ನೆರೆ ಭರಿಸಲಾಗದ ಬದುಕಿನ ಹೊರೆ!

0
28

♦ಎನ್. ನಾಗೇಶ್

ಮಳೆ ನಿಂತಿದೆ; ನೆರೆಯೂ ಹಿಂದಕ್ಕೆ ಸರಿದಿದೆ. ಆದರೆ ಸಂತ್ರಸ್ತರ ಬವಣೆ ಮಾತ್ರ ಕರಗಿಲ್ಲ!

ಶತಮಾನದಲ್ಲಿಯೇ ಕಂಡು ಕೇಳರಿಯದ ಮಳೆ, ಪ್ರವಾಹ ಇಡೀ ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದ ಭಾಗಶಃ ಪ್ರದೇಶಗಳ ಜನರನ್ನು ತತ್ತರಿಸಿ ಬಿಟ್ಟಿತು. ಜನಜೀವನ ನಲುಗಿ ಹೋಗಿ ಬದುಕು ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಈಗ ಮಳೆಯ ಅಬ್ಬರ ಮುಗಿದು ಹೋಗಿದ್ದು ನೆರೆ ಶಾಂತವಾಗಿದೆ. ಆದರೆ ಸಂತ್ರಸ್ತರ ಬದುಕು ಮಾತ್ರ ಅತಂತ್ರ ಸ್ಥಿತಿಯಲ್ಲಿದೆ.

ಮನೆ, ಮಠ ಕಳೆದುಕೊಂಡವರು ಏನು ಮಾಡಬೇಕೆಂದು ತಿಳಿಯದಾಗಿದೆ. ಪರಿಹಾರ ಕೇಂದ್ರಗಳ ಆಶ್ರಯ ಪಡೆದವರು ಈಗ ತಮ್ಮ ತಮ್ಮ ಮನೆ ಮಠಗಳತ್ತ ಮುಖ ಮಾಡಿದ್ದು, ಹೊಸ ಬದುಕನ್ನು ಯಾವ ರೀತಿ ಕಟ್ಟಿಕೊಳ್ಳಬೇಕು ಎಂಬ ಚಿಂತೆಯಲ್ಲಿದ್ದಾರೆ.

ನಾಡಿಗೆ ಅನ್ನ ಹಾಕುವ ಅನ್ನದಾತನೇ ಇನ್ನೊಬ್ಬರ ಬಳಿ ಬೇಡಿ ತಿನ್ನಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ವಿದ್ಯೆ ಕಲಿತು ದೇಶವನ್ನು ಮುನ್ನಡೆಸಬೇಕಾದ ವಿದ್ಯಾರ್ಥಿಗಳು ಪುಸ್ತಕ ಸೇರಿದಂತೆ ಅಗತ್ಯ ದಾಖಲೆಯನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ.

ಮಳೆ ಬಂತು.. ನೆರೆಯೂ ಆಯ್ತು.. ಮನೆ ಜತೆಗೆ ಎಲ್ಲ ಸಾಮಗ್ರಿ ಗಳನ್ನು ನೀರಿನೊಂದಿಗೆ ಕೊಚ್ಚಿ ಕೊಂಡು ಹೋಯಿತು. ಈಗ ಮನೆ ಕಳೆದುಕೊಂಡವರ ಮುಂದೆ ಜೀವನ ಹೇಗೆ ಎಂಬ ದೊಡ್ಡ ಪ್ರಶ್ನೆ ಎದುರಾಗಿದ್ದು ಈ ಬಗ್ಗೆ ಸರಕಾರ ಪುನರ್ವಸತಿ ಕಲ್ಪಿಸಬೇಕಾದ ದೊಡ್ಡ ಸವಾಲು ಎದುರಿಸಬೇಕಾಗಿದೆ.

