ದೌರ್ಭಾಗ್ಯ ಬೆನ್ನು ಹತ್ತಿದ ಜನತೆ

0
28

♦ಕಲೀಮ್

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಅಖಿಲ ಭಾರತ ಮುಸ್ಲಿಮ್ ಲೀಗ್ ನೇತಾರರಲ್ಲಿ ಹಲವರು ವೈಯಕ್ತಿಕವಾಗಿ ಜಾತ್ಯಾತೀತಗಳಾಗಿದ್ದರೂ, ರಾಜಕೀಯ ಅಧಿಕಾರದ ವಿಚಾರದಲ್ಲಿ ಧಾರ್ಮಿಕ ಕೋಮುವಾದದ ಎಲ್ಲಾ ಆಟಗಳನ್ನು ಆಡಿರುತ್ತಾರೆ. 1947ರಲ್ಲಿ ಇಂಡಿಯಾ ಉಪಖಂಡ ವಿಭಜಿಸಲ್ಪಟ್ಟಾಗ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳು ಪಾಕಿಸ್ತಾನವೆಂದೂ, ಹಿಂದೂ ಬಹುಸಂಖ್ಯಾತ ಪ್ರದೇಶಗಳು ಹಿಂದೂಸ್ತಾನವೆಂದು ಬೇರ್ಪಟ್ಟವು.

ಬ್ರಿಟಿಷರ ಸ್ವಯಂ ಅಧಿಕಾರದ ಪ್ರಹಸನವಾಗಿದ್ದ ನೂರಾರು ‘ಮಹಾರಾಜರು’ ದ್ವಿರಾಷ್ಟ್ರ ಯೋಜನೆಯಂತೆ ಬೇರ್ಪಟ್ಟಾಗ ಈ ವಿಚಾರದಲ್ಲಿ ಇಂಡಿಯಾ ಮೇಲರಿಮೆಯನ್ನು ಮೆರೆಯಿತು.

ಮುಸ್ಲಿಮ್ ಸಾಮಂತರು ಆಳ್ವಿಕೆ ನಡೆಸುತ್ತಿದ್ದ ಜುನಾಗಡ್, ಹೈದರಾಬಾದ್ ಇಂಡಿಯಾದ ತೆಕ್ಕೆಯಲ್ಲಿ ಬಂದಾಗ ಎರಡೂ ಕಡೆಯಲ್ಲಿ ಬಹುಸಂಖ್ಯಾತ ಹಿಂದೂಗಳಾದ ಕಾರಣ ಭೌಗೋಳಿಕವಾಗಿ ಪ್ರತಿರೋಧಿಸಲು ಅವರಿಗೆ ಸಾಧ್ಯವಾಗದೇ ಹೋಯಿತು. ಪೊಲೀಸ್ ಆ್ಯಕ್ಷನ್ ಎಂಬ ಹೆಸರನ್ನಿಟ್ಟುಕೊಂಡು ಹೈದರಾಬಾನಲ್ಲಿ ನಡೆದ ಸೈನಿಕ ನಡೆಯು ಸಾವಿರಾರು ಮಂದಿಯ ಮಾರಣ ಹೋಮಕ್ಕೆ ಹೇತುವಾಯಿತು. ಅದು ಯಾವುದೂ ಯಾರಿಗೂ ಚರ್ಚಾ ವಿಚಾರವಾಗಲಿಲ್ಲ.

ಯಾವುದೇ ಧರ್ಮೀಯರಿಗೆ ಬಹುಸಂಖ್ಯಾತರು ಎಂಬ ಮಾನದಂಡ ವನ್ನು ಇಟ್ಟು ನೋಡುವಾಗ ಮಹಾರಾಜ ಹರಿಸಿಂಗ್ ಆಳ್ವಿಕೆ ನಡೆಸುತ್ತಿದ್ದ ಕಾಶ್ಮೀರ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಪಾಕ್-ಅಫ್ಘಾನ್ ಪ್ರದೇಶದೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿದೆ. ಈ ವಿಚಾರ ಕಾಶ್ಮೀರಕ್ಕೆ ತಲುಪುವಾಗ ಯಾರಿಗೂ ಅನುಭವ ಆಗುತ್ತದೆ. ಆಹಾರ, ವಸ್ತ್ರ, ಆಚಾರ, ರೂಢಿ ಇವೆಲ್ಲದರಲ್ಲೂ ಅವರು ಭಿನ್ನವಾಗಿದ್ದಾರೆ. ಆದರೆ ದ್ವಿರಾಷ್ಟ್ರ ಕಲ್ಪನೆಯಲ್ಲಿ ಇರುವ ಜರ್ಜರಿತರಾಗುವ ಜನತೆಯಾಗಿ ಅವರು ಮಾರ್ಪಟ್ಟರು.

ಗುಲಾಬ್ ಸಿಂಗ್‌ನ ದುರಾಡಳಿತ:

ದುರಾಡಳಿತವು ಎಲ್ಲಾ ಕಾಲ ದಲ್ಲೂ ಕಾಶ್ಮೀರಿಗಳ ವಿಧಿಯಾಗಿತ್ತು. 1820ರಲ್ಲಿ ಸಿಖ್ ಮಹಾರಾಜ ರಂಜಿತ್ ಸಿಂಗ್ ಕಾಶ್ಮೀರವನ್ನು ವಶಪಡಿಸಿಕೊಳ್ಳುವುದರೊಂದಿಗೆ ಅದು ಪ್ರಾರಂಭಗೊಂಡಿತು. 1846ರಲ್ಲಿ ದೋಗ್ರಗಳು ವಂಚನೆಯಿಂದ ಕಾಶ್ಮೀರವನ್ನು ಕೈವಶಪಡಿಸುವುದರೊಂದಿಗೆ ಅದು ಇನ್ನಷ್ಟು ತೀವ್ರಗೊಂಡಿತು. ಅದು ಒಂದು ವಸಾಹತುಶಾಹಿ ಆಳ್ವಿಕೆಯಾಗಿತ್ತು. ಖಾಸಗಿ ಎಸ್ಟೇಟನ್ನು ಖರೀದಿಸುವಂತೆ ಮೊತ್ತಮೊದಲು ದೋಗ್ರ ರಾಜನಾದ ಗುಲಾಬ್ ಸಿಂಗ್ ಕಣಿವೆಯಲ್ಲಿ ಯಾವುದೇ ಅಧಿಕಾರವಿಲ್ಲದ ಈಸ್ಟ್ ಇಂಡಿಯಾ ಕಂಪೆನಿಯಿಂದ 75 ಲಕ್ಷ ರೂಪಾಯಿಗೆ ಖರೀದಿಸಿದನು. ಮಹಾರಾಜ ರಂಜಿತ್ ಸಿಂಗ್‌ನ ಸಾಮಂತನಾದ ಗುಲಾಬ್ ಸಿಂಗ್, ರಂಜಿತ್ ಸಿಂಗ್‌ನನ್ನು ವಂಚಿಸಿ ಬ್ರಿಟಿಷರೊಂದಿಗೆ ಸೇರಿಕೊಂಡನು. ಅಂದು ಕಾಶ್ಮೀರ ಗವರ್ನರ್ ಆಗಿದ್ದ ಶೈಖ್ ಇಮಾಮುದ್ದೀನ್ ಮಾರಾಟವನ್ನು ಒಪ್ಪಿಕೊಳ್ಳದೇ ಇದ್ದಾಗ ಬ್ರಿಟಿಷ್ ಸೈನ್ಯವು ಗುಲಾಮ್ ಸಿಂಗ್‌ನಿಗೆ ಕಣಿವೆಯ ನಿಯಂತ್ರಣವನ್ನು ಕೊಟ್ಟಿತು. ಗುಲಾಬ್ ಸಿಂಗ್ ಏನಿದ್ದರೂ ಕೇವಲ ಎಸ್ಟೇಟ್ ಮಾಲೀಕನಂತಿದ್ದ. ಈಸ್ಟ್ ಇಂಡಿಯಾ ಕಂಪೆನಿಗೆ ಕೊಟ್ಟ 75 ಲಕ್ಷಕ್ಕೆ ಪ್ರತಿಯಾಗಿ ಯಾವುದಾದರೂ ರೀತಿಯಲ್ಲಿ ಲಾಭ ಕೊಯ್ಯವುದಷ್ಟೆ ಆತನ ಉದ್ದೇಶವಾಗಿತ್ತು. ತೀವ್ರ ಹಿಂದೂ ಧರ್ಮ ವಿಶ್ವಾಸಿಯಾಗಿದ್ದ ಕಾರಣ ಚಾತುರ್ವರ್ಣದ ಅಡಿಪಾಯದಲ್ಲಿ ಆಡಳಿತವು ನಡೆಯುತ್ತಿತ್ತು. ಗೋಪೂಜೆ ಮುಖ್ಯ ಆರಾಧನೆಯಾಗಿತ್ತು. ಗೋಹತ್ಯೆ ಮರಣ ದಂಡನೆಗೆ ಅರ್ಹವಾದ ಅಪರಾಧವಾಗಿತ್ತು. ಬ್ರಾಹ್ಮಣರು ಹೆಚ್ಚುಕಡಿಮೆ ಅತಿಮಾನುಷರಾಗಿ ಮಾರ್ಪಟ್ಟರು. ದೋಗ್ರಾ ಬುಡಕಟ್ಟುಗಳು ಆಡಳಿತವನ್ನು ನಿಯಂತ್ರಿಸುತ್ತಿದ್ದರು. ಬಹುಸಂಖ್ಯಾತರಾದ ಕಾಶ್ಮೀರಿ ಮುಸ್ಲಿಮರು ಗುಲಾಮ ಸಮಾನರಾಗಿದ್ದರು. ದೋಗ್ರಗಳು ಕಣಿವೆಯಲ್ಲಿ ತೋರುವ ಭಾರೀ ಆಕ್ರಮಣಗಳ ಕುರಿತು 1880ರಲ್ಲಿ ವೈಸರಾಯ್ ಲಿಟನ್ ಲಂಡನ್‌ಗೆಕಳಿಸಿದ ವರದಿಯೊಂದರಲ್ಲಿ ಈ ಇತಿಹಾಸದ ದಾಖಲೆಯಿದೆ. ಅದರಲ್ಲಿ ಕಾಶ್ಮೀರಿಗಳು ಅತ್ಯಂತ ಹೆಚ್ಚಿನ ಹಿಂಸೆಯನ್ನು ಅನುಭವಿಸುವ ಕಾರಣವನ್ನು ಕೋರಿ ನಿರ್ಣಾಯಕ ಹಸ್ತಕ್ಷೇಪವನ್ನು ವೈಸರಾಯ್ ಆಗ್ರಹಿಸಿದ್ದನು.

