ನಂಬಿಕೆಗೆ ಬಲಿಯಾದ ನ್ಯಾಯ

0
27

ಸತ್ಯ ಮೇವ ಜಯತೇ ಎಂದು ಬರೆಯಲಾಗಿದ್ದ ನ್ಯಾಯಾಂಗದ ಗೋಡೆಯ ಬಣ್ಣ ಸಂಪೂರ್ಣವಾಗಿ ಮಾಸಿದೆ. ಗೋಡೆಗೆ ಹೊಸ ಕೇಸರಿ ಬಣ್ಣ ಬಳಿದಿರುವುದರಿಂದ ಬರೆದಿರುವ ಅಕ್ಷರಗಳು ಅಸ್ಪಷ್ಟವಾಗಿ ಗೋಚರಿಸುತ್ತಿವೆ. ಈಗ ಅಲ್ಲಿ ಏನು ಬರೆದಿರಬಹುದು ಎಂಬುದನ್ನು ನಂಬಿಕೆಯ ಆಧಾರದಲ್ಲಿ ತೋಚಿದ ಹಾಗೆ ಓದಲಾಗುತ್ತಿದೆ. ಪರಮೋಚ್ಛ ತೀರ್ಪನ್ನು ನೀಡಬೇಕಾಗಿದ್ದ ನ್ಯಾಯಾಲಯದಿಂದ ಅನಿರೀಕ್ಷಿತ ತೀರ್ಪು ಹೊರಬಿದ್ದಿದೆ. ಈ ಮೂಲಕ ಸಾಕ್ಷಿ, ಪುರಾವೆಗಳಿಗಿಂತಲೂ ಭಾವನೆ, ನಂಬಿಕೆಗಳೇ ಪ್ರಧಾನ ಎಂಬ ಹೊಸ ಸಂಪ್ರದಾಯಕ್ಕೆ ಬಾಬರಿ ಮಸ್ಜಿದ್‌ಹಕ್ಕುಸ್ವಾಮ್ಯದ ತೀರ್ಪು ಮುನ್ನುಡಿ ಬರೆದಿದೆ.

ವಿಧ್ವಂಸಕ ಕೃತ್ಯಕ್ಕೆ ಬಲಿಯಾದ ಬಾಬರಿ ಮಸ್ಜಿದ್ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಸುವ ತೀರ್ಪನ್ನು ಭಾರತದ ಸುಪ್ರೀಂ ಕೋರ್ಟ್ ನೀಡಿರುವುದನ್ನು ಮುಸ್ಲಿಮ್ ಸಮುದಾಯ ಮಾತ್ರವಲ್ಲ; ಮಾನವಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಪ್ರಗತಿಪರ ಚಿಂತಕರು ಇವರಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ದೇಶಕ್ಕೆ ಕಪ್ಪುಚುಕ್ಕೆ ಎನಿಸಿದ್ದ ಬಾಬರಿ ಮಸ್ಜಿದ್ ಧ್ವಂಸದ ಕಲೆಯನ್ನು ಒರೆಸಿಬಿಡಲು ಇದ್ದ ಏಕೈಕ ಅವಕಾಶವನ್ನು ಸುಪ್ರೀಂ ಕೋರ್ಟು ಕೈಚೆಲ್ಲಿದೆ. ಇಲ್ಲಿ ಯಾರಿಗೆ ಸಮಾಧಾನ ಆಯಿತೋ? ಯಾರಿಗೆ ನಷ್ಟ ಆಯಿತೋ? ಎನ್ನುವ ಲೆಕ್ಕಾಚಾರಕ್ಕಿಂತ ಈವರೆಗೆ ಆಗಿರುವ ನಷ್ಟವನ್ನು ಸರಿಪಡಿಸುವ ಮತ್ತು ಮುಂದೆ ನಡೆಯಬಹುದಾದ ಇಂತಹ ವಿಧ್ವಂಸಕ ಕೃತ್ಯಗಳನ್ನು ತಡೆಯಬಹುದಾದಂತಹ ತೀರ್ಪನ್ನು ನೈಜ ಭಾರತೀಯರು ಪರಮೋಚ್ಫ ನ್ಯಾಯಾಲಯದಿಂದ ನಿರೀಕ್ಷಿಸಿದ್ದರು. ದುರದೃಷ್ಟವಶಾತ್!ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಒಂದಂಶವನ್ನು ಈಡೇರಿಸುವ ತೀರ್ಪು ಹೊರಬಿದ್ದಿದೆ.

