ದಕ್ಷಿಣ ಕನ್ನಡ | ಕೊರೊನಾ ತಡೆಗೆ ಜಿಲ್ಲಾಧಿಕಾರಿಯವರ ಖಡಕ್ ಆದೇಶ | ತಪ್ಪಿದರೆ ಶಿಕ್ಷೆ ಪಕ್ಕಾ

Prasthutha|

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ನೂತನ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ, ಸಾರ್ವಜನಿಕ ಹಿತದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕೋವಿಡ್ 19 ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅವರು ಆದೇಶಿಸಿದ್ದಾರೆ.

ಜಿಲ್ಲೆಯಾದ್ಯಂತ ಸಾರ್ವಜನಿಕರು ಮೂರು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

- Advertisement -

ಮಾಸ್ಕ್ ಧರಿಸುವುದು : ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಧರಿಸದಿದ್ದಲ್ಲಿ, ನಗರ ಪ್ರದೇಶದಲ್ಲಿ 200 ರು. ಮತ್ತು ಇತರ ಪ್ರದೇಶಗಳಲ್ಲಿ 100 ರು. ದಂಡ ವಿಧಿಸಲಾಗುವುದು.

ಸಾಮಾಜಿಕ ಅಂತರ : ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಆರು ಅಡಿ (2 ಗಜ) ಅಂತರ ಕಡ್ಡಾಯವಾಗಿ ಪಾಲಿಸಬೇಕು.

ಗುಂಪುಗೂಡುವಿಕೆ : ಬೃಹತ್ ಸಾರ್ವಜನಿಕ ಸಭೆಗಳು ಮತ್ತು ಒಟ್ಟುಗೂಡುವಿಕೆ ನಿಷೇಧ ಮುಂದುವರಿಸಲಾಗಿದೆ. ಮದುವೆ ಸಂಬಂಧಿತ ಕೂಟಗಳಲ್ಲಿ ಅತಿಥಿಗಳ ಸಂಖ್ಯೆ 50 ಮೀರಬಾರದು. ಶವಸಂಸ್ಕಾರ ಸಂಬಂಧಿತ ಕಾರ್ಯಗಳಿಗೆ 20 ಜನರಿಗಿಂತ ಹೆಚ್ಚಿರಬಾರದು.

ಸ್ಥಳೀಯ ಪ್ರಾಧಿಕಾರಗಳು, ಅದರ ಕಾನೂನು ನಿಯಮ ಮತ್ತು ನಿಬಂಧನೆಗಳಲ್ಲಿ ಸೂಚಿಸಿರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದು ಶಿಕ್ಷಾರ್ಹವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್, ಗುಟ್ಕಾ, ತಂಬಾಕು ಸೇವನೆ ಇತ್ಯಾದಿ ಬಳಕೆ ನಿಷೇಧಿಸಲಾಗಿದೆ.

ಮನೆಯಿಂದ ಕೆಲಸ : ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ಕೆಲಸ ಮಾಡುವ ಪದ್ಧತಿ ಅನುಸರಿಸಬೇಕು.

ಪಾಳಿ ಪದ್ಧತಿ : ಕಚೇರಿಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಅಂಗಡಿಗಳಲ್ಲಿ, ಮಾರುಕಟ್ಟೆಗಳಲ್ಲಿ, ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಪಾಳಿ ಪದ್ಧತಿ ಅನುಸರಿಸಬೇಕು.

ಸ್ಕ್ರೀನಿಂಗ್ ಮತ್ತು ನೈರ್ಮಲ್ಯ : ತಾವು ಕೆಲಸ ಮಾಡುವ ಆವರಣ, ಸಾಮಾನ್ಯ ಸೌಲಭ್ಯಗಳು ಮತ್ತು ಮಾನವ ಸಂಪರ್ಕಕ್ಕೆ ಬರುವ ಎಲ್ಲ ಅಂಶಗಳಿಗೆ (ಉದಾಹರಣೆಗೆ ಬಾಗಿಲ ಹಿಡಿಕೆಗಳು ಇತ್ಯಾದಿ…) ಆಗಾಗಾ ನೈರ್ಮಲ್ಯೀಕರಣ ಮಾಡಬೇಕು. ಇದನ್ನು ಕೆಲಸದ ಪಾಳಿಯ ಮಧ್ಯದಲ್ಲಿ ಸಹ ಖಾತರಿಸಿಪಡಿಸಿಕೊಳ್ಳಬೇಕು.

ಸಾಮಾಜಿಕ ಅಂತರ : ಕೆಲಸದ ಸ್ಥಳಗಳಲ್ಲಿ ವ್ಯಕ್ತಿಗಳ ನಡುವೆ, ಪಾಳಿಗಳ ನಡುವೆ, ಊಟದ ವಿರಾಮ ಮೊದಲಾದುವುಗಳಲ್ಲಿ ಎಲ್ಲ ವ್ಯಕ್ತಿಗಳ ನಡುವೆ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಬಗ್ಗೆ ಮೇಲ್ವಿಚಾರಕರು ಖಾತರಿಪಡಿಸಿಕೊಳ್ಳಬೇಕು.

ಈ ಎಲ್ಲ ನಿರ್ದೇಶನಗಳನ್ನು ಪಾಲಿಸದಿದ್ದರೆ, ಅಂತಹವರ ವಿರುದ್ಧ ಯಾವುದೇ ಮುಲಾಜಿಲ್ಲದೆ, ಕರ್ನಾಟಕದ ಸಾಂಕ್ರಾಮಿಕ ರೋಗಗಳ ಆದ್ಯಾದೇಶ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.

- Advertisement -