January 29, 2021

ದೆಹಲಿ ಮತ್ತೆ ಮೊಳಗಿದ ರಣಕಹಳೆ

-ಝೀನತ್ ಅಬ್ದುಲ್ ಖಾದರ್

ಜಗತ್ತಿನ ಜನಸಂಖ್ಯೆಯ `ಹೆಚ್ಚು ಉನ್ನತ ಅರ್ಧ’ ಎಂಬ ವಿಶೇಷಣೆಯು ಕುಟುಂಬ ಜೀವನದಲ್ಲಿ, ಸಮಾಜದಲ್ಲಿ ಮಹಿಳೆಯರ ಸ್ಥಾನವನ್ನು ತಿಳಿಸುತ್ತದೆ. ವೈಯಕ್ತಿಕ ಮತ್ತು ಕೌಟುಂಬಿಕದಂತೆಯೇ ಸಾಮಾಜಿಕ ಹಾಗೂ ರಾಜಕೀಯ ರಂಗಗಳಲ್ಲಿಯೂ ಮಹಿಳೆಯರಿಗೆ ಸಮಾನವಾದ ನೆಲೆಗಟ್ಟು ಸಿಗಬೇಕೆಂಬುವುದು ತಾತ್ವಿಕವಾಗಿ ಒಪ್ಪಿಕೊಂಡ ಸತ್ಯ. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಗೌರವದ ಸ್ಥಾನಮಾನ ದೊರಕಬೇಕು ಎಂದು ಭಾರತದ ಸಂವಿಧಾನ ಹೇಳುತ್ತದೆ. ಈ ಎಲ್ಲಾ ಕಾರಣಗಳಿಂದಾಗಿಯೇ ಏನೋ ಮಹಿಳೆಯರಂತೂ ಪ್ರತೀ ರಂಗಗಳಲ್ಲಿಯೂ ಮಧ್ಯ ಪ್ರವೇಶಿಸಿ ಸಮಸ್ಯೆಯ ಪರಿಹಾರಕ್ಕಾಗಿಯೇ ಅಥವಾ ಜಗತ್ತಿನಾದ್ಯಂತ ಆ ಸಮಸ್ಯೆಗಳನ್ನು ಎತ್ತಿ ತೋರಿಸಲೆಂದೋ ಮುಂಚೂಣಿಯಲ್ಲಿ ಇರುವುದಂತೂ ಇತಿಹಾಸ ಮತ್ತು ಪ್ರಸಕ್ತ ಸನ್ನಿವೇಶಗಳಿಂದ ತಿಳಿದು ವಿಮರ್ಶೆ ಮಾಡಲು ಸಾಧ್ಯವಾಗುತ್ತಿದೆ. ಹೆಣ್ಣೊಬ್ಬಳು ತಾಯ್ತನದ ಜವಾಬ್ದಾರಿಯೊಂದಿಗೆ ಉಳಿದ ಎಲ್ಲಾ ಜವಾಬ್ದಾರಿಗಳನ್ನು ದಕ್ಷತೆಯಿಂದ ನಿಭಾಯಿಸಿ ಅಭೂತಪೂರ್ವವಾದುದನ್ನು ಸಾಧಿಸುತ್ತಿರುವುದಂತೂ ಸತ್ಯ. ನಮ್ಮ ದೇಶವು ಕಳೆದ ಹಲವಾರು ವರ್ಷಗಳಿಂದ ಬಹಳ ಗಂಭೀರ ಸಮಸ್ಯೆಯತ್ತ ಮುಖಮಾಡಿದೆ. ಜಾತ್ಯತೀತ ಮತ್ತು ಸಮಾನತೆಯ ಮೇಲೆ ಸ್ಥಾಪಿಸಲಾದ ರಾಷ್ಟçದ ಮೌಲ್ಯಗಳನ್ನು ತಿರಸ್ಕರಿದ ಫ್ಯಾಶಿಸಂ ನಡೆಗಳಿಂದ ದಬ್ಬಾಳಿಕೆಗಳನ್ನು ಎದುರಿಸಬೇಕಾಗಿದೆ. ಮಾತ್ರವಲ್ಲ ಅನರ್ಥವಾಗಿರುವ ಕೆಲವು ಮಸೂದೆ, ಕಾನೂನುಗಳ ಮುಖಾಂತರ ಜನರ ಹಕ್ಕುಗಳನ್ನು ಕಸಿಯುತ್ತಿರುವುದರ ವಿರುದ್ಧವೂ ಸೆಣಸಾಡಬೇಕಾಗಿದೆ. ಉದಾಹರಣೆಗೆ ಕೋಮು ಗಲಭೆಗಳು, ಹತ್ಯಾಕಾಂಡಗಳು, ಆರ್ಟಿಕಲ್ 370, ಎನ್‌.ಆರ್‌.