ಆಕ್ರಮಣದ ವಿವರಗಳನ್ನು, ಮಾಹಿತಿಗಳನ್ನು ತಿಳಿದ ಇಂಡಿಯಾದ ಸೆಕ್ರೆಟರಿ ಕ್ರಾನ್ ಬೂಕ್ ವಿಭಿನ್ನ ಧರ್ಮೀಯರು ಎಂಬ ಕಾರಣದಿಂದ ಕಾಶ್ಮೀರಿಗಳನ್ನು ವಂಶಹತ್ಯೆ ಮಾಡುವುದನ್ನು ಅನುಮತಿಸಲಾರೆವು ಎಂಬ ನಿಲುವನ್ನು ತಳೆದನು. ಕಾಶ್ಮೀರಿಗಳಿಂದ ಭಾರೀ ತೆರಿಗೆಯನ್ನು ವಸೂಲು ಮಾಡುತ್ತಿದ್ದ ದೋಗ್ರಾ ಜಮೀನ್ದಾರರು ಅವರನ್ನು ಹಿಂದೂಗಳಾಗಿ ಮತಾಂತರಗೊಳಿಸುವ ಕುರಿತು ಪಿತೂರಿ ನಡೆಸಿದ ದಾಖಲೆಗಳು ಹೊರಬಂದಿದೆ. ಅದೃಷ್ಟವಶಾತ್ ಬನಾರಸ್‌ನಲ್ಲಿ ಹಿಂದೂ ಆಚಾರ್ಯರು ಆ ಪ್ರಯತ್ನವನ್ನು ಆರಂಭದಿಂದಲೇ ತಡೆದುಬಿಟ್ಟರು.

ಗುಲಾಬ್ ಸಿಂಗ್‌ನ ಮರಣಾನಂತರ ಕಾಶ್ಮೀರಿಗಳ ಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಏನೂ ಕಾಣಲಿಲ್ಲ. ಕಾಶ್ಮೀರಿಗಳ ವಿಶೇಷತೆಯಾದ ಕುಂಕುಮ, ಸೇಬು,ಉಣ್ಣೆಯ ವಸ್ತ್ರಗಳು ಮೊದಲಾದ ಎಲ್ಲಾ ಸರಕುಗಳ ಗುತ್ತಿಗೆ ದೋಗ್ರಾ ಕೈಯಲ್ಲಿತ್ತು. ಸಣ್ಣ ತಪ್ಪಿಗೂ ಕಾಶ್ಮೀರಿ ಜನರನ್ನು ಜೈಲಿಗಟ್ಟಲಾಗುತ್ತಿತ್ತು. 1941ರ ಅಂಕಿಅಂಶಗಳ ಪ್ರಕಾರ, ಶೇ.93.4ರಷ್ಟು ಜನರು ಅನಕ್ಷರಸ್ಥರಾಗಿದ್ದರು. 1944-45ರ ಕಾಲದಲ್ಲಿ 11 ರೂಪಾಯಿ ಪ್ರತಿಯೋರ್ವರ ತಲಾ ವರಮಾನವಾಗಿತ್ತು. ಮಹಾರಾಜನ ಖರ್ಚಿಗಾಗಿ ಸಾರ್ವಜನಿಕ ಖಜಾನೆಯಿಂದ 40 ಲಕ್ಷ ರೂಪಾಯಿಯನ್ನು, ಸೈನ್ಯಕ್ಕಾಗಿ 50 ಲಕ್ಷ ರೂಪಾಯಿಯನ್ನು ಮೀಸಲಿಡುವಾಗ ಆರೋಗ್ಯ, ಶಿಕ್ಷಣ, ವ್ಯವಸಾಯ, ಸಂಚಾರ ಮುಂತಾದವುಗಳಿಗೆ ಮೀಸಲಿಟ್ಟದ್ದು ಕೇವಲ 36 ಲಕ್ಷ ರೂಪಾಯಿಯಾಗಿತ್ತು.

1925ರಲ್ಲಿ ಸಿಂಹಾಸನವೇರಿದ ಹರಿಸಿಂಗ್ ತಾನು ಆಳಿದ 23 ವರ್ಷಗಳಲ್ಲಿ ಜನರನ್ನು ಶತ್ರುಗಳಂತೆ ಕಂಡಿದ್ದನು. ಪಕ್ಕದ ಪಂಜಾಬಿನಲ್ಲಿ ವಸೂಲು ಮಾಡುತ್ತಿದ್ದ ಭೂ ತೆರಿಗೆಯ ಮೂರು ಪಟ್ಟು ಹೆಚ್ಚು ತೆರಿಗೆಯನ್ನು ಹರಿಸಿಂಗ್‌ನ ಸುಂಕಕೋರರು ಬಡ ಕಾಶ್ಮೀರಿಗಳಿಂದ ವಸೂಲು ಮಾಡುತ್ತಿದ್ದರು. ಹಿಂದೂಗಳಿಗಷ್ಟೇ ಎಲ್ಲಾ ಹಕ್ಕು, ಸ್ವಾತಂತ್ರಗಳಿದ್ದವು. ಕಾನೂನುಗಳು ಅವರನ್ನು ಪ್ರತ್ಯೇಕವಾಗಿ ಪರಿಗಣಿಸಿತ್ತು. ಒಂದು ರೀತಿಯ ಪಂಡಿತ್-ದೋಗ್ರಾ ಸಾಮ್ರಾಜ್ಯಶಾಹಿತ್ವ ಕಾಶ್ಮೀರದಲ್ಲಿ ಇತ್ತು. ಕಾಶ್ಮೀರದ ಇತಿಹಾಸವನ್ನು ರಚಿಸಿದ ಪಂಡಿತ್ ಪ್ರೇಮ್‌ನಾಥ್ ಬಸಾಸ್ ಬರೆಯುತ್ತಾರೆ- ‘‘ರಾಜಾ ಹರಿಸಿಂಗ್‌ನ ಆಳ್ವಿಕೆ ಕಾಲದಲ್ಲಿ ಮುಸ್ಲಿಮರು ಅತ್ಯಂತ ಹೆಚ್ಚು ಹಿಂಸೆಯನ್ನು ಅನುಭವಿಸಿದರು. ಬಡತನವು ಭೀಕರ ಸ್ವರೂಪವನ್ನು ತಾಳಿತು. ಹರಕು ಚಿಂದಿ ಬಟ್ಟೆಗಳನ್ನು ಕಾಶ್ಮೀರಿಗಳು ಧರಿಸಿದ್ದರು. ಬೇಸಿಗೆಯಲ್ಲಿ ಅವರು 6 ತಿಂಗಳುಗಳ ಕಾಲ ಗದ್ದೆಗಳಲ್ಲಿ ಕಠಿಣ ಶ್ರಮ ಪಟ್ಟು ಹರಿಸಿಂಗ್ ಖಜಾನೆಯನ್ನು ತುಂಬಿಸಲು ಮತ್ತು ಭಾರೀ ಬಡ್ಡಿಯನ್ನು ಪಾವತಿಸಲು, ಅಧಿಕಾರಿಗಳಿಗೆ ಲಂಚ ನೀಡಬೇಕಾಗಿತ್ತು. ಅವರು ಬೇಸಾಯ ಮಾಡಿದ್ದ ಭೂಮಿ ಹಿಂದೂಗಳಿಗೆ ಸೇರಿದ್ದವು. ಕಟ್ಟಿಗೆ ಒಡೆಯುವುದು, ನೀರನ್ನು ಸೇದುವುದು ಅವರ ನಿತ್ಯ ಕಸುಬಾಗಿತ್ತು. ವೇಶ್ಯೆಯರ ಕೈಯಿಂದಲೂ ಶೇ.15-20ರಷ್ಟು ತೆರಿಗೆಯ ವಸೂಲು ಮಾಡುವ ಅತ್ಯಂತ ಕೆಟ್ಟ ಆಡಳಿತವನ್ನು ಕಾಶ್ಮೀರಿಗಳು ಅನುಭವಿಸಿದರು.

