ತಬ್ರೇಝ್ ಅನ್ಸಾರಿ, ಜೈ ಶ್ರೀರಾಮ್ ಮತ್ತು ದ್ವೇಷದ ಹತ್ಯೆಗಳು

0
15

♦ಡಾ.ರಾಮ್ ಪುನಿಯಾನಿ

ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆಯ 17ನೇ ಸಭೆಯು ಭಾರತದಲ್ಲಿ ಹೆಚ್ಚುತ್ತಿರುವ ಮುಸ್ಲಿಮರು ಮತ್ತು ದಲಿತರ ವಿರುದ್ಧದ ದ್ವೇಷಾಪರಾಧಗಳು ಮತ್ತು ಗುಂಪುಹತ್ಯೆಗಳ ಕುರಿತ ವಿಚಾರವನ್ನು ಎತ್ತಲಾಯಿತು. ಒಂದೆಡೆ ಪ್ರಧಾನಿ ಮೋದಿ ಅಲ್ಪಸಂಖ್ಯಾತರಿಗೆ ಭದ್ರತೆ ಕಲ್ಪಿಸಲಾಗುವುದು ಎಂದು ಹೇಳಿದರೆ, ಮತ್ತೊಂದೆಡೆ ಗುಂಪುಹತ್ಯೆಯ ಘಟನೆಗಳು ಅಧಿಕವಾಗುತ್ತಿವೆ. ಜಾರ್ಖಂಡ್‌ನಲ್ಲಿ ತಬ್ರೇಝ್ ಅನ್ಸಾರಿ ಅನ್ನುವ ಮುಸ್ಲಿಮ್ ಯುವಕನನ್ನು ಮರವೊಂದಕ್ಕೆ ಕಟ್ಟಿ ಹಾಕಿ ನಿರ್ದಯವಾಗಿ ಥಳಿಸಲಾಯಿತು ಮತ್ತು ಜೈ ಶ್ರೀರಾಮ್ ಘೋಷಣೆ ಕೂಗಲು ಅತನನ್ನು ನಿರ್ಬಂಧಿಸಲಾಯಿತು. ಮತ್ತೋರ್ವ ಮುಸ್ಲಿಮ್ ಹಾಫಿಝ್ ಮುಹಮ್ಮದ್ ಹಲ್ದಾರ್ ಎಂಬಾತನನ್ನು ಚಲಿಸುತ್ತಿರುವ ರೈಲಿನಿಂದ ಹೊರಕ್ಕೆ ಎಸೆಯಲಾಯಿತು. ಮುಂಬೈ ಸಮೀಪ ಟ್ಯಾಕ್ಸಿ ಚಾಲಕ ಫೈಝುಲ್ ಇಸ್ಲಾಮ್ನ ಮೇಲೆ ಗುಂಪು ಸೇರಿ ಥಳಿಸಲಾಯಿತು. ಈ ರೀತಿಯ ಘಟನೆಗಳ ಪಟ್ಟಿ ದೊಡ್ಡದಿದೆ ಮತ್ತು ಇದು ಮತ್ತಷ್ಟು ದೊಡ್ಡದಾಗುತ್ತಾ ಹೋಗುತ್ತಿದೆ.

