೆ.

- Advertisement -