ಡಿ.ಜೆ. ಹಳ್ಳಿ ಗಲಭೆ ಪ್ರಮುಖ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್ ಬಿಜೆಪಿಗೆ?

Prasthutha|

ಬೆಂಗಳೂರು : ಡಿಜೆ ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದ ಪ್ರಕರಣಗಳ ಪ್ರಮುಖ ಆರೋಪಿಗಳಲ್ಲಿ ಓರ್ವರಾಗಿರುವ ಕಾಂಗ್ರೆಸ್ ನಾಯಕ, ಮಾಜಿ ಮೇಯರ್ ಸಂಪತ್ ರಾಜ್ ಬಿಜೆಪಿ ಸೇರ್ಪಡೆಯಾಗುವ ಸುದ್ದಿ ಕೇಳಿಬರುತ್ತಿದೆ ಎಂದು ‘ಒನ್ ಇಂಡಿಯಾ’ ವೆಬ್ ವಾಹಿನಿ ವರದಿ ಮಾಡಿದೆ. ಗಲಭೆ ಪ್ರಕರಣದಿಂದ ಬಚಾವಾಗಲು ಸಂಪತ್ ರಾಜ್ ಬಿಜೆಪಿ ಸೇರಲು ಬಯಸಿದ್ದಾರೆ ಎನ್ನಲಾಗಿದೆ.

ಪ್ರವಾದಿಯವರ ಅವಮಾನಕರ ಪೇಸ್ಬುಕ್ ಪೋಸ್ಟ್ ಗೆ ಸಂಬಂಧಿಸಿ ಉದ್ರಿಕ್ತ ಗುಂಪೊಂದು ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ವ್ಯಾಪ್ತಿಯಲ್ಲಿ ಗಲಭೆ ನಡೆಸಿತ್ತು. ಈ ಗಲಭೆಗೆ ಎಸ್ ಡಿಪಿಐ ಕಾರಣ ಎಂದು ಆರಂಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಆರೋಪಿಸಿದ್ದವು. ಇದೀಗ ವಿಷಯ ವಿವಿಧ ತಿರುವುಗಳನ್ನು ಪಡೆಯುತ್ತಿದ್ದು, ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಶಾಸಕ ಅಂಖಡ ಶ್ರೀನಿವಾಸ್ ಮೂರ್ತಿ ಆಗ್ರಹಿಸಿದ ಬೆನ್ನಲ್ಲೇ, ಸಂಪತ್ ರಾಜ್ ಬಿಜೆಪಿ ಸೇರ್ಪಡೆಗೆ ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

- Advertisement -

ಬಿಜೆಪಿ ಸೇರಿದರೆ ಪ್ರಕರಣಗಳಿಂದ ಪಾರಾಗಬಹುದು ಎಂಬುದು ಸಂಪತ್ ರಾಜ್ ಲೆಕ್ಕಾಚಾರ ಎನ್ನಲಾಗಿದೆ. ಈಗಾಗಲೇ ರಾಜ್ಯ ಬಿಜೆಪಿ ನಾಯಕರ ಮೂಲಕ ಬಿಜೆಪಿ ಸೇರುವ ಪ್ರಯತ್ನ ಮೇಲಿಂದ ಮೇಲೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

ಸಂಪತ್ ರಾಜ್ ಅವರು ಐಪಿಸಿ ಕಲಂ 120 (ಬಿ) ಪ್ರಕಾರ 51ನೇ ಆರೋಪಿಯಾಗಿದ್ದಾರೆ. ಗಲಭೆಗೆ ಪ್ರಚೋದನೆ ಮತ್ತು ಹಣ ಸಂದಾಯ ಮಾಡಿರುವ ಆರೋಪ ಅವರ ಮೇಲಿದೆ. ಘಟನೆ ನಡೆದು ತಿಂಗಳಾದರೂ, ಸಂಪತ್ ರಾಜ್ ಬಂಧನವಾಗದಿರುವುದು ಬಿಜೆಪಿ ಸರಕಾರ ಮೃಧು ಧೋರಣೆ ಹೊಂದಿರುವುದೇ ಕಾರಣ ಎನ್ನಲಾಗುತ್ತಿದೆ. ಬಿಜೆಪಿಗೆ ಬರುತ್ತೇನೆ, ಮುಂದಿನ ಚುನಾವಣೆಯಲ್ಲಿ ಪುಲಿಕೇಶಿ ನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೇಟ್ ನೀಡಿ ಎಂದು ಸಂಪತ್ ರಾಜ್ ಕೋರಿದ್ದಾರೆ ಎಂದು ವರದಿಯಾಗಿದೆ.

ಕಳೆದ ಚುನಾವಣೆಯಲ್ಲಿ ಸಂಪತ್ ರಾಜ್ ಪುಲಿಕೇಶಿ ನಗರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಜೆಡಿಎಸ್ ತೊರೆದು ಅಖಂಡ ಶ್ರೀನಿವಾಸ್ ಕಾಂಗ್ರೆಸ್ ಗೆ ಬಂದಿದ್ದುದರಿಂದ, ಅವರಿಗೆ ಟಿಕೆಟ್ ಸಿಕ್ಕಿತ್ತು. ಸಂಪತ್ ರಾಜ್ ಅವರಿಗೆ ಪಕ್ಕದ ಸಿವಿ ರಾಮನ್ ನಗರದಲ್ಲಿ ಟಿಕೆಟ್ ಕೊಡಲಾಗಿತ್ತು. ಹೀಗಾಗಿ ಅದು ಅವರಿಗೆ ರಾಜಕೀಯ ಹಿನ್ನಡೆಯಾಗಿತ್ತು.

- Advertisement -