ನೂತನ ಬ್ಯಾರಿ ಭವನವನ್ನು ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಬಳಸಲಾಗುವುದಿಲ್ಲ: ರಹೀಂ ಉಚ್ಚಿಲ ಸ್ಪಷ್ಟನೆ

Prasthutha|

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನೂತನ ಬ್ಯಾರಿ ಭವನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನಕ್ಕೆ ಒಳಪಟ್ಟ ಭವನವಾಗಿದೆ. ಇದು ಭಾಷೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಮುಂತಾದ ವಿಷಯಗಳಿಗೆ ಮಾತ್ರ ಉಪಯೋಗವಾಗಲಿದ್ದು, ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಲಾಗುವುದಿಲ್ಲ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಭವನದಲ್ಲಿ ಒಂದು ಸಮುದಾಯಕ್ಕೆ ಸೇರಿದ ಧಾರ್ಮಿಕ ಕೇಂದ್ರ ನಿರ್ಮಾಣವಾಗಲಿದೆ ಎಂಬ ತಪ್ಪುಕಲ್ಪನೆ ಅಪಪ್ರಚಾರವಾಗುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ನೂತನ ಬ್ಯಾರಿ ಭವನವು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಹಜ್ ಮತ್ತು ವಕ್ಫ್ ಇಲಾಖೆ ಸೇರಿದಂತೆ ಯಾವುದೇ ಒಂದು ಸಮುದಾಯವನ್ನು ಪ್ರತಿನಿಧಿಸುವ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿಲ್ಲ ಹಾಗೂ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

- Advertisement -

ನೂತನ ಬ್ಯಾರಿ ಭವನ ಕಟ್ಟಡದ ಶಿಲಾನ್ಯಾಸವು ಜನವರಿ 1ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ನಡೆಯಲಿದೆ.

- Advertisement -