ಅನ್ಸಾರಿಯ ಕ್ರೂರ ಹತ್ಯೆಯ ಕುರಿತು ಚರ್ಚೆ ನಡೆಸದೆ; ಇಂತಹ ಘಟನೆಗಳಿಗೆ ಪ್ರಾಮುಖ್ಯತೆ ನೀಡುವುದರಿಂದ ಜಾರ್ಖಂಡ್‌ನ ಹೆಸರು ಕೆಡುತ್ತದೆ ಎಂದು ಪ್ರಧಾನಿ ಹೇಳಿದರು. ಈ ರೀತಿಯ ಘಟನೆಗಳನ್ನು ಸರಕಾರವು ಯಾವ ರೀತಿಯಲ್ಲಿ ನೋಡುತ್ತದೆ ಎಂಬುದಕ್ಕೆ ಪ್ರಧಾನಿಯವರ ಈ ಮಾತು ಉತ್ತಮ ನಿದರ್ಶನವಾಗಿದೆ. ಬಹುತೇಕ ಘಟನೆಗಳಲ್ಲಿ ಆಡಳಿತ ವ್ಯವಸ್ಥೆ ಮೃದು ಧೋರಣೆ ಕಂಡು ಬರುತ್ತಿದೆ. ಈ ಮಧ್ಯೆ, ಈ ಘಟನೆಗಳ ಕುರಿತು ಮುಸ್ಲಿಮರು ಸೇರಿದಂತೆ ಇತರ ಸಮುದಾಯದ ಜನರೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಹಲವು ಕಾರ್ಯಕ್ರಮಗಳು ಕೂಡ ದೇಶಾದ್ಯಂತ ನಡೆದಿವೆ. ಇಂತಹ ಘಟನೆಗಳ ವಿರುದ್ಧ ಶಾಂತಿಯುತವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾ ಘೋಷಣೆ ಕೂಗಿದ ನೂರಾರು ಯುವಕರ ಮೇಲೆ ಮೀರತ್‌ನಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಘಟನೆಗಳು ವಿಶೇಷವಾಗಿ ತಬ್ರೇಝ್ ಅನ್ಸಾರಿಯ ಹತ್ಯೆಯು ವಿಶ್ವದ ಗಮನವನ್ನು ಸೆಳೆದಿದೆ. ಅಮೆರಿಕದ ವಿದೇಶ ಮಂತ್ರಿ ಮೈಕಲ್ ಪೋಂಪ್ಯು, ಧಾರ್ಮಿಕ ಸ್ವಾತಂತ್ರದ ಪರವಾಗಿ ಧ್ವನಿ ಎತ್ತುವ ಮಾತುಗಳನ್ನು ಹೇಳಿದ್ದಾರೆ. ಧಾರ್ಮಿಕ ಸ್ವಾತಂತ್ರ ಮತ್ತು ಅಲ್ಪಸಂಖ್ಯಾತರ ಭದ್ರತೆಯ ವಿಚಾರದ ಸೂಚ್ಯಂಕದಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರತದ ಸ್ಥಿತಿಯು ನಿರಂತರವಾಗಿ ಕುಸಿದಿದೆ. ಅಲ್ಪಸಂಖ್ಯಾತರ ಭದ್ರತೆಯ ವಿಚಾರಗಳಿಗೆ ಸಂಬಂಧಿಸಿದ ವಿಚಾರವು ದೇಶದ ಗಮನವನ್ನು ನಿರಂತರವಾಗಿ ಸೆಳೆಯುತ್ತಿದೆ. ಗುಂಪುಹತ್ಯೆ ಮತ್ತು ದ್ವೇಷದ ಅಪರಾಧಗಳ ಘಟನೆಗಳು ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದರೂ, ಅವುಗಳ ಸ್ವರೂಪ ಬಹಳ ಸ್ಪಷ್ಟವಾಗಿವೆ. ಮುಸಲ್ಮಾನರನ್ನು ಯಾವುದೇ ಸಾಮಾನ್ಯ ಅಪರಾಧ ಅಥವಾ ಇತರ ಯಾವುದೋ ನೆಪದಲ್ಲಿ ಹಿಡಿಯಲಾಗುತ್ತದೆ. ಗುಂಪು ಅವರನ್ನು ಥಳಿಸುತ್ತದೆ ಮತ್ತು ಜೈ ಶ್ರೀರಾಮ್ ಎಂದು ಕೂಗಲು ಅವರನ್ನು ನಿರ್ಬಂಧಿಸಲಾಗುತ್ತದೆ. ಹಲವು ನಿದರ್ಶನಗಳಲ್ಲಿ ಗೋಹತ್ಯೆಗೆ ಸಂಬಂಧಿಸಿದ ವದಂತಿಗಳು ಮತ್ತು ಆರೋಪಗಳನ್ನು ಕೂಡ ಪ್ರಚೋದಿಸಲಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಮಾನ್ಯವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಅಲ್ಪಸಂಖ್ಯಾತರನ್ನು ಇದೇ ರೀತಿಯ ಆರೋಪವನ್ನು ಬಳಸಿಕೊಂಡು ಗುರಿಪಡಿಸಲಾಗಿತ್ತು.

