ತುರ್ತು ಪರಿಸ್ಥಿತಿಗೆ 44 ವರ್ಷ: ಆರೆಸ್ಸೆಸ್ ತುರ್ತು ಪರಿಸ್ಥಿತಿ ವಿರೋಧಿ ಹೋರಾಟವನ್ನು ಯಾವ ರೀತಿ ವಂಚಿಸಿತ್ತು?

0
87

♦ ಪ್ರೊ. ಶಂಸುಲ್ ಇಸ್ಲಾಮ್

1975ರ ಜೂನ್ 25-26ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದರು ಮತ್ತು ಇದು 19 ತಿಂಗಳ ಕಾಲ ಮುಂದುವರಿದಿತ್ತು. ಈ ಅವಧಿಯನ್ನು ಭಾರತದ ಪ್ರಜಾಸತ್ತಾತ್ಮಕ ರಾಜಕೀಯದ ಕತ್ತಲ ಸಮಯ ಎಂದೇ ಪರಿಗಣಿಸಲಾಗಿದೆ. ಕಾಂಗ್ರೆಸ್ ಆಡಳಿತಗಾರರ ಕಾನೂನುಬಾಹಿರ ಆದೇಶಗಳನ್ನು ಪಾಲಿಸದಂತೆ ಶಸಸ್ತ್ರ ಪಡೆಗಳಿಗೆ ಜಯಪ್ರಕಾಶ್ ನಾರಾಯಣ್ ಕರೆ ನೀಡಿರುವುದು ಅರಾಜಕತೆಯ ಸ್ಥಿತಿಯನ್ನು ನಿರ್ಮಿಸಿದೆ ಮತ್ತು ಭಾರತೀಯ ಗಣತಂತ್ರದ ಅಸ್ತಿತ್ವಕ್ಕೆ ಅಪಾಯ ಒಡ್ಡಿದೆ. ಹಾಗಾಗಿ ಸಂವಿಧಾನದ 352ನೇ ವಿಧಿಯ ಅಡಿಯಲ್ಲಿ ತುರ್ತು ಪರಿಸ್ಥಿತಿ ಹೇರುವುದಕ್ಕೆ ಬದಲಾಗಿ ಬೇರೇನೂ ಪರ್ಯಾಯವಿರಲಿಲ್ಲ ಎಂದು ಇಂದಿರಾ ಗಾಂಧಿ ಹೇಳಿಕೆ ನೀಡಿದ್ದರು.

ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಕಾರಣ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಯಿತು ಎಂದು ಆರೆಸ್ಸೆಸ್ ವಾದಿಸುತ್ತದೆ. ಆದರೆ ಅನೇಕ ಸಮಕಾಲೀನ ಉಲ್ಲೇಖಗಳು ಆರೆಸ್ಸೆಸ್‌ನ ಈ ವಾದವನ್ನು ನಿರಾಕರಿಸುತ್ತದೆ. ಅಂತಹ ಎರಡು ಉಲ್ಲೇಖಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಒಂದು ಭಾರತದ ಹಿರಿಯ ಚಿಂತಕ ಮತ್ತು ಪತ್ರಕರ್ತ ಪ್ರಭಾಸ್ ಜೋಶಿಯವರದ್ದು ಮತ್ತೊಂದು ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ಟಿ.ವಿ ರಾಜೇಶ್ವರ್ ಅವರದ್ದು. ರಾಜೇಶ್ವರ್ ಅವರು ತುರ್ತುಸ್ಥಿತಿಯ ಸಮಯದಲ್ಲಿ ಗುಪ್ತಚರ ಇಲಾಖೆಯ ಉಪಾಧ್ಯಕ್ಷರಾಗಿದ್ದರು.