ಪರಿಹಾರ ಕೇಂದ್ರಗಳಿಗೆ ಮತ್ತು ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ದಾನಿಗಳು ಸಹಾಯ ಹಸ್ತ ಚಾಚಿದರು ನಿಜ. ಆದರೆ ಶಾಶ್ವತ ಬದುಕು ರೂಪಿಸಿಕೊಳ್ಳಲು ಸಂತ್ರಸ್ತರಿಗೆ ಆರ್ಥಿಕ, ಮಾನಸಿಕ ನೈತಿಕ ಬಲ ಬೇಕಾಗಿದೆ. ಅದನ್ನು ನೀಡುವ ಮಹಾ ಮನಸ್ಸುಗಳ ಕೊರತೆ ಸಹ ಇರುವುದು ದೊಡ್ಡ ದುರಂತ.

ವರದಿಯ ಪ್ರಕಾರ 22 ಜಿಲ್ಲೆಗಳ 103 ತಾಲೂಕುಗಳು ಪ್ರವಾಹ ಪೀಡಿತವಾಗಿದ್ದು, 7.5ಲಕ್ಷ ಹೆಕ್ಟೇರ್ ಭೂಮಿಯಲ್ಲಿನ ಬೆಳೆ ನಾಶವಾಗಿದೆ. 75,317 ಮನೆಗಳು ಹಾನಿಯಾಗಿವೆ. ಮಳೆ ಮತ್ತು ನೆರೆ ಹಾವಳಿಯಿಂದ 82 ಜನ ಮೃತಪಟ್ಟಿದ್ದು, 9 ಜನ ಕಣ್ಮರೆಯಾಗಿದ್ದಾರೆ. ಸಂತ್ರಸ್ತರಿಗಾಗಿ ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಈಗಲೂ 493 ಪರಿಹಾರ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ.

ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚಿ ಜನಜೀವನ ಸಂಪೂರ್ಣ ಸ್ತಬ್ಧವಾಗಿತ್ತು. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಭೂ ಕುಸಿತ ಉಂಟಾಗಿ ಜನರು ಪರಿತಪಿಸುವಂತಾಗಿತ್ತು. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಇದೇ ವೇಳೆ ಕೆಲವೊಂದು ಸಂಘಟನೆಗಳ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯು ವರ್ಣನಾತೀತ.

ಅತ್ತ ನೆರೆ; ಇತ್ತ ರಾಜಕೀಯ ಹೈಡ್ರಾಮ:

ಹೌದು ಅತ್ತ ಜನ ನೆರೆಯಿಂದಾಗಿ ಪರಿತಪಿಸುತ್ತಿದ್ದರೆ; ಇತ್ತ ರಾಜಕೀಯ ಹೈಡ್ರಾಮದ ಫಲವಾಗಿ ಸರಕಾರವೇ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದ್ದು ಮಾತ್ರ ಸಂತ್ರಸ್ತರ ನೋವನ್ನು ಮತ್ತಷ್ಟು ಅಸಹನೀಯಗೊಳಿಸಿತ್ತು. ತಮ್ಮ ನೋವು ಕೇಳಬೇಕಾದವರೇ ಇಲ್ಲದಾಗ ಬಡ ಜೀವಗಳು ಯಾರಲ್ಲಿ ತಾನೇ ದುಃಖ ತೋಡಿಕೊಳ್ಳಬೇಕು. ವಿಷಮ ಪರಿಸ್ಥಿತಿಯಲ್ಲೇ ರಾಜಕೀಯ ನಾಯಕರು ತಮ್ಮ ಸ್ವಾರ್ಥ ಲಾಲಸೆಯಲ್ಲಿ ತೊಡಗಿದ್ದು ನಿಜಕ್ಕೂ ದುರಂತ. ತತ್‌ಕ್ಷಣ ತಮ್ಮ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲದೇ, ಮತಿಗೆಟ್ಟ ಸರಕಾರದ ಮುಂದೆ ಗತಿಗೆಟ್ಟ ಸಂತ್ರಸ್ತರ ಪಾಡು ದೇವರಿಗೇ ಪ್ರೀತಿ.

