ತ್ರಿವಳಿ ತಲಾಕ್ನ ಅಪರಾಧೀಕರಣದ ಅಗತ್ಯವಿದೆಯೇ?

0
37

♦ ಡಾ. ರಾಮ್ ಪುನಿಯಾನಿ

‘ಮುಸ್ಲಿಮ್ ಸಹೋದರಿ’ಯರಿಗೆ ಲಿಂಗ ಸಮಾನತೆಯನ್ನು ದೊರಕಿಸಲು ಮೋದಿ ಸರಕಾರವು ಸದನದಲ್ಲಿ ಇತ್ತೀಚೆಗೆ (ಜೂನ್ 2019)ರಂದು ಪ್ರಸ್ತುತಪಡಿಸಿದ ವಿಧೇಯಕವೊಂದು ದೇಶಾದ್ಯಂತ ಚರ್ಚೆಯ ವಿಷಯವಾಗಿಬಿಟ್ಟಿದೆ. ಈ ವಿಧೇಯಕದಲ್ಲಿ ತ್ರಿವಳಿ ತಲಾಕ್ ಅನ್ನು ಅಪರಾಧ ಎಂದು ಘೋಷಿಸಲಾಗಿದೆ. ಮೋದಿಯವರ ಹಿಂದಿನ ಸರಕಾರವೂ ಸದನದಲ್ಲಿ ಇಂಥದ್ದೇ ಒಂದು ವಿಧೇಯಕವನ್ನು ಪ್ರಸ್ತುತಪಡಿಸಿತ್ತು. ಆ ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರವೂ ದೊರಕಿತ್ತು. ಆದರೆ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ದೊರಕದ ಕಾರಣ ಆ ವಿಧೇಯಕವು ಕಾನೂನು ಆಗಲು ಸಾಧ್ಯವಾಗಲಿಲ್ಲ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಕನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿದ ಬಳಿಕ ಕಳೆದ ಬಾರಿ ಈ ವಿಧೇಯಕವನ್ನು ತರಲಾಗಿತ್ತು. ಕಳೆದ ವಿಧೇಯಕವನ್ನು ಪ್ರಸ್ತುತ ಪಡಿಸಿದ ಬಳಿಕ ದೇಶಾದ್ಯಂತ ತ್ರಿವಳಿ ತಲಾಕ್‌ನ ಸುಮಾರು 200 ಪ್ರಕರಣಗಳು ನಡೆದಿರುವ ಕಾರಣದಿಂದಾಗಿ ಈ ವಿಧೇಯಕವನ್ನು ಸಾಧ್ಯವಾದಷ್ಟು ಬೇಗ ಅಂಗೀಕರಿಸುವ ಅಗತ್ಯವಿದೆ ಎಂದು ಇದೀಗ ಸರಕಾರವು ಪ್ರತಿಪಾದಿಸುತ್ತಿದೆ.

