ನಿಗೂಢತೆಯಲ್ಲಿ ಮರೆಯಾದ ಚೆಂಬರಿಕ ಖಾಝಿ

0
42

♦ಪಿ. ಸಿ. ಅಬ್ದುಲ್ಲಾ

ವೈಯಕ್ತಿಕ, ಕೌಟುಂಬಿಕ ಹೊಣೆಗಾರಿಕೆಗಳೆಲ್ಲವನ್ನೂ ಸರಿಯಾದ ರೀತಿಯಲ್ಲಿ ನಿಭಾಯಿಸಿದ್ದೇನೆ. ಇದೀಗ ಶೈಕ್ಷಣಿಕ ರಂಗದಲ್ಲಿ ಖಲಾಅ್(ವಿಧಿತೀರ್ಪು) ವಿಚಾರದಲ್ಲಿ ಹೊಣೆಗಾರಿಕೆ ನಿರ್ವಹಿಸಿ ಅವನ ಸಂತೃಪ್ತಿಯೊಂದಿಗೆ ಮರಳಲು ಅಲ್ಲಾಹನ ಕರೆಗೆ  ಕಾದು ನಿಂತಿದ್ದೇನೆ.

ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ರಾಜ್ಯ ಉಪಾಧ್ಯಕ್ಷರೂ, ಕಾಸರಗೋಡು ಚೆಂಬರಿಕ ಖಾಝಿಯೂ ಆಗಿದ್ದ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್‌ರವರ ‘‘ಎಂಡೆ ಕಥ’’(ನನ್ನ ಕಥೆ)-ನನ್ನ ಮತ್ತು ಶಿಕ್ಷಣದ ಕಥೆ ಎಂಬ ಆತ್ಮಕಥೆಯಲ್ಲಿರುವ ಗೆರೆಗಳಿವು.

ಅಂತಿಮ ಯಾತ್ರೆಗೆ ಅಲ್ಲಾಹನ ಕರೆಗೆ ಕಾದು ನಿಂತ ಪರಮ ಸಾತ್ವಿಕನಾದ ವಿದ್ವಾಂಸ, ಒಂದು ಡಝನ್‌ಗೂ ಮಿಕ್ಕಿ ಪ್ರಾಮಾಣಿಕ ಗ್ರಂಥಗಳ ಕರ್ತೃ, ಸಮಸ್ತ ಫತ್ವಾ ಸಮಿತಿಯ ಸದಸ್ಯ, ಹಲವಾರು ಧಾರ್ಮಿಕ, ಸಾಮಾಜಿಕ ಸಂಸ್ಥೆಗಳ ನಾಯಕ…. ಇಂತಹ ಒಬ್ಬ ವ್ಯಕ್ತಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬಲ್ಲರೇ?

ಸಿ.ಎಂ.ಅಬ್ದುಲ್ಲ ಮುಸ್ಲಿಯಾರ್‌ರವರ ಸಾವಿಗೆ ಕಾಲವೇ ಉತ್ತರ ಕಂಡುಕೊಳ್ಳಬೇಕು.  ಚೆಂಬರಿಕ ಖಾಝಿಯದ್ದು ಆತ್ಮಹತ್ಯೆ ಎಂದು ಪೊಲೀಸರ ಗಟ್ಟಿ ನಿಲುವು. ಸಿಬಿಐ ಅದನ್ನೇ ಹೇಳುತ್ತಿದೆ. ಖಾಝಿಯವರಿದ್ದ ವಿದ್ವಾಂಸ ಸಭೆಯಾದ ಸಮಸ್ತವು ಆತ್ಮಹತ್ಯೆ ಮತ್ತು ಕೊಲೆ ಸಾಧ್ಯತೆಗಳ ಮಧ್ಯ ನಿಲುವನ್ನೇ ತಾಳಿದೆ. ಅದರ ಜತೆಗೆ ಆರೋಪಿಗಳನ್ನು ರಕ್ಷಿಸಲು ಮತ್ತು ಅದನ್ನು ಪ್ರಶ್ನಿಸುವವರನ್ನು ಉಚ್ಛಾಟಿಸಲು ಪ್ರಯತ್ನಿಸುತ್ತಿದೆ.

2010 ಫೆಬ್ರವರಿ 15ರಂದು ಬೆಳಗ್ಗೆ 6.50ಕ್ಕೆ ಸಿ.ಎಂ.ಅಬ್ದುಲ್ಲಾರವರ ಮೃತದೇಹವು ಮನೆಯ ಮುಂದಿರುವ 900 ಮೀಟರ್ ದೂರದ ಚೆಂಬರಿಕ ಸಮುದ್ರದಲ್ಲಿ ಕಂಡುಬಂತು. ಮೀನುಗಾರರ ನೆರವಿನಿಂದ ಮೃತದೇಹ ದಡಕ್ಕೆ ತಲುಪಿಸಲಾಗಿತ್ತು. ಅವರ ಚಪ್ಪಲಿ, ಊರುಗೋಲು ಮತ್ತು ಟಾರ್ಚ್ ದಡದ ಬಂಡೆ ಕಲ್ಲುಗಳ ಮೇಲೆ ಒಪ್ಪವಾಗಿ ಇಡಲಾಗಿತ್ತು. ಮನೆಗೆ ಸೇರಿಕೊಂಡಿದ್ದ ಖಾಝಿಯವರ ಖಾಸಗಿ ಕೋಣೆ ಹೊರಗಿನಿಂದ ಬೀಗ ಹಾಕಿದ ಸ್ಥಿತಿಯಲ್ಲಿತ್ತು.