ದಾಖಲೆ ಪತ್ರಗಳು ನಾಶ:

ಮುಂದಿನ ದಿನಗಳಲ್ಲಿ ಜೀವನವನ್ನು ಶೂನ್ಯದಿಂದ ಕಟ್ಟಿಕೊಳ್ಳಬೇಕಾದ ಸವಾಲು ಸಂತ್ರಸ್ತರ ಮುಂದಿದೆ. ಮಳೆ ನೀರಿನೊಂದಿಗೆ ಕೊಚ್ಚಿ ಹೋಗಿರುವ ಮನೆ, ಪಾತ್ರೆ, ಪಡಿತರ ಚೀಟಿ ಸೇರಿದಂತೆ ಸರಕಾರ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳೆಲ್ಲವೂ ನಾಶವಾಗಿದ್ದು, ಮರಳಿ ಪಡೆಯಬೇಕಾಗಿದೆ. ಇದಕ್ಕೆಲ್ಲಾ ಕನಿಷ್ಠವೆಂದರೂ ಹಲವು ವರ್ಷಗಳೇ ಬೇಕು. ಇದರ ನಡುವೆ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಚಿಂತೆ ನಗರದಲ್ಲಿ ಸಂತ್ರಸ್ತರಾದವರನ್ನು ಕಾಡುತ್ತಿದೆ. ಎಲ್ಲವನ್ನೂ ಶುರುವಿನಿಂದಲೇ ಕಟ್ಟಿಕೊಳ್ಳಬೇಕಲ್ಲಾ ಎಂಬ ಚಿಂತೆಯಲ್ಲಿ ಜನ ಕಣ್ಣೀರಿಡುತ್ತಿದ್ದಾರೆ. ರಸ್ತೆ ರಿಪೇರಿ, ಮನೆ ಶುಚಿ ಕಾರ್ಯ ಇಂತಹ ಕೆಲಸಗಳನ್ನು ಜಿಲ್ಲಾಡಳಿತ, ಮಹಾನಗರದ ಪಾಲಿಕೆಗಳು ಮಾಡಿದರೂ ಸಂತ್ರಸ್ತರು ಭವಿಷ್ಯದ ಚಿಂತೆಯಲ್ಲಿ ಇದ್ದಾರೆ.

ಮರು ನಿರ್ಮಾಣದ ಸವಾಲು:

ಕಳೆದ ಕೆಲ ದಿನಗಳಿಂದ ಅಬ್ಬರಿಸಿದ ಮಳೆಗೆ ಪ್ರವಾಹದಿಂದ ತತ್ತರಿಸಿದ ನಗರದಲ್ಲಿ ದೊಡ್ಡ ಅನಾಹುತದ ಸರಣಿಯೇ ಸೃಷ್ಟಿಯಾಗಿದೆ. ನಗರ ಈಗ ಸಹಜ ಸ್ಥಿತಿಯತ್ತ ಮುಖ ಮಾಡಿದ್ದರೂ ಮುಂದೆ ಪುನರ್ವಸತಿ ಕಾರ್ಯ ಜಿಲ್ಲಾಡಳಿತ, ಪಾಲಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಳೆರಾಯನ ಆಭರ್ಟಕ್ಕೆ ಬದುಕೇ ಛಿದ್ರವಾಗಿದೆ. ನೆರೆಗೆ ಲಕ್ಷಾಂತರ ಮನೆಗಳು ಹಾನಿಗೊಳಗಾಗಿವೆ. ಇವುಗಳಲ್ಲಿ ಹಲವು ಮನೆಗಳು ನೆಲಸಮವಾಗಿದ್ದರೆ, ಇನ್ನೂ ಹಲವು ಮನೆಗಳು ಭಾಗಶಃ ಹಾನಿಯಾಗಿವೆ. ಮೂರಾಬಟ್ಟೆಯಾಗಿರುವ ಸಂತ್ರಸ್ತರ ಬದುಕು ಕಟ್ಟಿಕೊಡಲು ಒಂದಾಗಿ ಶ್ರಮಿಸಬೇಕಾದ ಜನಪ್ರತಿನಿಧಿಗಳು ಪರಸ್ಪರ ದೂಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಇವುಗಳ ಮರುನಿರ್ಮಾಣ ಹೇಗೆ ಎಂಬ ಚಿಂತೆ ಜನರನ್ನು ಕಾಡುತ್ತಿದೆ.

