ನಿರ್ಭಯಾ ನೆನಪಾಗಿಯೇ ಉಳಿಯುವುದೇಕೆ ?

Prasthutha|

  • ನಾ ದಿವಾಕರ

ಉತ್ತರ ಪ್ರದೇಶದ ಹಥ್ರಾಸ್ ಎಂಬ ಕುಗ್ರಾಮದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಮತ್ತೊಮ್ಮೆ ಹೆಣ್ತನದ ಘನತೆ, ರಕ್ಷಣೆ ಮತ್ತು ಗೌರವದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಹಥ್ರಾಸ್ ಘಟನೆ ನಡೆದು ಒಂದು ತಿಂಗಳು ಕಳೆದಿದೆ. ದೇಶಾದ್ಯಂತ ಪ್ರತಿರೋಧದ ದನಿಗಳು ಇನ್ನೂ ಕೇಳಿಬರುತ್ತಿವೆ. ಆರೋಪಿಗಳಿಗೆ ಶಿಕ್ಷೆಯಾಗುವುದೋ ಇಲ್ಲವೋ ಎನ್ನುವ ಪ್ರಶ್ನೆಯೂ ಕಾಡತೊಡಗಿದೆ. ಏಕೆಂದರೆ ಸಿಬಿಐ ಎಂಬ ಸೂತ್ರದ ಗೊಂಬೆ ತನಿಖೆಯನ್ನು ಕೈಗೆತ್ತಿಕೊಂಡಿದೆ. ಭಾರತದ ಸಾರ್ವಭೌಮ ಪ್ರಜೆಗಳು ಸಾಂವಿಧಾನಿಕ ಸಂಸ್ಥೆಗಳಲ್ಲಿ ಮತ್ತು ಪ್ರಭುತ್ವದ ನ್ಯಾಯ ನಿರ್ವಹಣೆಯಲ್ಲಿ ವಿಶ್ವಾಸ ಕಳೆದುಕೊಳ್ಳಲು ಇನ್ನೇನೂ ಉಳಿದಿಲ್ಲ ಎನ್ನುವುದನ್ನು ಬಾಬ್ರಿ ಮಸೀದಿಯ ಧ್ವಂಸವನ್ನು ಕುರಿತ ತೀರ್ಪು ನಿರೂಪಿಸಿದೆ.

70 ವರ್ಷಗಳ ಭಾರತ ಆರು ವರ್ಷಗಳಲ್ಲಿ ಬದಲಾಗಿದೆ ಎಂದು ಹೇಳುವುದೇ ಆದರೆ, ಸಾಂವಿಧಾನಿಕ ಮೌಲ್ಯಗಳ ಮತ್ತು ಸಾಂಸ್ಥಿಕ ಅಧಃಪತನದ ವಿಚಾರದಲ್ಲಿ ನಿರ್ವಿವಾದವಾಗಿ ಒಪ್ಪಿಬಿಡಬಹುದು. ಅತ್ಯಾಚಾರ ನಮ್ಮ ಸಂಸ್ಕೃತಿಯ ಒಂದು ಭಾಗ ಎನ್ನುವ ಸಂಸದರು ನಮ್ಮ ನಡುವೆ ಇದ್ದಾರೆ, ಅತ್ಯಾಚಾರ ನಡೆದರೆ ಸುಖ ಪಡಬೇಕು ಎನ್ನುವ ಪಕ್ಷದ ಮಹಿಳಾ ವಕ್ತಾರರೂ ಇದ್ದಾರೆ. ಸಾವು ಮತ್ತು ದೌರ್ಜನ್ಯಗಳನ್ನು ರಾಜಕೀಯ ಮೇಲು-ಕೀಳು ಪುಂಡಾಟಕ್ಕೆ ಬಳಸಿಕೊಳ್ಳುವ ರಾಜಕೀಯ ನಾಯಕರೂ ನಮ್ಮ ನಡುವೆ ಇದ್ದಾರೆ. ಸಾವಿಗೆ ಬೆಲೆ ಇಲ್ಲದ, ಜೀವಕ್ಕೆ ಮೌಲ್ಯವಿಲ್ಲದ ಒಂದು ದೇಶದಲ್ಲಿ ನಾವು ಬದುಕುತ್ತಿದ್ದೇವೆ, ನಿಜ, ಆದರೆ ಸಾವು ಎನ್ನುವುದು ಸಹಜೀವಿಗಳನ್ನು ಕಳೆದುಕೊಂಡವರನ್ನು ಜೀವಮಾನವಿಡೀ ಬಾಧಿಸುವ ಒಂದು ವಿದ್ಯಮಾನ ಎನ್ನುವ ಕನಿಷ್ಟ ಮಾನವೀಯ ಪ್ರಜ್ಞೆ ಮತ್ತು ಸಂವೇದನೆ ಆಡಳಿತ ವ್ಯವಸ್ಥೆಗೆ, ನಾಗರಿಕ ಸಮಾಜಕ್ಕೆ ಇರಬೇಕಲ್ಲವೇ ?