 ಗುರಿ ತಲುಪದ ತನಿಖೆಗಳು:

ವಾರ್ಡ್ ಮೆಂಬರ್ ಅಬ್ದುಲ್ ಮಜೀದ್‌ನ ದೂರಿನ ಪ್ರಕಾರ, ಅಪರಾಧ ಸಂಖ್ಯೆ 102/2019 ಬೇಕಲ್ ಪೊಲೀಸ್ ಪ್ರಕರಣ ದಾಖಲಿಸಿದ್ದರು.

12 ದಿವಸಗಳ ಬಳಿಕ ಪೊಲೀಸರು ಹೇಳಿಕೆಗಳನ್ನ್ನು ದಾಖಲಿಸಿಕೊಂಡರು. 2010 ಮಾರ್ಚ್ ತಿಂಗಳಲ್ಲಿ ಕೇಸ್‌ಅನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಯಿತು. ಒಂದು ತಿಂಗಳು ಪೂರ್ತಿಯಾಗುವ ಮೊದಲು ಕೇರಳ ಸರಕಾರ ದೂರನ್ನು ಸಿಬಿಐಗೆ ಹಸ್ತಾಂತರಿಸಿತು. ಸಿಬಿಐ ಆರಂಭದಲ್ಲಿ ಕೆಲವು ನಿರ್ಣಾಯಕ ನಡೆಗಳನ್ನು ನಡೆಸಿದರೂ, ತನಿಖೆಯು ದಾರಿ ಮಧ್ಯದಲ್ಲಿ ಸ್ಥಗಿತಗೊಂಡಿತು.

ಕೊನೆಗೆ ಆತ್ಮಹತ್ಯೆ ಎಂಬ ಅಂತಿಮ ತೀರ್ಪಿನೊಂದಿಗೆೆ ತನಿಖೆ ಪೂರ್ಣಗೊಂಡಿತು. ಈ ಕ್ರಮದ ವಿರುದ್ಧ ಖಾಝಿಯ ಮಗ ನೀಡಿದ ಅರ್ಜಿಯ  ಆಧಾರದಲ್ಲಿ ಎರಡು ಬಾರಿ ನ್ಯಾಯಾಲಯ ಆಗ್ರಹಿಸಿದ ನಂತರವೂ ಸಿಬಿಐ ಸಮಯ ಇನ್ನಷ್ಟು ಮುಂದೂಡಿತು. ಮೂರನೇ ಬಾರಿ ಪ್ರಾದೇಶಿಕ ನ್ಯಾಯಾಲಯ ಶಿಕ್ಷಿಸಿದಾಗ, ಸಿಬಿಐ ರಿಪೋರ್ಟ್ ಸಲ್ಲಿಸಿತು. ಸಿಬಿಐ ನ್ಯಾಯಾಲಯದಲ್ಲೂ ಮಗ ಸಿಬಿಐ ವಿರುದ್ಧ 2013ರಲ್ಲಿ ಪ್ರೊಟೆಸ್ಟ್ ಫೈಲ್ ಮಾಡಿದರು. ಹೈಕೋರ್ಟ್‌ನಲ್ಲಿ ಜಸ್ಟಿಸ್ ಕಮಾಲ್ ಪಾಷಾ ಕೆಳಹಂತದ ನ್ಯಾಯಾಲಯದಲ್ಲಿ ವಾದವನ್ನು ಮುಂದುವರಿಸಲು ನಿರ್ದೇಶಿಸಿ ರಿಟ್‌ಪೆಟಿಷನ್ ಕ್ಲೋಸ್ ಮಾಡಿದರು. ಸಿಜೆಎಂ ಕೋರ್ಟ್‌ನಲ್ಲಿ ನಡೆದ ವಾದಗಳ ಕೊನೆಯಲ್ಲಿ 2016ರಲ್ಲಿ ಸಿಬಿಐಯ ರಿಪೋರ್ಟನ್ನು ತಳ್ಳಿಹಾಕಿದ ಕೋರ್ಟ್ ಇನ್ನಷ್ಟು ವೈಜ್ಞಾನಿಕ ತನಿಖೆಯನ್ನು ನಡೆಸಲು ಆದೇಶಿಸಿತು. ತನಿಖೆಯನ್ನು ಕೊನೆಗೊಳಿಸಿದ್ದಾಗಿ ತಿಳಿಸಿದ ಮುಂದಿನ ವರ್ಷದಲ್ಲಿ ಸಿಬಿಐ ನೀಡಿದ ಎರಡನೇ ರಿಪೋರ್ಟ್ ತೃಪ್ತಿಕರ ಅಲ್ಲ ಎಂದು ಹೇಳಿದ ಕೋರ್ಟ್ 2018ರಲ್ಲಿ ಅದನ್ನು ನಿರಾಕರಿಸಿತು. ಆದರೆ ಪುನರ್ ತನಿಖೆಯನ್ನು ನಡೆಸಲು ಸಿಬಿಐ ತಯಾರಾಗಲಿಲ್ಲ. ಹೊಸ ಗುಂಪನ್ನು ಹಿಡಿದು ಸಿಬಿಐ ಕೇಸ್ ಪುನರ್ ತನಿಖೆಗೆ ಆದೇಶಿಸಿತು. ಕರ್ಮ ಸಮಿತಿಯ ಮುಂದೆ ಇದೀಗ ಅನಿಶ್ಚಿತ ಕಾಲ ಹೋರಾಟ ನಡೆಯುತ್ತಿದೆ.

ಸಮುದ್ರ ದಡಕ್ಕೆ ಹೇಗೆ ಹೋದರು?

ಹಲವಾರು ಪ್ರಶ್ನೆಗಳನ್ನು ಬಾಕಿಯಿರಿಸಿ ಸಿ.ಎಂ.ಅಬ್ದುಲ್ಲಾ ಮೌಲವಿ ಚೆಂಬರಿಕರವರು ಸಮುದ್ರ ದಡದ ಸಂಶಯಗಳಲ್ಲಿ ಮರೆಯಾದರು.