ಶಬರಿಮಲೆ ವಿಚಾರದಲ್ಲಿ ಸುಪ್ರೀಮ್ ಕೋರ್ಟ್‌ನ ಆದೇಶವನ್ನು ವಿರೋಧಿಸಿ ಕೇರಳ ರಾಜ್ಯಾದ್ಯಂತ ಭಾರೀ ಹರತಾಳ, ಪ್ರತಿಭಟನೆ ಹಮ್ಮಿಕೊಂಡಿದ್ದ ಬಿಜೆಪಿ ಮತ್ತು ಅದರ ಪರಿವಾರವು ಮೊನ್ನೆ ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುವ ಒಂದು ವಾರ ಮುಂಚೆಯೇ ‘ಸುಪ್ರೀಂ ನ್ಯಾಯಕ್ಕೆ ತಲೆಬಾಗುವ ರಾಷ್ಟ್ರೀಯತೆ’ಯ ಪಾಠವನ್ನು ಬೋಧಿಸತೊಡಗಿದ್ದರು. ‘ತೀರ್ಮಾನ ಏನೇ ಆಗಿರಲಿ, ಅದನ್ನು ಸ್ವಾಗತಿಸುವೆವು’ ಎಂದು ಬಾಬರಿ ಮಸ್ಜಿದ್ ಧ್ವಂಸದ ಆರೋಪಿಗಳು ಕೂಡ ಹೇಳಿಕೆ ನೀಡಿದಾಗಲೇ ಹಲವರಲ್ಲಿ ತೀರ್ಮಾನದ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಆ ಸಂಶಯಗಳನ್ನೆಲ್ಲಾ ನಿಜವಾಗಿಸಿದ ತೀರ್ಪು ಭಾರತದ ಭವಿಷ್ಯದ ದೃಷ್ಟಿಯಿಂದ ತೀರಾ ಅಪಾಯಕಾರಿ.

‘‘ನ್ಯಾಯಕ್ಕಾಗಿ ಮಾತನಾಡು’’ ಎಂಬ ಹೋರಾಟದ ಭಾಷೆಗೆ ಪ್ರಸಕ್ತ ಮತ್ತು ಪ್ರಸ್ತುತತೆ ಇರುವುದು ಈಗ. ಫ್ಯಾಷಿಸ್ಟ್ ಪ್ರಭುತ್ವವು ನ್ಯಾಯ ನಿರಾಕರಣೆಯ ಸಂದರ್ಭದಲ್ಲೂನ್ಯಾಯ ನಿರಾಕರಣೆಯನ್ನು ಒಪ್ಪಿಕೊಳ್ಳುವ ಒಂದು ಸಮುದಾಯವನ್ನು ಕೂಡ ಜೊತೆಜೊತೆಗೆ ಸೃಷ್ಟಿಸುವ ಪ್ರಯತ್ನವನ್ನೂ ಮಾಡಿತ್ತು ಎಂಬುದು ಗಮನಾರ್ಹ. ಮುಖ್ಯವಾಗಿ ‘‘ಸುಪ್ರೀಮ್ ಕೋರ್ಟಿನ ತೀರ್ಮಾನವು ಯಾರದ್ದೇ ಪರವಾಗಿ ಬಂದರೂ ನಮಗೆ ಮೊದಲು ದೇಶದ ನ್ಯಾಯ ವ್ಯವಸ್ಥೆ ಮುಖ್ಯ, ಎಲ್ಲರೂ ಒಮ್ಮತದಿಂದ ಸ್ವೀಕರಿಸಬೇಕು’’ ಎಂಬ ಆಕರ್ಷಕ ಶಾಂತಿಯ ಮಾತುಗಳನ್ನಾಡಿದ್ದು ಆರೆಸ್ಸೆಸ್ ಮತ್ತು ಬಿಜೆಪಿ ಪರಿವಾರವಾಗಿತ್ತು. ಆಶ್ಚರ್ಯಕರವಾಗಿದ್ದರೂ ಸಂಶಯಾತೀತವಂತೂ ಅಲ್ಲವೇ ಅಲ್ಲ. ರಾಷ್ಟ್ರಮಟ್ಟದಲ್ಲಿ ಮುಸ್ಲಿಂ ಮುಖಂಡರ ಸಭೆ ಕರೆದು ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಬೇಕಾದ ಅನಿವಾರ್ಯತೆ ಮತ್ತು ಆ ಮೂಲಕ ಗಟ್ಟಿಗೊಳಿಸಬೇಕಾದ ರಾಷ್ಟ್ರೀಯತೆಯ ಬಗ್ಗೆ ಉಪದೇಶವನ್ನೂ ಸ್ವತಹ ಆರೆಸ್ಸೆಸ್ ಮುಖಂಡರು ನೀಡಿದ್ದರು. ಅವತ್ತಿನಿಂದ ಮುಸ್ಲಿಮ್ ಸಮುದಾಯದಿಂದಲೂ ಸುಪ್ರೀಂ ಕೋಟ್ ತೀರ್ಪಿಗೆ ಅಭೂತಪೂರ್ವ ಮುಂಗಡ ಸ್ವಾಗತವೂ ದೊರಕಿದ್ದವು.