- Advertisement -

ಈ ಸಂವೇದನೆಯನ್ನು ಕಳೆದುಕೊಂಡಿರುವ ಸಮಾಜೋ-ರಾಜಕೀಯ ವ್ಯವಸ್ಥೆಯಲ್ಲಿ ಭಾರತ ಬದುಕುತ್ತಿದೆ. ಹಾಗೆಂದ ಮಾತ್ರಕ್ಕೆ ಈ ಮೊದಲು ಭಾರತದ ಆಳುವ ವರ್ಗಗಳಲ್ಲಿ ಸಂವೇದನೆ ಮತ್ತು ಮಾನವೀಯ ಪ್ರಜ್ಞೆ ಸದಾ ಜಾಗೃತವಾಗಿತ್ತು ಎಂದರ್ಥವಲ್ಲ. ಇದು ಕೇವಲ ಐದಾರು ವರ್ಷಗಳ ಬೆಳವಣಿಗೆಯೂ ಅಲ್ಲ. ಇಂದು ಅಧಿಕಾರಸ್ಥರ ದಿವ್ಯ ಮೌನದ ಹಿಂದೆ ನಮಗೆ ಕಾಣುತ್ತಿರುವ ಕ್ರೌರ್ಯ ಹಿಂದೆಯೂ ಕಂಡಿದೆ. ಇನ್ನು ಮುಂದೆಯೂ ಕಾಣುತ್ತದೆ. ಏಕೆಂದರೆ ಈ ಮೌನದ ಹಿಂದೆ ಮೇಲರಿಮೆಯ ಅಹಮಿಕೆ ಇರುವಷ್ಟೇ ಪ್ರಮಾಣದಲ್ಲಿ ಕೀಳರಿಮೆಯ ತಾರತಮ್ಯವೂ ಅಡಗಿದೆ. ಸಾವು ಎಲ್ಲರಿಗೂ ಪೂರ್ವನಿರ್ಧರಿತವೇ ಆಗಿದ್ದರೂ ಭಾರತದಲ್ಲಿ ಇದಕ್ಕೆ ಸಾಮುದಾಯಿಕ ಸ್ಪರ್ಶ ಇದೆ. ಅಸಹಜ ಸಾವುಗಳು ಈ ಸಾಮುದಾಯಿಕ ಅಸ್ಮಿತೆಗಳನ್ನಾಧರಿಸಿ ಮಾನ್ಯತೆ, ಸ್ವೀಕೃತಿ, ಸಾಂತ್ವನ ಮತ್ತು ಶ್ರದ್ಧಾಂಜಲಿಗಳಿಗೆ ಅರ್ಹತೆ ಪಡೆಯುತ್ತವೆ. ಈ ಪರಂಪರೆಗೆ ಬಹಿರಂಗ ಮೌಖಿಕ ಅಭಿವ್ಯಕ್ತಿಯನ್ನು ಕಳೆದ ಆರು ವರ್ಷಗಳಿಂದ ಕಾಣುತ್ತಿದ್ದೇವೆ. ಹಾಗಾಗಿಯೇ ಹಥ್ರಾಸ್ ಘಟನೆಗೆ ಪ್ರಧಾನಮಂತ್ರಿ ಏಕೆ ಪ್ರತಿಕ್ರಿಯಿಸಬೇಕು ಎಂದು ಕೇಳುವ ಸಂವೇದನೆಯಿಲ್ಲದ ಸಂಸದರೂ ನಮ್ಮ ನಡುವೆ ಇದ್ದಾರೆ.

ಶಿಕ್ಷಕರು ಸಾಯ್ತಾರೆ ಅಂತ ಶಾಲೆ ಮುಚ್ಚೋಕಾಗುತ್ಯೇ ಎಂದು ಕೇಳುವ ರಾಜ್ಯ ಸಚಿವರೂ ನಮ್ಮ ನಡುವೆ ಇದ್ದಾರೆ. ಸತ್ರೆ ಸಾಯ್ತಾರೆ ನಾವೇನ್ಮಾಡೋಕಾಗುತ್ತೆ ಎಂದ ಸಂಸದರೊಬ್ಬರು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಈ ಅಸೂಕ್ಷ್ಮತೆಗಳ ನಡುವೆಯೇ ಒಂದು ಆಡಳಿತ ವ್ಯವಸ್ಥೆ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುತ್ತಿದೆ. ಹಥ್ರಾಸ್ ಘಟನೆಯನ್ನು ಕುರಿತು ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ ಈ ಅಸೂಕ್ಷ್ಮತೆ ಎಷ್ಟು ಆಳವಾಗಿ ಬೇರೂರಿದೆ ಎನ್ನುವುದನ್ನು ಗ್ರಹಿಸಬಹುದು. ಈ ಜನ ನಾಯಕರಿಗೆ ಮನುಜ ಜೀವಗಳು ಲಿಂಗ ಭೇದಗಳ ನೆಲೆಯಲ್ಲಿ, ಜಾತಿ ಭೇದಗಳ ನೆಲೆಯಲ್ಲಿ ಮತ್ತು ಮತ ಭೇದಗಳ ನೆಲೆಯಲ್ಲಿ ಕಾಣುತ್ತವೆ. ರಾಜಧಾನಿ ದೆಹಲಿಯಿಂದ ಕೇವಲ 200 ಕಿಲೋಮೀಟರ್ ದೂರದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಈ ದೇಶದ ಪ್ರಧಾನಮಂತ್ರಿಯ ಹೃದಯವನ್ನು ತಟ್ಟುವುದೇ ಇಲ್ಲ. ಗೃಹ ಸಚಿವರು ಕಾಣೆಯಾಗಿರುವುದರಿಂದ ಏನೂ ಹೇಳಲಾಗುವುದಿಲ್ಲ.

ಇರಲಿ, ಇದು ರಾಜಕೀಯ ವಿಕೃತಿಯ ಪರ್ವಕಾಲ. ಸಾವಿರಾರು ಅಮಾಯಕರ ಮಾರಣ ಹೋಮ ನಡೆದಾಗಲೂ ನಮ್ಮ ದೇಶ ಹೀಗೆಯೇ ಇದ್ದಿತಲ್ಲವೇ ? ವಿಕೃತ ರಾಜಕೀಯ ಪ್ರಜ್ಞೆ ಭಾರತದ ಪ್ರಜ್ಞಾವಂತ ಮನಸುಗಳನ್ನು ಎಷ್ಟು ಕೆಡಿಸಿದೆ ಎನ್ನುವುದು ನಮ್ಮ ಮುಂದಿನ ಗಹನವಾದ ವಿಚಾರ. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯಗಳು ನಿತ್ಯ ಬದುಕಿನ ವಿದ್ಯಮಾನಗಳೇನೋ ಎನ್ನುವಂತೆ ವರ್ತಿಸುವ ಒಂದು ಬೃಹತ್ ಸಮುದಾಯದ ನಡುವೆ ನಾವು ಬದುಕುತ್ತಿದ್ದೇವೆ. ಈ ಸಮುದಾಯ ಸುಶಿಕ್ಷಿತವಾಗಿದೆ, ಹಿತವಲಯದಲ್ಲಿದೆ ಮತ್ತು ಸುರಕ್ಷಿತವಾಗಿದೆ ಎಂದು ಹೇಳಬೇಕಿಲ್ಲ. ಒಂದು ಅತ್ಯಾಚಾರದ ಘಟನೆಗೆ ಇಡೀ ದೇಶವೇ ಭುಗಿಲೇಳುವುದಿಲ್ಲ ಆದರೆ ಸಾಮಾಜಿಕ ವಲಯದಲ್ಲಿ ಇಂತಹ ಘಟನೆಗಳು ಕೊಂಚವಾದರೂ ಪ್ರಕ್ಷುಬ್ಧತೆಯನ್ನು ಉಂಟುಮಾಡಬೇಕಲ್ಲವೇ ?