ಅಬ್ದುಲ್ಲಾ ಮುಸ್ಲಿಯಾರರದ್ದು ಆತ್ಮಹತ್ಯೆಯಲ್ಲ ಎಂದು ಜನರು ದೃಢವಾಗಿ ನಂಬುತ್ತಾರೆ. ಆದರೆ ಪೊಲೀಸ್, ಕ್ರೈಂ ಬ್ರಾಂಚ್, ಸಿಬಿಐ ತನಿಖೆಯ ಯಾವುದೇ ಹಂತದಲ್ಲೂ ಆ ರೀತಿಯ ತನಿಖೆ ನಡೆಯಲಿಲ್ಲ.

ಪರ ಸಹಾಯವಿಲ್ಲದೆ  ನಡೆಯಲಾರದ ಖಾಝಿಯವರು  900 ಮೀ. ದೂರದ ಸಮುದ್ರ ದಡಕ್ಕೆ ಅರ್ಧರಾತ್ರಿ ಹೇಗೆ  ಹೋದರು ಎಂದು ತನಿಖಾ ತಂಡ ಇಲ್ಲಿಯವರೆಗೆ ತೃಪ್ತಿಕರ ವಿವರಣೆ ನೀಡಿಲ್ಲ. ಮೃತರಾಗುವುದಕ್ಕೆ ಕೆಲ ತಿಂಗಳ ಹಿಂದೆ ಶಸ್ತ್ರಚಿಕಿತ್ಸೆಗೊಳಗಾಗಿ ಖಾಝಿ ದುರ್ಬಲರಾಗಿದ್ದರು. ಕನ್ನಡಕ, ಮುಂಡಾಸು ಧರಿಸದೆ ಅವರು ಹೊರಗೆ ಹೋಗುವವರಲ್ಲ. ಆದರೆ ಮರಣ ಹೊಂದಿದ ದಿವಸ ಅವೆರಡೂ ಕೋಣೆಯಲ್ಲೇ ಇತ್ತು.

ಒಂದು ವೇಳೆ ಬಂಡೆಗಳ ಮೇಲೆ ಹತ್ತಿ ಸಮುದ್ರಕ್ಕೆ ಹಾರಿದ್ದರೆ ಅವರ ತಲೆ, ಮುಂಭಾಗ ಮತ್ತು ಬೆನ್ನು ಮೂಳೆಗೆ ಘಾಸಿಯಾಗುತ್ತಿತ್ತು. ಆದರೆಮರಣೋತ್ತರ ಪರೀಕ್ಷೆಯಲ್ಲಿ ಆ ರೀತಿಯ ಯಾವುದೇ ವಿವರವಿಲ್ಲ. ಕತ್ತಿನ ಎಲುಬು ಮುರಿದ ಬಗ್ಗೆ ವರದಿಯಿದೆ. ಸಮುದ್ರಕ್ಕೆ ಹಾರಿದ್ದರೆ ಹಿಂಬದಿಯ ಕತ್ತಿನ ಎಲುಬು ಮುರಿಯಲು ಮತ್ತು  ಕಣ್ಣಿನ ಎರಡೂ ಭಾಗದಲ್ಲಿ ಗಾಯಗಳಾಗಲು ಹೇಗೆ ಸಾಧ್ಯ?

ಖಾಝಿಯ ಮೃತದೇಹ  ಕಂಡ ಬಂಡೆಗಲ್ಲಿನ ಮೇಲೆ ಅವರ ಚಪ್ಪಲಿ, ಊರುಗೋಲು ಮತ್ತು ಟಾರ್ಚ್ ಎಂಬಿತ್ಯಾದಿ ಒಪ್ಪವಾಗಿ ಜೋಡಿಸಿಟ್ಟಿದ್ದಾಗಿ ಕಂಡಿದೆ. ಆತ್ಮಹತ್ಯೆಗೆ ಮುಂದಾದ  ಅಸ್ವಸ್ಥ  ಮನಸ್ಸು ಈ ರೀತಿ ಶಿಸ್ತನ್ನು ತೋರಬಹುದೇ?

 ಕೊಲೆ  ಎಂಬ ಸಂಶಯವನ್ನು ಇನ್ನಷ್ಟು ಗಟ್ಟಿಗೊಳಿಸುವ ವಿಚಾರಗಳು:

ಚೆಂಬರಿಕ ಸಮುದ್ರ ತೀರ ನಿವಾಸಿ ಅಬ್ದುಲ್ಲಾ ಎಂಬಾತ ಖಾಝಿಯ ಮೃತದೇಹ ಕಂಡ ಅದೇ ರಾತ್ರಿ ಮೂರು ಗಂಟೆಗೆ ಸಮುದ್ರ  ದಡದಲ್ಲಿ ಕೆಲವರನ್ನು ನೋಡಿದ್ದಾಗಿ ಸಾಕ್ಷಿ ನುಡಿದಿದ್ದರು. ಅದೇ ದಿನ ರಾತ್ರಿ ಬೊಬ್ಬೆಯನ್ನು ಕೇಳಿದ್ದೇನೆಂದು ನೆರೆಯ ಮಹಿಳೆ ನುಡಿದಿದ್ದಾಳೆ. ಚೆಂಬರಿಕ ಸಮುದ್ರ ದಡ ರಾತ್ರಿ ವೇಳೆ ಮರಳು ಸಂಗ್ರಹಿಸಲು ಹೆಚ್ಚು ಜನ ಸೇರುವ ಜಾಗ. ಆದರೆ ಖಾಝಿ ತೀರಿಹೋದ ಆ ರಾತ್ರಿ ಯಾರೂ ಮರಳು ಎತ್ತಲು ಬಂದಿಲ್ಲ. ಅಂದು ರಾತ್ರಿ ಮರಳು ಸಾಗಾಟ ತನಿಖೆಗೆ ಪೊಲೀಸ್ ಬರುತ್ತಾರೆಂದು ಅದಾರೋ ಮರಳು ಸಾಗಾಟಗಾರರಿಗೆ ತಿಳಿಸಿದ್ದರು. ಇದೂ ಸಂಚಿನ ಭಾಗವೆಂದು ಆರೋಪವಿದೆ. ಖಾಝಿ ನಿಧನ ಹೊಂದಿದ ರಾತ್ರಿ ಚೆಂಬರಿಕ ಪ್ರದೇಶದಲ್ಲಿ ಅಸಹಜವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಆದರೆ ಈ ಎಲ್ಲಾ ಆರೋಪಗಳಿಗೆ ಯಾವುದೇ ಅಧಾರವಿಲ್ಲ ಎಂಬುದು ಪೊಲೀಸರ ನಿಲುವು. ಸಿಬಿಐ ಕೂಡಾ ಈ ಆರೋಪವನ್ನು ಪರಿಗಣಿಸಲೇ ಇಲ್ಲ.

ಆರೋಪಗಳಲ್ಲಿ ಅವಿತಿರುವ ನಾಯಕ:

ಸೂಚನೆಗಳು, ಸಾಧ್ಯತೆಗಳು, ಆರೋಪಗಳು ಎಲ್ಲವನ್ನೂ ಒಟ್ಟುಗೂಡಿಸಿ ಸಮಗ್ರವಾದ ತನಿಖೆಯನ್ನು ನಡೆಸಿದರೆ 24 ಗಂಟೆಯೊಳಗೆ ಕೊಲೆಪಾತಕರನ್ನು ಕಂಡುಹಿಡಿಯಲು ಸಾಧ್ಯ ಎಂಬುದು ಖಾಝಿಯ ಸಂಬಂಧಿಕರು ಮತ್ತು ಸಾರ್ವಜನಿಕರ ಗಟ್ಟಿಯಾದ ವಿಶ್ವಾಸ. ವಿವಿಧ ಮೂಲಗಳಿಂದ ದೊರಕುವ ಸೂಚನೆಗಳ ಪ್ರಕಾರ ಖಾಝಿಯ ಮರಣದ ಹಿಂದೆ ಮತ್ತು ಮುಂದೆ ಕೇಸನ್ನು ಬುಡಮೇಲುಗೊಳಿಸುವ ರೀತಿಯಲ್ಲಿ ನಿಖರವಾದ ಸಂಚು ನಡೆದಿದೆ ಎಂದು ತಿಳಿದು ಬರುತ್ತದೆ.  ಕಾಸರಗೋಡಿನ ನಾಯಕ, ಕಾಞಂಗಾಡಿನ ಮಾಜಿ ಡಿವೈಎಸ್ಪಿ ಮತ್ತು ಅವರ ಹಿಂಬಾಲಕರಾದ ಕೆಲವು ಪತ್ರಕರ್ತರು ಮತ್ತು ಪ್ರಬಲ ರಾಜಕೀಯ ಪಕ್ಷವು ಖಾಝಿಯ ಮರಣವನ್ನು ಆತ್ಮಹತ್ಯೆಯಂತೆ ಮಾರ್ಪಡಿಸಲು ಸಂಚನ್ನು ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಖಾಝಿ ಯಾಕಾಗಿ ಆತ್ಮಹತ್ಯೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದುದರಿಂದ ಖಾಝಿಯನ್ನು ಯಾರು, ಯಾಕಾಗಿ ಕೊಂದರು ಎಂಬ ಸಹಜ ಪ್ರಶ್ನೆಯು ಉಳಿಯುತ್ತದೆ. ಆ ಪ್ರಶ್ನೆಗೆ ಉತ್ತರ ಅದೃಶ್ಯವಾದ ಓರ್ವ ಊರ ನಾಯಕನ ಕಡೆಗೆ ಆರೋಪಗಳು ಸಾಗುತ್ತದೆ. ತನಿಖೆಯಲ್ಲಿ ಕಾಣದೇ ಹೋದ ಆಕ್ಷೇಪಗಳ ಸಾರಾಂಶ ಹೀಗಿದೆ:ಕಾಂಗ್ರೆಸಿಗನಾಗಿದ್ದರೂ ಎಲ್ಲಾ ರಾಜಕೀಯ ನಾಯಕರೊಂದಿಗೆ ನಿಕಟ ಸಂಬಂಧವಿರುವ ಪ್ರಮುಖ ವ್ಯಕ್ತಿ. ಕಾಸರಗೋಡ್ ಚಟ್ಟಂಜಾಲ್‌ನಲ್ಲಿ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್‌ರವರು ಸ್ಥಾಪಿಸಿದ ಸಂಸ್ಥೆಯಾಗಿದೆ ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್. ಸಂಸ್ಥೆಗೆ ಸಂಬಂಧಿಸಿ ಕೆಲವೊಂದು ಅಡೆತಡೆಗಳು ಎದ್ದು ಬಂದಿದ್ದವು. ಆರೋಪಿತನಾದ ಪ್ರಮುಖ ವ್ಯಕ್ತಿಗೆ ಸಂಸ್ಥೆಯೊಂದಿಗೆ ಹತ್ತಿರದ ಸಂಬಂಧವಿತ್ತು. ಸಂಸ್ಥೆಯ ಮರೆಯಲ್ಲಿ ಆತ ಅನಧಿಕೃತ ಹಣಕಾಸಿನ ವಹಿವಾಟುಗಳನ್ನು ನಡೆಸಿದ್ದು, ಕಪ್ಪುಹಣವನ್ನು ಬಿಳಿಯಾಗಿಸಲು ಪ್ರಯತ್ನಿಸಿದ್ದೂ ಅಧ್ಯಕ್ಷರಾದ ಅಬ್ದುಲ್ಲ ಮುಸ್ಲಿಯಾರ್ ಅದನ್ನು ವಿರೋಧಿಸಿದ್ದರು. ಅದು ಹಗೆಗೆ ಕಾರಣವಾಯಿತು. ನಂತರ ಅಬ್ದುಲ್ಲ ಮುಸ್ಲಿಯಾರ್‌ರನ್ನು ಸಂಸ್ಥೆಯಿಂದ ಹೊರಹಾಕುವ ಪ್ರಯತ್ನ ನಡೆದವು. ಅದಕ್ಕೆ ಸಂಸ್ಥೆಯ ಪದಾಧಿಕಾರಿಗಳನ್ನೇ ಒಟ್ಟಾಗಿಸಲಾಗಿತ್ತು. ಅದರ ಭಾಗವಾಗಿ ಅಧ್ಯಕ್ಷರಾದ ಅಬ್ದುಲ್ಲ ಮುಸ್ಲಿಯಾರ್ ಇರುವ ವೇಳೆಯಲ್ಲೇ ಇನ್ನೋರ್ವ ಪದಾಧಿಕಾರಿಗೂ ಕಾರು ಬೇಕು ಎಂಬ ಅಗತ್ಯವನ್ನು ಕೆಲವರು ಎತ್ತಿದರು. ಆದರೆ ಅಧ್ಯಕ್ಷರು ಅದಕ್ಕೆ ಬಗ್ಗಲಿಲ್ಲ. ನಂತರ ತಾನು ಉಪಯೋಗಿಸುವ ವಾಹನದ ವೆಚ್ಚವನ್ನು ತನ್ನ ಕೈಯಿಂದಲೇ ಅಬ್ದುಲ್ಲ ಮುಸ್ಲಿಯಾರ್ ಭರಿಸತೊಡಗಿದರು. ಇದರ ಬಳಿಕ ಹೆಚ್ಚು ಸಮಯ ಆಗುವ ಮೊದಲೇ ಅಬ್ದುಲ್ಲ ಮುಸ್ಲಿಯಾರ್ ನಿಗೂಢ ರೀತಿ ಮೃತರಾದರು.