ವಂಶಹತ್ಯೆ:

ಗೋಹತ್ಯೆ ನಡೆಸುತ್ತಿದ್ದಾರೆಂದು ಆರೋಪಿಸಿ ಇದೀಗ ಉತ್ತರ ಭಾರತದ ಸಂಘಪರಿವಾರ ಪ್ರಚಾರಪಡಿಸುವ ರೀತಿಯಲ್ಲೇ ದೋಗ್ರಾ ಪೊಲೀಸರು ಗೋರಕ್ಷಣೆಯ ಹೆಸರಿನಲ್ಲಿ ಗ್ರಾಮಗಳಿಗೆ ಸರಣಿಯಂತೆ ಬೆಂಕಿ ಹಚ್ಚಿದ್ದರು.

1947ರಲ್ಲಿ ಹರಿಸಿಂಗ್ ತನ್ನ ದಾರ್ಷ್ಟವನ್ನು ಪೂರ್ಣರೂಪದಲ್ಲಿ ಹೊರತೆಗೆಯುತ್ತಾನೆ. ವಂಶಶುದ್ಧಿ ಎಂಬ ಪದವು ಜಗತ್ತಿನ ಮುಂದೆ ಅಷ್ಟೊಂದು ಪರಿಚಯವಿಲ್ಲದ ಆ ಕಾಲದಲ್ಲಿ ದೋಗ್ರಾ ಸೈನ್ಯವು ಹಿಂದೂ-ಸಿಖ್ಖರ ಸಹಾಯದೊಂದಿಗೆ ಜಮ್ಮುವಿನಲ್ಲಿ ನಡೆಸಿದ ವಂಶಹತ್ಯೆಯ ಕುರಿತು ಖುದ್ದು ಮಹಾತ್ಮ ಗಾಂಧಿ ಕಳವಳ ವ್ಯಕ್ತಪಡಿಸುತ್ತಾರೆ.

ಅಂದು ಜಮ್ಮುವಿನಲ್ಲಿ ಶೇ.67ರಷ್ಟು ಮುಸ್ಲಿಮ್ ಜನಸಂಖ್ಯೆಯಿತ್ತು. ಪತ್ರಕರ್ತನಾದ ಹೋರಸ್ ಅಲೆಕ್ಸಾಂಡರ್ ಲಂಡನ್‌ನ ಸ್ಪೆಕ್ಟೇಟರ್ ವಾರಪತ್ರಿಕೆಯ ವರದಿಯಲ್ಲಿ 2 ಲಕ್ಷ ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಬರೆಯುತ್ತಾರೆ(ಜನವರಿ 16, 1948). ಅದೇ ವೇಳೆ ಲಂಡನ್ ಟೈಮ್ಸ್ 2,37,000 ಜನರು ಕೊಲ್ಲಲ್ಪಟ್ಟರು ಎಂದು ಬಹಿರಂಗಪಡಿಸಿದೆ. ಸರಕಾರವು ನೇರವಾಗಿ ಈ ವಂಶಶುದ್ಧೀಕರಣದ ನಾಯಕತ್ವವನ್ನು ವಹಿಸಿತ್ತು. ಪಠಾಣ್ ಬುಡಕಟ್ಟು ಸೇನಾನಿಗಳು ಕಾಶ್ಮೀರ ವಿಚಾರದಲ್ಲಿ ಹಸ್ತಕ್ಷೇಪ ನಡೆಸುವ ಮುಖ್ಯ ಕಾರಣ ಈ ವಂಶ ಶುದ್ಧೀಕರಣವಾಗಿತ್ತು. ಹರಿಸಿಂಗ್‌ನ ವಂಶಹತ್ಯೆಯ ಕಾರಣದಿಂದ ಜಮ್ಮುವಿನಲ್ಲಿ ಮುಸ್ಲಿಮ್ ಜನಸಂಖ್ಯೆ ಶೇ.38ಕ್ಕೆ ಇಳಿಯಿತು. ಬ್ರಿಟಿಷ್ ಇತಿಹಾಸಕಾರನಾದ ಅಲಿಸ್ಟಿಯರ್ ಲ್ಯಾಮಿನ ಅಭಿಪ್ರಾಯದಲ್ಲಿ 5 ಲಕ್ಷ ಮುಸ್ಲಿಮರು ಅಂದು ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದರು.