ಈ ನಿರ್ಲಜ್ಜತೆಯ ನಡುವೆಯೇ ಭಾರತದ ಮಹಿಳೆಯರು ತಮ್ಮ ಹೆಣ್ತನದ ರಕ್ಷಣೆಗಾಗಿ, ಸ್ವಾಭಿಮಾನದ ಸಂರಕ್ಷಣೆಗಾಗಿ, ಸಮಾನತೆ, ಘನತೆ ಮತ್ತು ಗೌರವಕ್ಕಾಗಿ ದಿನನಿತ್ಯ ಹೋರಾಡಬೇಕಿದೆ. ಅತ್ಯಾಚಾರ ನಡೆದ ಕೂಡಲೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎನ್ನುವ ದನಿಗಳು ಮುಗಿಲು ಮುಟ್ಟುತ್ತವೆ. ಆದರೆ ಗಲ್ಲಿಗೇರಿಸಲು ಕಾನೂನು ಪ್ರಕ್ರಿಯೆ ಶೀಘ್ರವಾಗಿ ನಡೆಯಬೇಕು. ನ್ಯಾಯವ್ಯವಸ್ಥೆಯಲ್ಲಿನ ಲೋಪಗಳು ಸರಿಹೋಗಬೇಕು. ಪೊಲೀಸ್ ಇಲಾಖೆಯಲ್ಲಿ ಸುಧಾರಣೆಗಳು ಜಾರಿಯಾಗಬೇಕು. ಸಿಬಿಐನಂತಹ ಸಾಂವಿಧಾನಿಕ ಸಂಸ್ಥೆಗಳು ಸ್ವಾಯತ್ತತೆ ಪಡೆಯಬೇಕು. ಸರ್ಕಾರಗಳೇ ನೇಮಿಸುವ ವಿಶೇಷ ತನಿಖಾ ದಳ (ಎಸ್ ಐ ಟಿ) ನಿಷ್ಪಕ್ಷಪಾತವಾಗಬೇಕು. ರಾಜಕೀಯ ಹಸ್ತಕ್ಷೇಪಕ್ಕೆ ಅಂತ್ಯ ಹಾಡಬೇಕು. ಈ ಎಲ್ಲ ಆಡಳಿತ ಸುಧಾರಣೆಗಳನ್ನು ತರಲು ನಮ್ಮ ಜನಪ್ರತಿನಿಧಿಗಳಿಗೆ ಮೂಲತಃ ಮಾನವೀಯ ಪ್ರಜ್ಞೆ ಮತ್ತು ಸಂವೇದನೆ ಇರಬೇಕು. ಇಲ್ಲವಲ್ಲಾ !

