ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಘಟನೆಗೆ ಆಡಳಿತ ವ್ಯವಸ್ಥೆಯ ವೈಫಲ್ಯವೇ ಕಾರಣ: ಇಮಾಮ್ಸ್ ಕೌನ್ಸಿಲ್

Prasthutha|

ಆಗಸ್ಟ್ 11ರಂದು ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ನಡೆದ ಹಿಂಸಾಚಾರವು ದುರದೃಷ್ಟಕರವಾಗಿದ್ದು, ಈ ಘಟನೆಗೆ ಆಡಳಿತ ವ್ಯವಸ್ಥೆಯ ವೈಫಲ್ಯವೇ ಕಾರಣವಾಗಿದೆ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರ್ ರಹ್ಮಾನ್ ಅಶ್ರಫಿ ಹೇಳಿದ್ದಾರೆ.

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಸಿದ್ಧಪಡಿಸಿದ ಸತ್ಯಶೋಧನಾ ವರದಿ ಬಿಡುಗಡೆಗೊಳಿಸಲು ಬೆಂಗಳೂರಿನ ದಾರುಸ್ಸಲಾಂ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

- Advertisement -

ನಡೆದ ಘಟನೆ ಮತ್ತು ಘಟನಾ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ, ಪೊಲೀಸ್ ಇಲಾಖೆ ಮತ್ತು ಸರಕಾರವು ಅಂದು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಿದ್ದರೆ ಇಂತಹ ಹಿಂಸಾಚಾರಕ್ಕೆ ಅವಕಾಶವೇ ದೊರಕುತ್ತಿರಲಿಲ್ಲ. ಘಟನೆಗೆ ಸಂಬಂಧಿಸಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನಡೆಸಿದ ಸತ್ಯಶೋಧನೆಯಲ್ಲಿ ಇಂತಹ ಬಹಳಷ್ಟು ವಾಸ್ತವ ವಿಚಾರಗಳು ಅರಿವಿಗೆ ಬರುತ್ತದೆ ಎಂದು ಅವರು ಹೇಳಿದರು.

ನವೀನ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ(ಸ)ಯವರ ಕುರಿತು ಹಾಕಿದ ಅವಮಾನಕಾರಿ ಪೋಸ್ಟ್ ನಿಂದಾಗಿ ಮುಸ್ಲಿಮರು ಆಕ್ರೋಶಿತರಾಗಿದ್ದರು ಮತ್ತು ಆತನ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಆದರೆ ಸಕಾಲದಲ್ಲಿ ಪೊಲೀಸರು ಕ್ರಮ ಕೈಗೊಳ್ಳದಿರುವುದು ಅಲ್ಲಿ ನೆರೆದಿದ್ದ ಜನರ ಆಕ್ರೋಶವನ್ನು ಹೆಚ್ಚಿಸಿದೆ. ಪೊಲೀಸರು ತೀವ್ರ ವಿಳಂಬ ಮಾಡಿದ ಕಾರಣದಿಂದಲೇ ಆ ಪ್ರದೇಶದಲ್ಲಿ ಹಿಂಸಾಚಾರದ ಘಟನೆ ನಡೆದಿದೆ ಎಂದು ಅತೀಕುರ್ ರಹ್ಮಾನ್ ಹೇಳಿದರು.

ತನಿಖೆಗೆ ಮುನ್ನವೇ ಘಟನೆಯನ್ನು ಪೂರ್ವಯೋಜಿತ ಎಂದು ಕರೆದು ಅದನ್ನು ಕೋಮುವಾದೀಕರಣಗೊಳಿಸುವ ಹುನ್ನಾರ ನಡೆದಿದೆ. ಆಕ್ರೋಶಿತ ಗುಂಪು ಇತರ ಹಿಂದುಗಳಿಗೆ ನಿರ್ದಿಷ್ಟವಾಗಿ ಹಾನಿ ಮಾಡಿರುವ ಯಾವುದೇ ವಿಚಾರಗಳು ಕಂಡು ಬರುವುದಿಲ್ಲ ಮತ್ತು ಗಲಭೆಕೋರರು ಆರೋಪಿ ನವೀನ್ ಮನೆಗೆ ದಾಳಿ ನಡೆಸಿದ್ದರೂ, ಅವರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಉಂಟು ಮಾಡಿಲ್ಲ ಮತ್ತು ನವೀನ್ ತಾಯಿಗೆ ರಕ್ಷಣೆ ನೀಡಿರುವುದು ಕೂಡ ಮುಸ್ಲಿಮರೇ ಆಗಿದ್ದರು. ಅಂತಹ ಒಂದು ಪ್ರಕ್ಷ್ಯಬ್ಧ ಪರಿಸ್ಥಿತಿಯಲ್ಲೂ ಮುಸ್ಲಿಮರು ಪ್ರವಾದಿ(ಸ)ಯವರ ಸೌಹಾರ್ದ ಸಂದೇಶವನ್ನು ಎತ್ತಿ ಹಿಡಿದಿದ್ದರು ಎಂಬುದು ಗಮನಾರ್ಹವಾಗಿದೆ ಎಂದು ಅವರು ವಿವರಿಸಿದರು.

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನಾ ಜಾಫರ್ ಸಾದಿಕ್ ಫೈಝಿ ಮಾತನಾಡಿ, ಆಕ್ರೋಶಿತ ಜನರ ಗುಂಪನ್ನು ಸಮಾಧಾನಪಡಿಸಲು ಶ್ರಮಿಸಿದ ಎಸ್‌ಡಿಪಿಐನ ಸ್ಥಳೀಯ ನಾಯಕರು ಸೇರಿದಂತೆ ಇತರರ ಮೇಲೆಯೂ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ. ವಿಶೇಷವಾಗಿ ಭಯೋತ್ಪಾದನಾ ಪ್ರಕರಣದಲ್ಲಿ ಹಾಕಲಾಗುವ ಯುಎಪಿಎ ಕರಾಳ ಕಾಯ್ದೆಯನ್ನು ಬಂಧಿತರ ಮೇಲೆ ಹೇರಲಾಗಿದೆ. ಇದು ಆಡಳಿತ ವ್ಯವಸ್ಥೆಯ ಅನ್ಯಾಯದ ಮತ್ತು ಪ್ರತೀಕಾರದ ಕ್ರಮವಾಗಿದೆ. ಪೊಲೀಸ್ ಗೋಲಿಬಾರ್ ನಲ್ಲಿ 3 ಸ್ಥಳದಲ್ಲೇ ಮೃತರಾಗಿದ್ದು, ಇನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈತನ ಸಾವಿನ ಕುರಿತಂತೆ ಸಂಶಯಗಳು ವ್ಯಕ್ತವಾಗಿವೆ ಎಂದು ಹೇಳಿದರು.

ಪೊಲೀಸರು ಮಧ್ಯ ರಾತ್ರಿ ವೇಳೆ ಬಂಧನ ಕಾಯಾಚರಣೆ ನಡೆಸಿ ಮನೆಮಂದಿಯನ್ನು ಭೀತಿಗೆ ತಳ್ಳಿದ್ದರು. ಬಂಧಿತರ ಪೈಕಿ ಅಮಾಯಕರು ಮತ್ತು ಅಪ್ರಾಪ್ತರು ಕೂಡ ಸೇರಿದ್ದಾರೆ. ಈ ಘಟನೆಯಲ್ಲಿ ರಾಜಕೀಯ ಪಕ್ಷಗಳೊಳಗಿನ ವೈಷಮ್ಯದ ವಿಚಾರದ ಕುರಿತು ಚರ್ಚೆಯಾಗುತ್ತಿದೆಯಾದರೂ, ನಿರ್ದಿಷ್ಟವಾಗಿ ಮುಸ್ಲಿಮ್ ಸಮುದಾಯದ ಮೇಲೆ ಗಲಭೆಯ ದೋಷಾರೋಪಣೆಯನ್ನು ಹೊರಿಸಿ ಅದನ್ನು ಕಟಕಟೆಯಲ್ಲಿ ತಂದು ನಿಲ್ಲಿಸುವ ಪ್ರಯತ್ನವೂ ಎದ್ದು ಕಾಣುತ್ತಿದೆ ಎಂದು ಜಾಫರ್ ಸಾದಿಕ್ ಫೈಝಿ ನುಡಿದರು.