ತುರ್ತುಸ್ಥಿತಿಯ ದಿನಗಳನ್ನು ಸ್ಮರಿಸಿಕೊಂಡ ಅವರು, ಆರೆಸ್ಸೆಸ್ ಇಂದಿರಾ ಗಾಂಧಿಯ ದಮನಕಾರಿ ಆಡಳಿತಕ್ಕೆ ಶರಣಾಗಿ ಪ್ರಧಾನಿ ಮತ್ತು ಅವರ ಪುತ್ರ ಸಂಜಯ್ ಗಾಂಧಿ ತುರ್ತುಸ್ಥಿತಿಯ 20 ಅಂಶಗಳ ಭಯಾನಕ ಕಾರ್ಯಕ್ರಮವನ್ನು ಜಾರಿ ಮಾಡಲು ಅವಕಾಶ ನೀಡಿತ್ತು. ಕ್ಷಮಾ ಮನವಿಗಳನ್ನು ಸಲ್ಲಿಸುವ ಮೂಲಕ ಬಹುದೊಡ್ಡ ಸಂಖ್ಯೆಯಲ್ಲಿ ಆರೆಸ್ಸೆಸ್ ಸದಸ್ಯರು ಕಾರಾಗೃಹಗಳಿಂದ ಬಿಡುಗಡೆಗೊಂಡಿದ್ದರು.

ಈ ಎಲ್ಲ ವಂಚನೆಯ ಹೊರತಾಗಿಯೂ ಆರೆಸ್ಸೆಸ್‌ನ ಸಾವಿರಾರು ಸದಸ್ಯರು ತುರ್ತುಸ್ಥಿತಿಯ ಸಮಯದಲ್ಲಿ ಅನುಭವಿಸಿದ ಶಿಕ್ಷೆಗೆ ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. ತುರ್ತುಸ್ಥಿತಿಯ ಸಮಯದಲ್ಲಿ ಒಂದು ತಿಂಗಳಿಗೂ ಅಧಿಕ ಸಮಯ ಜೈಲುವಾಸ ಅನುಭವಿಸಿರುವವರಿಗೆ ಮಾಸಿಕ 10,000ರೂ. ಹಾಗೂ ಒಂದು ತಿಂಗಳಿಗಿಂತ ಕಡಿಮೆ ಸಮಯ ಜೈಲುವಾಸ ಅನುಭವಿಸಿದ ವ್ಯಕ್ತಿಗಳಿಗೆ ಮಾಸಿಕ 5,000ರೂ. ಪಿಂಚಣಿ ನೀಡಲು ಬಿಜೆಪಿ ಸರಕಾರವಿರುವ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಮುಂತಾದ ರಾಜ್ಯಗಳು ನಿರ್ಧರಿಸಿವೆ.

ಈ ಕಾನೂನು, ಕೇವಲ ಒಂದು ಅಥವಾ ಎರಡು ತಿಂಗಳು ಜೈಲುವಾಸ ಅನುಭವಿಸಿ ನಂತರ ಕ್ಷಮಾ ಮನವಿ ಸಲ್ಲಿಸಿದ್ದ ಆರೆಸ್ಸೆಸ್ ಕಾರ್ಯಕರ್ತರ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡುತ್ತದೆ. ಇಷ್ಟು ದೊಡ್ಡ ಮೊತ್ತದ ಪಿಂಚಣಿ ಪಡೆಯಲು ಫಲಾನುಭವಿ ತುರ್ತುಸ್ಥಿತಿಯ ಸಂಪೂರ್ಣ ಅವಧಿಯನ್ನು ಜೈಲಿನಲ್ಲಿ ಕಳೆದಿರಬೇಕು ಎಂಬ ಷರತ್ತೇನೂ ಇಲ್ಲ.

ಆಸಕ್ತಿದಾಯಕವೆಂದರೆ, ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ ಹೋರಾಟದ ವೇಳೆ ಭಾಗಿಯಾಗಿದ್ದ ಸ್ವಾತಂತ್ರ ಹೋರಾಟಗಾರರಿಗೆ ನೀಡಲಾಗುವ ಪಿಂಚಣಿಯ ಪಟ್ಟಿಯಲ್ಲಿ ಆರೆಸ್ಸೆಸ್‌ನ ಓರ್ವ ಕಾರ್ಯಕರ್ತನ ಹೆಸರೂ ಇಲ್ಲ. ತುರ್ತುಸ್ಥಿತಿಯ ಸಮಯದಲ್ಲಿ ನಕ್ಸಲರು ಎಂಬ ಹಣೆಪಟ್ಟಿ ಕಟ್ಟಿ ನಕಲಿ ಎನ್‌ಕೌಂಟರ್‌ಗಳಲ್ಲಿ ಹತ್ಯೆಗೈಯ್ಯಲಾದ ನೂರಾರು ಕಮ್ಯುನಿಸ್ಟ್ ಯುವಕರನ್ನು ಯಾರೂ ಸ್ಮರಿಸುವುದಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆಸಕ್ತಿದಾಯಕವೆಂದರೆ, ಹಿಂದುತ್ವದ ವಿಷಯದಲ್ಲಿ ಆರೆಸ್ಸೆಸ್‌ನ ಸಹಪ್ರಯಾಣಿಕನಾಗಿರುವ ಶಿವಸೇನೆ ತುರ್ತುಸ್ಥಿತಿಯನ್ನು ಬಹಿರಂಗವಾಗಿ ಬೆಂಬಲಿಸಿತ್ತು.