ಅಂದು ಕಾಶ್ಮೀರದ ಮುಸ್ಲಿಮ್ ಕಾನ್ಫರೆನ್ಸ್‌ಅನ್ನು ಚಲಾಯಿಸುತ್ತಿದ್ದ ಶೈಖ್ ಅಬ್ದುಲ್ಲಾ, ಗೃಹಮಂತ್ರಿ ಸರ್ದಾರ್ ಪಟೇಲ್‌ರಿಗೆ ಬರೆದ ಪತ್ರದಲ್ಲಿ ಈ ವಿಚಾರವನ್ನು ಎತ್ತಿ ತೋರಿಸಿದ್ದಾರೆ. ವಂಶಹತ್ಯೆಯಲ್ಲಿ ಗೋಳ್ವಾಲ್ಕರ್ ನೇತೃತ್ವದೊಂದಿಗಿರುವ ಆರೆಸ್ಸೆಸ್ ಕೊಲೆಪಾತಕಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಜಮ್ಮು ನಗರವು ಸ್ಮಶಾನ ಭೂಮಿಯಾಯಿತು. ಹಿರಿಯ ಅಧಿಕಾರಿಗಳು, ಸೇನಾಧಿಕಾರಿಗಳು ಮತ್ತು ಪ್ರಧಾನ ಮಂತ್ರಿಯ ನಾಯಕತ್ವದಲ್ಲಿ ಅತ್ಯಾಚಾರ ಮತ್ತು ವಂಶಹತ್ಯೆ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಖಾತರಿಪಡಿಸಿದರು. ಆರೆಸ್ಸೆಸ್‌ಗೆ ಬಂದೂಕನ್ನು ವಿತರಿಸಲು ವಿಶೇಷ ವ್ಯವಸ್ಥೆಯನ್ನು ಏರ್ಪಡಿಸಿದ್ದರು.

ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಕೊನೆಯವರೆಗೆ ಹರಿಸಿಂಗ್ ರಾಜ ನಿರೀಕ್ಷೆಯನ್ನು ಹೊಂದಿದ್ದರು. ಹರಿಸಿಂಗ್‌ರ ವಂಶಜರು 1947ರ ನಂತರ ಕಾಶ್ಮೀರಿಗಳನ್ನು ಪೌರರು ಎಂದು ಭಾವಿಸದೆ ಕೇವಲ ಪ್ರಜೆಗಳು ಎಂದು ಭಾವಿಸಿದ್ದರು. ಅವರನ್ನು ಅಂದು ಕಾಶ್ಮೀರದ ಜನತೆಯಂತೆ ನೋಡಿಕೊಳ್ಳಲಿಲ್ಲ. ಮತ್ತೊಮ್ಮೆ ಅವರು ಬಂದೂಕುಗಳ ಮುಂದೆ ಭಯಭೀತರಾಗಿ ಗುಲಾಬ್ ಸಿಂಗ್‌ನ ಮತ್ತು ಅವರ ಅನುಯಾಯಿಗಳ ಕಾಲದಲ್ಲಿದ್ದಂತೆ ನೀರುಣಿಸುವ, ಕಟ್ಟಿಗೆ ಒಡೆಯುವ ಕೆಲಸಗಾರರಾಗಿ ಮುಂದುವರಿದರು.

ಕಾಶ್ಮೀರದ ಬಿಕ್ಕಟ್ಟು ಹಿಂದೂ-ಮುಸ್ಲಿಮ್ ದ್ವಂದ್ವವೆಂಬಂತೆ ಸಂಕುಚಿತಗೊಳಿಸುವುದು ಇತಿಹಾಸದ ವಾಸ್ತವಿಕತೆಗಳನ್ನು ಪರಿಹಾಸ್ಯ ಮಾಡುವುದಕ್ಕೆ ಸಮವಾಗಿದೆ. ಶೈಖ್ ಅಬ್ದುಲ್ಲಾರ ನೇತೃತ್ವದಲ್ಲಿ ಹರಿಸಿಂಗ್‌ನ ಏಕಾಧಿಪತ್ಯದ ವಿರುದ್ಧ ವಿರೋಧವು ಗಟ್ಟಿಗೊಳ್ಳುವ ವೇಳೆ ಅದನ್ನು ಬೆಂಬಲಿಸಿದವರಲ್ಲಿ ಪಂಡಿತ್ ಪ್ರೇಮ್‌ನಾಥ್ ಬಸಾಸ್, ಡಿ.ಪಿ.ಧರ್ ಮೊದಲಾದ ಕಾಶ್ಮೀರಿ ಪಂಡಿತರಲ್ಲಿ ಹಲವರು ಇದ್ದರು. ಇದೀಗ ಹರಿಸಿಂಗ್‌ನ ಪರಂಪರೆ ಮುಂದುವರಿಯಬೇಕೆಂದು ಹಠ ಹಿಡಿಯುವ ಹಿಂದುತ್ವವಾದಿಗಳಿಗೆ ಆತ ಹಿಂದೂ ಆಗಿದ್ದ ಎಂಬುದಷ್ಟೆ ಇರುವ ಏಕೈಕ ನ್ಯಾಯ.