ಪೊಲೀಸರ ಈ ನಿರ್ಲಕ್ಷ್ಯ ಧೋರಣೆಯನ್ನು ತನಿಖೆಗೆ ಒಳಪಡಿಸಬೇಕು, ಪ್ರಚೋದನಾಕಾರಿ ಪೋಸ್ಟ್ ನ ಹಿಂದಿರುವ ಕಾಣದ ಶಕ್ತಿಗಳ ಕುರಿತು ತನಿಖೆ ನಡೆಸಿ, ಸತ್ಯಾಂಶವನ್ನು ಹೊರಗೆಳೆಯಬೇಕು, ಈ ಘಟನೆಗೆ ಸಂಬಂಧಿಸಿದಂತೆ ಮುಸ್ಲಿಮ್ ಸಮುದಾಯವನ್ನು ಗುರಿಪಡಿಸಲಾಗುತ್ತಿದ್ದು, ಇಂತಹ ತೇಜೊವಧೆಯ ಅಭಿಯಾನ ನಿಲ್ಲಿಸಲು ಕ್ರಮಕೈಗೊಳ್ಳಬೇಕು, ಬಂಧಿತರ ಪೈಕಿ ಅಮಾಯಕರೂ ಒಳಗೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು, ಗೋಲಿಬಾರ್‌ನಲ್ಲಿ ಪ್ರಾಣ ಕಳೆದುಕೊಂಡವರ ಸಂತ್ರಸ್ತ ಕುಟುಂಬಕ್ಕೆ ಸರಕಾರವು ಕೂಡಲೆ ಪರಿಹಾರ ಧನವನ್ನು ಒದಗಿಸಬೇಕು, ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯು.ಎ.ಪಿ.ಎ.) ಅಡಿಯಲ್ಲಿ ಆರೋಪಿಗಳ ವಿರುದ್ಧ ಹೇರಲಾಗಿರುವ ಪ್ರಕರಣಗಳನ್ನು ಕೂಡಲೇ ಹಿಂಪಡೆದುಕೊಳ್ಳಬೇಕು ಮೊದಲಾದ ಶಿಫಾರಸುಗಳನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ತನ್ನ ವರದಿಯಲ್ಲಿ ಮಂಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಮುಫ್ತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹ್ಮೂದ್ ಮುಅಝ್ಝಮ್ ಅಲ್ ಖಾಸ್ಮಿ, ರಾಜ್ಯ ಉಪಾಧ್ಯಕ್ಷ ಮೌಲಾನಾ ಮುಹಮ್ಮದ್ ಯೂಸುಫ್ ರಶಾದಿ, ರಾಜ್ಯ ಸಮಿತಿ ಸದಸ್ಯರಾದ ಮೌಲಾನಾ ಸಯ್ಯದ್ ಸೈಫುಲ್ಲಾ ರಶಾದಿ, ಹಾಫಿಝ್ ಅಬ್ದುಲ್ ರಹ್ಮಾನ್ ಉಸ್ಮಾನಿ, ಬೆಂಗಳೂರು ಜಿಲ್ಲಾಧ್ಯಕ್ಷ ಮೌಲಾನಾ ಶಕೀಲ್ ಅಹ್ಮದ್ ಸವೂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾನಾ ಮುನವ್ವರ್ ಹುಸೈನ್ ರಶಾದಿ, ಉಪಾಧ್ಯಕ್ಷ ಮೌಲಾನಾ ಮುಹಮ್ಮದ್ ಇಸ್ಮಾಯಿಲ್ ರಹ್ಮಾನಿ, ಕಾರ್ಯದರ್ಶಿ ಮೌಲಾನಾ ಮುಫ್ತಿ ಮುಹಮ್ಮದ್ ಸಲ್ಮಾನ್, ಕೋಶಾಧಿಕಾರಿ ಮೌಲಾನಾ ಮುಹಮ್ಮದ್ ಮುನವ್ವರ್ ರಶಾದಿ ಉಪಸ್ಥಿತರಿದ್ದರು.

- Advertisement -