ತಬ್ಲೀಗಿ ಜಮಾಅತ್ ಸದಸ್ಯರ ವಿರುದ್ಧದ ಎಫ್ ಐಆರ್ ರದ್ದು | ತೀರ್ಪಿಗೆ ಪಾಪ್ಯುಲರ್ ಫ್ರಂಟ್ ಸ್ವಾಗತ

ನವದೆಹಲಿ : ವಿದೇಶಿ ತಬ್ಲೀಗ್ ಜಮಾಅತ್ ಸದಸ್ಯರ ವಿರುದ್ಧದ ಎಫ್ ಐಆರ್ ರದ್ದು ಮಾಡಿರುವ ಬಾಂಬೆ ಹೈಕೋರ್ಟ್ ತೀರ್ಪನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಒ.ಎಂ.ಎ ಸಲಾಂ ಸ್ವಾಗತಿಸಿದ್ದಾರೆ.

ನ್ಯಾಯಮೂರ್ತಿ ಟಿ.ವಿ. ನಲವಾಡೆ ಮತ್ತು ನ್ಯಾಯಮೂರ್ತಿ ಸೆವ್ಲಿಕರ್ ವಿಭಾಗೀಯ ನ್ಯಾಯಪೀಠದ ತೀರ್ಪು ಐತಿಹಾಸಿಕ. ಭಾರತೀಯ ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿರುವಂತಹ ಈ ಸಂದರ್ಭ, ಇಂತಹ ತೀರ್ಪು ಹೊರಬಿದ್ದಿರುವುದು ಭರವಸೆಯ ಹೊಸ ಗಾಳಿ ಬೀಸಿದಂತಾಗಿದೆ. ಇದು ಭಾರತದ ಸಂವಿಧಾನದ ಮೂಲತತ್ವಗಳಾದ ನ್ಯಾಯ, ಸತ್ಯ ಹಾಗೂ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಅಂಶಗಳಲ್ಲಿ ರಾಜಿಯಾಗದ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -

ದೇಶದಲ್ಲಿ ನಡೆಯುವ ಎಲ್ಲ ತಪ್ಪುಗಳಿಗೆ ತಾವೇ ಹೊಣೆ ಎಂಬ ಭಾವನೆ ಇಡೀ ಮುಸ್ಲಿಮ್ ಸಮುದಾಯದ ನಡುವೆ ಬೆಳೆಯುತ್ತಿದೆ ಎಂಬ ಅಂಶವನ್ನು ಕೋರ್ಟ್ ಸರಿಯಾಗಿಯೇ ಗುರುತಿಸಿದೆ. ಈ ಬಾರಿ ಮಾತ್ರ ದೇಶದಲ್ಲಿ ರೋಗ ಹರಡುವವರು ಎಂಬಂತೆ ಬಿಂಬಿಸುವ ಮೂಲಕ, ಅವರನ್ನು ಅನ್ಯಲೋಕದಿಂದ ಬಂದವರಂತೆ ಮತ್ತು ದುಷ್ಟರಂತೆ ಚಿತ್ರಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ತಬ್ಲೀಗ್ ಜಮಾಅತ್ ಅನ್ನು ಹರಕೆಯ ಕುರಿ ಮಾಡಲಾಗಿತ್ತು. ದುರದೃಷ್ಟಕರವೆಂದರೆ, ನಮ್ಮ ದೇಶದಲ್ಲಿ ಮಾತ್ರ ಸಾಂಕ್ರಾಮಿಕ ರೋಗಕ್ಕೆ ಕೋಮು ಬಣ್ಣ ಬಳಿಯಲಾಯಿತು ಮತ್ತು ರಾಜಕೀಯಗೊಳಿಸಲಾಯಿತು. ಇದು ಭಾರತದ ಘನತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾನಿಯೆಸಗಿತು ಎಂದು ಅವರು ತಿಳಿಸಿದ್ದಾರೆ.

ನ್ಯಾಯಪೀಠ ಪ್ರಸ್ತಾಪಿಸಿರುವ ಅಂಶಗಳು ಕೋಮುವಾದಿ ರಾಜಕಾರಣಕ್ಕೆ ದೊಡ್ಡ ಹೊಡೆತವಾಗಿದೆ. ಮಾಧ್ಯಮದ ಒಂದು ವರ್ಗ ನಿಭಾಯಿಸಿದ ಪಾತ್ರದ ಕುರಿತೂ ತೀರ್ಪು ಗಮನ ಸೆಳೆದಿದೆ. ಮಾಧ್ಯಮಗಳು ಈ ಸಂದರ್ಭವನ್ನು ಇಸ್ಲಾಮಾಫೋಬಿಯಾ ಹರಡಲು ಬಳಸಿಕೊಂಡವು. ಇಂತಹ ಅಪಪ್ರಚಾರವು ಭಯ, ಸಂಶಯ, ದ್ವೇಷವನ್ನು ಹುಟ್ಟುಹಾಕಿರುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶಾದ್ಯಂತ ಅಮಾಯಕ ಬೀದಿಬದಿ ಮುಸ್ಲಿಂ ವ್ಯಾಪಾರಸ್ಥರು, ಮುಸ್ಲಿಂ ದಾರಿಹೋಕರನ್ನು ಗುರಿ ಮಾಡಲಾಯಿತು. ಈ ತೀರ್ಪು ನ್ಯಾಯದ ಮೇಲಿನ ನಂಬಿಕೆ ಮರುಸ್ಥಾಪಿಸುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ಅಪಪ್ರಚಾರ, ದ್ವೇಷಭಾಷಣಕ್ಕಾಗಿ ಮಾಧ್ಯಮಗಳು ಮತ್ತು ವ್ಯಕ್ತಿಗಳ ವಿರುದ್ಧ ಹಲವಾರು ವ್ಯಕ್ತಿಗಳು ಮತ್ತು ಸಂಘಟನೆಗಳು ಪ್ರಕರಣ ದಾಖಲಿಸಿವೆ. ಈ ತೀರ್ಪಿನ ಆಧಾರದಲ್ಲಿ ಅಂತಹವರ ವಿರುದ್ಧ, ಕೋರ್ಟ್ ಗಳು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಶಾಂತಿ ಹಾಗೂ ಕೋಮು ಸೌಹಾರ್ಧತೆ ಉಳಿಸಬೇಕು ಎಂಬುದಾಗಿ ಪಾಪ್ಯುಲರ್ ಫ್ರಂಟ್ ಮನವಿ ಮಾಡುತ್ತದೆ ಎಂದು ಒ.ಎಂ.ಎ ಸಲಾಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -