ದುಬೈಯಲ್ಲಿ ಕೊರೊನಾ ಗೆದ್ದುಬಂದರೂ, ವಿಮಾನ ದುರಂತದಲ್ಲಿ ಕೊನೆಯುಸಿರೆಳೆದ ಸುಧೀರ್

Prasthutha|

ದುಬೈ : ಕೇರಳದ ಕೋಯಿಕ್ಕೋಡ್ ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮಡಿದವರ ಒಬ್ಬೊಬ್ಬರ ದುರಂತ ಕತೆ ಒಂದೊಂದು ರೀತಿ. ಅದರಲ್ಲಿ 45ರ ಹರೆಯದ ಸುಧೀರ್ ವರಿಯತ್ ದುರಾದೃಷ್ಟ ಎಂತಹವರ ಮನಸು ಕರಗಿಸದೇ ಇರಲಾರದು. ದುರಂತಕ್ಕೀಡಾದ ವಿಮಾನದಲ್ಲಿ ದುಬೈಯಿಂದ ಆಗಮಿಸಿದ್ದ ಸುಧೀರ್ ವರಿಯತ್ ಮೇ ತಿಂಗಳಲ್ಲಷ್ಟೇ, ಕೊರೊನಾ ಸೋಂಕಿಗೆ ತುತ್ತಾಗಿ ನೆಗೆಟಿವ್ ಎಂದು ಘೋಷಿಸಲ್ಪಟ್ಟಿದ್ದರು. ಆದರೆ, ಈಗ ದುರಂತದ ನಂತರ ನಡೆದ ಪರೀಕ್ಷೆಯಲ್ಲಿ ಮತ್ತೆ ಕೊರೊನಾ ಪಾಸಿಟಿವ್ ಬಂದುದರಿಂದ, ಅವರ ಕುಟುಂಬಕ್ಕೆ ಕೊನೆಯ ಬಾರಿ ನೋಡುವ ಅವಕಾಶವೂ ತಪ್ಪಿಹೋಗಿದೆ.   

- Advertisement -

ದುರಂತ ಸಂಭವಿಸಿದ ಬಳಿಕ ಸುಧೀರ್ ಮೃತಪಟ್ಟಿರುವುದು ಕೊನೆಯದಾಗಿ ಘೋಷಿಸಲ್ಪಟ್ಟಿತು. ದುರಂತದಲ್ಲಿ ಮಡಿದವರ ಕೊರೊನಾ ಪರೀಕ್ಷೆ ವರದಿ ಬಂದಾಗ, ಸುಧೀರ್ ವರದಿ ಪಾಸಿಟಿವ್ ಬಂದಿತು. ಹೀಗಾಗಿ, ಅವರ ಮೃತದೇಹವನ್ನು ಕುಟುಂಬಕ್ಕೆ ಒಪ್ಪಿಸಲು ಸಾಧ್ಯವಾಗಲಿಲ್ಲ. ಕೋಯಿಕ್ಕೋಡ್ ಸಾರ್ವಜನಿಕ ಸ್ಮಶಾನದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಿತು.

ಮಲಪ್ಪುರಂನ ಸುಧೀರ್ ಕಳೆದ ವರ್ಷವಷ್ಟೇ ಊರಿನಲ್ಲಿ ಹೊಸ ಮನೆಕಟ್ಟಿದ್ದರು. ದುಬೈನಲ್ಲಿ ಏಪ್ರಿಲ್ ಮಧ್ಯಂತರದಲ್ಲಿ ಸುಧೀರ್ ಮತ್ತು ಅವರ ಇತರ ಮೂವರು ಫ್ಲ್ಯಾಟ್ ವಾಸಿಗಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಮೇನಲ್ಲಿ ಅವರು ಕೊರೊನಾದಿಂದ ಗುಣಮುಖರಾಗಿ, ನೆಗೆಟಿವ್ ವರದಿ ಬಂದಿತ್ತು. ವಿಮಾನ ಹತ್ತುವುದಕ್ಕೂ ಮೊದಲೇ ಮಾಡಿಸಿದ್ದ ಪರೀಕ್ಷೆಯಲ್ಲೂ ಅವರಿಗೆ ನೆಗೆಟಿವ್ ಬಂದಿತ್ತು.

- Advertisement -

ವಿಮಾನ ನಿಲ್ದಾಣದಲ್ಲಿ ಮತ್ತೆ ಪರೀಕ್ಷೆಯಲ್ಲಿ ಸಮಸ್ಯೆಯಾದರೆ ಅಂತಾ ತಮ್ಮ ಮೊದಲ ಚಿಕಿತ್ಸಾ ಹಾಗೂ ನೆಗೆಟಿವ್ ವರದಿಗಳನ್ನು ಜೊತೆಗೆ ತಗೊಂಡುಬರುವಂತೆ ಸುಧೀರ್ ಅವರ ಪತ್ನಿ ಸುನೀತಾ ಹೇಳಿದ್ದರು. ಹೀಗಾಗಿ ಎಲ್ಲ ವರದಿಗಳನ್ನು ಅವರು ಜೊತೆಗೆ ತಂದಿದ್ದರು. ಆದರೆ, ಕೇರಳದಲ್ಲಿ ಮತ್ತೆ ಅವರ ವರದಿ ಪಾಸಿಟಿವ್ ಬಂದಿದೆ.

ಕೇರಳದಲ್ಲಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದ ಸುಧೀರ್, ತವರಿಗೆ ಮರಳಿ ನೆಲೆಯಾಗಬೇಕೆಂದು ಬಯಸಿದ್ದರು. ಹೀಗಾಗಿ ವರ್ಷದ ಹಿಂದೆ ಮನೆಯನ್ನೂ ಕಟ್ಟಿಸಿದ್ದರು. ಈ ವರ್ಷದ ಕೊನೆಗೆ ತನ್ನ ವೃತ್ತಿಗೆ ರಾಜೀನಾಮೆ ಕೊಟ್ಟು ತವರಿಗೆ ಹಿಂದಿರುಗುವ ಬಗ್ಗೆ ನಿರ್ಧರಿಸಿದ್ದರು. ಆದರೆ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬೇಗನೇ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ, ತವರಿಗೆ ಹಿಂದಿರುಗುತ್ತಿದ್ದರು. ಆದರೆ, ಕೊನೆಗೂ ತವರಲ್ಲಿ ನೆಲೆಸುವ ಅವರ ಕನಸು ನನಸಾಗದೆ, ವಿಮಾನ ದುರಂತದಲ್ಲಿ ಕೊನೆಯಾಯಿತು.  

Join Whatsapp