ದುರಂತ ಎಂದರೆ ಜನಪ್ರತಿನಿಧಿಗಳು ಹೊಲಸು ಮಾತುಗಳ ಸರದಾರರಾಗಿದ್ದಾರೆ. ಹಥ್ರಾಸ್ ಘಟನೆಯ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ವರ್ತನೆಯನ್ನು ಹೈಕೋರ್ಟ್ ಪ್ರಶ್ನಿಸಿರುವುದೇ ಅಲ್ಲದೆ ಕಟುವಾಗಿ ಟೀಕಿಸಿದೆ. ಆದರೆ ಭಾರತದ ನಾಗರಿಕ ಸಮಾಜದ ಪ್ರಜ್ಞೆ ಇದರಿಂದ ಕೊಂಚವೂ ವಿಚಲಿತವಾಗಿಲ್ಲ. ಪಕ್ಷ ರಾಜಕಾರಣ ಮತ್ತು ಇದರಿಂದ ಪ್ರಭಾವಿತವಾಗುವ ಅಸ್ಮಿತೆಯ ರಾಜಕಾರಣ ಭಾರತದ ಪ್ರಜ್ಞಾವಂತ ಸಮುದಾಯವನ್ನು ನಿಷ್ಕ್ರಿಯಗೊಳಿಸಿರುವುದನ್ನು ಕಳೆದ ಎರಡು ದಶಕಗಳಲ್ಲಿ ಕಂಡಿದ್ದೇವೆ. 1984ರ ಸಿಖ್ ಹತ್ಯಾಕಾಂಡ ಮತ್ತು 1980-90ರ ದಶಕದ ರಥಯಾತ್ರೆ ಮತ್ತು ಕೋಮು ಗಲಭೆಗಳಲ್ಲಿ ಮಡಿದ ಸಾವಿರಾರು ಜೀವಗಳಿಗೆ ನ್ಯಾಯ ಒದಗಿಸಲು ನಮ್ಮ ನ್ಯಾಯ ವ್ಯವಸ್ಥೆಗೆ ಸಾಧ್ಯವಾಗಿಲ್ಲ. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಬಲಿಯಾದ ಜೀವಗಳನ್ನು ನಾವು ಮರೆತೇ ಹೋಗಿದ್ದೇವೆ. ಇದನ್ನು ಪ್ರಸ್ತಾಪಿಸಿದ ಕೂಡಲೇ ಕಾಶ್ಮೀರ ಮತ್ತು ಪಂಡಿತರ ಪ್ರಶ್ನೆ ಧುತ್ತೆಂದು ಎದುರಾಗುತ್ತದೆ. ಪಂಡಿತರಿಗೆ ಮಿಡಿಯುವ ಮನಸುಗಳು, ಕಾಶ್ಮೀರದಲ್ಲಿ ಒಂದೆಡೆ ಉಗ್ರಗಾಮಿಗಳ ಗುಂಡಿಗೆ ಮತ್ತೊಂದೆಡೆ ಸೇನೆಯ ಗುಂಡಿಗೆ ಬಲಿಯಾದ ಲಕ್ಷಾಂತರ ಅಮಾಯಕ ಕಾಶ್ಮೀರಿಗಳಿಗೆ ಮಿಡಿಯುವುದಿಲ್ಲ. ಅಲ್ಲಿ ಮತ್ತೆ ಅಸ್ಮಿತೆ ಮತ್ತು ರಾಜಕಾರಣ ಅಡ್ಡಿಯಾಗುತ್ತದೆ.

ಅಸಹಜ ಸಾವುಗಳಿಂದ ವಿಚಲಿತರಾಗದ ಮನಸ್ಥಿತಿಯನ್ನು ಭಾರತ ರೂಢಿಸಿಕೊಂಡು ವರುಷಗಳೇ ಕಳೆದಿವೆ. ಸತ್ತವರು ನಮ್ಮವರೋ ಅನ್ಯರೋ ಎಂದು ಶವಗಳನ್ನು ವಿಂಗಡಿಸುವ ಪರಂಪರೆಯನ್ನು ಈ ದೇಶದ ಸಾಂಸ್ಕೃತಿಕ ರಾಜಕಾರಣ ವ್ಯವಸ್ಥಿತವಾಗಿ ಬೆಳೆಸಿಕೊಂಡುಬಂದಿದೆ. ರಾಶಿರಾಶಿ ಶವಗಳಲ್ಲೂ ಹೆಕ್ಕಿ ತೆಗೆಯುವ ವಿಕೃತ ಪರಂಪರೆಯೂ ಇಲ್ಲಿ ನೆಲೆಯೂರಿದೆ. ಈ ಪರಂಪರೆಗೆ ಜನಸಾಮಾನ್ಯರು ಬಲಿಯಾಗಿರುವುದೇ ಅಲ್ಲದೆ ಸಾಂವಿಧಾನಿಕ ಸಂಸ್ಥೆಗಳೂ ಬಲಿಯಾಗಿರುವುದನ್ನು ಇತ್ತೀಚಿನ ಬಾಬ್ರಿ ಮಸೀದಿ ಧ್ವಂಸದ ತೀರ್ಪಿನಲ್ಲಿ ಕಾಣಬಹುದು. ಇಡೀ ದೇಶವೇ ಗಮನಿಸಿದಂತೆ ಲಕ್ಷಾಂತರ ಯುವಕರನ್ನು ಪ್ರಚೋದಿಸಿ ಉರುಳಿಸಲಾದ 400 ವರ್ಷಗಳ ಒಂದು ಸ್ಥಾವರ ತಂತಾನೇ ಕುಸಿದಿದೆ, ಅದೊಂದು ಅಪಘಾತ ಎಂದು ಬಣ್ಣಿಸುವ ನ್ಯಾಯಾಂಗ, ಈ ಕುಸಿದ ಸ್ಥಾವರದ ಅವಶೇಷಗಳಡಿ ಸಿಲುಕಿರುವ ನೂರಾರು ಮೃತ ಜೀವಗಳಿಗೆ ನ್ಯಾಯ ಒದಗಿಸಲು ಸಾಧ್ಯವೇ ?

