ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ 10ನೇ ತರಗತಿ ಪರೀಕ್ಷೆ ನಡೆಸುವುದು ಅರ್ಥಹೀನ: ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ

Prasthutha|

ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿರುವುದು ಸ್ವಾಗತಾರ್ಹ ವಿಷಯ. ಇದು ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ತೀರ್ಮಾನವನ್ನು ಗೌರವಿಸಿದಂತಾಗಿದೆ. ಇದೇ ಸಂದರ್ಭದಲ್ಲಿ 10 ನೇ (ಎಸ್  ಎಸ್ ಎಲ್ ಸಿ) ತರಗತಿ ಪರೀಕ್ಷೆಯನ್ನು ನಡೆಸುವುದಾಗಿ ಪ್ರಕಟಿಸಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಪ್ರತಿಕ್ರಿಯಿಸಿದ್ದಾರೆ.

- Advertisement -

 ಎಸ್  ಎಸ್ ಎಲ್ ಸಿ ಪರೀಕ್ಷೆ ನಡೆಸಲು ಇರುವ ತರ್ಕಾಧಾರ ಏನೆಂಬುದು ಅರ್ಥವಾಗುತ್ತಿಲ್ಲ. ಸಾಮಾನ್ಯವಾಗಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ನಾವು ಮಂಡಳಿ ಪರೀಕ್ಷೆಗಳಿಲ್ಲದೆ  ತೇರ್ಗಡೆಗೆ ಪರಿಗಣಿಸುವಾಗ ಪ್ರಥಮ ಪಿಯುಸಿಯಲ್ಲಿ ಅವರ ಸಾಧನೆ,  ತರಗತಿ ಪರೀಕ್ಷೆಗಳ  ಹಾಗು ಪ್ರಾಯೋಗಿಕ ಪರೀಕ್ಷೆಗಳ ಅಂಕ, ಅಂದರೆ ಒಂದು ವರ್ಷದ ಸಾಧನೆಯನ್ನು ಪರಿಗಣಿಸಿ ಎಲ್ಲರನ್ನೂ ತೇರ್ಗಡೆ ಮಾಡುವ ಕ್ರಮ ಅನುಸರಿಸುತ್ತೇವೆ. ಅದರ ಜೊತೆಗೆ ಅಗತ್ಯವಿದ್ದಲ್ಲಿ ಅವರು  ಹಿಂದಿನ ಮಂಡಳಿ ಪರೀಕ್ಷೆಯಾದ 10ನೇ ತರಗತಿಯ ಸಾಧನೆಯನ್ನು ಪರಿಗಣಿಸಬಹುದಾಗಿದೆ.ಇಲ್ಲಿ ಸಾಧನೆಯನ್ನು ಓರೆಗಲ್ಲಿಗೆ ಹಚ್ಚಲು ಹೆಚ್ಚಿನ ಆಯಾಮಗಳು ಕಷ್ಟ ಎಂದು ತಿಳಿಸಿದ್ದಾರೆ.