ಪ್ರಭಾಸ್ ಜೋಶಿಯವರು ಮಾಡಿರುವ ಉಲ್ಲೇಖ ತುರ್ತುಸ್ಥಿತಿಯ 25ನೇ ವರ್ಷದ ಸಂದರ್ಭದಲ್ಲಿ ತೆಹೆಲ್ಕಾ ಆಂಗ್ಲ ಪಾಕ್ಷಿಕದಲ್ಲಿ ಪ್ರಕಟವಾಗಿತ್ತು. ತುರ್ತುಸ್ಥಿತಿಯ ಸಮಯದಲ್ಲೂ ಆರೆಸ್ಸೆಸ್ ತುರ್ತುಸ್ಥಿತಿ ವಿರೋಧಿ ಹೋರಾಟವನ್ನು ಸೇರುವ ಕುರಿತು ಒಂದು ರೀತಿಯ ಅನುಮಾನ, ಒಂದು ಅಂತರ ಮತ್ತು ವಿಶ್ವಾಸದ ಕೊರತೆಯಿತ್ತು ಎಂದು ಜೋಶಿ ತಿಳಿಸುತ್ತಾರೆ. ಆರೆಸ್ಸೆಸ್‌ನ ಅಂದಿನ ಮುಖ್ಯಸ್ಥ ಬಾಳಾಸಾಹೇಬ್ ದಿಯೋರ ಇಂದಿರಾ ಗಾಂಧಿಗೆ ಬರೆದ ಪತ್ರದಲ್ಲಿ, ಸಂಜಯ್ ಗಾಂಧಿಯವರ ಭಯಾನಕ 20 ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ನೆರವಾಗುವ ಪ್ರತಿಜ್ಞೆ ಮಾಡುವುದಾಗಿ ತಿಳಿಸಿದ್ದರು ಎಂದೂ ಜೋಶಿ ವಿವರಿಸುತ್ತಾರೆ. ಇದು ನಿಜವಾದ ಆರೆಸ್ಸೆಸ್…. ನೀವು ಕ್ರಿಯೆಯ ಶೈಲಿಯನ್ನು, ಒಂದು ಮಾದರಿಯನ್ನು ಗಮನಿಸಬಹುದು. ತುರ್ತುಸ್ಥಿತಿಯ ಸಮಯದಲ್ಲೂ ಆರೆಸ್ಸೆಸ್ ಮತ್ತು ಜನಸಂಘದ ಅನೇಕ ಕಾರ್ಯಕರ್ತರು ಕ್ಷಮಾ ಮನವಿಗಳನ್ನು ನೀಡುವ ಮೂಲಕ ಜೈಲುಗಳಿಂದ ಹೊರಬಂದಿದ್ದರು. ಕೇವಲ ಅವರ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ ಅಡ್ವಾಣಿ, ಅರುಣ್ ಜೇಟ್ಲಿ ಮುಂತಾದವರು ಮಾತ್ರ ಜೈಲಿನಲ್ಲಿ ಉಳಿದರು. ಆದರೆ ಆರೆಸ್ಸೆಸ್ ತುರ್ತುಸ್ಥಿತಿ ವಿರುದ್ಧ ಹೋರಾಡಲಿಲ್ಲ. ಮತ್ಯಾಕೆ ಬಿಜೆಪಿ ಆ ಸ್ಮರಣೆಯನ್ನು ತನ್ನದಾಗಿಸಲು ಪ್ರಯತ್ನಿಸುತ್ತಿದೆ? ಎಂದು ಜೋಶಿ ಪ್ರಶ್ನಿಸುತ್ತಾರೆ.

ಅವರು ಹೋರಾಡುವ ಪಡೆಯಾಗಿರಲಿಲ್ಲ ಮತ್ತು ಹೋರಾಡುವ ಹಂಬಲವೂ ಅವರಿಗಿರಲಿಲ್ಲ . ಮೂಲತಃ ಅವರು ಹೊಂದಾಣಿಕೆ ಮಾಡಿಕೊಳ್ಳುವ ಗುಂಪಿನವರು. ಅವರೆಂದೂ ನೈಜವಾಗಿ ಸರಕಾರದ ವಿರುದ್ಧವಿರಲಿಲ್ಲ ಎಂದು ಜೋಶಿ ತಮ್ಮ ಮಾತನ್ನು ಮುಗಿಸುತ್ತಾರೆ.

ಸೇವೆಯಿಂದ ನಿವೃತ್ತಿ ಪಡೆದ ನಂತರ ಉತ್ತರ ಪ್ರದೇಶ ಮತ್ತು ಸಿಕ್ಕಿಂನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಟಿ.ವಿ ರಾಜೇಶ್ವರ್ ಅವರು ತಾನು ಬರೆದ ಪುಸ್ತಕ, ಇಂಡಿಯಾದ ಕ್ರುಶಿಯಲ್ ಇಯರ್ಸ್‌ನಲ್ಲಿ, ಆರೆಸ್ಸೆಸ್ ಕೇವಲ ತುರ್ತುಸ್ಥಿತಿಗೆ ಬೆಂಬಲ ಸೂಚಿಸಿದ್ದು ಮಾತ್ರವಲ್ಲ ಇಂದಿರಾ ಗಾಂಧಿಯ ಆಚೆಗೆ ಸಂಜಯ್ ಗಾಂಧಿ ಜೊತೆಯೂ ಸಂಪರ್ಕ ಸಾಧಿಸಲು ಬಯಸಿತ್ತು ಎಂಬ ವಾಸ್ತವವನ್ನು ಉಲ್ಲೇಖಿಸಿದ್ದಾರೆ.

ದಿಯೋರಸ್ ಸದ್ದಿಲ್ಲದೆ ಪ್ರಧಾನಿ ನಿವಾಸದ ಸಂಪರ್ಕ ಸಾಧಿಸಿದ್ದರು ಮತ್ತು ದೇಶದಲ್ಲಿ ವ್ಯವಸ್ಥೆ ಮತ್ತು ಶಿಸ್ತನ್ನು ಕಾಪಾಡಲು ತೆಗೆದುಕೊಂಡಿರುವ ಹಲವು ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ದಿಯೋರಸ್ ಪ್ರಧಾನಿ ಇಂದಿರಾ ಗಾಂಧಿ ಮತ್ತವರ ಪುತ್ರ ಸಂಜಯ್ ಗಾಂಧಿಯನ್ನು ಭೇಟಿಯಾಗಲು ಉತ್ಸುಕವಾಗಿದ್ದರು. ಆದರೆ ಪ್ರಧಾನಿ ಇದಕ್ಕೆ ನಿರಾಕರಿಸಿದ್ದರು ಎಂದು ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ ರಾಜೇಶ್ವರ್ ತಿಳಿಸಿದ್ದಾರೆ.

ರಾಜೇಶ್ವರ್ ಅವರ ಪುಸ್ತಕದ ಪ್ರಕಾರ, ಹಿಂದು ರಾಷ್ಟ್ರವಾದಿ ಸಂಘಟನೆಯಾಗಿರುವ ಆರೆಸ್ಸೆಸ್‌ಗೆ ತುರ್ತುಸ್ಥಿತಿಯ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿತ್ತು. ಆದರೆ ದಿಯೋರಸ್ ಮೆಲ್ಲನೆ ಪ್ರಧಾನಿ ನಿವಾಸದ ಸಂಪರ್ಕ ಸಾಧಿಸಿದ್ದರು ಮತ್ತು ದೇಶದಲ್ಲಿ ವ್ಯವಸ್ಥೆ ಮತ್ತು ಶಿಸ್ತನ್ನು ಕಾಪಾಡಲು ತೆಗೆದುಕೊಂಡಿರುವ ಹಲವು ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಕುಟುಂಬ ಯೋಜನೆಯನ್ನು, ಮುಖ್ಯವಾಗಿ ಮುಸ್ಲಿಮರಲ್ಲಿ, ಜಾರಿಗೆ ತರುವ ಸಂಜಯ್ ಗಾಂಧಿಯವರ ಪ್ರಯತ್ನ ದಿಯೋರಸ್ ಮೆಚ್ಚುಗೆ ಗಳಿಸಿತ್ತು.

ತುರ್ತುಸ್ಥಿತಿಯ ನಂತರವೂ ನಡೆದ ಚುನಾವಣೆಗಳಲ್ಲಿ ನಿರ್ದಿಷ್ಟವಾಗಿ ಆರೆಸ್ಸೆಸ್ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿತ್ತು. ಆಸಕ್ತಿದಾಯಕ ವಿಷಯವೆಂದರೆ, ಸುಬ್ರಮಣ್ಯನ್ ಸ್ವಾಮಿಯವರ ಪ್ರಕಾರವೂ, ತುರ್ತುಸ್ಥಿತಿಯ ಸಮಯದಲ್ಲಿ ಆರೆಸ್ಸೆಸ್‌ನ ಹಿರಿಯ ನಾಯಕರು ತುರ್ತುಸ್ಥಿತಿ ವಿರೋಧಿ ಹೋರಾಟಕ್ಕೆ ವಂಚನೆ ಮಾಡಿದ್ದರು.

ಆರೆಸ್ಸೆಸ್ ಬಳಿಯಿರುವ ಸಮಕಾಲೀನ ದಾಖಲೆಗಳು ಪ್ರಭಾಸ್ ಜೋಶಿ ಮತ್ತು ರಾಜೇಶ್ವರ್ ಅವರ ಉಲ್ಲೇಖಗಳು ಸತ್ಯ ಎಂದು ಸಾಬೀತು ಮಾಡುತ್ತವೆ. ಆರೆಸ್ಸೆಸ್‌ನ ಮೂರನೇ ಅಧ್ಯಕ್ಷ ಮಧುಕರ್ ದತ್ತಾತ್ರೇಯ ದಿಯೋರಸ್ ತುರ್ತುಸ್ಥಿತಿಯ ಹೇರಿದ ಎರಡು ತಿಂಗಳ ಒಳಗೆಯೇ ಇಂದಿರಾ ಗಾಂಧಿಗೆ ಮೊದಲ ಪತ್ರ ಬರೆದಿದ್ದರು. ಈ ಸಮಯದಲ್ಲಿ ಸರಕಾರಿ ಭಯೋತ್ಪಾದನೆ ಅವ್ಯಾಹತವಾಗಿ ನಡೆಯುತ್ತಿತ್ತು. 1975ರ ಆಗಸ್ಟ್ 22ರಂದು ಬರೆದ ಪತ್ರದಲ್ಲಿ ಅವರು ಇಂದಿರಾ ಗಾಂಧಿಯನ್ನು ಈ ರೀತಿ ಪ್ರಶಂಸಿಸುತ್ತಾರೆ: 1975ರ ಆಗಸ್ಟ್ 15ರಂದು ಕೆಂಪು ಕೋಟೆಯ ಮೇಲೆ ನಿಂತು ನೀವು ದೇಶವನ್ನುದ್ದೇಶಿಸಿ ಮಾಡಿದ ಭಾಷಣವನ್ನು ನಾನು ಯೆರವಾಡ ಜೈಲಿನಲ್ಲಿ ಕುಳಿತು ರೇಡಿಯೊದಲ್ಲಿ ಗಮನವಿಟ್ಟು ಆಲಿಸುತ್ತಿದ್ದೆ. ನಿಮ್ಮ ಭಾಷಣ ಸಮಯೋಚಿತ ಮತ್ತು ಸಮತೋಲಿತವಾಗಿತ್ತು. ಹಾಗಾಗಿ ನಾನು ನಿಮಗೆ ಪತ್ರ ಬರೆಯಲು ನಿರ್ಧರಿಸಿದೆ.