ಖಾಝಿಯ ಮರಣದ ಹಿನ್ನೆಲೆಯ ದೂರುಗಳು ಆರೋಪಿತರ ಕಡೆಗೆ ಬೆರಳನ್ನು ತೋರಿಸುತ್ತಿದೆ. ಇದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸುತ್ತಿದೆ. ಖಾಝಿಯವರ ಜಡವು ಸಮುದ್ರ ದಡದಿಂದ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಅಲ್ಲಿನ ಘಟನಾವಳಿಗಳನ್ನು ನಿಯಂತ್ರಿಸಿದ್ದು, ಈ ಹಿಂದೆ ಹೇಳಿದ್ದ ನೇತಾರನೂ ಆತನ ಸಂಬಂಧಿಕನೂ ಆದ ಮಾಜಿ ಡಿವೈಎಸ್ಪಿ ಆಗಿದ್ದರು. ಅಧಿಕೃತವಾದ ತನಿಖೆಯ ಹೊಣೆಗಾರಿಕೆಯಿಲ್ಲದ ಅಂದಿನ ಕಾಞಂಗಾಡ್ ಡಿವೈಎಸ್ಪಿಯ ಆರಂಭದಿಂದ ಕೊನೆಯವರೆಗೆ ಇರುವ ಹಸ್ತಕ್ಷೇಪವು ಸಂಶಯಾಸ್ಪದವೆಂದು ಖಾಝಿಯ ಸಂಬಂಧಿಕರು ಎತ್ತಿ ತೋರಿಸುತ್ತಾರೆ. ಡಿವೈಎಸ್ಪಿ ಹಬೀಬು ರಹ್ಮಾನ್ ಆರೋಪಗಳೆಲ್ಲವನ್ನೂ ನಖಶಿಖಾಂತ ನಿರಾಕರಿಸುತ್ತಾರೆ. ಆದರೆ ಆ ವಿವರಣೆಗಳು ಸಂಪೂರ್ಣವಾಗಿ ಸಾರ್ವಜನಿಕರಲ್ಲಿ ಸಮಾಧಾನವನ್ನು ತಂದಿರುವುದಿಲ್ಲ.

ಖಾಝಿಯ ಮೃತದೇಹವು ಪೋಸ್ಟ್‌ಮಾರ್ಟಂಗೆ ತಂದ ತಕ್ಷಣ ಅಡ್ಡದಾರಿಯಿಂದ ಖಾಝಿಯ ಮನೆಗೆ ತಲುಪಿದ ಡಿವೈಎಸ್ಪಿ ಫಾರೆನ್ಸಿಕ್ ಪರೀಕ್ಷೆಗೆ ಮೊದಲೇ ಕೋಣೆಯ ಬೀಗವನ್ನು ಒಡೆದು ಕೋಣೆಯನ್ನು ತೆರೆದರು. ಕೋಣೆಯಲ್ಲಿ ದೊರೆತ ಬುರ್ದಾ ಬೈತ್‌ನ ಕಾಗದದ ತುಂಡನ್ನು ಆತ್ಮಹತ್ಯಾ ಪತ್ರ ಎಂದು ನಂಬಿಸಿದರು. ಮರಣೋತ್ತರ ಪರೀಕ್ಷೆಯ ವರದಿ ಹೊರ ಬರುವ ಮುಂಚೆಯೇ ಖಾಝಿಯದ್ದು ಆತ್ಮಹತ್ಯೆ ಎಂದು ಡಿವೈಎಸ್ಪಿ ಪ್ರಚಾರಪಡಿಸಿದರು. ಡಿವೈಎಸ್ಪಿಯೊಂದಿಗೆ ಹತ್ತಿರದ ಸಂಬಂಧವಿರುವ ಸಂಜೆ ಪತ್ರಿಕೆಯ ಪತ್ರಕರ್ತನನ್ನು ಉಪಯೋಗಿಸಿ ಆ ರೀತಿಯ ವಾರ್ತೆಯನ್ನು ಪ್ರಕಟಿಸಿದ್ದು, ಮೊದಲಾದವುಗಳು ಹಬೀಬುರ್ರಹ್ಮಾನ್‌ನ ವಿರುದ್ಧದ ಆರೋಪಗಳು.