ಅಳಿದುಳಿದ ಧಾನ್ಯ, ವಸ್ತುಗಳ ರಕ್ಷಣೆ:

ಸಹಜ ಸ್ಥಿತಿಯತ್ತ ನೆರೆ ಪೀಡಿತ ಪ್ರದೇಶದ ತೆರಳುತಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ನೆರೆಗೆ ತತ್ತರಿಸಿದ ಮಳೆ ಶಾಂತವಾಗಿರುವುದು ಸಂತ್ರಸ್ತರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.

ಕಳೆದ ನಾಲ್ಕು ದಿನಗಳಿಂದ ಮಳೆರಾಯ ಬಿಡುವು ನೀಡಿರುವುದರಿಂದ ನಗರದ ಕೆಲ ನಿವಾಸಿಗಳು ಈಗ ಮನೆಯನ್ನು ಸ್ವಚ್ಛ ಮಾಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿದ್ದ ದಿನಸಿ, ಧಾನ್ಯ, ಬಟ್ಟೆ, ಹಾಸಿಗೆ, ಮಕ್ಕಳ ಪುಸ್ತಕಗಳು ಹಾಗೂ ಇತರ ವಸ್ತುಗಳು ನೀರಿನಲ್ಲಿ ತೋಯ್ದು ತೊಪ್ಪೆಯಾಗಿದ್ದವು. ಮಳೆ ಬಿಡುವು ನೀಡಿದ್ದರಿಂದ ತೋಯ್ದ ವಸ್ತುಗಳನ್ನು ಮನೆ ಆವರಣದಲ್ಲಿ ಒಣಗಿಸಲು ಹಾಕುತ್ತಿದ್ದ ದೃಶ್ಯಗಳು ಕಂಡು ಬರುತ್ತಿವೆ.

ಮಕ್ಕಳಿಗೆ ಭವಿಷ್ಯದ ಚಿಂತೆ:

ನೆರೆ ಮತ್ತು ಮಳೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಅಪಾರ ಪುಸ್ತಕ ದಾಖಲೆಗಳು ನೀರುಪಾಲಾಗಿದ್ದು, ಅವರು ಶಾಲಾ ಕಾಲೇಜುಗಳಿಗೆ ಹೋಗದೇ ಭವಿಷ್ಯದ ಚಿಂತೆಯಲ್ಲಿದ್ದಾರೆ. ಇಡೀ ಮನೆಗೆ ಆಧಾರವಾಗಬೇಕಿದ್ದ ವಿದ್ಯಾರ್ಥಿಗಳು ಮುಂದೆ ಹೇಗೆ ನಮ್ಮ ಬದುಕು ಎಂಬ ಕಾರ್ಮೋಡ ಅವರ ಭವಿಷ್ಯದ ಮೇಲೆ ಕವಿದಿದೆ.

ಮಕ್ಕಳು, ವಯೋವೃದ್ಧ್ದರ ನರಕಯಾತನೆ:

ನೆರೆ ಪೀಡಿತ ಪ್ರದೇಶಗಳ ಬಹುತೇಕ ಗಂಜಿ ಕೇಂದ್ರಗಳಲ್ಲಿ ಅಗತ್ಯ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಊಟ, ಸ್ವಚ್ಛತೆಯೇ ಇಲ್ಲ. ಮನೆ ಮಠ ಸೇರಿದಂತೆ ಸರ್ವಸ್ವ ಕಳೆದುಕೊಂಡ ಎಷ್ಟೋ ಜನರಿಗೆ ಈಗ ಈ ಪರಿಹಾರ ಕೇಂದ್ರಗಳೇ ಆಸರೆ.