ಸಿ-ಸಿಎಎ, ತ್ರಿವಳಿ ತಲಾಖ್‌ ನಂತಹ ಮಸೂದೆಗಳು, ಇತ್ತೀಚಿನ ಬೆಳವಣಿಗೆಯಲ್ಲಿರುವ ರೈತ ವಿರೋಧಿ ಮಸೂದೆಗಳು, ಕಾಯ್ದೆಗಳ ವಿರುದ್ಧದ ಹೋರಾಟಗಳಲ್ಲಿ ಮಹಿಳೆಯರೂ ಮುಂಚೂಣಿಯಲ್ಲಿ ನಿಂತು ಪ್ರತಿರೋಧೀಸಬೇಕಾದ ಅನಿವಾರ್ಯತೆಗಳು. ಇಂತಹ ಸಮಸ್ಯೆಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶದ ಮಹಿಳೆಯರೂ ಭೂತ ಮತ್ತು ವರ್ತಮಾನ ಕಾಲದಲ್ಲಿ ಎದುರಿಸುತ್ತಿರುವುದು ಕಂಡು ಬರುತ್ತಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಇಡೀ ದೇಶಕ್ಕೆ ಕಿಡಿ ಹಚ್ಚಿದ ಉಪ್ಪಿನ ಸತ್ಯಾಗ್ರಹದಲ್ಲಿ ಮಹಿಳೆಯರು ನೇರವಾಗಿ ಭಾಗವಹಿಸಿದ್ದರು. ಲಾಠಿಯೇಟಿಗೂ ಬಗ್ಗದೆ ಸಾವಿರಾರು ಸಂಖ್ಯೆಯಲ್ಲಿದ್ದ ಅವರ ಉತ್ಸಾಹ ಮತ್ತು ಸ್ಥೈರ್ಯ ಎಲ್ಲರನ್ನೂ ಬೆರಗುಗೊಳಿಸಿತ್ತು. ಎಲ್ಲಾ  ಕಾಲದ ಕ್ರಾಂತಿಗಳಲ್ಲೂ ಮಹಿಳಾ ಸಹಭಾಗಿತ್ವ ಮುಂದುವರಿಯುತ್ತಿರುವುದು ಇತಿಹಾಸ. ನಾವು ಕಂಡಿರುವ ಈಜಿಪ್ಟ್, ತುನೀಷ್ಯಾ ಕ್ರಾಂತಿಗಳಲ್ಲಿ ತಮ್ಮೆರಡು ಕೈಗಳಲ್ಲಿ ಮಕ್ಕಳನ್ನು ಎತ್ತಿಕೊಂಡು ಸೇನಾ ಟ್ಯಾಂಕ್‌ ಗಳ ಮುಂದೆ ಸೆಟೆದು ನಿಂತ ತಾಯಂದಿರು, 1980ರಲ್ಲಿ ಅಫ್ಘಾನಿಸ್ತಾನದಲ್ಲಿ ರಷ್ಯಾ ವಿರುದ್ಧ ಬಂದೂಕಿನ ಮೂಲಕ ಹೋರಾಡಿದ ಮಹಿಳೆಯರು, 2011ರಲ್ಲಿ ಈಜಿಪ್ಟ್ ನಲ್ಲಿ ತನ್ನ ಸಾಮಾಜಿಕ ಜಾಲತಾಣದ ಪೋಸ್ಟರ್ ಮುಖಾಂತರ ಪ್ರತಿಭಟನೆಗೆ ಆಹ್ವಾನಿಸಿದ ಅಸ್ಮಾ ಮೆಹಫೂಝ್ ಳಿಂದಾಗಿ 30 ವರ್ಷಗಳಿಂದ ದೇಶವನ್ನು ಸ್ವೇಚ್ಛಾಡಳಿತ ನಡೆಸುತ್ತಿದ್ದ ಹುಸ್ನಿ ಮುಬಾರಕ್ ರಾಜೀನಾಮೆ ನೀಡಿದ್ದು ಇವೆಲ್ಲವೂ ಮಹಿಳಾ ಹೋರಾಟದ ಗೆಲುವುಗಳಿಗೆ ಕಾರಣವಾದ ಕೆಲವೊಂದು ಉದಾಹರಣೆಗಳಷ್ಟೆ. ಗಾಂಧೀಜಿ ಕೂಡ ಸ್ತ್ರೀಯರನ್ನು ಸಂಘಟಿಸಿ ಹಲವಾರು ಸ್ವಾತಂತ್ರ್ಯ ಸಂಗ್ರಾಮಗಳಲ್ಲಿ ಮಹಿಳಾ ನಾಯಕರನ್ನು ಮುನ್ನೆಲೆಗೆ ತಂದಿದ್ದನ್ನು ಗಮನಿಸಬಹುದು.

