ದೆಹಲಿ ಹಿಂಸಾಚಾರ | ಪೊಲೀಸರಿಂದ 45 ಜಾಮಿಯಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ

Prasthutha|

ನವದೆಹಲಿ : ಕಳೆದ ಫೆ.10ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಪೊಲೀಸ್ ಹಿಂಸಾಚಾರದ ವೇಳೆ, ಕನಿಷ್ಠ 45 ಮಂದಿಯ ಮೇಲೆ ಪೊಲೀಸರು ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಹೇಳಲಾಗಿದೆ. ‘ನ್ಯಾಶನಲ್ ಫೆಡೆರೇಶನ್ ಆಫ್ ಇಂಡಿಯನ್ ವುಮೆನ್(ಎನ್ ಎಫ್ ಐಎ)’ ಬಿಡುಗಡೆಗೊಳಿಸಿರುವ ಸತ್ಯಶೋಧನಾ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.

ಪೊಲೀಸರ ಈ ಭೀಕರ ಅಮಾನವೀಯ ಅಪರಾಧಗಳ ಬಗ್ಗೆ ವಿಶೇಷ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಹಿಂಸಾಚಾರದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ವರದಿ ಬಿಡುಗಡೆ ಮಾಡಿದ ಎನ್ ಎಫ್ ಐಎ ಅಧ್ಯಕ್ಎ ಅರುಣಾ ರಾಯ್ ಒತ್ತಾಯಿಸಿದ್ದಾರೆ.

- Advertisement -

ಮಹಿಳೆಯರ ಮೇಲೆ ಗುರಿಪಡಿಸಲಾದ ಲೈಂಗಿಕ ದೌರ್ಜನ್ಯ ಮತ್ತು ಪ್ರತಿಭಟನಕಾರರ ಮೇಲೆ ನಡೆಸಲಾದ ಹಿಂಸಾಚಾರ ಹಿಂದೆಂದೂ ಕಂಡರಿಯದ್ದು ಎಂದು ಅವರು ಹೇಳಿದ್ದಾರೆ.

ಸಿಎಎ, ಎನ್ ಸಿಆರ್, ಎನ್ ಪಿಆರ್ ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ, ಜಾಮಿಯಾ ವಿದ್ಯಾರ್ಥಿಗಳು ಮತ್ತು ನಿವಾಸಿಗಳ ಮೇಲೆ ಪೊಲೀಸರು ಭೀಕರ ಹಿಂಸಾತ್ಮಕ ದಾಳಿ ನಡೆಸಿದ್ದಾರೆ ಎಂದು ರಾಯ್ ಆಪಾದಿಸಿದ್ದಾರೆ.

ಮಹಿಳೆಯರ ಮೇಲೆ ಗುರಿಯಿಟ್ಟು ಹಿಂಸಾಚಾರ ಮತ್ತು ಶಾಂತಿಯುತ ಪ್ರತಿಭಟಕಾರರ ವಿರುದ್ಧ ರಾಸಾಯನಿಕ ಅನಿಲ ಬಳಕೆ ಮಾಡಿರುವ ಎರಡು ಪ್ರಮುಖ ಅಂಶಗಳನ್ನು ವರದಿ ಗಮನಿಸಿದೆ.

ಫೆ.11ರಂದು ರಾತ್ರಿ ನಡೆದ ದಾಳಿಯ ವೇಳೆ ಸುಮಾರು 15 ಮಹಿಳೆಯರು ಮತ್ತು 30 ಪುರುಷರ ಖಾಸಗಿ ಭಾಗಗಳ ಮೇಲೆ ಹಲ್ಲೆ ಮಾಡಲಾಗಿದೆ. ಮಹಿಳೆಯರ ಮೇಲೆ ಪುರುಷ ಪೊಲೀಸರು ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರ ಬಟ್ಟೆಗಳನ್ನು ಹರಿದಿದ್ದಾರೆ ಮತ್ತು ಖಾಸಗಿ ಭಾಗಗಳನ್ನು ಮುಟ್ಟಿದುದಲ್ಲದೆ, ವಿವಿಧ ರೀತಿಯ ಹಿಂಸೆಯನ್ನು ನೀಡಿದ್ದಾರೆ. ಈ ದಾಳಿಯ ಬಳಿಕ ಹಲವು ಯುವತಿಯರಿಗೆ ರಕ್ತಸ್ರಾವವಾಗಿತ್ತು ಮತ್ತು ಅನಾರೋಗ್ಯಪೀಡಿತರಾಗಿ ಆಸ್ಪತ್ರೆಗಳಲ್ಲಿ ದಾಖಲಾಗಬೇಕಾಗಿ ಬಂದಿತ್ತು. 16ರಿಂದ 65ರ ವರೆಗಿನ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ. ಹಲವು ಮಹಿಳೆಯರಿಗೆ ಇದರಿಂದಾಗಿ ಮರ್ಮಾಂಗ ಸಂಬಂಧಿತ ಸಮಸ್ಯೆಗಳು ಉದ್ಭವವಾಗಿವೆ. ಮಹಿಳೆಯೊಬ್ಬರು ಹೆರಿಗೆಯ ವೇಳೆ ಸಿಸೇರಿಯನ್ ಆಗಿದೆ, ಹೊಡೆಯಬೇಡಿ ಎಂದು ಬೇಡಿಕೊಂಡರೂ, ಒಬ್ಬಾತ ಪೊಲೀಸ್ ಆಕೆಯ ಮೇಲೆ ನಿರಂತರ ಹೊಡೆದಿದ್ದಾನೆ ಎನ್ನಲಾಗಿದೆ.   

ಸುಮಾರು 30 ಮಂದಿ ಪುರುಷರನ್ನು ಪೊಲೀಸ್ ಠಾಣೆಗೆ ಬಸ್ ಒಂದರಲ್ಲಿ ಕರೆದೊಯ್ಯಲಾಗಿತ್ತು. ಬಸ್ ನಲ್ಲಿ 40 ನಿಮಿಷಗಳ ಕಾಲ ಭೀಕರ ಹಲ್ಲೆಗಳನ್ನು ನಡೆಸಲಾಗಿತ್ತು ಎಂದು ಹೇಳಲಾಗಿದೆ.

ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸುವುದು ಸಾಮಾನ್ಯ. ಆದರೆ, ಇಲ್ಲಿ ಅಶ್ರುವಾಯು ಸಿಡಿಸಿಲ್ಲ, ರಾಸಾಯನಿಕ ಬಳಸಿದ್ದಾರೆ ಎಂದು ಆಪಾದಿಸಲಾಗಿದೆ. ಈ ರಾಸಾಯನಿಕ ಬಳಸಿದ ಕೂಡಲೇ, ಪ್ರತಿಭಟನೆಗಾರರಿಗೆ ತಲೆ ಸುತ್ತುವಿಕೆ, ತಲೆ ನೋವು ಆರಂಭವಾಗಿತ್ತು. ಹಲವಾರು ಮಂದಿಗೆ ಗಂಟೆಗಳ ಕಾಲ ಸ್ಥಿರವಾಗಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಇನ್ನೂ ಕೆಲವು ಗಂಭೀರ ಸಮಸ್ಯೆಗಳು ಪ್ರತಿಭಟನಕಾರರಲ್ಲಿ ಕಂಡುಬಂದಿತ್ತು. ಹೀಗಾಗಿ ಇದು ರಾಸಾಯನಿಕ ಸ್ಪ್ರೇ ಮಾಡಲಾಗಿತ್ತು ಎಂದು ಪ್ರತಿಭಟನಕಾರರು ದೂರಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.  

- Advertisement -