ಚೆಂಬರಿಕ ಖಾಝಿಯ ಮರಣದ ಹಿಂದೆ ನಡೆದ ಎರಡು ಸಂಶಾಯಾಸ್ಪದ ಮರಣಗಳ ಕುರಿತು ತನಿಖೆಯು ನಡೆದಿಲ್ಲ ಎಂಬುದು ಸಂಬಂಧಿಕರು ಮತ್ತು ಹೋರಾಟ ಸಮಿತಿಯವರು ಹೇಳುತ್ತಾರೆ. ಕೊಲ್ಲಲ್ಪಟ್ಟವರಲ್ಲಿ ಓರ್ವ ತಂಙಳ್ ಚೆಂಬರಿಕ ಖಾಝಿಯನ್ನು ಅಪಾಯಕ್ಕೆ ಸಿಲುಕಿಸಲು ಬಂದ ಗುಂಪು ಸಂಚರಿಸಿದ ವಾಹನದ ಕುರಿತು ಅವರ ಮನೆಮಂದಿಗೆ ಸುದ್ದಿಯನ್ನು ತಿಳಿಸಿದ್ದರು. ಮಗಳ ಮನೆಯ ಕಡೆಗೆ ರಾತ್ರಿಯ ವೇಳೆ ಪ್ರಯಾಣಿಸುವ ಮಧ್ಯೆ ಅವರು ಕೊಲ್ಲಲ್ಪಟ್ಟಿದ್ದರು. ಕಾನಿಯ ಮಹ್‌ಮೂದ್ ಎಂಬಾತ ಚೆಂಬರಿಕ ಖಾಝಿಗೆ ಫೋನಾಯಿಸಿದ ಕೊನೆಯ ವ್ಯಕ್ತಿ. ಈತನೂ ನಿಗೂಢವಾಗಿ ಮೃತನಾಗಿದ್ದಾನೆ. ಈ ಎರಡು ಮರಣಗಳು ತನಿಖೆಯ ವ್ಯಾಪ್ತಿಯಲ್ಲಿ ಬರದೇ ಇರುವುದರ ಹಿಂದೆ ದೊಡ್ಡ ತಲೆಗಳ ಕೈವಾಡವಿದೆ ಎಂಬುದು ಹಲವರು ಆಪಾದಿಸುತ್ತಾರೆ.

ಚೆಂಬರಿಕ ಖಾಝಿ ಅಧ್ಯಕ್ಷರಾಗಿದ್ದ ಸಮಸ್ತದ ಕೈಕೆಳಗೆ ಎಂಐಸಿ(ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್) ಇರುವ ಸಂಸ್ಥೆ ಮತ್ತು ಸಮಸ್ತದ ಜಿಲ್ಲಾ ಕಾರ್ಯದರ್ಶಿ ಯು.ಎಂ.ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ತನಿಖೆಯನ್ನು ಬುಡಮೇಲುಗೊಳಿಸಲು ಆರಂಭದಿಂದಲೇ ಪ್ರಯತ್ನಿಸಿದರೆಂಬುದು ಸಂಬಂಧಿಕರ ಆರೋಪ. ಅಬ್ದುಲ್ಲ ಮುಸ್ಲಿಯಾರ್‌ಗೆ ಎಂಐಸಿಯ ಖರ್ಚಿನಲ್ಲಿ ಕಾರು ಬೇಕೆಂಬ ಅಗತ್ಯವನ್ನು ಖಡಾಖಂಡಿತವಾಗಿ ವಿರೋಧಿಸಿದ್ದರು. ಅಬ್ದುಲ್ಲ ಮುಸ್ಲಿಯಾರ್‌ರೊಂದಿಗೆ ಸೇರಿ ಕೆಲವು ಶಕ್ತಿಗಳು ಚೆಂಬರಿಕ ಖಾಝಿಯನ್ನು ಇಲ್ಲವಾಗಿಸಲು ಸಂಚನ್ನು ಹೂಡಿದ್ದರು ಮತ್ತು  ಅಬ್ದುಲ್ ರಹ್ಮಾನ್ ಮುಸ್ಲಿಯಾರ್‌ಗೆ ಎಲ್ಲವೂ ತಿಳಿದಿದೆ ಎಂದು ಖಾಝಿಯ ಸಂಬಂಧಿಕರು ಗಟ್ಟಿಯಾಗಿ ಹೇಳುತ್ತಿದ್ದಾರೆ. ಖಾಝಿಯ ಓರ್ವ ಅಳಿಯನನ್ನು ಶತ್ರು ಪಾಳಯದಲ್ಲಿ ಸೇರಿಕೊಳ್ಳುವಂತೆ ಮಾಡಿದ್ದು ಈ ಶಕ್ತಿಗಳಾಗಿದ್ದವು. ಆದರೆ ಪೊಲೀಸ್ ದಾಖಲೆಗಳಲ್ಲೂ ತನಿಖೆಯಲ್ಲೂ ಈ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ.