ಈ ಹಿಂಸಾಚಾರ, ಗುಂಪಿನ ಆಕ್ರಮಣ ಮೊದಲಾದವು ಸಹಜವಾಗಿ ನಡೆಯುತ್ತಿಲ್ಲ. ಈ ಕಾರ್ಯಾಚರಣೆಯು ಅನಿಯಂತ್ರಿತವಾಗಿರುವ ಎರಡು ಮೂಲ ಪ್ರಕ್ರಿಯೆಗಳ ಕಾರಣದಿಂದಾಗಿ ಸಾಧ್ಯವಾಗಿದೆ. ಈ ಪ್ರಕ್ರಿಯೆಯಲ್ಲಿ ಮುಖ್ಯವಾಗಿರುವುದು; ಮುಸ್ಲಿಮರು ಮತ್ತು ಒಂದಷ್ಟು ಮಟ್ಟದವರೆಗೆ ಕ್ರೈಸ್ತರಿಗೆ ಸಂಬಂಧಿಸಿ ಹರಡಲಾಗಿರುವ ತಪ್ಪುಕಲ್ಪನೆಗಳಾಗಿವೆ. ಈ ತಪ್ಪುಕಲ್ಪನೆಯನ್ನು ಸಕ್ರಿಯವಾಗಿ ಪ್ರತಿಷ್ಠಾಪಿಸಲಾಗಿದೆ. ಇಸ್ಲಾಮ್ ಒಂದು ವಿದೇಶೀ ಧರ್ಮ ಅನ್ನುವ ವಿಚಾರವೂ ಇದರಲ್ಲಿ ಸೇರಿದೆ. ಇಸ್ಲಾಮ್, ಶತಮಾನಗಳಿಂದಲೂ ಈ ನಾಡಿನ ಧಾರ್ಮಿಕ ವಿವಿಧತೆಯ ಭಾಗವಾಗಿ ಉಳಿದಿದೆ ಎಂಬುದು ವಾಸ್ತವವಾಗಿದೆ. ಹಾಗೆಯೇ, ಧರ್ಮಗಳು ರಾಷ್ಟ್ರೀಯ ಸೀಮೆಗಳನ್ನು ಹೊಂದಿರುವುದಿಲ್ಲ. ಜನರ ಮನಸ್ಸಿನಲ್ಲಿ, ಮುಸ್ಲಿಮ್ ಆಡಳಿತಗಾರರು ಅತ್ಯಂತ ಆಕ್ರಮಣಕಾರಿಗಳೆಂದು ಬಿಂಬಿಸಲಾಗಿದೆ. ಅವರು ಮಂದಿರವನ್ನು ಒಡೆದರು ಮತ್ತು ಬಲ ಪ್ರದರ್ಶನದ ಮೂಲಕ ತಮ್ಮ ಧರ್ಮವನ್ನು ಹರಡಿದರು ಎಂಬ ವಿಚಾರಗಳನ್ನು ಬಿತ್ತಲಾಗಿದೆ. ವಾಸ್ತವವೆಂದರೆ, ಭಾರತದಲ್ಲಿ ಇಸ್ಲಾಮ್ ಮಲಬಾರ್ ತಟದಲ್ಲಿ ಅರಬ್ ವ್ಯಾಪಾರಿಗಳ ಮೂಲಕ ತಲುಪಿತ್ತು. ಈ ವ್ಯಾಪಾರಿಗಳ ಸಂಪರ್ಕಕ್ಕೆ ಬಂದ ಭಾರತೀಯರಲ್ಲಿ ಕೆಲವರು ಇಸ್ಲಾಮ್ ಸ್ವೀಕರಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ಜಾತಿವ್ಯವಸ್ಥೆಯ ದಮನದಿಂದ ರಕ್ಷಣೆ ಪಡೆಯಲು ಕೂಡ ಹಿಂದುಗಳು ಇಸ್ಲಾಮ್ ಸ್ವೀಕರಿಸಿದರು. ದೇಶ ವಿಭಜನೆಗೂ ಮುಸ್ಲಿಮರೇ ಕಾರಣ ಎಂದು ಆಪಾದಿಸಲಾಗುತ್ತದೆ. ವಾಸ್ತವದಲ್ಲಿ, ವಿಭಜನೆಯು ಹಲವು ಶಕ್ತಿಗಳ ಒಟ್ಟು ಪರಿಣಾಮವಾಗಿತ್ತು ಮತ್ತು ಇದರಲ್ಲಿನ ಪ್ರಮುಖ ಪಾತ್ರ ಬ್ರಿಟಿಷರದ್ದಾಗಿತ್ತು. ಬ್ರಿಟಿಷರು ಆರ್ಥಿಕ ಮತ್ತು ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ದಕ್ಷಿಣ ಏಷ್ಯಾದಲ್ಲಿ ತಮ್ಮ ನೆಲೆಯನ್ನು ಕಾಪಿಡಲು ಬಯಸಿದ್ದರು. ಈ ರೀತಿಯ ತಪ್ಪುಕಲ್ಪನೆಗಳ ಪಟ್ಟಿ ದೊಡ್ಡದಿದೆ ಮತ್ತು ಅದು ಮತ್ತಷ್ಟು ದೊಡ್ಡದಾಗುತ್ತಾ ಸಾಗುತ್ತಿದೆ. ಈ ಮಿಥ್ಯೆಗಳನ್ನು ಎಷ್ಟೊಂದು ಆಕ್ರಮಣಕಾರಿಯಾಗಿ ಪ್ರಚಾರಪಡಿಸಲಾಗಿದೆ ಎಂದರೆ, ಇದೀಗ ಅವು ಸಾಮೂಹಿಕವಾಗಿ ಸಾಮಾಜಿಕ ಚಿಂತನೆಯ ಭಾಗವಾಗಿಬಿಟ್ಟಿವೆ. ಯಾವುದೇ ಘಟನೆಗೆ ಮುಸ್ಲಿಮ್ ವಿರೋಧಿ ಬಣ್ಣವನ್ನು ಹಚ್ಚಲಾಗುತ್ತದೆ. ಅದು ಆಝಾನ್, ಕಬರಸ್ತಾನ, ಮುಸ್ಲಿಮರಲ್ಲಿ ವ್ಯಾಪಕವಾಗಿರುವ ಬಡತನದ ವಿಚಾರವಾಗಿರಬಹುದು ಅಥವಾ ಅಲ್ ಖಾಯ್ದ ವಿಚಾರವೇ ಅಗಿರಬಹುದು. ಸಾರಂಶದಲ್ಲಿ, ಮುಸ್ಲಿಮರನ್ನು ಸೈತಾನೀಕರಿಸುವ ಸಾಮಾಜಿಕ ಸಾಮಾನ್ಯ ಪ್ರಜ್ಞೆಯು ಚಿಂತನಾರ್ಹ ವಿಚಾರವಾಗಿದೆ. ಬಹಳಷ್ಟು ಘಟನೆಗಳ ಆರೋಪಿಗಳು ಬಹುತೇಕ ಸಮಾಜದ ವಂಚಿತ ವರ್ಗಗಳಿಗೆ ಸೇರಿರುವಾಗ, ಅವರನ್ನು ಪ್ರಚೋದಿಸುವವರು ತಮ್ಮ ಮನೆಗಳಲ್ಲಿ ಆರಾಮವಾಗಿ ಕುಳಿತಿರುತ್ತಾರೆ.