ಸರಕಾರ ಮತ್ತು ಜಿಲ್ಲಾಡಳಿತ ಪರಿಹಾರ ಕೇಂದ್ರ ತೆರೆದು ಕುಳಿತುಕೊಂಡರೇ ಸಾಲದು ಇಲ್ಲಿ ಅಗತ್ಯ ಸೌಕರ್ಯ ನೀಡಿದಾಗ ಸಂತ್ರಸ್ತರಿಗೆ ಆಸರೆ. ಆದರೆ ಬಹುತೇಕ ಪರಿಹಾರ ಕೇಂದ್ರಗಳಲ್ಲಿ ನೀರು ಇದ್ದರೆ ಬಟ್ಟೆ ಇಲ್ಲಾ, ಬಟ್ಟೆ ಇದ್ದರೆ ಸರಿಯಾದ ಸ್ವಚ್ಛತೆ ಇಲ್ಲಾ. ಕುರಿ ದೊಡ್ಡಿಯಂತೆ ತುಂಬಲಾಗಿದೆ. ಊಟ ಮತ್ತು ಚಹಾದ ವೇಳೆ ಆಹಾರ ಒದಗಿಸಿದರೆ ಸಾಲದು.

ಸಂತ್ರಸ್ತರಿಗೆ ಆರೋಗ್ಯ ಪರಿಶೀಲನೆಗೆ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು, ಎಷ್ಟೋ ಮಕ್ಕಳು, ವಯೋವೃದ್ಧ್ದರು ಮತ್ತು ಗರ್ಭಿಣಿಯರು ಈ ಕೇಂದ್ರಗಳಲ್ಲಿ ಇದ್ದಾರೆ. ಅಲ್ಲಿ ಅವರ ಆರೋಗ್ಯ ಚಿಕಿತ್ಸೆ ಮಾಡುತ್ತಿಲ್ಲ. ಸರಿಯಾದ ವಿದ್ಯುತ್ ಸಂಪರ್ಕ ಇಲ್ಲದೇ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸಾವಿನ ಸರಣಿ:

ಇದೀಗ ಮಳೆ ನಿಂತು, ನೆರೆ ಇಳಿದಿದೆ. ನಿಧಾನವಾಗಿ ಗ್ರಾಮಗಳ ಸ್ಥಿತಿ ಸುಧಾರಿತಗೊಳ್ಳುತ್ತಿದೆ. ಸಂತ್ರಸ್ತರು ತಮ್ಮ ತಮ್ಮ ಗ್ರಾಮಗಳಿಗೆ ತೆರಳಿ ತಾವು ಉಳಿದುಕೊಂಡಿದ್ದ ಮನೆ, ಜಮೀನುಗಳು, ಜಾನುವಾರುಗಳ ಸ್ಥಿತಿ ಕಂಡು ಮಮ್ಮಲ ಮರುಗುತ್ತಿದ್ದಾರೆ. ಕೆಲವರು ತಮಗೆ ಬಂದ ದುಸ್ಥಿತಿಗೆ ಕಣ್ಣೀರಾಗುತ್ತಿದ್ದಾರೆ.

ಮತ್ತೊಂದೆಡೆ ಪ್ರವಾಹದ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದವರ ಶವಗಳು ಅಲ್ಲಲ್ಲಿ ಕಾಣ ಸಿಗುತ್ತಿವೆ. ಮಣ್ಣಲ್ಲಿ ಹೂತು ಹೋದ ಅದೆಷ್ಟೋ ಜೀವಗಳು ಕಮರಿಹೋಗಿ ಅನಾಥವಾಗಿವೆ. ಅವರನ್ನು ಗುರುತು ಹಿಡಿಯುವುದೂ ದುಸ್ತರವಾಗಿ ಹೋಗಿದೆ.

ಏತನ್ಮಧ್ಯೆ ಸಾಂಕ್ರಾಮಿಕ ರೋಗದ ಭೀತಿಯೂ ಸಂತ್ರಸ್ತರನ್ನು ಕಾಡಲು ಶುರುವಿಟ್ಟುಕೊಂಡಿದೆ. ಭಾಗಶಃ ಹಾನಿಯಾದ ಮನೆಗಳಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ಜನ ಅಕ್ಷರಶಃ ಪರದಾಡುತ್ತಿದ್ದಾರೆ. ಉಣ್ಣಲು ಅನ್ನವಿಲ್ಲ; ದುಡಿಯಲು ಕೆಲಸವಿಲ್ಲ; ವೆಚ್ಚಕ್ಕೆ ಹಣವಿಲ್ಲದಂತಾಗಿ ಅನಾಥ ಪ್ರಜ್ಞೆಯಿಂದ ನೆರವಿನತ್ತ ಚಿತ್ತ ನೆಟ್ಟಿದ್ದಾರೆ.