ಇದಕ್ಕೆ ಭಿನ್ನವಾಗಿ, 10ನೇ ತರಗತಿಯಲ್ಲಿರುವ ಮಕ್ಕಳ ಸಂಚಿತ (ಕ್ಯುಮ್ಯುಲೇಟೀವ್ ) ಸಾಧನೆಯನ್ನು ಪರಿಗಣಿಸಿ ಮಂಡಳಿ ಪರೀಕ್ಷೆಯಿಲ್ಲದೆ ವಸ್ತುನಿಷ್ಠವಾಗಿ ಹಾಗು ವೈಜ್ಞಾನಿಕವಾಗಿ ತೇರ್ಗಡೆಗೊಳಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ ಮತ್ತು ದೀರ್ಘಕಾಲದ ಸಾಧನೆಯನ್ನು ಪರಿಗಣಿಸಬಹುದಾಗಿದೆ. ಸಾಮಾನ್ಯವಾಗಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳು 1 ರಿಂದ 10 ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಕಲಿಯುತ್ತಿರುತ್ತಾರೆ. ಅಥವಾ ಕನಿಷ್ಠ ಮೂರು ವರ್ಷಗಳಾದರು ಒಂದು ಶಾಲೆಯಲ್ಲಿ( 8, 9 ಮತ್ತು 10 ನೇ ತರಗತಿ) .ಮಕ್ಕಳ 10 ವರ್ಷದ ಸಂಚಿತ ಸಾಧನೆ ಅಥವಾ ಮೂರು ವರ್ಷದ ಸಂಚಿತ ಸಾಧನೆ ಹೆಚ್ಚು ವಸ್ತುನಿಷ್ಠವಾಗಿರುವುದಲ್ಲದೆ ಕಲಿಕೆಯ ಹಲವು ಆಯಾಮಗಳನ್ನು ಪರಿಗಣಿಸಿ ಮಕ್ಕಳನ್ನು ತೇರ್ಗಡೆಗೊಳಿಸುವ ವಿಫುಲ ಅವಕಾಶಗಳಿವೆ.