ಮಣ್ಣಿನ ಪ್ರತಿಮೆಗಳು:

ದೇಶದ ಜನತೆ ಮಹಾ ಕಷ್ಟಕೋಟಲೆಗಳಲ್ಲಿ ಮುಳುಗಿರುವಾಗ ಪ್ರತ್ಯಕ್ಷಗೊಳ್ಳುವ ಅವತಾರಗಳು ವಾಸ್ತವದಲ್ಲಿ ಹಳೆಯ ಅಧಿಕಾರ ವ್ಯವಸ್ಥೆಯ ಮುಖವಾಡಗಳು ಮಾತ್ರ ಎಂಬುದು ಈ ಕಳೆದ ಉಪಚುನಾವಣೆಯಲ್ಲಿ ವ್ಯಕ್ತವಾಯಿತು. ಪ್ರಜಾಪ್ರಭುತ್ವ, ಪೌರರ ಹಕ್ಕುಗಳು ಮೊದಲಾದ ಚೇತೋಹಾರಿಯಾದ ಘೋಷಣೆಗಳೆಲ್ಲವೂ ಅವರಿಗೆ ಅಧಿಕಾರದ ಊರುಗೋಲು ಮಾತ್ರವಾಗಿತ್ತು. ಕಾಶ್ಮೀರಿ ವಿಷಯಗಳಲ್ಲಿ ಕೆಲವು ರಾಜಕೀಯ ಪಕ್ಷಗಳು ಸ್ವೀಕರಿಸಿದ ನಿಲುವುಗಳನ್ನು ನೋಡಿದರೆ ದೇಶದ ಕಷ್ಟ ಕೋಟಲೆಗಳನ್ನು ಈ ಮಂದಿ ಇನ್ನಷ್ಟು ದುಪ್ಪಟ್ಟುಗೊಳಿಸುತ್ತಾರೆ ಎಂಬುದು ಖಾತರಿಯಾಯಿತು. ದಲಿತರ ಅಧಿಕಾರದ ವಿಚಾರದಲ್ಲಿ ವಾದಿಸುವ ಕಾನ್ಶಿರಾಮ್‌ರವರ ಪಕ್ಷ ಬಿಎಸ್ಪಿಯಲ್ಲಿ ಮೂಲೆಗುಂಪಾದ ಗುಂಪುಗಳು ಈ ಹಿಂದೆ ದೊಡ್ಡ ನಿರೀಕ್ಷೆಯನ್ನು ಹೊಂದಿದ್ದರು. ಬಿಎಸ್ಪಿಯ ಎಂಪಿಗಳು ಅಮಿತ್ ಶಾರ ಬುಲ್ಡೋಝರ್ ನಿರ್ಣಯಗಳಿಗೆ ಬೆಂಬಲವನ್ನು ನೀಡಿದಾಗ ಸ್ವಾಯತ್ತತೆ, ಸಬಲೀಕರಣ ಮುಂತಾದ ವಿಚಾರಗಳಲ್ಲಿ ಮಾಯಾವತಿ ಮತ್ತು ಗುಂಪು ಎತ್ತುವ ಘೋಷಣೆಗಳೆಲ್ಲವೂ ದೇಶದ ಮನಸ್ಸಾಕ್ಷಿಗೆ ವಿರುದ್ಧವಾದ ಅನುಭವಗಳಾಗಿತ್ತು.

ಅಂತೆಯೇ ಆಮ್ ಆದ್ಮಿ ಪಾರ್ಟಿ ದಿಲ್ಲಿಗೆ ರಾಜ್ಯ ಪದವಿ ಲಭಿಸದೇ ಇರುವುದರಿಂದ ಮುನಿಸಿಕೊಂಡಿದ್ದ ಮುಖ್ಯಮಂತ್ರಿ ಕೇಜ್ರಿವಾಲ್‌ನ ಟ್ವೀಟ್ ನೋಡಿದಾಗ ಎಎಪಿ ಎಂಪಿಗಳು ಅಮಿತ್ ಶಾ ಪರವಾಗಿ ಚಪ್ಪಾಳೆ ತಟ್ಟಿದರು. ಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳುವ ವಿಚಾರದಲ್ಲಿ ಮಧ್ಯೆ ಮಧ್ಯೆ ರೋದಿಸುವ ಟಿಡಿಪಿ ಸಹಿತ ಇತರ ಪ್ರಾದೇಶಿಕ ಪಕ್ಷಗಳು ‘ಹೊಸ ಉಕ್ಕಿನ ಮನುಷ್ಯ’ ನೀಡಿದ ಕೊನೆಯ ಎಚ್ಚರಿಕೆಯನ್ನು ಕೇಳಿ ಭಯದಿಂದ ಕಾಶ್ಮೀರದ ವಿಚಾರವಾಗಿ ಮೌನಗೊಂಡಿದೆ.  ಹಲವು ಕೇಂದ್ರ ಏಜೆನ್ಸಿಗಳು ದೊಡ್ಡ ಫೈಲುಗಳೊಂದಿಗೆ ಕ್ರಮಕೈಗೊಳ್ಳಲು ತಯಾರಾಗಿ ನಿಂತಿರುವುದು ತಿಳಿಯದವರೇನಲ್ಲ ಈ ಪ್ರಾದೇಶಿಕ ಪಕ್ಷದ ರಾಜಕಾರಣಿಗಳು. ಮಾಯಾವತಿಯ ಚಪ್ಪಲಿಯ ಎಣಿಕೆಯವರೆಗೆ ಅವರ ರಹಸ್ಯ ದಾಖಲೆಗಳಲ್ಲಿ ನಮೂದಿಸಲಾಗಿದೆ.