ಮುಸ್ಲಿಮ್ ಸಮುದಾಯದ ವಿರುದ್ಧ ಒಂದು ರೀತಿಯ ಹೊಂದಾಣಿಕೆಯನ್ನು ರೂಪಿಸಲಾಗಿದೆ. ಹಿಂದು-ಮುಸ್ಲಿಮ್ ರಾಜರುಗಳ ನಡುವಿನ ಯುದ್ಧಗಳಿಗೆ ಧಾರ್ಮಿಕ ಲೇಪ      ಹಚ್ಚಿದ ಕೆಲವು ಸಾಮಾಜಿಕ ಗುಂಪುಗಳು ಈ ವಿದ್ಯಮಾನಕ್ಕೆ ಕೈ ಜೋಡಿಸಿವೆ ಮತ್ತು ಆಕರ್ಷಣೆಗೊಳಗಾದ ಯುವ ಮನಸ್ಸುಗಳಲ್ಲಿ ಮುಸ್ಲಿಮ್ ವಿರೋಧಿ ಭಾವನೆಗಳನ್ನು ತುಂಬಿಸಲಾಗಿದೆ. ಎಲ್ಲಾ ವಿಚಾರಗಳಲ್ಲೂ ಪಾಕಿಸ್ತಾನವನ್ನು ಎಳೆದು ತರಲಾಗುತ್ತಿದೆ. ಅತಿರಾಷ್ಟ್ರೀಯವಾದವನ್ನು ಪೋಷಿಸಿ ಬೆಳೆಸಲು ಶತ್ರುವೊಂದರ ಅಗತ್ಯವಿರುತ್ತದೆ.  ಪಾಕಿಸ್ತಾನವನ್ನು ಆ ಶತ್ರುವನ್ನಾಗಿ ಮಾಡಲಾಗಿದೆ ಮತ್ತು ಪಾಕಿಸ್ತಾನದ ನೆಪದೊಂದಿಗೆ ಭಾರತೀಯ ಮುಸ್ಲಿಮರನ್ನು ಗುರಿಪಡಿಸಲಾಗುತ್ತಿದೆ. ಒಟ್ಟಿನಲ್ಲಿ ಇಂದು ಅಸ್ಮಿತೆಗೆ ಸಂಬಂಧಿಸಿದ ಭಾವನಾತ್ಮಕ ವಿಚಾರಗಳ ಮೂಲಕ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸಲಾಗುತ್ತಿದೆ.

ಪದೇ ಪದೇ ನಡೆಯುತ್ತಿರುವ ದನದ ಮಾಂಸಕ್ಕೆ ಸಂಬಂಧಿಸಿದ ಹಿಂಸಾಚಾರದಲ್ಲಿ ಕೋಮು ಹಿಂಸಾಚಾರವು ತನ್ನ ಬೇರುಗಳನ್ನು ಕಂಡುಕೊಂಡಿದ್ದರೂ, ಪ್ರಸಕ್ತ ಸನ್ನಿವೇಶದಲ್ಲಿ ಯಾವುದೇ ಅಪರಾಧಗಳ ಸಂಗತಿಯು (ಸಾಮಾನ್ಯ ಕಳ್ಳತನದ ಅಪರಾಧವಾಗಿದ್ದರೂ) ಹಿಂಸಾಚಾರದ ಕಾರ್ಯಾಚರಣೆಯ ಸರಣಿಗೆ ವೇಗ ನೀಡುವ ಅಂಶವಾಗಿದೆ. ಉತ್ತರ ಭಾರತದ ಬಹುದೊಡ್ಡ ಭಾಗದಲ್ಲಿ ಅಭಿನಂದನೆ ಸಲ್ಲಿಸುವ ಅತ್ಯಂತ ಸರಳ ಹಾದಿಯಾಗಿರುವ ಜೈ ಶ್ರೀರಾಮ್ ಘೋಷಣೆ ತಿರುವು ಪಡೆದುಕೊಂಡಿದ್ದು, ಇದೀಗ ಅದು ಆಕ್ರಮಣಕಾರಿ ರಾಜಕೀಯ ಸ್ವರೂಪವನ್ನು ಪ್ರದಾನಿಸಿದೆ.