ಇಂತಹ ಒಂದು ವ್ಯವಸ್ಥೆಯಲ್ಲಿ ಶೋಷಿತ ಸಮುದಾಯದ ಹೆಣ್ಣು ಮಗಳಿಗೆ ನ್ಯಾಯ ದೊರೆಯುತ್ತದೆ ಎಂದು ನಿರೀಕ್ಷಿಸುವುದಾದರೂ ಹೇಗೆ ? ಅಪರಾಧಿಗಳ ರಕ್ಷಣೆಗಾಗಿ ಪ್ರತ್ಯಕ್ಷ ಸಾಕ್ಷಿಗಳನ್ನು ಎನ್ಕೌಂಟರ್ ಮೂಲಕ ಇಲ್ಲವಾಗಿಸುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಒಂದು ಷಡ್ಯಂತ್ರಕ್ಕೆ ಈಗ ವ್ಯವಸ್ಥಿತ ಚೌಕಟ್ಟನ್ನು ನಿರ್ಮಿಸಲಾಗಿರುವುದನ್ನೂ ಕಾಣುತ್ತಿದ್ದೇವೆ. ಹಥ್ರಾಸ್‍ನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯ ಮೃತ ದೇಹವನ್ನು ಪೊಲೀಸರೇ ಸುಟ್ಟುಹಾಕಿರುವುದು ಈ ವಿದ್ಯಮಾನದ ಒಂದು ಆಯಾಮವಷ್ಟೇ. ಇದರ ವಿರಾಟ್ ಸ್ವರೂಪವನ್ನು 2002ರ ಗುಜರಾತ್ ಹತ್ಯಾಕಾಂಡದ ನಂತರ ಕಂಡಿದ್ದೇವೆ. ಬೆಲ್ಚಿಯಿಂದ ಕಂಬಾಲಪಲ್ಲಿ, ಊನ ಘಟನೆಗಳವರೆಗೆ ಕಂಡಿದ್ದೇವೆ. ಸ್ವತಂತ್ರ ಭಾರತದಲ್ಲಿ ಸಂಭವಿಸಿದ ಸಾಮೂಹಿಕ ಹತ್ಯಾಕಾಂಡಗಳಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ ಎನ್ನುವುದನ್ನು ನೆಲ್ಲಿ ಹತ್ಯಾಕಾಂಡದಿಂದ ಗುಜರಾತ್ ಹತ್ಯಾಕಾಂಡದವರೆಗೂ ಕಂಡಿದ್ದೇವೆ. ಇಲ್ಲಿಯೂ ನಮ್ಮ ಪ್ರಜ್ಞೆ ಪಕ್ಷ ರಾಜಕಾರಣ ಮತ್ತು ಅಸ್ಮಿತೆಗಳ ಸರಳುಗಳಲ್ಲಿ ಬಂಧಿತವಾಗಿಬಿಡುತ್ತದೆ.

ಸಂಭವಿಸಿದ ಅಪರಾಧಗಳನ್ನು ಮುಖಾಮುಖಿಯಾಗಿಸುವ ಮೂಲಕ ಅಪರಾಧಿಗಳನ್ನು ಸಮರ್ಥಿಸಿಕೊಳ್ಳುವ ವಿಕೃತ ಪರಂಪರೆಯನ್ನು ಪೋಷಿಸುತ್ತಲೇ ಬಂದಿರುವ ಭಾರತದ ನಾಗರಿಕ ಸಮಾಜ, ಇಂದಿಗೂ ಅಪರಾಧಿಗಳನ್ನು ಶಾಸನ ಸಭೆಗಳಲ್ಲಿ ಸಹಿಸಿಕೊಳ್ಳುತ್ತಲೇ ಬಂದಿದೆ. ಭ್ರಷ್ಟಾಚಾರ ರಹಿತ ಭಾರತದಲ್ಲಿ ಅನೇಕಾನೇಕ ಭ್ರಷ್ಟರು ಅಧಿಕಾರ ಪೀಠದಲ್ಲಿ ವಿರಾಜಮಾನರಾಗಿದ್ದಾರೆ. ಮತ್ತದೇ ಪಕ್ಷ ರಾಜಕಾರಣ ಮತ್ತು ಅಸ್ಮಿತೆಯ ಗುಂಗು. ಐದು ವರ್ಷಕ್ಕೊಮ್ಮೆ ಮತ ಚಲಾಯಿಸುವಾಗ ಬೆರಳ ತುದಿಗೆ ಹಚ್ಚುವ ಶಾಯಿಯ ಗುರುತು ಸ್ವಲ್ಪ ದಿನಗಳ ನಂತರ ಅಳಿಸಿಹೋಗುತ್ತದೆ. ಆದರೆ ಇಂದು ನಮ್ಮ ಪ್ರಜಾತಂತ್ರ ದೇಶದಲ್ಲಿ ಅಧಿಕಾರ ಪೀಠಗಳಲ್ಲಿ ಕುಳಿತು ಆದರ್ಶ, ನೈತಿಕತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಮಾತುಗಳನ್ನಾಡುತ್ತಿರುವವರ ಕೈಗಳಿಗೆ ಮೆತ್ತಿರುವ ಅಮಾಯಕ ಜನರ ನೆತ್ತರ ಕಲೆ ಅಳಿಸಲು ಸಾಧ್ಯವೇ ಇಲ್ಲ.

