ಧ್ವಂಸ -ಅನ್ಯಾಯ ಮರೆಯದಿರೋಣ

0
32

ನಾಲ್ಕೂವರೆ ದಶಕಗಳ ಕಾಲ ಆರಾಧನೆ ನಿರ್ವಹಿಸುತ್ತಿದ್ದ ಬಾಬರಿ ಮಸ್ಜಿದ್ ಭೂಮಿ ಸಂವಿಧಾನದ 142ನೇ ಸೆಕ್ಷನ್ ಪ್ರಕಾರ ಮುಸ್ಲಿಮರಿಗೆ ಕೊಡಬೇಕೆಂದಿಲ್ಲವೆಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪಂಚ ಪೀಠವು ತೀರ್ಪಿತ್ತಿದೆ. ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ್ದಕ್ಕೆ ದಾಖಲೆಗಳಿಲ್ಲ ಎಂಬ ‘ನ್ಯಾಯ’ದ ಹೆಸರಿನಲ್ಲಿ ಈ ತೀರ್ಪು ಹೊರ ಬಂದಿದೆ. ಸನ್ನಿವೇಶ ಮತ್ತು ಐತಿಹಾಸಿಕ ದಾಖಲೆಗಳು ಬಹುಪಾಲು ಮುಸ್ಲಿಮರ ಪರವಾಗಿದೆ. ಆದರೂ ಹಿಂದೂ ನಂಬಿಕೆಯ ಪ್ರಕಾರ ರಾಮ ಜನಿಸಿದ್ದ್ದು ಬಾಬರಿ ಮಸ್ಜಿದ್‌ನ ನೆಲದಲ್ಲಿ ಎಂಬ ಕಾರಣದಿಂದ ಶ್ರೀರಾಮನನ್ನು ಓರ್ವ ವ್ಯಕ್ತಿಯಾಗಿ ಪರಿಗಣಿಸಿ ರಾಮ್‌ಲಲ್ಲಾಗೆ ಹಕ್ಕಿನ ಪಾಲು ನೀಡಿದೆ ಎಂಬುದು ಪೀಠದ ಒಕ್ಕೊರಳಿನ ತೀರ್ಪು. ಸರಕಾರ ಮತ್ತು ಮಾಧ್ಯಮಗಳು ಎಬ್ಬಿಸಿದ ತೀವ್ರ ಭಯ, ಸಂದೇಹದ ವಾತಾವರಣದ ಮಧ್ಯೆಯೂ ತೀರ್ಪಿನ ಕುರಿತು ದಿಟ್ಟೆದೆಯಿಂದ ಪ್ರತಿಕ್ರಿಯಿಸಲು ಅಪೂರ್ವ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಮಾತ್ರವೇ ತಯಾರಾದವು.

ಸಾವಧಾನದಿಂದ ಪ್ರತಿಕ್ರಿಯಿಸಿದ ಸಂಘಟನೆಗಳು, ವ್ಯಕ್ತಿಗಳು ಇನ್ನು ಮತ್ತೊಮ್ಮೆ ದೇಶದಲ್ಲಿ ಅಶಾಂತಿ ಹರಡದಿರಲಿ ಎಂದು ಭಯಪಟ್ಟು ಹೇಳುವ ವೇಳೆಯಲ್ಲೂ ತೀರ್ಪಿನ ಕುರಿತು ಸಂದೇಹವನ್ನು ವ್ಯಕ್ತಪಡಿಸಿದರು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ಊದಿ ಹಿಗ್ಗಿಸಿದ ರಾಮ ಜನ್ಮ ಭೂಮಿ ವಿವಾದ ಎಂಬ ರಾಜಕೀಯ ಅಜೆಂಡಾ ಬಿಜೆಪಿಯನ್ನು ಅಧಿಕಾರಕ್ಕೇರಿಸುವಲ್ಲಿ ಮುಖ್ಯ ಪಾತ್ರವಹಿಸಿತ್ತು. ಆದುದರಿಂದಲೇ ಇದೀಗ ಅವರ ವಾದವನ್ನು ಪುರಸ್ಕರಿಸುವ ರೀತಿಯಲ್ಲಿ ಕೋರ್ಟ್‌ನ ತೀರ್ಪು ಹೊರ ಬಂದಿದೆ. ಅದರಲ್ಲೂ ಕಾಂಗ್ರೆಸ್ಸಿನ ಹೇಳಿಕೆಯು ಬಿಜೆಪಿಯನ್ನೂ ದಂಗುಬಡಿಸುವಂತಿತ್ತು. ಬಾಬರಿ ಮಸ್ಜಿದ್ ಧ್ವಂಸ ನಮ್ಮ ಆಡಳಿತ ಕಾಲದಲ್ಲಿ ಎಂದು ಹೆಮ್ಮೆಯಿಂದ ಘೋಷಿಸಿದ ಮಂದಿಯಿಂದ ಧನಾತ್ಮಕ ಉತ್ತರವನ್ನು ನಿರೀಕ್ಷಿಸುವುದು ಮೂರ್ಖತನವಾದೀತು.