ಈ ಎಲ್ಲಾ ವಿಷಯಗಳ ಕುರಿತು ವಿಸ್ತೃತ ಚರ್ಚೆಯನ್ನು ನಡೆಸಬಹುದಾಗಿದೆ. ಆದರೆ ಸಮಾಜದ ಚಿಂತನೆಯನ್ನು ಕೋಮುವಾದೀಕರಣಗೊಳಿಸಲಾಗಿದೆ ಎಂಬುದು ಗಮನಿಸಬೇಕಾದ ವಿಚಾರವಾಗಿದೆ. ಈ ಕಾರಣಗಳಿಂದಾಗಿ ದ್ವೇಷಾಪರಾಧ ಘಟನೆಗಳು ನಡೆಯುತ್ತಿವೆ. ಸ್ವಾತಂತ್ರ ಸಂಗ್ರಾಮದ ಸಂದರ್ಭದಲ್ಲಿ ರಾಷ್ಟ್ರಪಿತ ಗಾಂಧೀಜಿಯವರು, ಎಲ್ಲಾ ಧರ್ಮಗಳು ಹಂಚಿದ ಮೌಲ್ಯಗಳು ಮತ್ತು ಬೋಧನೆಗಳನ್ನು ಮುಂದಿಟ್ಟುಕೊಂಡು ಹೆಗಲಿಗೆ ಹೆಗಲು ನೀಡಿ ಬ್ರಿಟಿಷರ ವಿರುದ್ಧ ಹೋರಾಡುವಂತೆ ಭಾರತೀಯರಲ್ಲಿ ಉತ್ಸಾಹವನ್ನು ತುಂಬಿದರು. ಈ ಪ್ರಕ್ರಿಯೆಯನ್ನು ಕೋಮುವಾದಿ ಗುಂಪುಗಳು ವಿರುದ್ಧ ದಿಕ್ಕಿನಲ್ಲಿ ಸಾಗಿಸುತ್ತಿದ್ದಾರೆ ವಿವಿಧ ಧರ್ಮಗಳ ನಡುವೆ ದ್ವೇಷವನ್ನು ತುಂಬಿಸಲಾಗಿದೆ. ನಮ್ಮ ಸಂವಿಧಾನದ ಪೀಠಿಕೆಯ ಭಾಗವಾಗಿರುವ ಭ್ರಾತೃತ್ವದ ಪರಿಕಲ್ಪನೆಯನ್ನು ಹೊಂದಾಣಿಕೆಯಾಗದ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಸಮಾಜದಲ್ಲಿ ಅಲ್ಪಸಂಖ್ಯಾತರ ವಿರುದ್ಧ ವ್ಯಾಪಕವಾಗಿರುವ ತಪ್ಪು ಗ್ರಹಿಕೆಗಳನ್ನು ನಾವು ಕೊನೆಗೊಳಿಸಬೇಕಾಗಿರುವುದು ಅತೀ ಅಗತ್ಯವಾಗಿದೆ. ಆಗಲೇ ನಾವು ದ್ವೇಷ ಮತ್ತು ಹಿಂಸಾಚಾರದೊಂದಿಗೆ ಹೋರಾಡಬಹುದು.

ಇಂದು ನಮ್ಮ ಮುಂದೆ ಶಿಕ್ಷಣ, ಆರೋಗ್ಯ ಮತ್ತು ನಿರುದ್ಯೋಗ ಮೊದಲಾದ ಸವಾಲುಗಳಿವೆ. ಈ ವೇಳೆ ವಿಭಜಕಾರಿ ರಾಜಕೀಯದ ಆಟವು ದೇಶವನ್ನು ಮತ್ತಷ್ಟು ಹಿಂದಕ್ಕೆ ತಳ್ಳಲಿದೆ. ನಾವು ದೇಶವನ್ನು ಒಗ್ಗೂಡಿಸಿದರೆ ಮಾತ್ರವೇ, ದೇಶದಲ್ಲಿ ಶಾಂತಿ ನೆಲೆಸುವ ಮತ್ತು ಮುಂದಕ್ಕೆ ಸಾಗುವ ನಿರೀಕ್ಷೆಯನ್ನು ಇರಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here