ಸಂಘಪರಿವಾರವು ತಾನು ಮಾಡುತ್ತಿರುವ ವಂಚನೆಯ ತಂತ್ರಗಳಿಗೆ ಮುಸ್ಲಿಮ್ ಸಮುದಾಯದಿಂದಲೇ ಮಾನ್ಯತೆಯನ್ನು ಪಡೆಯುವ ಪರಿ ಇದು. ಈ ದೇಶದಲ್ಲಿ ಬಹುತ್ವ, ಶಾಂತಿ, ಭಾವೈಕ್ಯ ಕಾಪಾಡಬೇಕು ಎಂಬುದು ಮುಸ್ಲಿಮ್ ಸಮುದಾಯಕ್ಕೆ ಹೇಳಿಕೊಡಬೇಕಾದಂತಹ ಉಪದೇಶವೂ ಅಲ್ಲ. ದೇಶದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಸಿದ್ಧಾಂತವನ್ನು ಒಪ್ಪಿಕೊಂಡು ಆ ಪ್ರಕಾರದ ಕಾರ್ಯಸೂಚಿಯಲ್ಲಿ ಹಿಂದುತ್ವ ಶಕ್ತಿಗಳು ಈ ದೇಶದಲ್ಲಿ ಕಾರ್ಯಾಚರಿಸುತ್ತಿವೆ ಎಂಬುದು ಜಗಜ್ಜಾಹೀರು. ಇಲ್ಲಿ ಮತ್ತೊಮ್ಮೆ ಗೋಳ್ವಾಳ್ಕರ್ ರಾಷ್ಟ್ರೀಯತೆಯನ್ನು ‘ಸುಪ್ರೀಂ’ ಸೋಗಿನಲ್ಲಿ ದೇಶದ ಮುಂದಿರಿಸಲಾಗಿದೆ. ತೀರ್ಪು ಹೊರಬಿದ್ದಂತೆ ‘ಸಮಾನ ನಾಗರಿಕ ಸಂಹಿತೆ’ ಜಾರಿಗೆ ಕಾಲ ಕೂಡಿಬಂದಿದೆ ಎಂಬ ಹೇಳಿಕೆಯೂ ಬಿಜೆಪಿ ಪರಿವಾರದಿಂದ ಹೊರಬಿದ್ದಿರುವುದು ಸುಪ್ರೀಂ ತೀರ್ಪು ಯಾವ ರಾಷ್ಟ್ರೀಯತೆಯ ಹೇರಿಕೆಗೆ ಮುನ್ನುಡಿ ಎಂಬುದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಇನ್ನೂ ಶೋಷಿತ ಸಮುದಾಯಕ್ಕೆ ಫ್ಯಾಷಿಸಂ ಅರ್ಥವಾಗದಿದ್ದಲ್ಲಿ ಕಳೆದುಕೊಳ್ಳಲು ಏನೇನೂ ಉಳಿದುಕೊಳ್ಳದಷ್ಟನ್ನು ನಾವು ಕಳೆದುಕೊಳ್ಳಲಿದ್ದೇವೆ. ನ್ಯಾಯದ ಮೇಲೆ ದೇಶ ಕಟ್ಟುವ ಹೋರಾಟವು ಅಚಲವಾಗಿರಲಿ.

 

 

 

 

LEAVE A REPLY

Please enter your comment!
Please enter your name here