ಕೊಳಗಳು:

1238-1325ರ ಕಾಲದಲ್ಲಿ ದೆಹಲಿ ಯಲ್ಲಿ ಜೀವಿಸಿದ್ದ ಸೂಫಿವರ್ಯರಾದ ನಿಝಾಮುದ್ದೀನ್ ಔಲಿಯಾರ ಕುರಿತು ಕೇಳಿ ಬರುವ ಹಲವು ಕಥೆಗಳಲ್ಲಿ ಇದು ಒಂದು. ಔಲಿಯಾರ ಮಖ್‌ಬರಗಳ ಸಮೀಪ ಹಿಂದಿನ ಕಾಲದಲ್ಲಿ ಕಂಡು ಬರುವಂತಹ ಮೆಟ್ಟಿಲುಕೊಳ (ಹಿಂದಿ-ಉರ್ದುವಿನಲ್ಲಿ ಬಾವಲಿ ಎಂದು ಕರೆಯುತ್ತಾರೆ) ನಿರ್ಮಿಸಲು ತೀರ್ಮಾನಿಸಿದಾಗ ಅಂದಿನ ಸುಲ್ತಾನನಾಗಿದ್ದ ಗಾಝಿ ಮಲಿಕನಿಗೆ ಅದು ಹಿಡಿಸಲಿಲ್ಲ. ಇಂದು ಆಳುವ ವರ್ಗಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ, ಅಂದು ಮಾಲಿಕ್, ಔಲಿಯಾರಿಗೆ ದೀಪದ ಎಣ್ಣೆಯನ್ನು ನಿರಾಕರಿಸಿದ. ಆ ವೇಳೆ ಔಲಿಯಾ ಕೊಳದ ನೀರನ್ನು ತೆಗೆದು ಉಪಯೋಗಿಸಲು ಸಿಬ್ಬಂದಿಗಳಿಗೆ ನಿರ್ದೇಶಿಸಿದರು. ಅದನ್ನು ಅವರು ದೀಪದ ಎಣ್ಣೆಯಾಗಿ ಉಪಯೋಗಿಸಿದರು ಮತ್ತು ರಾತ್ರಿಯಲ್ಲೂ ತಮ್ಮ ಕೆಲಸ ಕಾರ್ಯಗಳನ್ನು ಮಾಡಿದರು.

ನಿಝಾಮುದ್ದೀನ್ ಬಾವಲಿಯ ನೀರು ಹಲವು ಕಾಲದ ವರೆಗೆ ದೀಪದ ಎಣ್ಣೆಯಾಗಿ ಉಪಯೋಗಿಸಲ್ಪಡುತ್ತಿತ್ತು. ಸುತ್ತಮುತ್ತ ವಾಸಿಸುವವರೆಲ್ಲರೂ ರೂಢಿಯಂತೆ ಅಲ್ಲಿಗೆ  ಮಲಿನ ನೀರನ್ನು ಸೇರಿಸುತ್ತಿದ್ದು, ಹೆಚ್ಚುಕಮ್ಮಿ 160 ಅಡಿ ಆಳವಿರುವ ಕೊಳವು ಕೆಸರು ತುಂಬಿ ಉಪಯೋಗ್ಯ ಶೂನ್ಯವಾಗಿತ್ತು. ಆಗಾ ಖಾನ್ ಟ್ರಸ್ಟ್‌ನ ಸಹಾಯದೊಂದಿಗೆ ಇದೀಗ ದುರಸ್ತಿಗೈದು ಶುಚಿಗೊಳಿಸಿ ಮಕ್ಕಳು ಜಿಗಿದು ಸ್ನಾನ ಮಾಡುವ ವರೆಗೆ ಯೋಗ್ಯ ರೀತಿಯ ಶುದ್ಧ ನೀರಾಗಿ ಮಾರ್ಪಟ್ಟಿದೆ.

ಜಲ ಸಂರಕ್ಷಣೆಯ ಬಗ್ಗೆ ಹಳೆಯ ತಲೆಮಾರುಗಳು ಸ್ವೀಕರಿಸಿದ ಸುಲಭದ ತಾಂತ್ರಿಕ ವಿದ್ಯೆಗಳಲ್ಲೊಂದು ಕೊಳಗಳು ಅಥವಾ ಕೆರೆಗಳು. ನಾಲ್ಕು ತಿಂಗಳುಗಳ ಕಾಲ ಮುಂದುವರಿಯುವ ಮಾನ್ಸೂನ್‌ಗಳಲ್ಲಿ ಬರುವ ಧಾರಾಕಾರ ಮಳೆಯ ಕಾರಣದಿಂದಾಗಿ ಇಂಡಿಯಾದಲ್ಲಿ 2000 ವರ್ಷಗಳ ಹಿಂದೆ ಇದ್ದ ಕೆರೆಗಳನ್ನು ನಿರ್ಮಿಸಲು ಪ್ರಾರಂಭಿಸಲಾಗಿದೆ. ಬರಪೀಡಿತ ಗುಜರಾತಿನಲ್ಲೂ, ರಾಜಸ್ತಾನದಲ್ಲೂ ಅವುಗಳನ್ನು ಇನ್ನಷ್ಟು ನೋಡಲು ಸಾಧ್ಯ. ಹೆಚ್ಚಿನ ವೇಳೆ ತೀರ್ಥಯಾತ್ರಿಕರು, ವ್ಯಾಪಾರಿಗಳು ಸಂಚರಿಸಿದ ದಾರಿಗಳ ಸಮೀಪ ಅವುಗಳಿದ್ದವು. ಕೆಲವೆಡೆ ಛತ್ರಗಳಂತೆ ಮಾರ್ಪಟ್ಟು ಮಸೀದಿಗಳ ಸಮೀಪ ಅಂಗಶುದ್ಧಿ ಮಾಡಿಕೊಳ್ಳಲು ಅವು ಉಪಕರಿಸಿದವು. ಕೆರೆಗಳು ಮಹಿಳೆಯರಿಗೆ ಜೊತೆಯಾಗಿ ಕುಳಿತುಕೊಳ್ಳುವ ಮತ್ತು ಹರಟೆ ಹೊಡೆಯುವ ಜಾಗವಾಗಿತ್ತು ಎಂದು ಸಮಾಜಶಾಸ್ತ್ರಜ್ಞರು ಸೂಚಿಸುತ್ತಾರೆ. ರಾಜಕುಮಾರಿಗಳು, ರಾಜರು ಹೈದರಾಬಾದ್‌ನಲ್ಲಿ ಕೆರೆಗಳನ್ನು ನಿರ್ಮಿಸಿದ್ದರು. ಗುಜರಾತಿನ ಪಠಾನದ ‘‘ರಾಣಿ ಕಿ ಕುವ್ವಾ’’ ಚಿತ್ರವನ್ನು ನಮ್ಮ ಹೊಸ ನೂರು ರೂಪಾಯಿಯ ನೋಟಿನಲ್ಲಿ ಕಾಣಬಹುದು.

