ತಾಯಿಯ ಬೆಂಬಲ ಸಾಧನೆಗೆ ಬಲ ನೀಡಿತು | ನೀಟ್ ಟಾಪರ್ ಶೋಯೆಬ್ ಆಫ್ತಾಬ್

Prasthutha News

720ರಲ್ಲಿ 720 ಅಂಕ ಗಳಿಸಿ ಇತಿಹಾಸ ನಿರ್ಮಿಸಿದ ಸಾಧಕನ ಮನದಾಳದ ಮಾತು

ನವದೆಹಲಿ : ವೈದ್ಯಕೀಯ ಪ್ರವೇಶ ಪರೀಕ್ಷೆ ಎನ್ ಇಇಟಿ (ನೀಟ್) ಫಲಿತಾಂಶ ಹೊರಬಿದ್ದಿದ್ದು, ಒಡಿಶಾ ಮೂಲದ ಶೋಯೆಬ್ ಅಫ್ತಾಬ್ 720ರಲ್ಲಿ 720 ಅಂಕಗಳನ್ನು ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಶೋಯೆಬ್ ನೀಟ್ ಇತಿಹಾಸದಲ್ಲೇ ಮೊದಲ ಬಾರಿ 720ರಲ್ಲಿ 720 ಅಂಕಗಳನ್ನು ಪಡೆದ ದಾಖಲೆ ರೂಪಿಸಿದ್ದಾರೆ ಮತ್ತು ಒಡಿಶಾ ರಾಜ್ಯದಲ್ಲೇ ಮೊದಲ ಬಾರಿ ನೀಟ್ ಟಾಪರ್ ಆಗಿ ಮತ್ತೊಂದು ದಾಖಲೆ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 

ಈ ಅಭೂತಪೂರ್ವ ದಾಖಲೆಯ ಶ್ರೇಯಸ್ಸನ್ನು ಶೋಯೆಬ್ ತಮ್ಮ ಹೆತ್ತವರಿಗೆ ಸಲ್ಲಿಸಿದ್ದಾರೆ. ರೂರ್ಕೆಲಾದ ಸಣ್ಣ ಉದ್ಯಮಿ ಶೇಖ್ ಮೊಹಮ್ಮದ್ ಅಬ್ಬಾಸ್ ಮತ್ತು ಗೃಹಿಣಿ ಸುಲ್ತಾನ್ ರಝಿಯಾ ಅವರ ಮಗನಾಗಿರುವ ಶೋಯೆಬ್ ರಾಜಸ್ಥಾನದ ಕೋಟದ ಕೋಚಿಂಗ್ ಸೆಂಟರ್ ನಲ್ಲಿ ನೀಟ್ ಗೆ ಹೆಚ್ಚಿನ ತರಬೇತಿ ಪಡೆದಿದ್ದರು. ತಾನು ವೈದ್ಯನಾಗಬೇಕೆಂಬ ಸ್ಫೂರ್ತಿ ತನ್ನಲ್ಲಿ ತುಂಬಿದ್ದು ತನ್ನ ತಾಯಿ ಎಂದು ಶೋಯೆಬ್ ಹೇಳಿದ್ದಾರೆ. “ನಾನು ವೈದ್ಯನಾಗಬೇಕೆಂದು ನನ್ನಲ್ಲಿ ಸ್ಫೂರ್ತಿ ತುಂಬಿ, ಹೆಚ್ಚಿನ ಸಮಯ ನೀಡಿ ನನ್ನೊಂದಿಗೆ ನಿಂತು, ಬೆಂಬಲಿಸಿದ ನನ್ನ ತಾಯಿಗೆ ಎಲ್ಲ ಶ್ರೇಯಸ್ಸು ಸಲ್ಲಬೇಕು’’ ಎಂದು ಶೋಯೆಬ್ ಹೇಳಿದ್ದಾರೆ.

ತಂದೆ ಹಣಕಾಸಿನ ಎಲ್ಲಾ ಬೆಂಬಲ ನೀಡಿದ್ದರು. ಆದರೆ, ಕಲಿಕೆಯ ಅವಧಿಯಲ್ಲಿ ತನ್ನೊಂದಿಗೆ ಹೆಚ್ಚಿನ ಸಮಯ ನೀಡಿದ್ದುದು ತಾಯಿ ಎಂದು ಶೋಯೆಬ್ ಸ್ಮರಿಸಿದ್ದಾರೆ. “ನನ್ನ ತಾಯಿ ಮತ್ತು ತಂಗಿ ನನ್ನೊಂದಿಗೆ ಕೋಟಗೆ ಬಂದಿದ್ದರು ಮತ್ತು ಅಲ್ಲಿ ಕಲಿಕೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು’’ ಎಂದು ಶೋಯೆಬ್ ಹೇಳಿದ್ದಾರೆ.

ಶೋಯೆಬ್ ಹೆಚ್ಚಿನ ಅವಧಿಯನ್ನು ಕೋಚಿಂಗ್ ಕ್ಲಾಸ್ ನಲ್ಲೇ ಕಳೆಯುತ್ತಿದ್ದರು. “ಆರಂಭದಲ್ಲಿ ನಾನು ರಾತ್ರಿ ಮೂರು ಗಂಟೆ ಓದುತ್ತಿದ್ದೆ, ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಹೆಚ್ಚು ಅವಧಿ ಅಧ್ಯಯನದಲ್ಲಿ ನಿರತನಾದೆ’’ ಎಂದು ಶೋಯೆಬ್ ತಿಳಿಸಿದ್ದಾರೆ.

“ನನಗೆ ತುಂಬಾ ಸಂತೋಷವಾಗಿದೆ. ನನ್ನ ಕುಟುಂಬದಲ್ಲಿ ಯಾರೂ ವೈದ್ಯರಿಲ್ಲ. ಎಐಐಎಂಎಸ್ ನಲ್ಲಿ ಅಧ್ಯಯನ ನಡೆಸಲು ನಾನು ಬಯಸಿದ್ದೇನೆ. ಯಶಸ್ಸಿನ ಎಲ್ಲ ಶ್ರೇಯಸ್ಸು ತಂದೆ ಮತ್ತು ತಾಯಿಗೆ ಸಲ್ಲಬೇಕು’’ ಎಂದು ಶೋಯೆಬ್ ಹೇಳಿದ್ದಾರೆ. ಪರೀಕ್ಷೆಯ ಪ್ರಶ್ನೆಗಳ ಉತ್ತರಗಳನ್ನು ಪರಿಶೀಲಿಸಿದ ಬಳಿಕ ಟಾಪ್ 50ಯಲ್ಲಿ ತಾನು ಬರುವುದಾಗಿ ಭರವಸೆಯಿತ್ತು, ಆದರೆ ಟಾಪರ್ ಆಗುವ ನಿರೀಕ್ಷೆಯಿರಲಿಲ್ಲ.

ಶೋಯೆಬ್ ಮತ್ತು ದೆಹಲಿಯ ಆಕಾಂಕ್ಷಾ ಸಿಂಗ್ 720ರಲ್ಲಿ 720 ಅಂಕಗಳನ್ನು ಪಡೆದಿದ್ದಾರೆ. ಆದರೆ ನೀಟ್ ನ ಟೈ ಬ್ರೇಕರ್ ನೀತಿಯ ಪ್ರಕಾರ, ಶೋಯೆಬ್ ಮೊದಲ ಸ್ಥಾನ ಪಡೆದಿದ್ದಾರೆ.


Prasthutha News