- Advertisement -

ಪರಿಸ್ಥಿತಿ ಹೀಗಿರುವಾಗ, ಸರ್ಕಾರ 10 ನೇ ತರಗತಿಯನ್ನು ರದ್ದುಗೊಳಿಸದಿರುವುದು ಅವೈಜ್ಞಾನಿಕ ಮಾತ್ರವಲ್ಲ ಶೈಕ್ಷಣಿಕವಾಗಿ  ತಪ್ಪು ನಿರ್ಧಾರ. ಜೊತೆಗೆ ಈಗಾಗಲೇ ಉಳಿದ ಎರಡು ಮಂಡಳಿಗಳಾದ ಸಿಬಿಎಸ್ಇ ಮತ್ತು ಐಸಿ ಎಸ್ ಇ ಮಂಡಳಿಗಳು ತಮ್ಮ ಪರೀಕ್ಷೆಗಳನ್ನು ರದ್ದು ಮಾಡಿರುವಾಗ, ರಾಜ್ಯ ಮಂಡಳಿಯ ಪಠ್ಯಕ್ರಮಕ್ಕೆ ಸಂಯೋಜನೆಗೊಂಡಿರುವ ಮಕ್ಕಳ ಮೇಲೆ ಪರೀಕ್ಷೆ ಹೇರುವುದು ಅಮಾನವೀಯ, ತಾರತಮ್ಯ ಮತ್ತು ಶೈಕ್ಷಣಿಕವಾಗಿ ಅಪಕ್ವ-ಅಪ್ರಬುದ್ಧ ನಿರ್ಧಾರ. ಈ ಮಕ್ಕಳು ಕಳೆದ 14 ತಿಂಗಳುಗಳಿಂದ ಸಂಕಷ್ಟಕ್ಕೆ ಗುರಿಯಾಗಿದ್ದು, ಸರಿಯಾದ ಕಲಿಕಾ ವ್ಯವಸ್ಥೆಯಿಲ್ಲದೆ ಮಾನಸಿಕವಾಗಿ ಸೊರಗಿರುವ ಈ ಸಂದರ್ಭದಲ್ಲಿ ಸಮಾನಾಂತರ ತರಗತಿಯಲ್ಲಿ ಕಲಿಯುತ್ತಿರುವ ಅವರ ಗೆಳೆಯರು ಮಂಡಳಿ ಪರೀಕ್ಷೆಯಿಲ್ಲದೆ ತೇರ್ಗಡೆ ಹೊಂದಿ ಇವರು ಮಾತ್ರ ರಾಜ್ಯ ಪಠ್ಯಕ್ರಮದಲ್ಲಿ ಓದಿದಕ್ಕಾಗಿ ಪರೀಕ್ಷೆ ಬರೆಯುವುದು ಎಷ್ಟು ಸಂಮಂಜಸ. ಇದು ತಾರತಮ್ಯವಲ್ಲವೇ? ಇದು ಅತ್ಯಂತ ಅವೈಜ್ಞಾನಿಕ ನಿರ್ಧಾರ. ಸಚಿವರೂ ಕೂಡಲೇ ತಮ್ಮ ನಿರ್ಧಾರವನ್ನು ಹಿಂಪಡೆದು ಮಕ್ಕಳ ಹಾಗು ಪಾಲಕರ ಆತಂಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಲು 10ನೇ ತರಗತಿ ಪರೀಕ್ಷೆಗಳನ್ನು ಕೂಡ ರದ್ದು ಮಾಡುವಂತೆ ವಿನಂತಿಸುತ್ತೇನೆ. ಜೊತೆಗೆ ಕಳೆದ ವರ್ಷ ಎಸ್ ಎಸ್ ಎಲ್ ಸಿ ಹಾಗು ಪಿಯುಸಿಯಲ್ಲಿ ತೇರ್ಗಡೆಯಾಗದೆ ಈಗ ಪೂರಕ ಪರೀಕ್ಷೆಗಳಿಗೆ ಸಿದ್ಧವಾಗಿದ್ದ ಪುನರಾವರ್ತಿ ವಿದ್ಯಾರ್ಥಿಗಳನ್ನು ಸಹ ತೇರ್ಗಡೆಗೊಳಿಸಿ ಅವರು ತಮ್ಮ ಮುಂದಿನ ಶಿಕ್ಷಣ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವ ತೀರ್ಮಾನವನ್ನು ಪ್ರಕಟಿಸಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ನಮ್ಮ ಶಕ್ತಿ , ಸಾಮರ್ಥ್ಯ ಹಾಗು ಸಂಪನ್ಮೂಲಗಳನ್ನು ಸಾಧುವಲ್ಲದೆ ಪರೀಕ್ಷೆಗಳಿಗೆ ವ್ಯಯಿಸುವ ಬದಲು, 10  ಅಥವಾ 12 ನೇ ತರಗತಿಯ ಮಕ್ಕಳಾಗಲಿ ಅಥವಾ ಇತರೆ ಯಾವುದೇ ತರಗತಿಯ ಮಕ್ಕಳ ಕಲಿಕೆ ಕಳೆದ 14 ತಿಂಗಳಿಗಳಿಂದ ಸಮರ್ಪಕವಾಗಿ ನಡೆದಿಲ್ಲವೆಂಬ ಸತ್ಯವನ್ನು ಒಪ್ಪಿ, ಈ ಮಕ್ಕಳು ಮುಂದಿನ ಯಾವುದೇ ತರಗತಿಗಳಿಗೆ ತೇರ್ಗಡೆಯಾಗಿ ಹೋಗುವ ಸಂದರ್ಭದಲ್ಲಿ , 2021-22 ನೇ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು ಅವರಿಗೆ ಮೂರು ತಿಂಗಳ ವೇಗ ವರ್ಧಿತ ಕಲಿಕಾ ಸೇತು ಬಂಧ ಕಾರ್ಯಕ್ರಮದ ಮೂಲಕ ಕಲಿಕೆಯಲ್ಲಿನ ನಷ್ಟವನ್ನು ತುಂಬಿ ಕೊಡುವುದು ಹಾಗು ಬುನಾದಿ ಜ್ಞಾನವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಯೋಚಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯ ಮತ್ತು ಆದ್ಯತೆಯಾಗಬೇಕೆಂದು ನಾನು ಒತ್ತಾಯಿಸುತ್ತೇನೆ. ಸರ್ಕಾರ ಪರೀಕ್ಷೆಗಳ ಸುಳಿಯಿಂದ ಹೊರಬಂದು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ನಿರಂಜನಾರಾಧ್ಯ ಆಗ್ರಹಿಸಿದ್ದಾರೆ.