ದೈನಿಕ ಸರಾಸರಿ 3 ಲಕ್ಷದ ಗಡಿ ಸಮೀಪಿಸುತ್ತಿರುವ ಕೊರೋನಾ ಕೇಸ್ ಗಳು: ಡಬ್ಲ್ಯೂ.ಎಚ್.ಒ ಆತಂಕ

Prasthutha|

ಜಿನೇವಾ: ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸರಾಸರಿ ಏರಿಕೆಯ ಮಟ್ಟ ದಿನಕ್ಕೆ 3 ಲಕ್ಷದ ಗಡಿ ಸಮೀಪಿಸುತ್ತಿರುವ ನಡುವೆ, ದೈನಿಕ ಪ್ರಕರಣಗಳ ತೀವ್ರ ಹೆಚ್ಚಳಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ ಒ) ಆತಂಕ ವ್ಯಕ್ತಪಡಿಸಿದೆ. ಶುಕ್ರವಾರ ಕೇವಲ 24 ಗಂಟೆಯಲ್ಲಿ ಜಾಗತಿಕ ಮಟ್ಟದಲ್ಲಿ ದಾಖಲೆಯ ಸುಮಾರು 2,84,196 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಒಂದೇ ದಿನ 9,753 ಮಂದಿಯ ಸಾವು ಸಂಭವಿಸಿದೆ. ಏ.30ರಂದು ಗರಿಷ್ಠ 9,797 ಮಂದಿಯ ಸಾವು ಸಂಭವಿಸಿದ್ದ ಬಳಿಕ, ಇದೇ ಮೊದಲ ಬಾರಿ ಅತಿಹೆಚ್ಚು ಸಾವು ಸಂಭವಿಸಿದೆ.

ಜುಲೈ ತಿಂಗಳಲ್ಲಿ ದಿನದ ಸರಾಸರಿ ಸಾವಿನ ಸಂಖ್ಯೆ 5,000ದಷ್ಟಿದ್ದು, ಜೂನ್ ನಲ್ಲಿ ಇದು ಸರಾಸರಿ 4,600ರಷ್ಟಿತ್ತು. ಅಮೆರಿಕದಲ್ಲಿ 69,641, ಬ್ರೆಜಿಲ್ ನಲ್ಲಿ 67,860 ಮತ್ತು ಭಾರತದಲ್ಲಿ 49,310 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಪೆರುವಿನಲ್ಲಿ 3,876, ಬ್ರೆಜಿಲ್ ನಲ್ಲಿ 1,284 ಮತ್ತು ಅಮೆರಿಕದಲ್ಲಿ 1,074 ಹೊಸ ಸಾವಿನ ಪ್ರಕರಣಗಳು ವರದಿಯಾಗಿದೆ. ಭಾರತದಲ್ಲಿ 740 ಹೊಸ ಸಾವು ಸಂಭವಿಸಿವೆ.

- Advertisement -