ಫ್ಯಾಶಿಸಂ ಯಾವಾಗಲೂ ಮಹಿಳಾ ವಿರೋಧಿಯಾಗಿದ್ದು, ಇಲ್ಲಿ ಮಹಿಳೆಯರು ಪ್ರಮುಖ ಗುರಿಯಾಗಿರುವುದನ್ನು ಗಮನಿಸಬೇಕಾಗಿದೆ. ಆದರೆ ಜಗತ್ತಿನ ಈ ನಿಯಮದ ವಕ್ರತೆಯನ್ನು ಸರಿಪಡಿಸಿ, ಇಂತಹ ಪ್ರತಿರೋಧದ ಹೋರಾಟಗಳಲ್ಲಿ ಮಹಿಳೆ ಗುರಿಯಾಗಲು ಎಂದೂ ಬಿಡಲು ಸಾಧ್ಯವಿಲ್ಲ ಎನ್ನುವುದು ಎನ್‌.ಆರ್‌.ಸಿ ಮತ್ತು ರೈತ ವಿರೋಧಿ ಕೃಷಿ ಮಸೂದೆಗಳ ಹೋರಾಟಗಳಲ್ಲಿ ನಮಗೆ ಕಾಣಲು ಸಾಧ್ಯವಾಗಿದೆ. ಎನ್‌.ಆರ್‌.ಸಿ ವಿರುದ್ಧದ ಹೋರಾಟಗಳಲ್ಲಿ ದೇಶಾದ್ಯಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ನಮ್ಮ ಕಣ್ಣ ಮುಂದಿರುವ ಸತ್ಯ. ಬಿಲ್ಕೀಸ್ ದಾದಿಯ ಹುರುಪು; ಶಾಹಿನ್‌ ಬಾಗ್‌ನ ಮೆರುಗು, ದಿಲ್ಲಿಯ ಕೊರೆವ ಚಳಿಯಲ್ಲಿಯೂ ದೃಢವಾಗಿ ನಿಂತು ಒಂದಿಂಚೂ ಕದಲದೇ ಬಂದೂಕಿನ ನಳಿಕೆಗೂ ಹೆದರದೆ ಗುಂಡಿಗೆ ತೋರಿ ಅಧಿಕಾರಶಾಹಿಗಳ ದರ್ಪವನ್ನು ಸೋಲಿಸಿ ಪ್ರತಿಭಟನೆಯ ಮುಂಚೂಣಿಯಲ್ಲಿದ್ದವರು 82ರ ಬಿಲ್ಕೀಸ್ ದಾದಿ. ಇವರ ಈ ಹುರುಪು ದೇಶದ ಮಹಿಳೆಯರಿಗೆ ಮಾತ್ರವಲ್ಲ ಇಡೀ ಪ್ರಪಂಚದ ಮಹಿಳೆಯರಲ್ಲಿ ಹೋರಾಟದ ಕಿಚ್ಚನ್ನು ಹೆಚ್ಚಿಸಿತ್ತು ಎಂಬುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ ವಿಶ್ವ ಪ್ರಸಿದ್ಧ ಟೈಮ್ಸ್ ಮ್ಯಾಗಝಿನ್‌ ನಲ್ಲಿ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಬಿಲ್ಕೀಸ್ ದಾದಿಯ ಹೆಸರು ಸೇರಿತ್ತು.