ಸಮಸ್ತ ಸತ್ಯದ ಪರವಾಗಿದೆಯೇ?

ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಹಿರಿಯ ಉಪಾಧ್ಯಕ್ಷರಾಗಿದ್ದ ಚೆಂಬರಿಕ ಖಾಝಿ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್‌ರವರ ಮರಣದ ಕುರಿತು ಸಮಸ್ತದ ಪ್ರಮುಖ ವಕ್ತಾರ ಡಾ.ಬಹಾವುದ್ದೀನ್ ನದ್ವಿ 2019 ಮಾರ್ಚ್ 10ರಂದು ‘‘ಸುಪ್ರಭಾತಂ’’ ದಿನಪತ್ರದಲ್ಲಿ ಈ ರೀತಿ ಬರೆದಿದ್ದರು:

‘‘ಸಮಸ್ತದ ಉನ್ನತ ನೇತಾರನಾಗಿದ್ದ ಓರ್ವ ವಿದ್ವಾಂಸನನ್ನು ಕತ್ತಲೆಯ ಮರೆಯಲ್ಲಿ ನಿಷ್ಕರುಣವಾಗಿ ಕೊಂದು ಹಣ ಮತ್ತು ಅಧಿಕಾರದ ಬಲದಲ್ಲಿ ಅದನ್ನು ಆತ್ಮಹತ್ಯೆ ಎಂಬಂತೆ ಚಿತ್ರೀಕರಿಸುವ ಪ್ರಯತ್ನಗಳನ್ನು ಕೆಲವು ದುಷ್ಟ ಶಕ್ತಿಗಳು ನಡೆಸುತ್ತಿದೆ. ಅವರು ಬೆವರಿಳಿಸಿ ಸ್ಥಾಪಿಸಿದ ಶಿಕ್ಷಣ ಸಂಸ್ಥೆಯ ಸಮುಚ್ಛಯಗಳ ಅಧಿಕಾರದ ಮರೆಯಲ್ಲಿ ಹಣಕಾಸಿನ ಅವ್ಯವಹಾರವನ್ನು ನಡೆಸಿದ ಕೆಲವು ಮಂದಿ ಘಾತುಕರು ಎಂದು ಕಾಸರಗೋಡು ವಲಯದ ಕೆಲವು ಮೂಲಗಳಿಂದ ತಿಳಿದುಬಂದಂತಹ ವಿಚಾರವಾಗಿದೆ.’’

ಖಾಝಿಯ ಮರಣವು ಕೊಲೆ ಎಂದು ಮೊತ್ತಮೊದಲು ಹೇಳಿದವರು ಎಸ್ಕೆಎಸ್ಸೆಸ್ಸೆಫ್‌ನವರು. ಅದರ ನಂತರ ಹೋರಾಟ ಕಾರ್ಯಕ್ರಮ ಗಳೊಂದಿಗೆ ಅವರು ಮುಂದು ವರಿದರು. ಸಂಯುಕ್ತ ಹೋರಾಟ ಸಮಿತಿಗಳು, ಆ್ಯಕ್ಷನ್ ಕಮಿಟಿ ಗಳನ್ನು ರಚಿಸಿ ಹೋರಾಟವನ್ನು ಸಂಘಟಿಸಿದರು.

ಆದರೆ ಸ್ವಂತ ಉಪಾಧ್ಯಕ್ಷರ ನಿಗೂಢ ಮರಣದ ವಿಚಾರದಲ್ಲಿ ಸಮಸ್ತ ವಕ್ತಾರರು ಮತ್ತು ಇಕೆ ಸುನ್ನಿ ಯುವ ತುರ್ಕಿಗಳೆಲ್ಲರೂ ಮೌನಗೊಂಡದ್ದನ್ನು ಅದರ ನಂತರ ಕಾಣಲು ಸಾಧ್ಯವಾಯಿತು. ಖಾಝಿಯ ಮರಣದ ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸಮಸ್ತ ಮತ್ತು ಪೋಷಕ ಸಂಘಟನೆಗಳು ಸಂಘಟಿಸಿದ ಹೋರಾಟಗಳು ನೀರಿನಲ್ಲಿಟ್ಟ ಹೋಮದಂತಾಯಿತು. ಮಾತ್ರ ವಲ್ಲ ಖಾಝಿಯ ಹತ್ಯೆಯ ಆರೋಪಿತರೆಂದು ಬಿಂಬಿಸಲಾಗಿರುವ ನೇತಾರನನ್ನು ಜಿಲ್ಲೆಯಿಂದ ರಾಜ್ಯ ಉಪಾಧ್ಯಕ್ಷ ಪದವಿಗೇರಿಸಿ ಸಮಸ್ತ ಗೌರವಿಸಿತು.

