ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಆರೆಸ್ಸೆಸ್

Prasthutha|

ನವದೆಹಲಿ : ಕೇಂದ್ರಸಚಿವ ಸಂಪುಟದಿಂದ ಅನುಮೋದನೆ ಪಡೆದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) ರಚನೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮಹತ್ವದ ಪಾತ್ರ ನಿಭಾಯಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ರಾಷ್ಟ್ರೀಯ ಶಿಕ್ಷಣ ನೀತಿ ಕರಡು ರಚನೆಯ ವೇಳೆ ಆರೆಸ್ಸೆಸ್ ನ ವಿಭಾಗವೊಂದು ಭಾಗಿಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಕರಡು ರಚನೆಯ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷ ಕೆ. ಕಸ್ತೂರಿರಂಗನ್, ಸರ್ಕಾರದ ಪ್ರತಿನಿಧಿಗಳು, ಬಿಜೆಪಿ ಆಡಳಿತದ ರಾಜ್ಯದ ಶಿಕ್ಷಣ ಸಚಿವರುಗಳು ಮತ್ತು ಆರೆಸ್ಸೆಸ್ ಪದಾಧಿಕಾರಿಗಳ ನಡುವೆ ಸಭೆಗಳು ನಡೆದಿವೆ ಎಂದು ವರದಿ ತಿಳಿಸಿದೆ.

ಆದಾಗ್ಯೂ, ಅಂತಿಮವಾಗಿ ಅನುಮೋದನೆ ಪಡೆದಿರುವ ನೀತಿಯಲ್ಲಿ, ಆರೆಸ್ಸೆಸ್ ಚಿಂತನೆಗಳಿಗಿಂತ ರಾಜಕೀಯ ಹಿತಾಸಕ್ತಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದಂತೆ ಕಂಡುಬಂದಿದೆ. ಆರೆಸ್ಸೆಸ್ ನ ಕೆಲವು ಪ್ರಮುಖ ಬೇಡಿಕೆಗಳನ್ನು ಬದಿಗಿಟ್ಟು ಸರ್ಕಾರ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಅದರಲ್ಲಿ, ಮುಖ್ಯವಾಗಿ ಹೊಸ ಎನ್ ಇಪಿಯಲ್ಲಿ ತ್ರಿಭಾಷಾ ಸೂತ್ರವನ್ನು ಸರ್ಕಾರ ಒಪ್ಪಿಕೊಂಡಿರುವುದು ಮುಖ್ಯವಾಗಿ ಗಮನಿಸಬೇಕಾಗಿದೆ.

- Advertisement -

ಆರನೇ ತರಗತಿ ನಂತರ ಹಿಂದಿ ಒಂದು ವಿಷಯವನ್ನಾಗಿ ಕಲಿಯಬೇಕು ಎನ್ನುವ ನೀತಿಯನ್ನು ಸರ್ಕಾರ ಕೈಬಿಟ್ಟಿದೆ. ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಕಳೆದ ವರ್ಷದ ಮಾರ್ಚ್ 31ರಂದು ಕಸ್ತೂರಿ ರಂಗನ್ ಸಮಿತಿಯು ಸಚಿವಾಲಯದ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದ ಕರಡು ಸಮಿತಿಯ ಶಿಫಾರಸ್ಸುಗಳಲ್ಲಿ ಹಿಂದಿಯೇತರ ಭಾಷಿಕರ ರಾಜ್ಯಗಳಲ್ಲಿ ಹಿಂದಿಯನ್ನು ಕಲಿಯಬೇಕು ಎಂಬ ಅಂಶವನ್ನು ಒಳಗೊಂಡಿತ್ತು. ಆದರೆ, ಈಗ ಅಂತಿಮ ನೀತಿಯಲ್ಲಿ ಈ ವಿಷಯಗಳಿಗೆ ರಾಜ್ಯಗಳಿಗೆ ವಿನಾಯತಿ ನೀಡಲಾಗಿದೆ. “ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರಲಾಗುವುದಿಲ್ಲ’’ ಎಂದು ಸ್ಪಷ್ಟಪಡಿಸಲಾಗಿದೆ.

ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಸ್ಥಾಪನೆಗೆ ಆರೆಸ್ಸೆಸ್ ಪರಿವಾರದ ಸ್ವದೇಶಿ ಜಾಗರಣ್ ಮಂಚ್ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರೂ, ಅದಕ್ಕೆ ಸಮ್ಮತಿಸದೆ, ವಿದೇಶಿ ವಿವಿ ಕ್ಯಾಂಪಸ್ ಸ್ಥಾಪನೆಗೆ ನೂತನ ನೀತಿಯಲ್ಲಿ ಅನುಮತಿ ನೀಡಲಾಗಿದೆ. ಆದರೆ, ಪುರಾತನ ಭಾರತೀಯ ಜ್ಞಾನವನ್ನು ಒಳಗೊಳ್ಳುವ ಕುರಿತ ಆರೆಸ್ಸೆಸ್ ಬೇಡಿಕೆಗೆ ಮನ್ನಣೆ ಸಿಕ್ಕಿದೆ.

 “ನಾನು ನೀಡಿರುವ ಸಲಹೆಗಳಲ್ಲಿ ಶೇ. 80ರಷ್ಟು ವಿಷಯಗಳನ್ನು ಒಪ್ಪಲಾಗಿದೆ. ಯಾವ ವಿಷಯಗಳನ್ನು ಒಪ್ಪಲಾಗಿಲ್ಲ ಎಂಬುದನ್ನು ನಾನು ಹೇಳುವುದಿಲ್ಲ’’ ಎಂದು ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆಯ ಸಂಘಟನಾ ಮಂತ್ರಿ ಬಾಲಮುಕುಂದ ಪಾಂಡೆ ಹೇಳಿದ್ದಾರೆ.

“ನಮ್ಮ ಬಹುತೇಕ ಸಲಹೆಗಳನ್ನು ಒಪ್ಪಲಾಗಿದೆ. ಎನ್ ಇಪಿಯ ಸಂಪೂರ್ಣ ದಾಖಲೆ ಹೊರಬಿದ್ದ ಬಳಿಕವಷ್ಟೇ ನನ್ನ ಯಾವ ಸಲಹೆಗಳು ಸ್ವೀಕೃತಗೊಂಡಿಲ್ಲ ಎಂದು ಹೇಳಲು ಸಾಧ್ಯ’’ ಎಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಸಂಘಟನಾ ಮಂತ್ರಿ ಮಹೇಂದ್ರ ಕಪೂರ್ ಹೇಳಿದ್ದಾರೆ.

ತ್ರಿಭಾಷಾ ನೀತಿಯಲ್ಲಿ ಹಿಂದಿ ಪ್ರಸ್ತಾಪವನ್ನು ಕೈಬಿಟ್ಟಿರುವುದು ತಮ್ಮ ಸಮ್ಮತಿಯಿಂದಲೇ ಎಂದು ಆರೆಸ್ಸೆಸ್ ಮೂಲಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ. ಕನಿಷ್ಠ 5ನೇ ತರಗತಿ ವರೆಗಾದರೂ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು, ಯಾವುದೇ ಭಾಷೆಯ ಹೇರಿಕೆ ಸಲ್ಲದು ಎಂಬ ವಿಚಾರದಲ್ಲಿ ಆರೆಸ್ಸೆಸ್ ರಾಜಿ ಮಾಡಿಕೊಂಡು, ತನ್ನ ಸಮ್ಮತಿ ಸೂಚಿಸಿತ್ತು ಎನ್ನಲಾಗಿದೆ.

- Advertisement -