ಈ ಪತ್ರಕ್ಕೆ ಇಂದಿರಾ ಗಾಂಧಿ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ ನವೆಂಬರ್ 10, 1975ರಂದು ದಿಯೋರಸ್ ಇಂದಿರಾಗೆ ಮತ್ತೊಂದು ಪತ್ರ ಬರೆಯುತ್ತಾರೆ. ಈ ಬಾರಿ ಅವರು ತನ್ನ ಪತ್ರವನ್ನು, ಇಂದಿರಾ ಗಾಂಧಿಯನ್ನು ಅನರ್ಹಗೊಳಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸೂಚಿಸುವುದರೊಂದಿಗೆ ಆರಂಭಿಸಿದ್ದರು. ನಿಮ್ಮ ಚುನಾವಣೆ ಸಾಂವಿಧಾನಿಕವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಎಲ್ಲ ಐವರು ನ್ಯಾಯಾಧೀಶರೂ ಘೋಷಿಸಿದ್ದಾರೆ. ಅದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು.

ಈ ತೀರ್ಪು ಕಾಂಗ್ರೆಸ್ ವ್ಯವಸ್ಥಿತವಾಗಿತ್ತು ಎಂದು ವಿರೋಧ ಪಕ್ಷ ಬಲವಾಗಿ ನಂಬಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು. ತನ್ನ ಪತ್ರದಲ್ಲಿ, ಜಯಪ್ರಕಾಶ್ ನಾರಾಯಣ್ ಅವರ ಚಳುವಳಿಗಳ ಹಿನ್ನೆಲೆಯಲ್ಲಿ ಆರೆಸ್ಸೆಸ್‌ಅನ್ನು ಹೆಸರಿಸಲಾಗಿದೆ. ಸರಕಾರ ಆರೆಸ್ಸೆಸ್‌ಗೆ ಗುಜರಾತ್ ಚಳುವಳಿ ಮತ್ತು ಬಿಹಾರ ಚಳುವಳಿಯ ಜೊತೆಯೂ ಯಾವುದೇ ಕಾರಣವಿಲ್ಲದೆ ಸಂಬಂಧ ಕಲ್ಪಿಸಿದೆ. ಈ ಚಳುವಳಿಗಳ ಜೊತೆ ಸಂಘಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಬರೆಯುತ್ತಾರೆ.

ಈ ಪತ್ರಕ್ಕೂ ಇಂದಿರಾ ಗಾಂಧಿ ಪ್ರತಿಕ್ರಿಯೆ ನೀಡದಿದ್ದಾಗ ಆರೆಸ್ಸೆಸ್ ಮುಖ್ಯಸ್ಥ, ತುರ್ತುಸ್ಥಿತಿಯನ್ನು ನಿಷ್ಠೆಯಿಂದ ಬೆಂಬಲಿಸಿದ್ದ ಮತ್ತು ಇಂದಿರಾ ಗಾಂಧಿಯವರ ಇಷ್ಟದ ವ್ಯಕ್ತಿಯಾಗಿದ್ದ ವಿನೋಬಾ ಬಾವೆ ಅವರನ್ನು ಹತ್ತಿರ ಮಾಡಿಕೊಳ್ಳುತ್ತಾರೆ. ಜನವರಿ 12, 1976ರಂದು ಬರೆದ ಪತ್ರದಲ್ಲಿ ಆರೆಸ್ಸೆಸ್ ಮೇಲೆ ವಿಧಿಸಲಾಗಿರುವ ನಿಷೇಧವನ್ನು ತೆಗೆಯುವಂತೆ ಮಾಡಲು ಏನಾದರೂ ದಾರಿ ತಿಳಿಸುವಂತೆ ಆಚಾರ್ಯರಲ್ಲಿ ಮನವಿ ಮಾಡಿದ್ದರು. ಅವರ ಪತ್ರಕ್ಕೆ ಆಚಾರ್ಯರೂ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ದಿಯೋರಸ್ ಹತಾಶಗೊಂಡು ದಿನಾಂಕವಿಲ್ಲದ ಮತ್ತೊಂದು ಪತ್ರವನ್ನು ಬರೆಯುತ್ತಾರೆ.