ಎಲ್ಲಕ್ಕಿಂತಲೂ ಮೊದಲು ತ್ರಿವಳಿ ತಲಾಕ್ ಮತ್ತು ‘ತ್ವರಿತ’ ತ್ರಿವಳಿ ತಲಾಕ್‌ನ ನಡುವಿನ ವ್ಯತ್ಯಾಸವನ್ನು ನಾವು ಅರಿತುಕೊಳ್ಳಬೇಕಾಗಿದೆ. ಕುರ್‌ಆನಿನ ಪ್ರಕಾರ, ತ್ರಿವಳಿ ತಲಾಕ್ ಅನ್ನುವುದು ಓರ್ವ ಪುರುಷ ಪತ್ನಿಗೆ ವಿಚ್ಛೇದನ ನೀಡುವ ವಿಧಾನವಾಗಿದೆ. ಅದರ ಪ್ರಕಾರ, ಮೊದಲ ಬಾರಿ ತಲಾಕ್ ಹೇಳಿದ ನಂತರ ಕೆಲವು ಸಮಯ ನೀಡಬೇಕಾಗಿದೆ. ಈ ಮಧ್ಯೆ ಮಧ್ಯಸ್ಥರು ಪತಿ-ಪತ್ನಿಯ ಮಧ್ಯೆ ಸಮನ್ವಯಕ್ಕಾಗಿ ಪ್ರಯತ್ನಿಸಬೇಕು. ಒಂದು ವೇಳೆ ಈ ಪ್ರಯತ್ನ ವಿಫಲವಾದರೆ, ಎರಡನೇ ತಲಾಕ್ ಅನ್ನು ಉಚ್ಛರಿಸಲಾಗುತ್ತದೆ. ಇದರ ನಂತರ ಕೆಲವು ಸಮಯದ ವರೆಗೆ ಸಮನ್ವಯದ ಪ್ರಯತ್ನ ನಡೆಸಲಾಗುತ್ತದೆ. ಒಂದು ವೇಳೆ ಸಮನ್ವಯ ಸಾಧ್ಯವಾಗದಿದ್ದಲ್ಲಿ, ಆ ನಂತರವೇ ಮೂರನೇ ಹಾಗೂ ಅಂತಿಮ ತಲಾಕ್‌ಅನ್ನು ಉಚ್ಛರಿಸಲಾಗುತ್ತದೆ. ಇದರ ನಂತರ ಪತಿ-ಪತ್ನಿ ವಿಚ್ಛೇದಿತರಾಗುತ್ತಾರೆ. ಕುರ್‌ಆನ್‌ನ ಪ್ರಕಾರ, ‘‘ನಿಮಗಿನ್ನು ಅವರಿಬ್ಬರ(ದಂಪತಿಯರ) ನಡುವೆ ಬಿಕ್ಕಟ್ಟಿನ ಭಯವಿದ್ದರೆ ಆತನ ಕುಟುಂಬದಿಂದ ಒಬ್ಬ ಮಧ್ಯಸ್ಥನನ್ನು ಹಾಗೂ ಆಕೆಯ ಕುಟುಂಬದಿಂದಲೂ ಒಬ್ಬ ಮಧ್ಯಸ್ಥನನ್ನು ನೇಮಿಸಿರಿ. ಅವರಿಬ್ಬರೂ ಸುಧಾರಣೆಯನ್ನು ಬಯಸಿದ್ದರೆ, ಅಲ್ಲಾಹನು ಅವರ ನಡುವೆ ಸಾಮರಸ್ಯ ಬೆಳೆಸುವನು.’’ – (4:35) ಮತ್ತು ‘‘ಮುಂದೆ ಅವರು ತಮ್ಮ ಅವಧಿಯ ಕೊನೆಯನ್ನು ಮುಟ್ಟಿದಾಗ ಅವರನ್ನು ನಿಯಮಾನುಸಾರ (ಪತ್ನಿಯರಾಗಿ) ಇಟ್ಟುಕೊಳ್ಳಿರಿ ಅಥವಾ ನಿಯಮಾನುಸಾರ ಅವರನ್ನು ಪ್ರತ್ಯೇಕಿಸಿರಿ ಹಾಗೂ ನಿಮ್ಮ ಪೈಕಿ ಇಬ್ಬರು ನ್ಯಾಯವಂತರನ್ನು ಸಾಕ್ಷಿಯಾಗಿಸಿಕೊಳ್ಳಿರಿ. ಮತ್ತು ನೀವು, ಅಲ್ಲಾಹನಿಗಾಗಿ ಸಾಕ್ಷಿ ಹೇಳಿರಿ.’’ – (65:2)

ಕುರ್‌ಆನ್, ‘ಖುಳಾ’ ಶಬ್ದವನ್ನು ಉಚ್ಛರಿಸಿ ಮಹಿಳೆಯರಿಗೂ ತಮ್ಮ ಇಚ್ಛೆಯ ಪ್ರಕಾರ ವೈವಾಹಿಕ ಸಂಬಂಧವನ್ನು ಕೊನೆಗೊಳಿಸುವ ಅನುಮತಿಯನ್ನು ನೀಡುತ್ತದೆ. ಆದರೆ ಇದರ ಬಗ್ಗೆ ಚರ್ಚೆಗಳಾಗುವುದು ಬಹಳಷ್ಟು ಕಡಿಮೆಯೇ.