ಹರಿದು ಬರುತ್ತಿದೆ ನೆರವಿನ ಮಹಾಪೂರ:

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೋವಿಗೆ ಮಿಡಿದಿರುವ ಕರ್ನಾಟಕದ ಜನ ನೆರವಿನ ಮಹಾಪೂರವನ್ನೇ ಹರಿಸಿದ್ದಾರೆ. ಸಂಘ ಸಂಸ್ಥೆಗಳು, ನೌಕರರು, ಕಾರ್ಮಿಕರು, ಜನಸಾಮಾನ್ಯರು… ಹೀಗೆ ಅನೇಕರು ದವಸ, ಧಾನ್ಯ, ಮೇವು, ಬಟ್ಟೆ, ಆರ್ಥಿಕ ನೆರವು ಸೇರಿದಂತೆ ಸಾಕಷ್ಟು ನೆರವನ್ನು ನೀಡುತ್ತಿದ್ದಾರೆ. ಇನ್ನೂ ಹಲವರು ನೆರೆಪೀಡಿತ ಸ್ಥಳಗಳಿಗೆ ತೆರಳಿ ಅಲ್ಲಿನ ಗಂಜಿ ಕೇಂದ್ರಗಳಲ್ಲಿ ಉಳಿದಿರುವವರನ್ನು ಸಂತೈಸಿ ಸಹಾಯಹಸ್ತ ಚಾಚುತ್ತಿರುವುದು ಕಣ್ಣಂಚಿನ ಕಣ್ಣಾಲಿಗಳಲ್ಲಿ ನೀರು ತರಿಸದೇ ಇರದು.

ಉತ್ತರ ಕರ್ನಾಟಕದ ಭಾಗಶಃ ಗ್ರಾಮಗಳು ಮುಳುಗಿಹೋಗಿವೆ. ಮನೆ, ಜಮೀನು, ಬೆಳೆದ ಬೆಳೆ ಎಲ್ಲವೂ ನಾಶವಾಗಿದೆ. ಗ್ರಾಮಗಳು ಉಕ್ಕಿ ಹರಿದ ಪ್ರವಾಹಕ್ಕೆ ಹಾಳೂರಿನಂತಿದ್ದು; ಸ್ಮಶಾನಮೌನ ಆವರಿಸಿದೆ. ಎಲ್ಲರೆದೆಯಲ್ಲೂ ದುಃಖ ಮಡುಗಟ್ಟು ನಿಂತಿದೆ. ಕಣ್ಣಲ್ಲಿ ಭವಿಷ್ಯದ ಆತಂಕ ಇಣುಕುತ್ತಿದೆ. ಹಸಿದ ಹೊಟ್ಟೆ; ಬದುಕು ಮೂರಾಬಟ್ಟೆಯಾಗಿರುವುದು ಅವರನ್ನು ಕಂಗೆಡಿಸಿದೆ.

ಸರ್ಕಾರ ನೆರೆಯ ಗಂಭೀರತೆ ಅರಿತು; ಪುನರುಜ್ಜೀವನಕ್ಕೆ ಅಗತ್ಯ ನೆರವನ್ನು ತತ್‌ಕ್ಷಣ ಒದಗಿಸಬೇಕಿದೆ. ಇಲ್ಲವಾದರೆ ಅವರ ಬದುಕು ಮತ್ತಷ್ಟು ಶೋಚನೀಯವಾಗುವುದರಲ್ಲಿ ಎಳ್ಳಷ್ಟು ಅನುಮಾನವಿಲ್ಲ.

LEAVE A REPLY

Please enter your comment!
Please enter your name here