ಈ ಪ್ರಕರಣದಲ್ಲಿ ಇಕೆ ಸಮಸ್ತದ ವಿರುದ್ಧ ಗುರುತರವಾದ ಆರೋಪಗಳನ್ನು ಅವರ ಕುಟುಂಬವು ಮಾಡುತ್ತಿದೆ. ಆರೋಪಿಗಳು ಎಂದು ಸಂಶಯಿಸುವ ಕೆಲವರು ಸಮಸ್ತದ ಜಿಲ್ಲಾ ಸಮಿತಿಯಲ್ಲೂ, ಮುಸ್ಲಿಮ್ ಲೀಗ್‌ನಲ್ಲೂ ಇದ್ದಾರೆಂದು ಹಾಗೂ ಅವರನ್ನು ಸಮಸ್ತ ಸಂರಕ್ಷಿಸುತ್ತಿದೆ ಎಂದು ಕುಟುಂಬವು ಹೇಳುತ್ತಿದೆ. ಸಮಸ್ತದ ಅಂದಿನ ಜಿಲ್ಲಾ ಕಾರ್ಯದರ್ಶಿ ಇದೀಗ ರಾಜ್ಯದ ಉಪಾಧ್ಯಕ್ಷರಾದ ಯು.ಎಂ.ಅಬ್ದುಲ್ ಮುಸ್ಲಿಯಾರ್‌ಗೆ ಕೊಲೆಪಾತಕದಲ್ಲಿ ಸ್ಪಷ್ಟವಾದ ಸಂಬಂಧವಿದ್ದು, ಕೇಸನ್ನು ಬುಡಮೇಲುಗೊಳಿಸಲು ಅವರು ಆರಂಭದಿಂದಲೇ ಪ್ರಯತ್ನಿಸಿದ್ದಾರೆ ಎಂದು ಕುಟುಂಬ ಆರೋಪಿಸುತ್ತಿದೆ.

ಎಸ್ಕೆಎಸ್ಸೆಸ್ಸೆಫ್ ರಾಜ್ಯ ನಾಯಕರು ಹೋರಾಟಕ್ಕೆ ತಯಾರಿದ್ದರೂ, ಅವರ ಪ್ರಯತ್ನಕ್ಕೆ ಸಮಸ್ತ ನೇತಾರರು ತಣ್ಣೀರೆರಚಿತೆಂದೂ, ನ್ಯಾಯಾಂಗ ಹೋರಾಟ ನಡೆಸಲು ಸಮಸ್ತ ಮುತುವರ್ಜಿ ವಹಿಸಿಲ್ಲವೆಂಬುದು ಖಾಝಿಯವರ ಕಿರಿಯ ಮಗ ರಾಶಿದ್ ಹುದವಿ ಹೇಳುತ್ತಾರೆ.

ಸಮಸ್ತ ಜಿಲ್ಲಾ ನಾಯಕರು ಇದುವರೆಗೆ ಹೋರಾಟಗಳಲ್ಲಿ ಆಸಕ್ತಿಯನ್ನು ತೋರಿಸಿಲ್ಲ. ಹೋರಾಟ ಗಳಿಗೆ ಮುಂಚೂಣಿ ಯಲ್ಲಿರುವ ವಿದ್ಯಾರ್ಥಿ ಸಂಘಟನೆಯನ್ನು ನಿರುತ್ತೇಜನಗೊಳಿಸಿದರು. ಖಾಝಿಯ ಮರಣದಲ್ಲಿ ಹೈದರ್ ಅಲಿ ಶಿಹಾಬ್ ತಂಙಳ್, ಜಿಫ್ರಿ ತಂಙಲ್ ಮತ್ತು ಅಲಿ ಕುಟ್ಟಿ ಮುಸ್ಲಿಯಾರ್ ಇವರೆಲ್ಲರೂ ಘೋಷಿಸಿದ ಹೋರಾಟ  ಕಾಗದದಲ್ಲೇ ಉಳಿಯಿತು. ಕಾಸರಗೋಡು ಜಿಲ್ಲಾ ಸಮಸ್ತ ಸರಿಯಾಗಿ ಮುಶಾವರ ಕರೆಯದೆ ಈ ಕೇಸನ್ನು ವಿಸ್ತೃತವಾಗಿ ಚರ್ಚಿಸಿಲ್ಲ. ಯಾವುದೇ ಶ್ರದ್ಧಾಂಜಲಿ ಇವರ ನಿರ್ಣಯದಲ್ಲಿ ಇಲ್ಲ ಎಂದು ರಾಶಿದ್ ಹುದವಿ ಆರೋಪಿಸುತ್ತಾರೆ.

ರಾಜ್ಯದ ನಾಯಕರುಗಳಿಗೆ ಖಾಝಿಯ ಪುತ್ರ ಶಾಫಿ ಕಳುಹಿಸಿದ 3 ಪತ್ರಗಳಿಗೆ ಸಮಸ್ತ ಇದುವರೆಗೆ ಉತ್ತರವನ್ನು ನೀಡಲಿಲ್ಲ. ಅದೇ ವೇಳೆ ಚೆಂಬರಿಕ ಖಾಝಿಯ ಸಂಶಯಾಸ್ಪದ ಮರಣದ ವಿಚಾರದಲ್ಲಿ ತನಿಖೆ ನಡೆಸಲು ಆಗ್ರಹಿಸಿದವರ ವಿರುದ್ಧ ಸಮಸ್ತ ಶಿಸ್ತುಕ್ರಮವನ್ನು ಕೈಗೊಂಡಿತು. 2019ರ ಮಾರ್ಚ್ 10ರಂದು ಕೋಯಿಕ್ಕೋಡ್‌ನಲ್ಲಿ ನಡೆದ ಪ್ರತಿಭಟನೆ, ಸಮ್ಮೇಳನ ನಗರಿಯಲ್ಲಿ ಶಿಸ್ತನ್ನು ಉಲ್ಲಂಘಿಸಿತ್ತೆಂದು ಹೇಳಿ ಖಾಝಿಯ ಮೊಮ್ಮಗನೂ, ಎಸ್ಕೆಎಸ್ಸೆಸ್ಸೆಫ್ ರೈಟರ್ಸ್ ವಿಂಗ್ ಸದಸ್ಯನೂ ಆದ ಸಲೀಂ ದೇಳಿಯ ಸಹಿತ 11 ಜನರನ್ನು ಸಮಸ್ತ ಉಚ್ಛಾಟಿಸಿತು.

LEAVE A REPLY

Please enter your comment!
Please enter your name here