ಮಾಧ್ಯಮ ವರದಿಗಳ ಪ್ರಕಾರ, ಗೌರವಾನ್ವಿತ ಪ್ರಧಾನಿಗಳು ನಿಮ್ಮನ್ನು ಜನವರಿ 24ರಂದು ಪವ್ನರ್ ಆಶ್ರಮದಲ್ಲಿ ಭೇಟಿಯಾಗಲಿದ್ದಾರೆ. ಆ ಸಂದರ್ಭದಲ್ಲಿ ದೇಶದ ಸದ್ಯದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗುವುದು. ಈ ವೇಳೆ ಪ್ರಧಾನಿಯವರಿಗೆ ಆರೆಸ್ಸೆಸ್ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ತೆಗೆಯುವಂತೆ ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ಆ ಮೂಲಕ ಆರೆಸ್ಸೆಸ್ ಮೇಲಿನ ನಿಷೇಧವನ್ನು ತೆಗೆದು ಹಾಕಿ ಮತ್ತು ಸಂಘದ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆಗೊಳ್ಳುವಂತೆ ಮಾಡಲಾಗುವುದು. ಆರೆಸ್ಸೆಸ್ ಮತ್ತದರ ಸದಸ್ಯರು ಪ್ರಧಾನಿಯವರ ನಾಯಕತ್ವದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮ ಕಾಣಿಕೆ ನೀಡಲು ಸಾಧ್ಯವಾಗುವ ಸಮಯಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಬರೆಯುತ್ತಾರೆ.

ಆಡಳಿತಗಾರರ ಓಲೈಕೆ, ಮುಖ್ಯವಾಗಿ ಸರ್ವಾಧಿಕಾರಿಗಳ ಓಲೈಕೆ ಸಂಘದ ಹವ್ಯಾಸಗಳಲ್ಲಿ ಒಂದು. ಇದೇ ಕಾರಣಕ್ಕೆ ಆರೆಸ್ಸೆಸ್‌ನ ಒಬ್ಬ ಕಾರ್ಯಕರ್ತನೂ ವಸಾಹತುಶಾಹಿ ವಿರುದ್ಧದ ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿರಲಿಲ್ಲ. ವಾಸ್ತವದಲ್ಲಿ ಆರೆಸ್ಸೆಸ್ ಹಿಂಸಾ ಶಕ್ತಿಯನ್ನು ಮತ್ತು ಸರ್ವಾಧಿಕಾರವನ್ನು ಪೂಜಿಸುತ್ತದೆ. ಸಂಘದ ಎರಡನೇ ಮುಖ್ಯಸ್ಥ ಗೋಲ್ವಾಲ್ಕರ್ 1940ರಲ್ಲಿ ನೀಡಿದ ಅತ್ಯಂತ ಪ್ರಮುಖ ಸಿದ್ಧಾಂತವೆಂದರೆ, ಒಂದು ಧ್ವಜ, ಒಂದು ನಾಯಕ ಮತ್ತು ಒಂದು ಸಿದ್ಧಾಂತದಿಂದ ಸ್ಫೂರ್ತಿ ಪಡೆದಿರುವ ಆರೆಸ್ಸೆಸ್ ಈ ಶ್ರೇಷ್ಠ ಭೂಮಿಯ ಪ್ರತಿ ಮೂಲೆಯನ್ನೂ ಹಿಂದುತ್ವದ ಬೆಳಕಿನಿಂದ ಬೆಳಗಿಸುತ್ತದೆ.

2018ರಲ್ಲಿ ಹೊಸದಾಗಿ ನೇಮಕಗೊಂಡಿರುವ ಸದಸ್ಯರ ಪದವಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸುವಂತೆ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಆಹ್ವಾನ ನೀಡಿದ್ದರು. ಈ ನೂತನವಾಗಿ ನೇಮಕಗೊಂಡ ಸದಸ್ಯರು ಭಾರತವನ್ನು ಹಿಂದು ರಾಷ್ಟ್ರವಾಗಿ ಬದಲಿಸುವ ಸಂಘದ ಪ್ರಯತ್ನದ ಜೊತೆ ಕೈಜೋಡಿಸಲಿದ್ದಾರೆ. ತುರ್ತುಸ್ಥಿತಿ ಹೇರಿಕೆಗೆ ಬೆಂಬಲ ಸೂಚಿಸಿದ್ದ ಕಾಂಗ್ರೆಸ್‌ನ ಉನ್ನತ ನಾಯಕರಲ್ಲಿ ಪ್ರಣಬ್ ಮುಖರ್ಜಿಯೂ ಒಬ್ಬರು ಎಂದು ಆರೋಪಿಸಲಾಗುತ್ತದೆ.

LEAVE A REPLY

Please enter your comment!
Please enter your name here