ದೇಶಾದ್ಯಂತ ಹೋರಾಟದ ಕಿಡಿ ವ್ಯಾಪಿಸಿ ಉರಿಯುತ್ತಿರುವ ಜ್ವಾಲೆಯಂತಿರುವ ರೈತ ಹೋರಾಟ/ ಪ್ರತಿಭಟನೆಗೆ ತೆರಳುತ್ತಿದ್ದ ಬಿಲ್ಕೀಸ್ ದಾದಿಯನ್ನು ಬಂಧಿಸಿದಾಗಲೇ ಆಳುವ ವರ್ಗದ ನಿಸ್ಸಹಾಯಕತೆಯನ್ನು ಜಗತ್ತು ಅರ್ಥಮಾಡಿಕೊಂಡಿರಬಹುದು. ಇನ್ನು ಪ್ರಸಕ್ತ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತಪರವಾಗಿ ಭಾಗವಹಿಸಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪೂರ್ತಿಗೊಳಿಸುತ್ತಿರುವ ಮಹಿಳೆಯರು ಪ್ರತಿಭಟನೆಯ ಕಾವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. 15 ವರ್ಷಗಳ ದಾಖಲೆಯ ಚಳಿ ಇರುವ ದೆಹಲಿಯಲ್ಲಿ ಮಹಿಳೆಯರು ಒಂದಿಂಚೂ ಹಿಂದೆ ಸರಿಯದೆ ಸವಾಲುಗಳಿಗೆ ಎದೆಯೊಡ್ಡಿ ದಿಟ್ಟತನದಿಂದ ಪ್ರತಿಭಟಿಸುತ್ತಿರುವುದು ಕಾಣಬಹುದು.

ದೇಶದ ಕೃಷಿಕರಲ್ಲಿ ಶೇ.42 ರಷ್ಟು ಮಹಿಳೆಯರಿದ್ದಾರೆ. ಹೊಲ ಗದ್ದೆಗಳಲ್ಲಿ ದುಡಿಯುವುದು, ಬಿತ್ತನೆ, ಕಟಾವುಗಳಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತಾರೆ. ಹೀಗಿರುವಾಗ ಇಂತಹ ಹೋರಾಟಗಳಿಂದ ಅವರು ಹೇಗೆ ತಾನೆ ಹಿಂದೆ ಸರಿಯಲು ಸಾಧ್ಯ. ಮನೆಯೊಳಗೆ ಒಲೆಯುರಿಸಿ, ಮಗುವನ್ನು ತೊಟ್ಟಿಲಲ್ಲಿ ತೂಗಲೂ ಸೈ, ಗದ್ದೆಯಲ್ಲಿ ಬೀಜ ಬಿತ್ತಿ, ಟ್ರ್ಯಾಕ್ಟರ್ ಓಡಿಸಲೂ ಸೈ, ತನ್ನ ಶ್ರಮಕ್ಕೆ ಅನ್ಯಾಯ ಮಾಡಿ ಕಾರ್ಪೊರೇಟರ್ ಕುಳಗಳಿಗೆ ತನ್ನ ಬೆವರ ಹನಿಯನ್ನು ಮುತ್ತುಗಳಾಗಿ ಪೋಣಿಸಲು ಕೊಟ್ಟಾಗ ಎದೆಯೊಡ್ಡಿ ಪ್ರತಿರೋಧಿಸಲೂ ಸೈ.

ಎನ್‌.ಆರ್‌.ಸಿ ಹೋರಾಟದ ಸಂದರ್ಭದಲ್ಲಿ ಇದೇ ದೆಹಲಿಯಲ್ಲಿ ಗಮನ ಸೆಳೆದಿದ್ದ ಶಾಹಿನ್‌ ಬಾಗ್; ಇದು ಅದೇ ದೆಹಲಿಯಲ್ಲಿ ಗಮನ ಸೆಳೆಯುತ್ತಿರುವ ರೈತ ಹೋರಾಟ. ಪಂಜಾಬ್, ಹರ್ಯಾಣ, ಕರ್ನಾಟಕ, ಕೇರಳ, ರಾಜಸ್ಥಾನ್, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ರೈತರೂ, ರೈತ ಮಹಿಳೆಯರೂ 60  ದಿನಗಳಿಂದ ಒಗ್ಗಟ್ಟಿನಿಂದ ಕೂತು ತಮ್ಮ ನಿಲುವಲ್ಲಿ ಅಚಲವಾಗಿದ್ದಾರೆ. ಯಾವುದೇ ಹೋರಾಟದ ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರವೂ ಬಹು ದೊಡ್ಡದು ಎಂಬುದು ಮತ್ತೆ ಮತ್ತೆ ಇದರಿಂದ ಸಾಬೀತಾಗುತ್ತಿದೆ. ಈ ಹೋರಾಟವನ್ನು ನೋಡುವಾಗ 1946-47ರ ಅವಧಿಯಲ್ಲಿ ಕಿಸಾನ್ ಸಭಾ ವತಿಯಿಂದ ಬಂಗಾಳದಲ್ಲಿ ನಡೆದ ‘ತೆಭಾಗ ರೈತ’ ಚಳುವಳಿ’ಯಲ್ಲಿ ಭಾಗಿಯಾದ ಮಹಿಳೆಯರನ್ನು ನೆನಪಿಸಿಕೊಳ್ಳಬೇಕಾಗಿದೆ. ಆದ್ದರಿಂದಲೇ ಜಗತ್ತನ್ನು ಮಹಿಳೆಯ ದೃಷ್ಟಿಯಿಂದ ನೋಡು ಎಂಬ ಮಾತಿದೆ. ಯಾಕೆಂದರೆ ಮಹಿಳೆಯ ಹುಟ್ಟಿನ ಜೊತೆಯೇ ಅಂಟಿಕೊಂಡು ಬರುವ ಹೋರಾಟದ ಧ್ವನಿ ಪ್ರತಿಧ್ವನಿಸುವಾಗಲೆಲ್ಲಾ ಯಶಸ್ಸಿನ ಹೊಂಗಿರಣದ ಛಾಪು ಮೂಡುತ್ತದೆ.