ಏನಿದ್ದರೂ ಈ ಸಮಸ್ಯೆ ಕೊನೆಗೊಂಡರೆ ಸಾಕೆಂದು ಹೇಳುವ ಮಂದಿಗೆ ಸಮಾನ ನಾಗರಿಕ ಸಂಹಿತೆಯ ಘೋರ ಘೋಷಣೆಗಳು ಕಿವಿಗಪ್ಪಳಿಸುತ್ತಿವೆ. ಆದುದರಿಂದ ಈ ವಿಚಿತ್ರ ತೀರ್ಪು ಜಗತ್ತಿನ ಮುಂದೆ ದೇಶದ ಪ್ರಜಾಸತ್ತೆಯ ಮುಖವನ್ನು ಮತ್ತೊಮ್ಮೆ ವಿರೂಪಗೊಳಿಸಿದೆ. ಮಾತ್ರವಲ್ಲ, ಆಕ್ರಮಣಕೋರರಿಗೆ ಇನ್ನಷ್ಟು ಉತ್ಸಾಹವನ್ನು ನೀಡಿ ನ್ಯಾಯವನ್ನು ನಿರೀಕ್ಷಿಸುವ ದೇಶದ ಬಹುಸಂಖ್ಯಾತ ಜನತೆಯನ್ನು ನಿರಾಶೆಯ ಕೂಪಕ್ಕೆ ತಳ್ಳಿ ಬಿಡಲು ಕಾರಣವಾಗಿದೆ.

ಬಾಬರಿ ಮಸ್ಜಿದ್ ಧ್ವಂಸಗೊಳ್ಳದೇ ಇದ್ದಿದ್ದರೆ ಮಸ್ಜಿದ್ ಅನ್ನು ಒಡುದೆ ಹಾಕಬೇಕೆಂದು ನ್ಯಾಯಾಲಯವು ಹೇಳುತ್ತಿತ್ತೇ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ  ನ್ಯಾಯಾಧೀಶ ಅಶೋಕ್ ಗಂಗೂಲಿ ಪ್ರಶ್ನಿಸಿದ್ದಾರೆ. ಮಸ್ಜಿದ್ ಕೆಡವಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಬೇರೆ ಏನಾದರೂ ತೀರ್ಪು ಹೇಳಲು ಸಾಧ್ಯವಾಗುತ್ತಿತ್ತೇ ಎಂಬ ಪ್ರಶ್ನೆ ಬಾಕಿಯುಳಿಯುತ್ತದೆ.

ಭೂಮಿಗೆ ಸಂಬಂಧಿಸಿದ ಹಕ್ಕು ಪ್ರತಿಪಾದನೆಯ ವಾದದಲ್ಲಿ ತೀರ್ಪು ನೀಡುತ್ತಿದ್ದೇವೆ ಎಂಬುದನ್ನೂ ಮರೆತು ಮಂದಿರ ನಿರ್ಮಾಣಕ್ಕೆ ನಿರ್ದೇಶನಗಳನ್ನು ನೀಡಿದ ನ್ಯಾಯಾಲಯದ ತೀರ್ಪು ಅನ್ಯಾಯವೆಂದು ಹೇಳುವ ಧೈರ್ಯವನ್ನು ತೋರಿದ್ದು ಕೆಲವೇ ಕೆಲವು ಸಂಘಟನೆಗಳು ಮಾತ್ರ. ಅಸಹಮತಿಯನ್ನು ಗಟ್ಟಿದನಿಯಲ್ಲಿ ಹೇಳುವ ಹಕ್ಕು ಸ್ವಾತಂತ್ರದಲ್ಲೇ ತಳಕುಹಾಕಿಕೊಂಡಿದೆ.

1992ರ ಡಿಸೆಂಬರ್ 6ರಂದು ಬಾಬರಿ ಮಸ್ಜಿದ್ ಧ್ವಂಸಗೊಳಿಸಲಾಯಿತು ಮತ್ತು ಸುದೀರ್ಘ 27 ವರುಷಗಳ ಕಾಲ ಕಾದು ನಿಂತ ಮುಸ್ಲಿಮರಿಗೆ 2019ರ ನವೆಂಬರ್ 9ರಂದು ಬಾಬರಿ ಮಸ್ಜಿದ್ ಹಕ್ಕನ್ನು ನಿರಾಕರಿಸಿ ಅನ್ಯಾಯದ ತೀರ್ಪನ್ನು ನೀಡಲಾಯಿತು. ಸುಪ್ರೀಂ ಕೋರ್ಟ್‌ನ ತೀರ್ಪಿನೊಂದಿಗೆ ಬಾಬರಿ ಮಸ್ಜಿದ್ ಅನ್ನು ಮರೆತು ಬಿಡುವುದು ಐತಿಹಾಸಿಕ ಪ್ರಮಾದವಾಗಬಹುದು ಮತ್ತು ಸಂವಿಧಾನಕ್ಕೆ ಬೆದರಿಕೆಯೊಡ್ಡಿದ ಶಕ್ತಿಗಳು ಕಾನೂನಿನ ಕುಣಿಕೆಯಿಂದ ಸುಲಭವಾಗಿ ಪಾರಾಗಬಹುದು. ದೇಶದ ಜಾತ್ಯತೀತತೆಯ ಕುರುಹು ಆಗಿದ್ದ ಬಾಬರಿಯನ್ನು ನೆನೆಯುತ್ತಲೇ ನ್ಯಾಯಕ್ಕಾಗಿ ಆಗ್ರಹಿಸೋಣ. ಜನತಂತ್ರದ ಉಳಿವಿಗೆ ಇದು ಅಗತ್ಯವೂ ಹೌದು.

 

LEAVE A REPLY

Please enter your comment!
Please enter your name here