ತಾಜ್ ಮಹಲ್ ನಲ್ಲಿ ಪೂಜೆ ನಡೆಸಿದ ಹಿಂದೂ ಜಾಗರಣ್ ಮಂಚ್

Prasthutha|

  • ಕೇಸರಿ ಧ್ವಜ ಹಾರಾಟ
  • ‘ತೇಜೋ ಮಹಲ್’ ಶಿವಾಲಯ ಎಂದ ಮಂಚ್ ಅಧ್ಯಕ್ಷ

ವಿಜಯದಶಮಿ ದಿನದಂದು ಹಿಂದೂ ಜಾಗರಣ್ ಮಂಚ್ ಕಾರ್ಯಕರ್ತರು ಕೇಸರಿ ಧ್ವಜದೊಂದಿಗೆ ತಾಜ್ ಮಹಲ್ ಗೆ ಪ್ರವೇಶಿಸಿ ಪ್ರಾರ್ಥನೆ ನಡೆಸಿದ್ದಾರೆ. ಹಿಂದೂ ಜಾಗರಣ್ ಮಂಚ್ ನ ಆಗ್ರಾ ಅಧ್ಯಕ್ಷ ಗೌರವ್ ಠಾಕೂರ್ ನೇತೃತ್ವದಲ್ಲಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆ. ತಾಜ್ ಮಹಲ್ ವಾಸ್ತವವಾಗಿ ತೇಜೋ ಮಹಾಲಯ ಎಂಬ ಶಿವ ದೇವಾಲಯ ಎಂದು ಗೌರವ್ ಠಾಕೂರ್ ಪ್ರತಿಪಾದಿಸಿದರು. “ನಾನು ಈಗಾಗಲೇ ಐದು ಬಾರಿ ತಾಜ್ ಮಹಲ್ ಗೆ ಭೇಟಿ ನೀಡಿ ಶಿವನನ್ನು ಪ್ರಾರ್ಥಿಸಿದ್ದೇನೆ. ಸ್ಮಾರಕವನ್ನು ಹಿಂದೂಗಳಿಗೆ ಹಸ್ತಾಂತರಿಸುವವರೆಗೆ ಇದು ಮುಂದುವರಿಯುತ್ತದೆ” ಎಂದು ಗೌರವ್ ಠಾಕೂರ್ ಹೇಳಿದರು.

- Advertisement -

ಕೇಸರಿ ಧ್ವಜ ಹಾರಿಸುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಗೌರವ್ ಠಾಕೂರ್ ತಾಜ್ ಮಹಲ್ ಕಂಪೌಡ್ ನೊಳಗೆ ಬೆಂಚ್ ಮೇಲೆ ಕುಳಿತಿರುವುದನ್ನು ಕಾಣಬಹುದು. ಹತ್ತಿರದಲ್ಲೊಬ್ಬ ಕೇಸರಿ ಧ್ವಜ ಹಿಡಿದಿದ್ದಾನೆ. ಯುವಕರ ಕೈಯಲ್ಲಿ ಆರೆಸ್ಸೆಸ್ ಧ್ವಜವಿರಲಿಲ್ಲ ಬದಲಾಗಿ ವಿಜಯದಶಮಿ ಧ್ವಜವಾಗಿತ್ತು ಎಂದು ಬಿಜೆಪಿ ಮುಖಂಡ ಮನೀಶ್ ಶುಕ್ಲಾ ಹೇಳಿದ್ದಾರೆ.

ಇದು ಯಾವಾಗ ಸಂಭವಿಸಿದೆ ಎಂದು ತಿಳಿದಿಲ್ಲ ಮತ್ತು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಐಎಸ್ಎಫ್ ಕಮಾಂಡೆಂಟ್ ರಾಹುಲ್ ಯಾದವ್ ಹೇಳಿದ್ದಾರೆ.

“ಭದ್ರತಾ ಕಾರಣಗಳಿಗಾಗಿ ತಾಜ್ ಕಂಪೌಡ್ ನಲ್ಲಿ ಪೆನ್ನುಗಳನ್ನು ಸಹ ನಿಷೇಧಿಸಲಾಗಿದೆ. ಈ ದೃಶ್ಯಗಳ ಸತ್ಯಾಸತ್ಯತೆ ಪರಿಶೀಲಿಸಿದ ನಂತರ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಧಾರ್ಮಿಕತೆಯನ್ನು ಪ್ರಚೋದಿಸಲು ಪ್ರಯತ್ನಿಸಿದ ಕಾರಣಕ್ಕಾಗಿ ಯುವಕರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ” ಎಂದು ಲಕ್ನೋದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಟೆಲಿಗ್ರಾಫ್ ವರದಿ ಮಾಡಿದೆ.

- Advertisement -