ಕಾಕತಾಳೀಯವಾಗಿ ಕೆಲವು ಕೊಳಗಳಲ್ಲಿ ಇರುವ ಮೆಟ್ಟಿಲುಗಳು ಅತ್ಯಂತ ಉತ್ಕೃಷ್ಟ ದೃಷ್ಟಾಂತದಂತೆ ಮಾರ್ಪಟ್ಟಿವೆ. ಜೈಪುರದ ಪೂರ್ವದ ಚಾಂದ್ ಕೆರೆಗೆ 13 ಅಂತಸ್ತು ಮತ್ತು ಕಡಿಮೆ ನೀಳದ 3500 ಮೆಟ್ಟಿಲುಗಳಿವೆ.

ಬ್ರಿಟಿಷರು ದೇಶವನ್ನು ವಶಪಡಿಸಿ ಹೊಸ ಅಭಿವೃದ್ಧಿಯ ಕಲ್ಪನೆಗಳು ಬರುವ ವೇಳೆ ಕೊಳಗಳನ್ನು ಮಣ್ಣು ತುಂಬಿಸಿ ಮುಚ್ಚಲು ಪ್ರಾರಂಭಿಸಿದರು. ಆರೋಗ್ಯಕ್ಕೆ ಒಳಿತಲ್ಲ ಎಂಬ ನ್ಯಾಯವನ್ನು ಮುಂದಿಟ್ಟುಕೊಂಡು ಹೆಚ್ಚಿನ ಜಾಗಗಳಲ್ಲಿ ಬೇಲಿ ನಿರ್ಮಿಸಿ ಜನರು ಪ್ರವೇಶಿಸದಂತೆ ನಿಷೇಧ ಹೇರಲಾಯಿತು. ಕೊಳವೆ ಬಾವಿಗಳು ವ್ಯಾಪಕವಾದೊಡನೆ ಕೊಳಗಳು ಅಂತ್ಯಕಂಡವು. ಇದೀಗ ಅಭಿವೃದ್ಧಿಯ ಪರಿಣಿತರು ಅವುಗಳನ್ನು ಪುನರ್ ನಿರ್ಮಿಸುವುದು ಒಳಿತು ಎಂದು ಸೂಚಿಸಿದ್ದಾರೆೆ. ಐತಿಹಾಸಿಕ ಹಲವು ಕಟ್ಟಡಗಳ ಮುಂದೆ ಮೊಘಲರು ನಿರ್ಮಿಸಿದ ಉದ್ಯಾನವನಗಳು ಮತ್ತು ಬೇಕಾದಷ್ಟು ಕೊಳಗಳು ಇದ್ದವು. ಅವುಗಳಲ್ಲಿ ಕೆಲವೊಂದನ್ನು ಆಗಾ ಖಾನ್ ಟ್ರಸ್ಟ್‌ನಂತಹ ಸರಕಾರಿ ಏಜೆನ್ಸಿಗಳು ಜೀರ್ಣೋದ್ಧಾರ ಮಾಡುತ್ತಿವೆ.

ಶ್ಲಾಘನೀಯವಾದ ಈ ರೀತಿಯ ಸೇವೆಗಳ ವಿರುದ್ಧ ಹಿಂದುತ್ವ ಶಕ್ತಿಗಳು ಹಾಸ್ಯಾಸ್ಪದವೆಂಬಂತೆ ಬೀದಿಗಿಳಿಯುತ್ತಿದೆ. ಆಗಾ ಖಾನ್ ಟ್ರಸ್ಟ್ ಈ ರೀತಿ  ದಿಲ್ಲಿಯನ್ನು ಉದ್ಧಾರಗೊಳಿಸುವ ಅಗತ್ಯವಿಲ್ಲ ಎಂದು ನರೇಂದ್ರ ಮೋದಿ ಸರಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ. ಆ ವೇಳೆ ಇಂಡಿಯಾದ ಇತಿಹಾಸದಿಂದ ನೂರಾರು ವರ್ಷಗಳ ಚರಿತ್ರೆಯನ್ನು ಒರೆಸಿ ತೆಗೆಯಬಹುದೆಂದು ಬೊಬ್ಬಿರಿಯುವ ಹೊಸ ನೈತಿಕ ಗೂಂಡಾಗಳಿಗೆ ತಾಜ್‌ಮಹಲ್‌ನಂತಹ ಮನೋಹರವಾದ ಮುಸ್ಲಿಮ್ ಸ್ಮಾರಕಗಳನ್ನು ಕಸಗಡ್ಡಿಗಳಿಂದ ಮುಚ್ಚಿಬಿಡಬೇಕೆಂಬುದು ಅವರ ಮನದಿಂಗಿತವಾಗಿದೆ.

LEAVE A REPLY

Please enter your comment!
Please enter your name here