ಇಸ್ಲಾಮಿನಲ್ಲಿ ಯಾವುದೇ ಸ್ಥಾನಮಾನವಿರದ ಭ್ರಷ್ಟ ಮುಲ್ಲಾ-ಮೌಲವಿಗಳು ಈ ವಿಚಾರದ ಬಗ್ಗೆ ಮುಸ್ಲಿಮ್ ಸಮುದಾಯವನ್ನು ಮೂರ್ಖರನ್ನಾಗಿಸುತ್ತಾ ಬರುತ್ತಿದ್ದಾರೆ.  ಮುಲ್ಲಾ ಮೌಲವಿಗಳೇ ಒಂದೇ ಬಾರಿಗೆ ಮೂರು ತಲಾಕ್ ಪದವನ್ನು ಉಚ್ಛರಿಸಿ ತ್ವರಿತವಾಗಿ ವಿಚ್ಛೇದನ ನೀಡುವ ಪದ್ಧತಿಗೆ ಒಪ್ಪಿಗೆ ನೀಡಿದ್ದಾರೆ. ಅದೇ ವೇಳೆ ಇದಕ್ಕೂ, ಕುರ್‌ಆನ್ ಹೇಳುವುದಕ್ಕೂ ಬಹಳಷ್ಟು ಅಂತರವಿದೆ. ತ್ವರಿತ ತ್ರಿವಳಿ ತಲಾಕ್‌ನ ಪ್ರಕ್ರಿಯೆ ಸಮುದಾಯದಲ್ಲಿ ವ್ಯಾಪಕವಾಗಿ ಮಾನ್ಯವಾಗಿಬಿಟ್ಟಿದೆ ಮತ್ತು ಇದರಿಂದಾಗಿ ಮುಸ್ಲಿಮ್ ಮಹಿಳೆಯರು ತುಂಬಾ ಸಂಕಷ್ಟ ಅನುಭವಿಸಬೇಕಾಗುತ್ತದೆ. ಕುರ್‌ಆನ್‌ನಲ್ಲಿ ವರ್ಣಿಸಲಾಗಿರುವ ಹಾಗೂ ಮುಸ್ಲಿಮ್ ವೈಯಕ್ತಿಕ ಕಾನೂನಿನ ಭಾಗವಾಗಿರುವ ತ್ರಿವಳಿ ತಲಾಕ್‌ನ ಕುರಿತಂತೆ ಸುಪ್ರೀಂ ಕೋರ್ಟ್, ‘‘ಮುಸ್ಲಿಮ್ ವೈಯಕ್ತಿಕ ಕಾನೂನಿನ ಭಾಗವಾಗಿರುವುದರಿಂದ ಈ ಆಚರಣೆ(ತ್ರಿವಳಿ ತಲಾಕ್)ಯು ಸಂವಿಧಾನದ ವಿಧಿ 25ರ ಸಂರಕ್ಷಣೆಯನ್ನು ಹೊಂದಿದೆ. ಧರ್ಮವು ನಂಬಿಕೆಯೇ ಹೊರತು, ಅದು ತಾರ್ಕಿಕತೆಯ ವಿಚಾರವಲ್ಲ. ನ್ಯಾಯಾಲಯವು ಯಾವುದೇ ಧರ್ಮದ ಅವಿಭಾಜ್ಯ ಅಂಗವಾಗಿರುವ ಇಂತಹ ಯಾವುದೇ ಆಚರಣೆಗಳ ಮೇಲೆ ಸಮಾನತೆಯ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಮುಕ್ತವಾಗಿಲ್ಲ’’ ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ತ್ರಿವಳಿ ತಲಾಕ್‌ಗೆ ಅಲ್ಲ, ಬದಲಿಗೆ ತ್ವರಿತ ತ್ರಿವಳಿ ತಲಾಕನ್ನು ಕಾನೂನುಬಾಹಿರ ಎಂದು ಘೋಷಿಸಿದೆ ಎಂಬುದನ್ನು ಟೀಕಾಕಾರರು ಸ್ಪಷ್ಟಪಡಿಸುತ್ತಿಲ್ಲ. ಅದೇ ವೇಳೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಮುಸ್ಲಿಮ್ ಬಹುಸಂಖ್ಯಾತರಿರುವ ಹಲವು ದೇಶಗಳಲ್ಲಿ ಇದು ನಿಷೇಧಿಸಲ್ಪಟ್ಟಿದೆ. ಈಗಾಗಲೇ ನ್ಯಾಯಾಲಯವೇ  ಈ ಆಚರಣೆಗೆ ನಿಷೇಧ ಹೇರಿರುವುದರಿಂದ ಇದೀಗ ಈ ವಿಧೇಯಕದ ಅಗತ್ಯವಾದರೂ ಏನಿದೆ? ಒಂದು ವೇಳೆ ಈಗಲೂ ತ್ವರಿತ ತಲಾಕ್‌ಗಳು ನಡೆಯುತ್ತಿದ್ದರೆ ಅದು ಕಾನೂನಿನ ಉಲ್ಲಂಘನೆಯಾಗಿದೆ ಮತ್ತು ಅದನ್ನು ಪ್ರಸಕ್ತ ಕಾನೂನುಗಳ ಮೂಲಕ ಎದುರಿಸಬಹುದಾಗಿದೆ. ಆದರೂ, ಈ ವಿಧೇಯಕವು ಯಾಕೆ ಸರಕಾರದ ಅತ್ಯಂತ ಆದ್ಯತೆಯ ವಿಚಾರವಾಗಿಬಿಟ್ಟಿದೆ?