ಜನವರಿ 26ರಂದು ನಡೆಯುವ ಟ್ರ್ಯಾಕ್ಟರ್ ‍ರ್ಯಾಲಿಗಳಲ್ಲಿ ಭಾಗವಹಿಸುವುದರ ಮುಖಾಂತರ ರೈತರ ಹೋರಾಟಗಳಲ್ಲಿ ಭಾಗಿಯಾಗೋಣ. ದೇಶದ ಮೂಲೆ ಮೂಲೆಗಳಿಂದಲೂ ತಮ್ಮ ಬೆಂಬಲವನ್ನು ಎತ್ತಿ ತೋರಿಸೋಣ. ಸಂವಿಧಾನದ ಪ್ರಕಾರ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಕ್ರಾಂತಿ ಸಷ್ಟಿಸಲು ನಮಗೆ ಸಾಧ್ಯವಿದೆ ಎಂಬ ವಿಚಾರ ಮನದಟ್ಟಾಗಲಿ. ಯಾಕೆಂದರೆ ಮಹಿಳಾ ಹೋರಾಟವು ಒಂದು ಹೊಸ ನಿರೀಕ್ಷೆಯನ್ನು ಹುಟ್ಟು ಹಾಕುತ್ತದೆ ಮತ್ತು ಶೋಷಕರನ್ನು ಭೀತಿಗೊಳಿಸುತ್ತದೆ. ಮಹಿಳೆ ಒಂದು ವ್ಯಕ್ತಿತ್ವ, ಅವಳೊಂದು ಕುಟುಂಬ. ಕೈಯಲ್ಲಿರುವ ಕೂಸಿನೊಂದಿಗೆ ಅವಳು ಹೋರಾಟ ಕಣಕ್ಕೆ ಇಳಿಯುವುದು ಮಾತ್ರವಲ್ಲ, ಆ ಮೂಲಕ ಭವಿಷ್ಯದ ತಲೆಮಾರು ಕೂಡಾ ಅವಳ ಹೋರಾಟಗಳಲ್ಲಿ ಭಾಗಿಯಾಗುತ್ತದೆ. ಆ ಹೋರಾಟವನ್ನು ದಮನಿಸಲು ಸಾಧ್ಯವಿಲ್ಲ.

ದೆಹಲಿಯ ಇಂದಿನ ಮಹಿಳಾ ಚಳುವಳಿಯು ಇನ್ನಷ್ಟು ವ್ಯಾಪಕವಾಗಬೇಕಿದೆ. ವ್ಯವಸ್ಥೆಯನ್ನು ಪ್ರಶ್ನಿಸುವ, ನೀತಿಗಳನ್ನೇ ಬದಲಿಸುವ ಹೋರಾಟದ ಸ್ವರೂಪವನ್ನು ಪಡೆಯಬೇಕಾಗಿದೆ. ಜಾಗತೀಕರಣದ ವಿರುದ್ಧ ನಡೆಯುವ ಹೋರಾಟವು ಕೇವಲ ತಮ್ಮ ವಲಯದ ಬೇಡಿಕೆಗಳಿಗಾಗಿ ಮಾತ್ರವಲ್ಲ, ಬದಲಾಗಿ ಇಡೀ ದುಡಿಯುವ ಜನತೆಗಳಿಗಾಗಿ ನಡೆಯಬೇಕಾಗಿದೆ. ಅದು ಯಶಸ್ಸು ಗಳಿಸುವ ವರೆಗೂ ಮುನ್ನಡೆಯಬೇಕು. ಹೊಸ ಇಂಡಿಯಾದ ನಿರ್ಮಾಣದಲ್ಲಿ ಈ ವರ್ಷದ ಗಣರಾಜ್ಯೋತ್ಸವವು ಸಾಕ್ಷಿಯಾಗಲು ನಾವು ಮುನ್ನಡೆಯೋಣ.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!