“ನೀವು ಜಾತ್ಯತೀತರಾಗಿ ಬದಲಾಗಿದ್ದೀರಾ?” – ಉದ್ಧವ್ ರನ್ನು ಪ್ರಶ್ನಿಸಿದ ಮಹಾರಾಷ್ಟ್ರ ರಾಜ್ಯಪಾಲರು

Prasthutha|

ಮುಂಬೈ: ಮಾರ್ಚ್ ತಿಂಗಳಲ್ಲಿ ಕೊರೊನಾ ಲಾಕ್ಡೌನ್ ಮಧ್ಯೆ ಮುಚ್ಚಲಾದ ದೇವಸ್ಥಾನಗಳನ್ನು ಮರುತೆರೆಯುವ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮಧ್ಯೆ ತೀವ್ರ ವಾಗ್ವಾದವುಂಟಾಗಿದೆ. ವ್ಯಂಗ್ಯೋಕ್ತಿಗಳಿಂದ ತುಂಬಿದ ಪತ್ರದಲ್ಲಿ ರಾಜ್ಯಪಾಲರು ಉದ್ದವ್ ಠಾಕ್ರೆಗೆ ತಾವು ‘ಜಾತ್ಯತೀತ’ ರಾಗಿ ಬದಲಾಗಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಉದ್ಧವ್ ಠಾಕ್ರೆ ತನಗೆ ಹಿಂದುತ್ವದ ಸರ್ಟಿಫಿಕೇಟ್ ನ ಅಗತ್ಯವಿಲ್ಲ ಎಂದಿದ್ದು, ಕಂಗನಾ ರಾಣವತ್ ವಿವಾದವನ್ನು ಉಲ್ಲೇಖಿಸಿದ್ದಾರೆ.

ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಮುಚ್ಚಲಾದ ಆರಾಧನಾ ಸ್ಥಳಗಳನ್ನು ತಕ್ಷಣವೇ ಮರುತೆರೆಯುವಂತೆ ಕೋರಿ ರಾಜ್ಯಪಾಲರು ಉದ್ಧವ್ ಠಾಕ್ರೆಗೆ ಸೋಮವಾರದಂದು ಪತ್ರ ಬರೆದಿದ್ದರು.

- Advertisement -

“ನೀವು ಹಿಂದುತ್ವದ ಪ್ರಬಲ ಉಪಾಸಕರಾಗಿದ್ದವರು. ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಗೆ ಭೇಟಿ ನೀಡುವ ಮೂಲಕ ನೀವು ರಾಮ ದೇವರ ಕುರಿತು ತಮ್ಮ ಭಕ್ತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಿರಿ. ಅಷಾಡಿ ಏಕದಶಿಯಂದು ನೀವು ಪಂಢಾಪುರದ ವಿಠಲ ರುಕ್ಮಿಣಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಿರಿ” ಎಂದು ರಾಜ್ಯಪಾಲರು ಬರೆದಿದ್ದಾರೆ.

“ಆರಾಧನಾಲಯಗಳನ್ನು ಮರುತೆರೆಯುವುದನ್ನು ಮುಂದೂಡುವಂತೆ ನಿಮಗೆ ದೈವಿಕ ಮುನ್ಸೂಚನೆಗಳು ಲಭಿಸುತ್ತಿವೆಯೇ ಅಥವಾ ನೀವು ‘ಜಾತ್ಯತೀತ’ರಾಗಿ ಬದಲಾಗಿದ್ದೀರಾ ಎಂದು ನನಗೆ ಅಚ್ಚರಿಯಾಗುತ್ತಿದೆ” ಎಂದು ಬರೆದಿದ್ದಾರೆ.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ನನಗೆ ರಾಜ್ಯಪಾಲ ಅಥವಾ ಇನ್ನಾರಿಂದಲೂ ತನ್ನ ಹಿಂದುತ್ವದ ಸರ್ಟಿಫಿಕೇಟ್ ನ ಅಗತ್ಯವಿಲ್ಲ. ತಾನು ಎಚ್ಚರಿಕೆಯ ಪರಿಗಣನೆಯ ಬಳಿಕ ನಿರ್ಣಯವನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

“ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯುವ ಜನರನ್ನು ಸ್ವಾಗತಿಸುವುದು ತನ್ನ ಹಿಂದುತ್ವದ ವ್ಯಾಖ್ಯೆಗೆ ಒಳಪಡುವುದಿಲ್ಲ” ಎಂದು ಅವರು ಹೆಸರು ಹೇಳದೆಯೇ ಕಂಗನಾ ರಾಣವತ್ ರನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

- Advertisement -