ವಾಸ್ತವದಲ್ಲಿ ಮೋದಿ ಸರಕಾರದ ಮುಸ್ಲಿಮ್ ಮಹಿಳೆಯರ ಕುರಿತ ಕಾಳಜಿಯು ಮೊಸಳೆ ಕಣ್ಣೀರಲ್ಲದೆ ಮತ್ತೇನೂ ಅಲ್ಲ. ‘ಮುಸ್ಲಿಮ್ ಸಹೋದರಿ’ಯರ ಮುಖ್ಯ ಸಮಸ್ಯೆಗಳೇನು? ಕೇವಲ ದನದ ಮಾಂಸ ತಿನ್ನುವ, ಸಂಗ್ರಹಿಸಿಡುವ ಮತ್ತು ಅದನ್ನು ವ್ಯಾಪಾರ ಮಾಡುವ ಸಂಶಯದಲ್ಲಿ ಮುಸ್ಲಿಮರು ಗುಂಪುಹತ್ಯೆಗೊಳಗಾಗುತ್ತಿದ್ದಾರೆ. ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಟಿಫಿನ್ ಬಾಕ್ಸ್‌ನಲ್ಲಿ ದನದ ಮಾಂಸವಿದೆ ಎಂದು ಸಂಶಯಿಸಿ ನಿರ್ಭೀತಿಯಿಂದ ಅವರನ್ನು ಥಳಿಸಿ ಹತ್ಯೆಗೈಯ್ಯುಲಾಗುತ್ತಿದೆ. ಇದೀಗ, ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಅವರನ್ನು ಕಂಬಕ್ಕೆ ಕಟ್ಟಿಹಾಕಲಾಗುತ್ತದೆ ಮತ್ತು ಹತ್ಯೆಗೈಯ್ಯುವ ಮೊದಲು ಥಳಿಸುತ್ತಾ ಜೈ ಶ್ರೀರಾಮ್ ಎಂದು ಕೂಗಲು ನಿರ್ಬಂಧಿಸಲಾಗುತ್ತಿದೆ. ದನ ಮತ್ತು ದನದ ಮಾಂಸಕ್ಕೆ ಸಂಬಂಧಿಸಿದ ಹತ್ಯಾ ಆರೋಪಿಗಳನ್ನು ಸನ್ಮಾನಿಸಲು ಬಿಜೆಪಿ ಉನ್ನತ ನಾಯಕರು ಆತುರರಾಗಿರುತ್ತಾರೆ. ಇವೆಲ್ಲವೂ ಮುಸ್ಲಿಮ್ ಸಹೋದರಿಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ.