ಆದರೆ ನಮಗೆ ಅದು ಗೆಲುವಿನ ಸಂಕೇತದಂತೆ ಕಾಣುತ್ತದೆ, ವಿಜಯೋತ್ಸವದ ಚಿಹ್ನೆಯಂತೆ ಕಾಣುತ್ತದೆ. ಇದು ನಮ್ಮ ದೇಶದ ದುರಂತ. ನಾವು ಪ್ರಜಾತಂತ್ರವನ್ನು ಬಯಸುತ್ತೇವೆ ಆದರೆ ಪ್ರಜಾಸತ್ತಾತ್ಮಕ ಮನಸ್ಥಿತಿಯನ್ನು ಅಸ್ಮಿತೆಗಳ ಭ್ರಮೆಗೆ ಸಿಲುಕಿ ಹೊಸಕಿ ಹಾಕುತ್ತಿದ್ದೇವೆ. ಮಾನವ ಹಕ್ಕುಗಳು ನಮಗೆ ಅಪಥ್ಯವಾಗುತ್ತದೆ, ಕೆಲವೊಮ್ಮೆ ಸಹಮಾನವರೇ ಅಪಥ್ಯವಾಗಿಬಿಡುತ್ತಾರೆ. ಹಥ್ರಾಸ್ ಘಟನೆಯಲ್ಲಿ ಮೃತಪಟ್ಟ ಮನೀಷಾ ಈ ಅಪಥ್ಯರಾದವರ ಗುಂಪಿಗೆ ಸೇರುತ್ತಾಳೆ. ಆಕೆಯ ಮೇಲೆ ಅತ್ಯಾಚಾರ ಎಸಗಿದ ಠಾಕೂರರು ಕೆಲವು ವರ್ಷಗಳ ನಂತರ ಕೇಂದ್ರ ಸಚಿವರಾದರೂ ನಾವು ವಿಚಲಿತರಾಗುವುದಿಲ್ಲ. ಈ ಮನಸ್ಥಿತಿ ನಾಗರಿಕ ಸಮಾಜವನ್ನು ಆವರಿಸಿರುವುದರಿಂದಲೇ ನಿರ್ಭಯ ನಮಗೆ ನೆನಪಾಗಿಯೇ ಉಳಿಯಲಿದ್ದಾಳೆ. ಜಾತಿ, ಮತಧರ್ಮ ಮತ್ತು ಲಿಂಗಭೇದಗಳ ಚೌಕಟ್ಟಿನಲ್ಲಿ ಸಾವು ಸ್ವೀಕೃತವಾಗುತ್ತಿರುವಂತೆಯೇ ಮನುಷ್ಯನ ಪ್ರಜ್ಞೆಯೂ ಸಹ ವಿಕೃತಿಯ ಪರಾಕಾಷ್ಠೆ ತಲುಪುತ್ತಿದೆ. ಇದಕ್ಕೆ ಪರಿಹಾರವೇನು ? ಪ್ರತಿರೋಧಗಳ ನಡುವೆಯೇ ನಾವು ಶೋಧಿಸಬೇಕಿರುವುದು ಇದನ್ನೇ.

- Advertisement -