ಸಾಮಾಜಿಕ ಸಾಮಾನ್ಯ ಪ್ರಜ್ಞೆಯನ್ನು ಕಲುಷಿತಗೊಳಿಸಲಾಗಿದೆ ಮತ್ತು ಹಿಂದೂ ರಾಷ್ಟ್ರೀಯತೆಗೆ ಸೇರಿದ ತಥಾಕಥಿಕ ಉಗ್ರಗಾಮಿ ಶಕ್ತಿಗಳು ಇದೀಗ ಮುಸ್ಲಿಮರನ್ನು ಭೀತಿಗೊಳಪಡಿಸಲು ಮತ್ತು ನಿಗ್ರಹಿಸಲು ಜೈ ಶ್ರೀ ರಾಮ್ ಘೋಷಣೆಯನ್ನು ಹೊಸ ಕೋಮುವಾದಿ ಅಸ್ತ್ರವಾಗಿ ಬಳಸುತ್ತ್ತಿದ್ದಾರೆ. ಪವಿತ್ರ ಗೋವಿನಿಂದಾಗಿ ಸೃಷ್ಟಿಯಾಗಿರುವ ಆರ್ಥಿಕ ಅಸಮತೋಲನವು ಮುಸ್ಲಿಮ್ ಕುಟುಂಬಗಳ ಮೇಲೆ ಪ್ರಭಾವ ಬೀರಿದೆ ಮತ್ತು ನಮ್ಮ ‘‘ಮುಸ್ಲಿಮ್ ಸಹೋದರಿ’ಯರ ಜೀವನದ ಮೇಲೂ ಪರಿಣಾಮ ಬೀರಿದೆ. ಧಾರ್ಮಿಕ ಅಸ್ಮಿತೆಯೊಂದಿಗೆ ಸೇರಿದ ಹಿಂಸಾಚಾರ ಮತ್ತು ಅರಾಜಕತೆಯು ಕೇವಲ ಪುರುಷರ ಮೇಲೆ ಪ್ರಭಾವ ಬೀರುತ್ತದೆ ಎಂದು ಆಲೋಚಿಸುವುದು ತಪ್ಪಾಗುತ್ತದೆ.  ಅವರ ಕುಟಂಬದ ಮಹಿಳೆಯರು ಕೂಡ ಇದರ ಪರಿಣಾಮಕ್ಕೆ ಒಳಗಾಗುತ್ತಾರೆ. ಸರಕಾರವು ತ್ವರಿತ ತ್ರಿವಳಿ ತಲಾಕ್‌ನಿಂದ ಸಂತ್ರಸ್ತರಾಗಿರುವ ‘‘ಮುಸ್ಲಿಮ್ ಸಹೋದರಿ’ಯರ  ಅಂಕಿಯನ್ನು ತೋರಿಸುತ್ತಿದೆ. ಅದು ಲವ್ ಜಿಹಾದ್, ಘರ್‌ವಾಪ್ಸಿ, ರಾಮ ಮಂದಿರ ಮತ್ತು ಗೋವು-ದನದ ಮಾಂಸದ ಹೆಸರಿನಲ್ಲಿ ನಡೆಸಲಾದ ಹಿಂಸಾಚಾರದಿಂದ ಸಂತ್ರಸ್ತರಾಗಿರುವ ‘ಮುಸ್ಲಿಮ್ ಸಹೋದರಿ’ಯರ ಅಂಕಿಅಂಶವನ್ನು ಅದು ತೋರಿಸಬಹುದೇ?

ಲಿಂಗ ಸಮಾನತೆಯ ವಿಚಾರದ ಕುರಿತಂತೆ ಸರಕಾರವು ತುಂಬಾ ಗಂಭೀರವಾಗಿದೆ. ಈ ವಿಚಾರದ ಕುರಿತ ಕಾಳಜಿಯು ಶ್ಲಾಘನೀಯವಾಗಿದೆ. ಆದರೂ 2011ರ ಜನಗಣತಿಯ ಪ್ರಕಾರ, ದೇಶದಲ್ಲಿ ವಿಚ್ಛೇದನ ನೀಡದೆಯೇ ಪತಿಯಂದಿರು ತೊರೆದಿರುವ 24 ಲಕ್ಷ ಮಹಿಳೆಯರಿದ್ದಾರೆ ಎಂಬ ವಿಚಾರ ಸರಕಾರಕ್ಕೆ ತಿಳಿದಿಲ್ಲವೇ? ಈ ಪರಿತ್ಯಕ್ತ ಮಹಿಳೆಯರು ಯಾವುದೇ ಜೀವನ ನಿರ್ವಹಣೆಯನ್ನು ಪಡೆಯುತ್ತಿಲ್ಲ. ಈ ಮಹಿಳೆಯರ ಪತಿಯಂದಿರಿಗೆ ತನ್ನ ನೈತಿಕ ಹೊಣೆಗಾರಿಕೆಯನ್ನು ಮನವರಿಕೆ ಮಾಡಿಕೊಡಬಹುದಾದಂತಹ ಯಾವುದೇ ಕಾನೂನು ಇಲ್ಲವೇ? ಶಬರಿಮಲೆ ಮಂದಿರದಲ್ಲಿ 10-50 ವರ್ಷ ಪ್ರಾಯದ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದರೂ, ಅಲ್ಲಿ ಸಂಪ್ರದಾಯದ ಹೆಸರಿನಲ್ಲಿ ಹಿಂದೂ ಮಹಿಳೆಯರಿಗೆ ಪ್ರವೇಶ ನೀಡಲಾಗುತ್ತಿಲ್ಲ. ಇದು ಲಿಂಗ ಸಮಾನತೆಯ ಅಣಕವಲ್ಲವೇ?

ಮುಸ್ಲಿಮ್ ಪುರುಷರ ಸೈತಾನೀಕರಣದೊಂದಿಗೆ ಮುಸ್ಲಿಮ್ ಮಹಿಳೆಯರ ಕುರಿತ ಬಹಿರಂಗ ಕಾಳಜಿಯು ಸಮಾನಾಂತರವಾಗಿ ಚಲಿಸುತ್ತಿದೆ. ಮುಸ್ಲಿಮ್ ಮಹಿಳೆಯರ  ಸಮಾನತೆಯನ್ನು ಸಂಪೂರ್ಣವಾಗಿ ಗೌರವಿಸುತ್ತಾ, ಪುರುಷ ಮತ್ತು ಮಹಿಳೆ ಜೊತೆಯಾಗಿ ಕುಟುಂಬವನ್ನು ಮುಂದಕ್ಕೆ ಸಾಗಿಸುತ್ತಾರೆ ಎಂಬ ವಿಚಾರವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾಗಿದೆ. ಮುಸ್ಲಿಮ್ ಪುರುಷರ ಸೈತಾನೀಕರಣ ಹಾಗೂ ಅವರನ್ನು ಅಪರಾಧಿಗಳನ್ನಾಗಿ ಮಾಡುವುದು (ಈ ಕಾಯ್ದೆಯಲ್ಲಿರುವಂತೆಯೂ) ‘ಮುಸ್ಲಿಮ್ ಸಹೋದರಿ’ಯರಿಗೆ ಅನುಕೂಲಕರವಲ್ಲ.

ಎನ್‌ಡಿಎಯಲ್ಲಿರುವ ಜೆಡಿಯುನಂತಹ ಹಲವು ಪಕ್ಷಗಳು ತ್ರಿವಳಿ ತಲಾಕ್ ಕಾಯ್ದೆಯ ಪರವಾಗಿ ಇಲ್ಲ. ಆದರೆ ಬಿಜೆಪಿಯ ಭಾರೀ ಬಹುಮತದ ಮುಂದೆ ಅವರದ್ದೇನೂ  ನಡೆಯಲಾರದು.

LEAVE A REPLY

Please enter your comment!
Please enter your name here